ADVERTISEMENT

300 ಸಿ.ಎ ನಿವೇಶನ ಮಂಜೂರು

ನಾಗರಿಕ ಸೌಕರ್ಯ ನಿವೇಶನ ಹಂಚಿಕೆಗೆ ಮುಡಾ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:32 IST
Last Updated 17 ಸೆಪ್ಟೆಂಬರ್ 2021, 4:32 IST
ಸಿ.ಎ ನಿವೇಶನಗಳ ಪಟ್ಟಿಯನ್ನು ಸಚಿವ ಎಸ್‌.ಟಿ.ಸೋಮಶೇಖರ್‌ ಬಿಡುಗಡೆ ಮಾಡಿದರು. ಎಸ್.ಎ.ರಾಮದಾಸ್‌, ಎಚ್‌.ವಿ.ರಾಜೀವ್‌, ಎಲ್‌.ನಾಗೇಂದ್ರ, ಡಿ.ಬಿ.ನಟೇಶ್‌, ಸುನಂದಾ ಫಾಲನೇತ್ರ, ಡಾ.ಬಗಾದಿ ಗೌತಮ್‌ ಇದ್ದಾರೆ
ಸಿ.ಎ ನಿವೇಶನಗಳ ಪಟ್ಟಿಯನ್ನು ಸಚಿವ ಎಸ್‌.ಟಿ.ಸೋಮಶೇಖರ್‌ ಬಿಡುಗಡೆ ಮಾಡಿದರು. ಎಸ್.ಎ.ರಾಮದಾಸ್‌, ಎಚ್‌.ವಿ.ರಾಜೀವ್‌, ಎಲ್‌.ನಾಗೇಂದ್ರ, ಡಿ.ಬಿ.ನಟೇಶ್‌, ಸುನಂದಾ ಫಾಲನೇತ್ರ, ಡಾ.ಬಗಾದಿ ಗೌತಮ್‌ ಇದ್ದಾರೆ   

ಮೈಸೂರು: ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಉದ್ದೇಶಕ್ಕೆ ಮೀಸಲಿಟ್ಟಿರುವ (ಸಿ.ಎ) ಸುಮಾರು 300 ನಿವೇಶನಗಳನ್ನು ಮಂಜೂರು ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ತೀರ್ಮಾನಿಸಿದೆ.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಸಿ.ಎ ನಿವೇಶ
ನಗಳ ಪಟ್ಟಿ ಬಿಡುಗಡೆಗೊಳಿಸಿದರು.

ಸಿ.ಎ ನಿವೇಶನಗಳನ್ನು ಈ ಹಿಂದೆ ನಿಗದಿಪಡಿಸಲಾಗಿದ್ದ ದರದಂತೆಯೇ ಪ್ರತಿ ಚದರ ಮೀಟರ್‌ಗೆ ₹ 2,100ಕ್ಕೆ ಮಂಜೂರು ಮಾಡಲು ಆ.13 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ನೋಂದಣಿಯಾದ ಸಹಕಾರ ಸಂಘಗಳು, ಶೈಕ್ಷಣಿಕ, ಧಾರ್ಮಿಕ ಉದ್ದೇಶಗಳಿಗಾಗಿ ಸ್ಥಾಪನೆಯಾದ ಸಂಘಗಳು ಮತ್ತು ಸರ್ಕಾರಿ ಇಲಾಖೆಗಳು, ಟ್ರಸ್ಟ್‌ಗಳು ನಿವೇಶನ ಪಡೆಯಲು ಅರ್ಹವಾಗಿವೆ.

ADVERTISEMENT

‘ಕನ್ನಡ ಮಾಧ್ಯಮ ಶಾಲೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಸಂಸ್ಥೆಗಳಿಗೆ ನಿವೇಶನಗಳನ್ನು ಶೇ 50 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ’ ಎಂದು ಸಚಿವರು ತಿಳಿಸಿದರು.

‘ಪರಿಶಿಷ್ಟ ಜಾತಿ ಸಂಸ್ಥೆಗಳಿಗೆ ಶೇ 18, ಪರಿಶಿಷ್ಟ ಪಂಗಡ ಸಂಸ್ಥೆಗಳಿಗೆ ಶೇ 2 ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಗಳಿಗೆ ಶೇ 2 ರಷ್ಟು ನಿವೇಶನವನ್ನು ಮೀಸಲಾತಿಯಡಿ ಹಂಚಿಕೆ ಮಾಡಲಾಗುತ್ತದೆ’ ಎಂದರು.

