ADVERTISEMENT

ಅಲ್ಪ ಜಮೀನು ರೇಷ್ಮೆ ಬೀಡು

ರಾಜರಾಜೇಶ್ವರಿ ಜೋಶಿ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ಮನೆತನದ ಭೂಮಿ ನಾಲ್ಕೈದು ಮಕ್ಕಳಲ್ಲಿ ವಿಭಜನೆಗೊಂಡಾಗ ತಮ್ಮ ಪಾಲಿಗೆ ಬರುವ ತುಂಡು ಭೂಮಿಯಲ್ಲಿ ಏನಪ್ಪಾ ಮಾಡುವುದು ಎಂದು ಚಿಂತೆಗೀಡಾಗುವವರೇ ಹೆಚ್ಚು. ಆದರೆ ಹಾವೇರಿ ಜಿಲ್ಲೆಯ ಜೇಕಿನಕಟ್ಟಿ ಗ್ರಾಮದ ರೈತ ಶಿವನಗೌಡ ಸಂಕನಗೌಡರು ಇದರಿಂದ ಭಿನ್ನ. ತಮ್ಮ ಪಾಲಿಗೆ ಬಂದ 1.15 ಎಕರೆ ಜಮೀನಿನಲ್ಲಿಯೇ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡು ಯಶಸ್ವಿ ರೈತ ಎನಿಸಿದ್ದಾರೆ.

ಸುತ್ತಲಿನ ರೈತರೆಲ್ಲರೂ ಬೆಳೆಯುವಂತೆ ಆರಂಭದಲ್ಲಿ ಇವರೂ ಗೋವಿನ ಜೋಳ, ತೊಗರಿ, ಶೇಂಗಾ ಬೆಳೆದರು. ಆದರೆ ಅದು ಕೈಗೂಡಲಿಲ್ಲ. ಜೀವನ ಸಾಗಿಸಲು ಕಿರಾಣಿ ಅಂಗಡಿ, ಹೈನುಗಾರಿಕೆ ಮಾಡಿದರು. ಅದೂ ಪ್ರಯೋಜನವಾಗಲಿಲ್ಲ. ನಂತರ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ರೇಷ್ಮೆ, ಹೂವು ಮತ್ತು ಮೇವಿನ ಕೃಷಿ ಆರಂಭಿಸಿ ಸಂತುಷ್ಟರಾಗಿದ್ದಾರೆ.

ಭರವಸೆ ಕೊಟ್ಟ ರೇಷ್ಮೆ
ಒಂದು ಎಕರೆ ಭೂಮಿಯಲ್ಲಿ ಹಿಪ್ಪುನೇರಳೆ (ಮಲಬರಿ) ಗಿಡಗಳನ್ನು ನೆಟ್ಟು ಆರು ವರ್ಷಗಳಿಂದ ರೇಷ್ಮೆ ಕೃಷಿ ನಡೆಸುತ್ತಿದ್ದಾರೆ. ರೇಷ್ಮೆ ನಿಗಮ ಇಲ್ಲವೇ ಶಿರಹಟ್ಟಿಯ ಖಾಸಗಿ ವ್ಯಾಪಾರಸ್ಥರಿಂದ ರೇಷ್ಮೆ ಮೊಟ್ಟೆ-ಹುಳುಗಳನ್ನು ಖರೀದಿಸಿ ರ‍್ಯಾಂಕ್ ಪದ್ಧತಿಯಲ್ಲಿ ರೇಷ್ಮೆ ಕೃಷಿಯನ್ನು ಮಾಡುತ್ತಿದ್ದಾರೆ. ಈ ಕೃಷಿಗಾಗಿ ಒಂದು ಲಕ್ಷ ರೂಪಾಯಿ ಬಂಡವಾಳ ತೊಡಗಿಸಬೇಕಾಯಿತು. ಕಟ್ಟಡಕ್ಕಾಗಿ ಸರ್ಕಾರದಿಂದ 50ಸಾವಿರ ರೂಪಾಯಿ ಪ್ರೋತ್ಸಾಹ ಧನ (ಸಬ್ಸಿಡಿ) ಸಿಕ್ಕಿದೆ. ಕೆಲ ಉಪಕರಣಗಳೂ ಸಬ್ಸಿಡಿ ದರದಲ್ಲಿ ಸಿಕ್ಕಿವೆ. ಈಗ 45 ದಿನಗಳಿಗೊಮ್ಮೆ ಬೆಳೆ ತೆಗೆಯುತ್ತಿದ್ದಾರೆ. ವರ್ಷದಲ್ಲಿ ಐದಾರು ಬೆಳೆಗಳಿಗೆ ಕೊರತೆಯಿಲ್ಲ.

