ADVERTISEMENT

ಕಿಚಡಿ ವಿತರಣೆಯಲ್ಲಿ ಭಾರಿ ಅಕ್ರಮ: ಬಂಧಿತ ಶಿವಸೇನೆ ನಾಯಕನ ₹88 ಲಕ್ಷ ಆಸ್ತಿ ಜಪ್ತಿ

ಕೋವಿಡ್‌ ಅವಧಿಯಲ್ಲಿ ಕಿಚಡಿ ವಿತರಣೆಯಲ್ಲಿ ಭಾರಿ ಅಕ್ರಮ ಎಸಗಿದ ಆರೋಪ

ಪಿಟಿಐ
Published 16 ಮಾರ್ಚ್ 2024, 14:50 IST
Last Updated 16 ಮಾರ್ಚ್ 2024, 14:50 IST
<div class="paragraphs"><p>ಕಿಚಡಿ</p></div>

ಕಿಚಡಿ

   

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ವಲಸಿಗರಿಗೆ ‘ಕಿಚಡಿ’ ವಿತರಣೆ ಕಾರ್ಯಕ್ರಮದಲ್ಲಿ ನಡೆಸಲಾಗಿದೆ ಎಂಬ ಅಕ್ರಮ ಹಾಗೂ ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಶಿವಸೇನೆ (ಉದ್ಧವ್‌ ಬಣ) ಪದಾಧಿಕಾರಿ ಸೂರಜ್‌ ಚೌಹಾಣ್‌ಗೆ ಸೇರಿದ್ದ ₹88.51 ಲಕ್ಷ ಮೌಲ್ಯದ ಸ್ಥಿರಾಸ್ಥಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. 

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇ.ಡಿ, ತನ್ನ ಮುಂಬೈ ಕಚೇರಿಯು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಚವ್ಹಾಣ್ ಅವರಿಗೆ ಸೇರಿದ್ದ ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ ಕೃಷಿ ಭೂಮಿ ಹಾಗೂ ಮುಂಬೈನಲ್ಲಿರುವ ಮನೆ ಸೇರಿ ಒಟ್ಟು 88.51 ಲಕ್ಷ ರು. ಮೌಲ್ಯದ ಸ್ಥಿರಾಸ್ಥಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುವುದಾಗಿ ತಿಳಿಸಿದೆ. 

ADVERTISEMENT

ಹಣಕಾಸಿನ ಅವ್ಯವಹಾರಗಳ ಕುರಿತು ಮುಂಬೈನ ಅಗ್ರಿಪಾದ ಪೊಲೀಸ್‌ ಕಚೇರಿಯಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ ಆಧಾರದ ಮೇಲೆ ಇ.ಡಿ ತನ್ನ ತನಿಖೆಯನ್ನು ಆರಂಭಿಸಿದೆ. 

ತನಿಖೆಯಲ್ಲಿ ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಹಾಗೂ ಗ್ರೇಟರ್‌ ಮುಂಬೈ ಮಹಾನಗರ ಪಾಲಿಕೆ ನಿಗದಿಪಡಿಸಿದ್ದ ಅರ್ಹತಾ ಮಾನದಂಡಗಳನ್ನು ಮೀರಿಯೂ ತಮ್ಮ ‘ಎಮ್‌/ಎಸ್ ಫೋರ್ಸ್ ಒನ್‌ ಮಲ್ಟಿ ಸರ್ವಿಸಸ್‌’ ಪರವಾಗಿ ಕಾರ್ಯಾದೇಶಗಳನ್ನು ಪಡೆದುಕೊಂಡಿರುವುದಲ್ಲಿ ಸೂರಜ್‌ ‍ಪಾತ್ರವಿದೆ ಎಂಬುದು ತಿಳಿದುಬಂದಿದೆ. ಅಲ್ಲದೇ ಕಡಿಮೆ ಪ್ರಮಾಣದ ಕಿಚಡಿ ಪ್ಯಾಕೆಟ್‌ಗಳನ್ನು ವಿತರಿಸುವ ಮೂಲಕ ಸೂರಜ್‌ ₹1.35 ಕೋಟಿ ಅಕ್ರಮ ಹಣ ಗಳಿಸಿದ್ದಾರೆ ಎಂದು ಇ.ಡಿ ಹೇಳಿದೆ.  

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ಜ.7ರಂದು ಸೂರಜ್‌ರನ್ನು ಇ.ಡಿ ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.