ADVERTISEMENT

ಮಹಾರಾಷ್ಟ್ರ: ಪರಿಸರ ಪ್ರವಾಸೋದ್ಯಮವಾಗಿ ‘ಮ್ಯಾಂಗ್ರೋವ್ ಸಫಾರಿ’

ಮಹಾರಾಷ್ಟ್ರ: ಮಹಿಳಾ ಸ್ವಸಹಾಯ ಗುಂಪಿನ ನೂತನ ಪ್ರಯತ್ನ

ಪಿಟಿಐ
Published 26 ನವೆಂಬರ್ 2020, 6:17 IST
Last Updated 26 ನವೆಂಬರ್ 2020, 6:17 IST
ಮ್ಯಾಂಗ್ರೋವ್ (ಸಾಂದರ್ಭಿಕ ಚಿತ್ರ)
ಮ್ಯಾಂಗ್ರೋವ್ (ಸಾಂದರ್ಭಿಕ ಚಿತ್ರ)   

ಮುಂಬೈ: ಮಹಿಳಾ ಸ್ವ ಸಹಾಯ ಗುಂಪೊಂದು ಮಹಾರಾಷ್ಟ್ರದ ವೆಂಗುರ್ಲೆ ಪಟ್ಟಣದಲ್ಲಿರುವ ಅತ್ಯಾಕರ್ಷಕ ‘ಮ್ಯಾಂಗ್ರೋವ್ ಸಫಾರಿ’ಯನ್ನು ಪರಿಸರ – ಪ್ರವಾಸೋದ್ಯಮ ಕೇಂದ್ರವಾಗಿ ಜನಪ್ರಿಯಗೊಳಿಸಲು ಮುಂದಾಗಿದೆ.

ಮಾಜಿ ಕಾರ್ಪೊರೇಟರ್‌ ಶ್ವೇತಾ ಹುಲೆ ಅವರು ನಿರ್ವಹಿಸುತ್ತಿರುವ ‘ಸ್ವಾಮಿನಿ’ ಮಹಿಳಾ ಸ್ವಸಹಾಯ ಗುಂಪು, ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಸಹಯೋಗದಲ್ಲಿ 2017ರಿಂದ ‘ಮ್ಯಾಂಗ್ರೋವ್ ಸಫಾರಿ’ಯನ್ನು ಪರಿಸರ ಪ್ರವಾಸೋದ್ಯಮವಾಗಿ ಉತ್ತೇಜಿಸಲು ಪ್ರಯತ್ನಿಸುತ್ತಿದೆ. ‘ಸ್ವಾಮಿನಿ’– ವಿಶೇಷವಾಗಿ ಮೀನುಗಾರ ಮಹಿಳೆಯರಿಂದಲೇ ರಚನೆಯಾಗಿರುವ ಸ್ವಸಹಾಯ ಗುಂಪು.

ಮಹಾರಾಷ್ಟ್ರದ ದಕ್ಷಿಣ-ತುದಿಯಲ್ಲಿರುವ ಸಿಂಧುದುರ್ಗ್ ಜಿಲ್ಲೆಯ ಗುಡ್ಡಗಾಡು ಪಟ್ಟಣ ವೆಂಗುರ್ಲೆ, ಪ್ರಸಿದ್ಧ ಪ್ರವಾಸಿ ತಾಣ ಗೋವಾದಿಂದ ಕೇವಲ 18 ಕಿ.ಮೀ ದೂರದಲ್ಲಿದೆ. ಇದು ಆಕರ್ಷಕ ಮ್ಯಾಂಗ್ರೋವ್ ಕಾಡುಗಳಿರುವ ಪ್ರದೇಶ. ಇಲ್ಲಿನ ನಿಸರ್ಗದ ಸೌಂದರ್ಯ ಅಷ್ಟಾಗಿ ಹೊರ ಜಗತ್ತಿಗೆ ತಿಳಿದಿಲ್ಲ. ‘ಸಿಂಧುದುರ್ಗ್‌ನ ಮಾಲ್ವಾನ್‌ಗಿಂತ ವೆಂಗುರ್ಲೆ ಭಿನ್ನವಾಗಿದ್ದು, ಪ್ರಶಾಂತ ಸ್ಥಳವಾಗಿದೆ. ಇಂಥ ಸ್ಥಳಗಳನ್ನೇ ಪ್ರವಾಸಿಗರು ಹೆಚ್ಚು ಇಷ್ಟಪಡುತ್ತಾರೆ’ ಎಂದು ಶ್ವೇತಾ ಹುಲೆ ಸುದ್ದಿ ಸಂಸ್ಥೆಗೆ ತಿಳಿಸಿದರು.