ಶಿರಹಟ್ಟಿ, ರಾಮನಗರ ಪಟ್ಟಣಗಳಲ್ಲಿ ರೇಷ್ಮೆಗೆ ಮಾರುಕಟ್ಟೆಯಿದೆ. ಹಾಗಂತ ಎಲ್ಲ ಸಮಯದಲ್ಲೂ ರೇಷ್ಮೆಗೆ ಲಾಭದಾಯಕ ಬೆಲೆ ಸಿಕ್ಕೇ ಸಿಗುತ್ತದೆ ಎಂದೇನಿಲ್ಲ. ಕೆ.ಜಿ.ಗೆ 350ರಿಂದ 380ರೂಪಾಯಿಗಳವರೆಗೆ ಸಿಗುವ ಬೆಲೆ 30ಕ್ಕೂ ಇಳಿದಿದ್ದಿದೆ. ರೇಷ್ಮೆ ಹರಾಜಿನ ಮೂಲಕ ಮಾರಾಟವಾಗುತ್ತದೆ. ಸಿಗುವ ಬೆಲೆಗೆ ಕೊಡಲೇಬೇಕು. ರೇಷ್ಮೆಯನ್ನು ಹತ್ತು ದಿನಕ್ಕಿಂತ ಹೆಚ್ಚು ಇಟ್ಟುಕೊಳ್ಳಲು ಆಗುವುದಿಲ್ಲ ಎನ್ನುತ್ತಾರೆ ಶಿವನಗೌಡರು.

ಕೆಲವು ಸಲ ಕಡಿಮೆ ಬೆಲೆ ಸಿಕ್ಕರೂ ಸರಾಸರಿ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿದಾಗ ಹಾನಿಯಾದದ್ದಿಲ್ಲ ಎಂಬುದು ಅವರ ಅನುಭವ. ಬೆಲೆ ಕಡಿಮೆಯಾದರೆ ಸರಕಾರದಿಂದ ಬೆಂಬಲ ಬೆಲೆಯೂ ಸಿಗುವುದಿದೆ. ಹಾಗಾಗಿ ಇದೊಂದು ನಂಬಬಹುದಾದ ಬೆಳೆ ಎಂಬುದು ಶಿವನಗೌಡರ ಅನಿಸಿಕೆ.

ಉಪ ಆದಾಯಕ್ಕೆ ಹೂವು
ಹತ್ತು ಗುಂಟೆ ಜಾಗದಲ್ಲೇ ಮಾಡುತ್ತಿರುವ ಹೂವಿನ ಕೃಷಿಯೂ ಇವರಿಗೆ ಒಳ್ಳೆಯ ಆದಾಯ ಕೊಟ್ಟಿದೆ. ವರ್ಷದಲ್ಲಿ ಎರಡರಿಂದ ಮೂರು ಸಲ ಸರದಿಯಂತೆ ಚೆಂಡು (ಗೊಂಡೆ) ಮತ್ತು ಗಲಾಟೆ ಹೂವಿನ ಗಿಡಗಳನ್ನು ನೆಡುತ್ತಾರೆ. ಪ್ರತಿ ಸರದಿಗೂ 8 ರಿಂದ 10 ಕ್ವಿಂಟಲ್ ಹೂವಿನ ಇಳುವರಿಗೆ ಕೊರತೆಯಿಲ್ಲ ಎನ್ನುವ ಶಿವನಗೌಡರು ಈ ಹೂವುಗಳಿಗೆ ಶಿಗ್ಗಾವಿ, ಸವಣೂರು ಮತ್ತು ಹುಬ್ಬಳ್ಳಿಯಲ್ಲಿ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ.

