ADVERTISEMENT

ಕಾಂಗ್ರೆಸ್‌ನಿಂದ ನಿರುದ್ಯೋಗ ದಿನ ಆಚರಣೆ

ಬಾಳೆಹಣ್ಣು ಮಾರುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 4:04 IST
Last Updated 18 ಸೆಪ್ಟೆಂಬರ್ 2021, 4:04 IST
ಯಾದಗಿರಿಯ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬಾಳೆ ಹಣ್ಣು ಮಾರಾಟ ಮಾಡುವ ಮೂಲಕ ‘ರಾಷ್ಟ್ರೀಯ ನಿರುದ್ಯೋಗ ದಿನ‘ ಆಚರಿಸಲಾಯಿತು. ಕಾರ್ಯಕರ್ತರು ಇದ್ದಾರೆ
ಯಾದಗಿರಿಯ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬಾಳೆ ಹಣ್ಣು ಮಾರಾಟ ಮಾಡುವ ಮೂಲಕ ‘ರಾಷ್ಟ್ರೀಯ ನಿರುದ್ಯೋಗ ದಿನ‘ ಆಚರಿಸಲಾಯಿತು. ಕಾರ್ಯಕರ್ತರು ಇದ್ದಾರೆ   

ಯಾದಗಿರಿ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಸೆಪ್ಟೆಂಬರ್ 17ರಂದು ‘ರಾಷ್ಟ್ರೀಯ ನಿರುದ್ಯೋಗ ದಿನ‘ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಆಚರಿಸಲಾಯಿತು.

ನಗರದ ಸುಭಾಷ್ ಚಂದ್ರಬೋಸ್ ವೃತ್ತದಲ್ಲಿ ಬೀದಿ ಬದಿ ಬಾಳೆಹಣ್ಣು ಮಾರುವ ಮೂಲಕ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕುವ ಮೂಲಕ ಆಚರಿಸಲಾಯಿತು.

ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಸುಳ್ಳು ಮತ್ತು ಹಗರಣಗಳಿಂದ ಕೂಡಿದೆ. ನಾವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಯುವಜನತೆಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಸುಳ್ಳು ಭರವಸೆಯನ್ನು ನೀಡಿ ಯುವಕರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

‘ಅಧಿಕಾರಕ್ಕೆ ಬಂದಾಗ ಮೋದಿ ನೀಡಿದ್ದು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ. ಆದರೆ, ಆಗ ಶೇ 4.2ರಷ್ಟಿದ್ದ ನಿರುದ್ಯೋಗದ ಪ್ರಮಾಣ ಶೇ 10.3ಕ್ಕೆ ಈಗ ಏರಿಕೆಯಾಗಿದೆ. ಹೀಗಾಗಿ, ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದರು.

ಯುವ ಮುಖಂಡ ಬಸ್ಸುಗೌಡ ಬಿಳ್ಹಾರ ಉದ್ಯೋಗ ಕೊಡಿ ಎಂದು ಕೇಳಿದರೆ ನೀವು ಉದ್ಯೋಗಕ್ಕೆ ಸೂಕ್ತವಲ್ಲ. ನೀವು ಪಕೋಡ ಮಾರಿ ಎಂದು ಯುವಜನತೆಗೆ ತುಚ್ಛ ಮನಸ್ಸಿನಿಂದ ಅವಮಾನಿಸುತ್ತಿದ್ದಾರೆ. ಇಂಥ ಬಿಜೆಪಿ ಸರ್ಕಾರ ಮತ್ತೊಮ್ಮೆ ಬಂದರೆ ದೇಶ, ರಾಜ್ಯ ಅನಕ್ಷರಸ್ಥವಾಗಿಯೇ ಉಳಿದುಬಿಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಯುವಜನತೆ ಕಂಗಾಲಾಗಿದ್ದಾರೆ. ಪದವೀಧರರು, ಎಲ್ಲಿಯೂ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಕೇಂದ್ರ ಸರ್ಕಾರ, ತನ್ನ ಜನ ವಿರೋಧಿ ನೀತಿಗಳಿಂದ ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು

ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ,
ಎನ್‌ಎಸ್‌ಯುಐನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ್ ಕವಲಿ, ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾವೂದ್ ಇಬ್ರಾಹಿಂ ಪಠಾಣ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಸಾಹುಕಾರ್ ಖಾನಾಪುರ, ಅವಿನಾಶ್ ಜಗನ್ನಾಥ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಶಿವಕುಮಾರ್, ಶಹಾಪುರ ಬ್ಲಾಕ್ ಅಧ್ಯಕ್ಷ ಮೌನೇಶ್ ನಾಟೇಕರ, ಸೈದಾಪುರ ಬ್ಲಾಕ್ ಅಧ್ಯಕ್ಷ ವಿಜಯ ಕಂದಳ್ಳಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.