ADVERTISEMENT

ಫ್ಯಾಕ್ಟ್ ಚೆಕ್: ಲಸಿಕೆ ಹಾಕಿಕೊಂಡ ಜಾಗದಲ್ಲಿ ಇರಿಸಿದರೆ ಬಲ್ಬ್ ಉರಿಯುತ್ತಾ?

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 19:33 IST
Last Updated 3 ಜೂನ್ 2021, 19:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಲಸಿಕೆ ಹಾಕಿಸಿಕೊಂಡ ಜಾಗದಲ್ಲಿ ಎಲ್‌ಇಡಿ ಬಲ್ಬ್ ಇರಿಸಿದರೆ ಅದರಲ್ಲಿ ಬೆಳಕು ಮೂಡುತ್ತದೆ’! ಹೌದೇ?, ಇಂತಹದ್ದೊಂದು ವಿಚಿತ್ರ ಸಂಗತಿ ಇರುವ ವಿಡಿಯೊ ವೈರಲ್ ಆಗಿದ್ದು, ಅಚ್ಚರಿಗೆ ಕಾರಣವಾಗಿದೆ. ವಿಡಿಯೊದಲ್ಲಿರುವ ವ್ಯಕ್ತಿಯೊಬ್ಬರು ತಾವು ಲಸಿಕೆ ಹಾಕಿಸಿಕೊಂಡ ಕೈಗೆ ತಾಗಿಸಿ ಈ ಎಲ್‌ಇಡಿ ಬಲ್ಬ್‌ ಇರಿಸುತ್ತಾರೆ. ಅದು ತಕ್ಷಣ ಹೊತ್ತಿಕೊಳ್ಳುತ್ತದೆ. ದೇಹದ ಇತರ ಭಾಗಗಳಲ್ಲಿ ಇಟ್ಟರೆ ಅದು ಹೊತ್ತುವುದಿಲ್ಲ ಎಂದು ಸ್ವತಃ ಅವರೇ ಹೇಳುತ್ತಾರೆ. ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅವರು, ಅದು ‘ತಮಾಷೆ’ಗೆ ಮಾಡಿದ್ದು ಎಂದು ಸ್ಪಷ್ಟನೆ ನೀಡಿ ವಿಷಾದಿಸಿದ್ದಾರೆ.

ಕೈ ಮೇಲೆ ಇರಿಸಿದ ಬಲ್ಬ್ ಹೊತ್ತಿಕೊಂಡಿದ್ದರ ಕಾರಣವನ್ನು ‘ದಿ ಕ್ವಿಂಟ್’ ಫ್ಯಾಕ್ಟ್ ಚೆಕ್ ತಾಣ ಪತ್ತೆಹಚ್ಚಿದೆ. ಅದು ರೀಚಾರ್ಜಬಲ್ ಎಲ್‌ಇಡಿ ಆಗಿರುವ ಕಾರಣ, ತೇವಾಂಶ, ಅಲ್ಯೂಮಿನಿಯಂ ಚೂರು ಅಥವಾ ಕಾಗದದ ಚೂರು ತಾಗಿದರೆ ಹೊತ್ತಿಕೊಳ್ಳುವುದು ಅದರ ಗುಣ. ಇಂತಹ ಉತ್ಪನ್ನವು ನಾಲ್ಕೈದು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದು, ಇದರಲ್ಲಿ ಹೊಸತನವೇನೂ ಇಲ್ಲ. ವಿದ್ಯುತ್ ಕಡಿತವಾದಾಗ ಮನೆಗಳಲ್ಲಿ ಇಂತಹ ಬಲ್ಬ್‌ಗಳನ್ನು ಬಳಸಲಾಗುತ್ತದೆ ಎಂದು ಲ್ಯೂಮಿನೈಟ್ ಎಲ್ಇಡಿ ಸಂಸ್ಥೆಯು ತಿಳಿಸಿದೆ. ಇಂತಹ ವಿಡಿಯೊಗಳಿಂದ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT