ADVERTISEMENT

ಬೆಳಗಾವಿ: ‘ರಂಗ ಸಾಧಕರ ಭಾವಕೋಶ ಗುಡಿಹಳ್ಳಿ’

ಬಂಡಾಯ ಸಾಹಿತ್ಯ ಸಂಘಟನೆಯಿಂದ ನುಡಿನಮನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 12:11 IST
Last Updated 14 ಸೆಪ್ಟೆಂಬರ್ 2021, 12:11 IST
ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಪತ್ರಕರ್ತ ಗುಡಿಹಳ್ಳಿ ನಾಗರಾಜ ಅವರಿಗೆ ನುಡಿನಮನ ಸಲ್ಲಿಸಲಾಯಿತು
ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಪತ್ರಕರ್ತ ಗುಡಿಹಳ್ಳಿ ನಾಗರಾಜ ಅವರಿಗೆ ನುಡಿನಮನ ಸಲ್ಲಿಸಲಾಯಿತು   

ಬೆಳಗಾವಿ: ‘ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ವಲಯದ ಪರವಾಗಿ ಧ್ವನಿ ಎತ್ತುವ ಮತ್ತು ಬರೆಯುವ ಬಂಡಾಯ ಬರಹಗಾರರಲ್ಲಿ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಪ್ರಮುಖರಾಗಿದ್ದರು’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.

ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದಿಂದ ಗುಡಿಹಳ್ಳಿ ನಾಗರಾಜ್ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಾಮಾನ್ಯರ ನಡುವೆ ಅಷ್ಟೊಂದು ಮಾನ್ಯತೆ ಪಡೆಯದ ರಂಗಭೂಮಿ ಕ್ಷೇತ್ರದಲ್ಲಿನ ಪ್ರತಿಭೆ ಇದ್ದೂ ಪ್ರಚಾರಕ್ಕೆ ಬರದ ರಂಗ ಸಾಧಕರನ್ನು ಹುಡುಕಿ ಬರೆದು ಬೆಳಕಿಗೆ ತರುವಲ್ಲಿ ಗುಡಿಹಳ್ಳಿ ಅಪಾರ ಶ್ರಮ ಹಾಕಿದ್ದರು. ತಾವು ವೃತ್ತಿ ನಿರ್ವಹಿಸುವ ‘ಪ್ರಜಾವಾಣಿ’, ‘ಸುಧಾ’ ಪತ್ರಿಕೆಗಳಲ್ಲದೆ ರಂಗಭೂಮಿಗೆ ಮೀಸಲಾದ ಈ ಮಾಸ ನಾಟಕ ಮತ್ತು ರಂಗ ನೇಪಥ್ಯ ಎನ್ನುವ ಸ್ವಂತ ನಿರ್ವಹಣೆಯ ಪತ್ರಿಕೆಗಳ ಮೂಲಕ ರಾಜ್ಯದ ಹಲವು ಭಾಗದ ಅನೇಕರನ್ನು ಪರಿಚಯಿಸಿದರು. ರಂಗ ಸಾಧಕರ ಭಾವಕೋಶವಾಗಿದ್ದರು. ಪ್ರಚಾರದಿಂದ ದೂರ ಉಳಿದ ಅಪರೂಪದ ಸಾಧಕರಾಗಿದ್ದರು’ ಎಂದು ನೆನೆದರು.

ADVERTISEMENT

‘ಅವರು ಬರಹಗಾರ ಮಾತ್ರವಲ್ಲದೆ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಚಿತ್ರದುರ್ಗದಲ್ಲಿ ಸಂಘಟನೆಯ 9ನೇ ರಾಜ್ಯ ಸಮ್ಮೇಳನ ಸಂಘಟಿಸಿ ಅಲ್ಲಿನ ಉಪನ್ಯಾಸಗಳನ್ನು ಸಂಪಾದಿಸಿ ಅದಕ್ಕೊಂದು ಚಾರಿತ್ರಿಕ ನೆಲೆ ಒದಗಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು’ ಎಂದು ನುಡಿನಮನ ಸಲ್ಲಿಸಿದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಮಾತನಾಡಿ, ‘ಪತ್ರಿಕಾರಂಗ, ರಂಗಭೂಮಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಅಪಾರ ಕೆಲಸ ಮಾಡಿದ ನಾಗರಾಜ ಪ್ರಚಾರದಿಂದ ದೂರ ಉಳಿದವರು. ದುಡಿದವರಿಗೆ ಸಮಾಜ ಮನ್ನಣೆ ನೀಡದಿದ್ದರೆ ಮಾನವೀಯ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತವೆ. ಹೀಗಾಗಿ, ಬಂಡಾಯ ಸಂಘಟನೆಯು ಇಂತಹ ಸಾಧಕರನ್ನು ಸಮಾಜದ ನಡುವೆ ಜೀವಂತವಾಗಿಸುವ ಕಾರ್ಯ ಮಾಡುತ್ತಿರುವುದು ಪ್ರಗತಿಪರರ ಆತ್ಮಸ್ಥೈರ್ಯ ಹೆಚ್ಚಿಸಿದೆ’ ಎಂದರು.

ಯುವ ಕವಿ ನದೀಮ ಸನದಿ, ‘ನೈತಿಕತೆ ಮಾರಾಟದ ಸರಕಾಗಿರುವ ಈ ಸಂದರ್ಭದಲ್ಲಿ ಗಟ್ಟಿಯಾದ ಆಲೋಚನಾ ಕ್ರಮವನ್ನು ಪ್ರತಿಪಾದಿಸಬೇಕಾದ ಅಗತ್ಯವಿದೆ. ಗುಡಿಹಳ್ಳಿ ಅವರು ಪ್ರಚಾರದ ಕೊರತೆಯಿಂದ ಅನೇಕ ಯುವಕರಿಗೆ ಪರಿಚಯವಾಗಿದ್ದು ಕಡಿಮೆ. ಪ್ರಗತಿಪರರ ಕುರಿತು ಹಾಗಾಗದಂತೆ ನಾವು ನೋಡಿಕೊಳ್ಳಬೇಕಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಮಣ್ಣ ಸೊಗಲದ, ಗಜಾನನ ಸಂಗೋಟೆ, ಕವಿ ಸಂತೋಷ ನಾಯಕ ನುಡಿನಮನ ಸಲ್ಲಿಸಿದರು. ದಿಲ್ಲಶಾಬೇಗಮ್ ನದಾಫ್, ಉಮೇಶ್ ಭೀಮನಾಯಕ, ಪ್ರವೀಣ ಸುಣಗಾರ, ಅಲ್ಲಾಭಕ್ಷ ಹುನಗುಂದ, ಸಚಿನ್ ಶೆಟ್ಟಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿ ಮುಖಂಡ ಹನುಮಂತ ಯರಗಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ನಾಯಕ ನಿರೂಪಿಸಿದರು. ಜಿಲ್ಲಾ ಸಂಚಾಲಕ ಡಾ.ಅಡಿವೆಪ್ಪ ಇಟಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.