ADVERTISEMENT

ಸಚಿವ ಪ್ರಭು‌ ಚೌವಾಣ ವಿರುದ್ಧ ಪ್ರತಿಭಟನೆ: ಮಾದಿಗ ದಂಡೋರ ಸಮಿತಿ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 8:10 IST
Last Updated 7 ಅಕ್ಟೋಬರ್ 2021, 8:10 IST
   

ರಾಯಚೂರು: ಇಲಾಖೆ ಪ್ರಗತಿ ಪರಿಶೀಲನೆಗಾಗಿ ನಗರಕ್ಕೆ ಗುರುವಾರ ಆಗಮಿಸಿದ ಪಶುಸಂಗೋಪನೆ ಸಚಿವ ಪ್ರಭು ಚೌವಾಣ ಅವರಿದ್ದ ಕಾರು ಜಿಲ್ಲಾಧಿಕಾರಿ ಕಚೇರಿ ತಲುಪುತ್ತಿದ್ದಂತೆ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಬೇಡ ಎಂದಿರುವ ಸಚಿವರಿಗೆ ಪ್ರತಿಭಟನಾಕಾರರು ದಿಕ್ಕಾರ್ ಕೂಗಿದರು.

ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸುವ ಬಗ್ಗೆ ಮಾದಿಗ ದಂಡೋರ ಮೊದಲೇ ಸುಳಿವು ನೀಡಿತ್ತು.‌ ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಆವರಣ ಹಾಗೂ‌ ಮುಂಭಾಗದಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ದಂಡೋರ ಸಮಿತಿಯವರನ್ನು ಸಚಿವರು ಮೊದಲು ಭೇಟಿ ಮಾಡಿದರು.‌ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ‌ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿ ಸುಮ್ಮನಿರಿಸಿದರು.

ADVERTISEMENT

ಪ್ರತಿಭಟನೆ ಸ್ಥಳದಿಂದ ಸಚಿವರ ಕಾರು ಜಿಲ್ಲಾಧಿಕಾರಿ ಕಚೇರಿಯತ್ತ ಹೋಗುವಾಗ, ಪೊಲೀಸರು ಕಣ್ಣುತಪ್ಪಿಸಿ ದಿಢೀರ್ ಧಾವಿಸಿದ ಕಾರ್ಯಕರ್ತರ ಇನ್ನೊಂದು ತಂಡವು
ಘೇರಾವ್ ಮಾಡಿ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.