ADVERTISEMENT

‘ಜನ ಇತ್ತೀಚೆಗೆ ಪ್ರಕೃತಿಗೆ ಹತ್ತಿರವಾಗಬೇಕೆಂದು ಬಯಸುತ್ತಿದ್ದಾರೆ. ಹಾಗಾಗಿ ಜನರು ಬಯಸುವಂತೆ, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಈ ದೃಷ್ಟಿಯಿಂದ ಯೋಚಿಸಿದರೆ ವೆಂಗುರ್ಲೆ ಭವಿಷ್ಯದಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮ್ಯಾಂಗ್ರೋವ್‌ ಕಾಡುಗಳ ಕುರಿತು ಜಾಗೃತಿ ಮೂಡಿಸುವ ಈ ಯೋಜನೆಗೆ ಯುಎನ್‌ಡಿಪಿ ಶೇ 100ರಷ್ಟು ಆರ್ಥಿಕ ನೆರವು ನೀಡುತ್ತಿದೆ. ಇದನ್ನು ನಡೆಸುತ್ತಿರುವ 10 ಮಹಿಳೆಯರಿಗೆ ಮಾಂಡ್ವಿ ಜೆಟ್ಟಿಯಲ್ಲಿ ಎರಡು ದೋಣಿಗಳು, 20 ಲೈಫ್ ಜಾಕೆಟ್‌ಗಳು ಮತ್ತು ಬಿದಿರಿನ ಮನೆಗಳನ್ನು ಪೂರೈಸಲಾಗಿದೆ. ಯುಎನ್‌ಡಿಪಿ ಯೋಜನೆಯ ಮಾಜಿ ಸಂಯೋಜಕ ಮತ್ತು ಅರಣ್ಯ ಅಧಿಕಾರಿಯೊಬ್ಬರು ಈ ಯೋಜನೆಯನ್ನು ನಿರ್ವಹಿಸುವ ಮೀನುಗಾರ ಕುಟುಂಬದ ಮಹಿಳೆಯರಿಗೆ ಇಂಗ್ಲಿಷ್ ತರಬೇತಿ ನೀಡಿದ್ದಾರೆ’ ಎಂದು ಹುಲೆ ಮಾಹಿತಿ ನೀಡಿದರು.

ಒಂದು ದೋಣಿಯಲ್ಲಿ 10 ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಇವರ ಜತೆಗೆ ಹುಲೆ ಅವರ ಸ್ವಸಹಾಯ ಗುಂಪಿನ ನಾಲ್ವರು ಸದಸ್ಯರ ತಂಡ, ಪ್ರವಾಸಿಗರೊಂದಿಗೆ ದೋಣಿಯಲ್ಲಿ ತೆರಳಲಿದೆ. ಈ ತಂಡದ ಸದಸ್ಯರು ನದಿ – ಕಣಿವೆ ಪ್ರದೇಶದಲ್ಲಿರುವ ಜೀವವೈಧ್ಯದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡುತ್ತಾರೆ. ಪ್ರವಾಸಿಗರಿಗೆ ಈ ಪ್ರದೇಶದ ಎಂಟು ಜಾತಿಯ ಮ್ಯಾಂಗ್ರೋವ್‌ಗಳು, ವಿವಿಧ ರೀತಿಯ ವಲಸೆ ಹಕ್ಕಿಗಳು ಮತ್ತು ಕಣಿವೆ ಪ್ರದೇಶದಲ್ಲಿರುವ ಜೀವ ವೈವಿಧ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

‘ಒಂದೂವರೆ ಕಿಲೋಮೀಟರ್ ನದಿಯ ಸುತ್ತ ಈ ಸಫಾರಿ ಸಂಚರಿಸುತ್ತದೆ. ಮಾಂಡ್ವಿ ಜೆಟ್ಟಿಯಿಂದ ಆರಂಭವಾಗಿ ವೆಂಗುರ್ಲೆಯ ಮಾನ್ವಸೀಶ್ವರ ದೇವಸ್ಥಾನದವರೆಗೆ ಹೋಗಿ ನಂತರ ವಾಪಸ್ ಜೆಟ್ಟಿಗೆ ಮರಳುತ್ತದೆ. ಸಫಾರಿ ನಂತರ ಸ್ವಸಹಾಯ ಸಂಘದ ಸದಸ್ಯರು ಪ್ರವಾಸಿಗರಿಗೆ ಸ್ಥಳೀಯ ಖಾದ್ಯಗಳ ಊಟ – ಉಪಹಾರ ಪೂರೈಸುತ್ತಾರೆ’ ಎಂದು ಸಫಾರಿಯ ಮಾರ್ಗವನ್ನು ಶ್ವೇತಾ ವಿವರಿಸಿದರು.

ಮಳೆಗಾಲದಲ್ಲಿ ಸಫಾರಿ ಮುಚ್ಚಲಾಗುತ್ತದೆ. ಈ ವರ್ಷ, ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಫೆಬ್ರುವರಿಯಿಂದ ಸಫಾರಿ ಮುಚ್ಚಲಾಗಿತ್ತು. ಈ ತಿಂಗಳಿಂದ ಪುನರಾರಂಭ ಮಾಡಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.