ಚೆಂಡು ಹೂವು ವಾರಕ್ಕೊಮ್ಮೆ ಕಟಾವಿಗೆ ಬರುತ್ತದೆ. ಗಲಾಟೆ ಹೂವಾದರೆ 2-3 ದಿನಕ್ಕೊಮ್ಮೆ ಕಟಾವು ಮಾಡಬೇಕು. ಸಾಮಾನ್ಯವಾಗಿ ಕೆ.ಜಿ.ಗೆ 10 ರಿಂದ 20 ರೂಪಾಯಿ ಆದಾಯವಿದೆ. ಕೆಲವು ಸಲ ಬೆಲೆ ತುಂಬಾ ಕಡಿಮೆಯಾಗುತ್ತದೆ. ಇಂಥ ವೇಳೆಗಳಲ್ಲಿ ಕಟಾವು ಮಾಡದಿರುವುದೇ ಒಳ್ಳೆಯದು ಎಂಬುದು ಅವರ ಮಾತು.

ದನ ಕಟ್ಟಲು ಜಾಗವಿರದೇ ಮನೆಯಲ್ಲಿದ್ದ ಜಾನುವಾರುಗಳನ್ನು ಮಾರಿದ್ದ ಇವರು ಈಗ ಎರಡು ಆಕಳು ಖರೀದಿಸಿದ್ದಾರೆ. ಇವುಗಳಿಗಾಗಿ ಐದು ಗುಂಟೆ ಜಾಗದಲ್ಲಿ ಮೇವು ಬೆಳೆಯುತ್ತಿದ್ದಾರೆ. ಇವುಗಳಿಗೆ ಗಿನಿ ಹುಲ್ಲು ಬೆಳೆಯುವುದರಿಂದ ಮನೆಯ ದನಗಳಿಗೆ ಹಸಿರು ಹುಲ್ಲಿನ ಕೊರತೆಯಿಲ್ಲ.

ಬೆಳೆಗಳ ಆರೈಕೆಗೆ ವರ್ಷಕ್ಕೆ 5ರಿಂದ 6 ಕ್ವಿಂಟಲ್ ರಾಸಾಯನಿಕ ಗೊಬ್ಬರ ಬಳಸುತ್ತಿದ್ದರು. ಈಗ ಎರೆಗೊಬ್ಬರ ತಯಾರಿಸುತ್ತಿರುವುದರಿಂದ ರಾಸಾಯನಿಕ ಗೊಬ್ಬರದ ಬಳಕೆ ಅರ್ಧದಷ್ಟು ಕಡಿಮೆಯಾಗಿದೆ. ಕೃಷಿ ಒಳಸುರಿ, ಕೂಲಿಯಾಳಿನ ಖರ್ಚು ಎಲ್ಲವೂ ಹೋಗಲಾಗಿ, ವಾರ್ಷಿಕ ಅಂದಾಜು 1.5 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

`ಮೊದಲು ಎಲ್ಲಾ ರೈತರ ಹಾಂಗ ನಾವೂ ಗೊಂಜಾಳ, ತೊಗರಿ, ಶೇಂಗಾ ಬೆಳದೇವ್ರಿ. ಇಷ್ಟ ಸಣ್ಣ ಜಾಗದಾಗ ಅದು ಲಾಭ ಆಗಲಿಲ್ಲ. ಆದ್ರ ರೇಷ್ಮಿ, ಹೂವಿನ ಕೃಷಿ ಮಾಡಿದಾಗಿಂದ ಛಲೋ ಆಗೈತ್ರಿ' ಎನ್ನುತ್ತಾರೆ ಪತ್ನಿ ರತ್ನಾ. ಮಕ್ಕಳ ಉನ್ನತ ಶಿಕ್ಷಣದ ಖರ್ಚನ್ನು ನಿಭಾಯಿಸಲು ಹೂವು ಮತ್ತು ರೇಷ್ಮೆ ಕೃಷಿ ಇವರಿಗೆ ನೆರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.