ADVERTISEMENT

ಸಿಂಡ್ರೆಲಾ ಮತ್ತು ಮುಫ್ತಿಗೆ ಸಿಕ್ಕ ರಾಜಕುಮಾರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 19:30 IST
Last Updated 23 ನವೆಂಬರ್ 2019, 19:30 IST
ಕಲೆ: ಸೃಜನ್‌
ಕಲೆ: ಸೃಜನ್‌   

ಹ್ಞಾಂ....

ಸಿಂಡ್ರೆಲಾ

ರಾಜಕುಮಾರನ ಕೇಳಿರಲಿಲ್ಲ

ADVERTISEMENT

ಹಿಮದ ರಾತ್ರಿಯ ವಿಹಾರ

ಮತ್ತು

ತೂತು ನಕ್ಷತ್ರಗಳಿಲ್ಲದ

ಒಂದು ಗೌನು

ಎರಡೇ ಕೇಳಿದ್ದು

ರಾಜಕುಮಾರ ಮುಫ್ತಿಗೆ ಸಿಕ್ಕ

ಕಿರೀಟ ತೊಟ್ಟ

ರಾಜಕುಮಾರನ ಜತೆ ಇದ್ದೇನೆ

ನಾನೂ...

ಹೊಳೆಯುವ ನಕ್ಷತ್ರಗಳನ್ನೇ

ಹೊದ್ದುಕೊಂಡು

ತಿರುಗಬಹುದಿತ್ತು

ಆದರೆ

ಮುಫ್ತಿಗೆ ರಾಜಕುಮಾರ ಸಿಗಬಹುದು

ಅವನ ಪ್ರೀತಿಯಲ್ಲ

ಫೇರಿಟೇಲ್ಗಳ ಅಚ್ಚಿಸಿ, ಹೊಲೆದು

ಮಾರುಕಟ್ಟೆಗೆ ಕಳಿಸುವ

ಕ್ರಿಯಾಶೀಲ ಕೂಲಿ ನಾನು

ರಾಜಕುಮಾರ

ತುಂಬಾ ಸಾಹುಕಾರ

ನನ್ನ ಅಂಗಳದಲ್ಲೂ

ಗುಲಾಬಿಗಳು ನಗಲಿ

ಅಂತ ನೀರೆರೆಯುತ್ತೇನೆ

ಅವನು ಮುಗುಳು ಮೊಗ್ಗುಗಳನೆಲ್ಲಾ ಬಿಡಿಸಿ

ಅರಮನೆಯ ಅತಿಥಿಗಳಿಗೆ

ನೆಲಹಾಸು ಮಾಡುತ್ತಾನೆ

ರಾಜಕುಮಾರ

ಯುದ್ಧ ಗೆದ್ದು ರಾಜ್ಯ ಕಟ್ಟುತ್ತಾನೆ

ನಾನು ತಿಲಕವಿಟ್ಟು ಕಳಿಸಿ

ಏಕಾಂತದಲ್ಲಿ ಸೆಣಸುತ್ತೇನೆ...

ಕೇಳಿದರೆ ರಾಜ್ಯಕ್ಕೇ

ನನ್ನ ಹೆಸರಿಡುತ್ತಾನೆ.. ಪಾಪ!

ಆದರೆ

ಕೇಳದೆಯೂ ಅನಾಮತ್ತು ಕೊಡುವ

ಒಂದು ಮುತ್ತಿನಾಸೆ

ಹಾಗೇ ಕರಗೀತು

ಹೌದು

ಅವಳಿಗೆ ನಡುರಾತ್ರಿ

ರಾಜಕುಮಾರ ಸಿಕ್ಕಿದ ಸರೀ..

ಇವಳು ರಾಜಕುಮಾರಿಯಾದಳಾ...?

ಹಾ.. ಅವರಿಬ್ಬರೂ

ಮದುವೆಯಾಗಿ

ಸುಖವಾಗಿದ್ದರು ಅಂತಂದರು ಯಾರೋ..

ಮದುವೆಗೆ ಪುರಾವೆ ಸಿಕ್ಕ ಹಾಗೆ

ಸುಖಕ್ಕೆ ಖಾತ್ರಿ ಸಿಗಬಹುದಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.