ADVERTISEMENT

ಬೈಂದೂರು: ಮೀನುಗಾರರ ಪ್ರತಿಭಟನೆ

ಸಂಕಷ್ಟ ಬಂದಾಗ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಆರೋಪ; ತಹಶೀಲ್ದಾರರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 4:11 IST
Last Updated 6 ಆಗಸ್ಟ್ 2022, 4:11 IST
ಉಪ್ಪುಂದ ಭಾಗದ ಮೀನುಗಾರರು ಪ್ರತಿಭಟನೆ ನಡೆಸಿದರು
ಉಪ್ಪುಂದ ಭಾಗದ ಮೀನುಗಾರರು ಪ್ರತಿಭಟನೆ ನಡೆಸಿದರು   

ಬೈಂದೂರು: ಮೀನುಗಾರರ ಕಷ್ಟಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಉಪ್ಪುಂದ ಭಾಗದ ಮೀನುಗಾರರು ಶುಕ್ರವಾರ ಬೈಂದೂರು ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಮೀನುಗಾರ ಮುಖಂಡ ಎಸ್.ಮದನಕುಮಾರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಈಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಉಪ್ಪುಂದ ಮತ್ತು ತಾರಾಪತಿ ಭಾಗದ ಮೀನುಗಾರರು ತುಂಬ ನಷ್ಟ ಅನುಭವಿಸಿದ್ದಾರೆ. ಆದರೆ ಅಧಿಕಾರಿ ಗಳಾಗಲಿ, ಜನಪ್ರತಿನಿಧಿಗಳಾಗಲಿ ಸಂತ್ರಸ್ತರ ಕಷ್ಟವನ್ನು ಆಲಿಸಲು ಬರಲಿಲ್ಲ ಎಂದು ಆರೋಪಿಸಿದರು.

ಸಂಕಷ್ಟ ಬಂದಾಗ ಸರ್ಕಾರ ಮತ್ತು ಅಧಿಕಾರಿಗಳು ಮೀನುಗಾರರನ್ನು ಕಡೆಗಣಿಸುತ್ತ ಬಂದಿದ್ದಾರೆ. ಹಾಗಾ ದರೆ ನಾವು ಈ ಸಮಾಜದ ಭಾಗವಲ್ಲವೇ? ಭೋರ್ಗರೆಯುವ ಸಮುದ್ರದಲ್ಲಿ ಆಳೆತ್ತರದ ಅಲೆಗಳ ನಡುವೆ ನಿತ್ಯ ಸೆಣಸುವ ನಾವು ಬೇರೆ ಯಾರಿಗೆ ಹೆದರುತ್ತೇವೆ, ನಿರ್ಲಕ್ಷ್ಯ ಮುಂದುವರಿದರೆ ಕಡಲ ಮಕ್ಕಳು ರಸ್ತೆಗಿಳಿದು ಪ್ರತಿಭಟಿಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

ಶಿರೂರಿನಲ್ಲಿ ದಿಢೀರನೆ ಕಾಣಿಸಿ ಕೊಂಡ ಜಲಪ್ರವಾಹದಿಂದಾಗಿ ಮೀನು ಗಾರರ 40ಕ್ಕೂ ಹೆಚ್ಚು ದೋಣಿ ಹಾಗೂ ಇತರ ಸಾಮಗ್ರಿಗಳು ಹಾನಿಗೊಳಗಾಗಿದ್ದು ₹ 3 ಕೋಟಿಗೂ ಅಧಿಕ ನಷ್ಟವಾಗಿದೆ. ಇಷ್ಟು ದೊಡ್ಡ ಅವಘಡ ಸಂಭವಿಸಿದ್ದರೂ ಸಹಾಯಕ ನಿರ್ದೇಶಕರಾಗಲೀ, ಜಿಲ್ಲಾಧಿಕಾರಿಯಾಗಲೀ, ಉಪವಿಭಾ ಗಾಧಿಕಾರಿಯಾಗಲೀ, ಶಾಸಕರಾಗಲೀ, ಸಂಸದರಾಗಲೀ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೈಂದೂರು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಕಿರಣ ಗೌರಯ್ಯ ಮನವಿ ಸ್ವೀಕರಿಸಿ, ನಷ್ಟ ಭರಿಸಲಿದೆ ಎಂದು ಭರವಸೆ ನೀಡಿದರು.

ಮುಖಂಡರಾದ ವೆಂಕಟ್ರಮಣ ಖಾರ್ವಿ, ಜಗನ್ನಾಥ ಉಪ್ಪುಂದ, ಕುಮಾರ ಖಾರ್ವಿ, ನಾಗರಾಜ ಖಾರ್ವಿ, ಕೆ.ನಾಗೇಶ ಖಾರ್ವಿ, ಬಿ.ದಾಮೋದರ ಖಾರ್ವಿ, ಬಿ.ಭಾಸ್ಕರ ಖಾರ್ವಿ, ಡಿ.ರಾಮಚಂದ್ರ ಖಾರ್ವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.