‘ಒಂದು ಅರ್ಜಿಯಲ್ಲೇ ಆದ್ಯತೆಯ ಮೇರೆಗೆ ಮೂರು ಸಿ.ಎ ನಿವೇಶನಗಳಿಗೆ ಕೋರಿಕೆ ಸಲ್ಲಿಸಬಹುದು. ಅವುಗಳ ಪೈಕಿ ಹೆಚ್ಚು ವಿಸ್ತೀರ್ಣದ ಸಿ.ಎ ನಿವೇಶನಕ್ಕೆ ಪಾವತಿಸುವ ಪ್ರಾರಂಭಿಕ ಠೇವಣಿ ಮತ್ತು ನೋಂದಣಿ ಶುಲ್ಕ ಮಾತ್ರ ಪಾವತಿಸಬೇಕಾಗಿರುತ್ತದೆ’ ಎಂದು ತಿಳಿಸಿದರು.

ಸಹಕಾರಿ ಸಂಘದಿಂದಲೇ ನಿವೇಶನ: ‘ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಹಕಾರಿ ಸಂಘಗಳು ಸಕ್ರಿಯವಾಗಿವೆ. ಸಹಕಾರಿ ಸಂಘಗಳು ಕ್ರಿಯಾಶೀಲವಾಗಿರುವ ಕಡೆಗಳಲ್ಲಿ ಸಂಘದಿಂದಲೇ ಜನರಿಗೆ ಕಡಿಮೆ ದರ
ದಲ್ಲಿ ನಿವೇಶನ ನೀಡಲು ಸೂಚನೆ ನೀಡಲಾ
ಗಿದೆ’ ಎಂದು ಸಚಿವರು ಹೇಳಿದರು.

ಮೇಯರ್ ಸುನಂದಾ ಫಾಲನೇತ್ರ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮುಡಾ ಆಯುಕ್ತ ಡಿ.ಬಿ.ನಟೇಶ್ ಪಾಲ್ಗೊಂಡಿದ್ದರು.

ಯಾರಿಗೆ ಎಷ್ಟು ನಿವೇಶನ?: ಹಾಪ್‌ಕಾಮ್ಸ್‌ಗೆ 21, ಶೈಕ್ಷಣಿಕ ಕ್ಷೇತ್ರಕ್ಕೆ 20, ಧಾರ್ಮಿಕ ಕೇಂದ್ರಗಳಿಗೆ 20, ಸಹಕಾರ ಸಂಘದ ಕಚೇರಿಗೆ 20, ಹಾಲಿನ ಕೇಂದ್ರಕ್ಕೆ 19, ವೈದ್ಯಕೀಯ ಕ್ಷೇತ್ರಕ್ಕೆ 18, ಲಲಿತಾ ಕಲಾ ಶಾಲೆ, ಸಂಗೀತ ಶಾಲೆಗಳಿಗೆ 17, ಬಡಾವಣೆ ಕ್ಷೇಮಾಭಿವೃದ್ಧಿ ಸಂಘಗಳಿಗೆ 15, ಧ್ಯಾನ ಕೇಂದ್ರ, ಪ್ರಾರ್ಥನಾ ಮಂದಿರಗಳಿಗೆ 14, ಅಂಗನವಾಡಿಗಳಿಗೆ 12, ಕ್ರೀಡಾ ಹಾಸ್ಟೆಲ್, ಕ್ರೀಡಾ ಅಕಾಡೆಮಿ, ಕ್ರೀಡಾ ತರಬೇತಿ ಕೇಂದ್ರಗಳಿಗೆ 12, ಕೌಶಲ ತರಬೇತಿ ಕೇಂದ್ರಗಳಿಗೆ 11, ವಿದ್ಯಾರ್ಥಿ ನಿಲಯಗಳಿಗೆ 11, ಯೋಗ ಕೇಂದ್ರಗಳಿಗೆ 11, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕೇಂದ್ರ, ಸಮುದಾಯ ಭವನಗಳಿಗೆ 8, ವಿದ್ಯುತ್ ಚಾರ್ಜಿಂಗ್ ಘಟಕಗಳಿಗೆ 6, ವ್ಯಾಯಾಮ ಶಾಲೆಗಳಿಗೆ 6, ವೃದ್ಧಾಶ್ರಮಗಳಿಗೆ 6, ಅಂಗವಿಕಲರ ಶಾಲೆಗಳಿಗೆ 6, ಗ್ರಂಥಾಲಯಕ್ಕೆ 5, ನ್ಯಾಯ ಬೆಲೆ ಅಂಗಡಿಗಳಿಗೆ 5 ರೈತರ ಮಳಿಗೆ, ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ 4, ಮೀನು ಮಾರಾಟ ಮಳಿಗೆಗಳಿಗೆ 4 ಮತ್ತಿ ಮದ್ಯ ವ್ಯಸನ ಮುಕ್ತ ಕೇಂದ್ರಗಳಿಗೆ 4 ಸಿ.ಎ ನಿವೇಶನಗಳನ್ನು ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.