ADVERTISEMENT

ವಿಶ್ವ ಚೆಸ್‌ ಬಿಡ್ : ₹80 ಕೋಟಿ ಬಜೆಟ್‌

ಪಿಟಿಐ
Published 27 ಏಪ್ರಿಲ್ 2024, 15:45 IST
Last Updated 27 ಏಪ್ರಿಲ್ 2024, 15:45 IST
ಡಿ. ಗುಕೇಶ್
ಡಿ. ಗುಕೇಶ್   

ನವದೆಹಲಿ: ಭಾರತದ ಪ್ರತಿಭೆ ಡಿ. ಗುಕೇಶ್ ಮತ್ತು ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ನಡುವಿನ ವಿಶ್ವ ಚಾಂಪಿಯನ್‌ಷಿಪ್‌ ಪಂದ್ಯ ಆಯೋಜಿಸಲು ಉದ್ದೇಶಿಸಿದರೆ  ₹80 ಕೋಟಿಗಿಂತ  ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಅಂದಾಜು ಮಾಡಿದೆ. 

ಈ ಪಂದ್ಯವನ್ನು ನವೆಂಬರ್ 20ರಿಂದ ಡಿಸೆಂಬರ್ 15ರವರೆಗೆ ನಿಗದಿಪಡಿಸಲು ಯೋಜಿಸಲಾಗಿದೆ. ಚೆಸ್‌ನ ಜಾಗತಿಕ ಆಡಳಿತ ಮಂಡಳಿ (ಫಿಡೆ) ಶನಿವಾರ  ಸಂಭಾವ್ಯ ಬಿಡ್‌ದಾರರಿಂದ ಟೆಂಡರ್‌ಗಳನ್ನು ಆಹ್ವಾನಿಸಿದೆ. ಎಐಸಿಎಫ್‌ನ ನೂತನ ಕಾರ್ಯದರ್ಶಿ ದೇವ್ ಪಟೇಲ್ ಗುರುವಾರ ಗ್ರ್ಯಾಂಡ್ ಫಿನಾಲೆ ಆಯೋಜಿಸಲು ರಾಷ್ಟ್ರೀಯ ಸಂಸ್ಥೆಯ ಇಚ್ಛೆ ವ್ಯಕ್ತಪಡಿಸಿದರು. ಗುಕೇಶ್‌ ಆಡುವುದರಿಂದಾಗಿ ಈ ಪಂದ್ಯ ಮಹತ್ವ ಪಡೆದಿದೆ.  

ನಿರೀಕ್ಷಿತ ಬಿಡ್‌ದಾರರಿಗೆ ಫಿಡೆ ನಿಗದಿಪಡಿಸಿದ ಮೂಲ ಮಾನದಂಡವೆಂದರೆ 8.5 ಮಿಲಿಯನ್ (ಅಂದಾಜು ₹71 ಕೋಟಿ) ಬಜೆಟ್ ಮತ್ತು ಜಾಗತಿಕ ಸಂಸ್ಥೆಗೆ 1.1 ಮಿಲಿಯನ್ ಡಾಲರ್ (₹9 ಕೋಟಿ) ಸೌಲಭ್ಯ ಶುಲ್ಕ. ಟೂರ್ನಿಯ ಅವಧಿ 25 ದಿನಗಳು ಮತ್ತು ಜುಲೈ 1ರೊಳಗೆ ನಿಯಮಗಳ ಅನುಮೋದನೆ ಪೂರ್ಣಗೊಳ್ಳಲಿದೆ.

ADVERTISEMENT

ಫಿಡೆ ನೀಡುವ ಒಟ್ಟು ಬಹುಮಾನದ ಮೊತ್ತವು ಸುಮಾರು 2.5 ಮಿಲಿಯನ್ ಡಾಲರ್ (₹20 ಕೋಟಿಗಿಂತ ಹೆಚ್ಚು) ಆಗಿದ್ದು, ಬಹುಮಾನದ ನಿಧಿಯನ್ನು 2023 ರಲ್ಲಿ 2 ಮಿಲಿಯನ್ ಡಾಲರ್ (₹17 ಕೋಟಿ) ನಿಂದ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.