ADVERTISEMENT

ಬಡ್ಡಿ ಮೇಲಿನ ಆದಾಯ ತೆರಿಗೆ ಮರುಪರಿಶೀಲನೆ ಬೇಕು: ಎಸ್‌ಬಿಐ

ಪಿಟಿಐ
Published 21 ಸೆಪ್ಟೆಂಬರ್ 2021, 16:20 IST
Last Updated 21 ಸೆಪ್ಟೆಂಬರ್ 2021, 16:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಗೆ ವಿಧಿಸುತ್ತಿರುವ ತೆರಿಗೆ ಪ್ರಮಾಣದ ಬಗ್ಗೆ ಮರುಪರಿಶೀಲನೆ ನಡೆಸಬೇಕಾದ ಅಗತ್ಯ ಇದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಣ್ಣ ಠೇವಣಿದಾರರು ತಮ್ಮ ಹೂಡಿಕೆಗಳ ಮೇಲೆ ಪಡೆಯುತ್ತಿರುವುದು ನಕಾರಾತ್ಮಕ ಬಡ್ಡಿ ಎಂದೂ ಅವರು ಹೇಳಿದ್ದಾರೆ.

ದಿನನಿತ್ಯದ ಖರ್ಚುಗಳಿಗೆ ಠೇವಣಿ ಹಣಕ್ಕೆ ಪ್ರತಿಯಾಗಿ ಬರುವ ಬಡ್ಡಿಯವನ್ನು ನೆಚ್ಚಿಕೊಂಡಿರುವ ಹಿರಿಯ ನಾಗರಿಕರ ವಿಚಾರದಲ್ಲಿಯಾದರೂ ಬಡ್ಡಿ ಮೇಲಿನ ತೆರಿಗೆ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಣ್ಣ ಠೇವಣಿದಾರರು ಇರಿಸಿರುವ ಠೇವಣಿಗಳ ಒಟ್ಟು ಮೊತ್ತವು ₹ 102 ಲಕ್ಷ ಕೋಟಿ ಎಂದು ಎಸ್‌ಬಿಐನ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

ಈಗಿನ ನಿಯಮಗಳ ಪ್ರಕಾರ ಬ್ಯಾಂಕ್‌ಗಳು ಬಡ್ಡಿ ಆದಾಯವು ₹ 40 ಸಾವಿರಕ್ಕಿಂತ ಹೆಚ್ಚಿದ್ದರೆ ಅದನ್ನು ಠೇವಣಿದಾರರ ಖಾತೆಗೆ ಜಮಾ ಮಾಡುವ ಸಂದರ್ಭದಲ್ಲಿ ತೆರಿಗೆ ಕಡಿತ ಮಾಡುತ್ತವೆ. ಹಿರಿಯ ನಾಗರಿಕರು ಪಡೆಯುವ ಬಡ್ಡಿ ಆದಾಯವು ವಾರ್ಷಿಕ ₹ 50 ಸಾವಿರಕ್ಕಿಂತ ಜಾಸ್ತಿ ಇದ್ದಲ್ಲಿ, ಆ ಮೊತ್ತಕ್ಕೆ ತೆರಿಗೆ ಕಡಿತ ಮಾಡಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರವು ಹೆಚ್ಚಾಗುವ ಸಾಧ್ಯತೆ ಕಡಿಮೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.