ADVERTISEMENT

ಕೇರಳದ ಜ್ಯೂಸ್ ಸೌತೆ

ಶ್ರೀ ಪಡ್ರೆ
Published 30 ಮಾರ್ಚ್ 2011, 19:30 IST
Last Updated 30 ಮಾರ್ಚ್ 2011, 19:30 IST
ಕೇರಳದ ಜ್ಯೂಸ್ ಸೌತೆ
ಕೇರಳದ ಜ್ಯೂಸ್ ಸೌತೆ   

ಬೇಸಿಗೆಯಲ್ಲಿ ಕೇರಳದ ತ್ರಿಶೂರು - ಕೊಡುಂಗಲ್ಲೂರು ಹೆದ್ದಾರಿಯಲ್ಲಿ ಪ್ರಯಾಣ ಮಾಡುವರು ರಸ್ತೆ ಬದಿಯಲ್ಲಿನ ಅಂಗಡಿಗಳಲ್ಲಿ ಸೌತೆಯನ್ನು ಹೋಲುವ ಕಾಯಿಗಳನ್ನು ಜೋಡಿಸಿಟ್ಟಿರುವುದನ್ನು ನೋಡಬಹುದು. ಈ  ಸೌತೆಗೆ ‘ಪೊಟ್ಟು ವೆಳ್ಳರಿ’, ಪಳಂ ವೆಳ್ಳರಿ, ಕಕ್ಕರಿ ಎಂಬ ಹೆಸರುಗಳಿವೆ. ನಮ್ಮ ಹೊನ್ನಾವರ, ಅಮಾಸೆಬೈಲುಗಳಲ್ಲಿ ಇಂಥದೇ ಜ್ಯೂಸ್ ಸೌತೆಗೆ  ‘ಇಬ್ಬಡ್ಲ’ ಎಂದು  ಕರೆಯುತ್ತಾರೆ.

ತ್ರಿಶೂರು ಜಿಲ್ಲೆಯ ಕೊಡುಂಗಲ್ಲೂರು ಸುತ್ತಮುತ್ತಲಿನ ಗದ್ದೆಗಳಲ್ಲಿ ಭತ್ತದ ಕೊಯ್ಲಿನ ನಂತರ ಪೊಟ್ಟು ವೆಳ್ಳರಿ ಬೆಳೆಯುತ್ತಾರೆ. ಡಿಸೆಂಬರ್‌ನಲ್ಲಿ ಬಿತ್ತನೆ ಮಾಡುತ್ತಾರೆ. ಬಳ್ಳಿ ಬಂದ ಮೇಲೆ ಅದಕ್ಕೆ ಆಸರೆ ಕೊಟ್ಟು ನೀರುಣಿಸಿದರೆ ಸಾಕು. ಕೆಲವರು ಇದನ್ನು ಮಾರ್ಚ್ ತಿಂಗಳಲ್ಲೂ ಬಿತ್ತುತ್ತಾರೆ.

ಇದು ಎರಡು ತಿಂಗಳ ಬೆಳೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಬೇಕಿಲ್ಲ. ಸೆಗಣಿ, ನೆಲಗಡಲೆ ಹಿಂಡಿ ಹಾಕಿದರೆ ಸಾಕು. ಡಿಸೆಂಬರ್ ನಂತರ ಬಿಸಿಲು ಹೆಚ್ಚಾಗುವುದರಿಂದ ನೀರು ಬೇಕೇಬೇಕು. ಇದು ಸುಲಭ ಬೆಳೆ. ನಡುವೆ ಮಳೆ ಬಂದರೆ ಆದಾಯಕ್ಕೆ ಸೊನ್ನೆ.

ಮಿತಿ ಮೀರಿ ಬೆಳೆದರೆ ಹಣ್ಣು ಒಡೆಯುತ್ತದೆ. ಅದಕ್ಕೇ ‘ಪೊಟ್ಟು’(ಒಡೆಯುವ) ಸೌತೆ ಎಂದು ಹೆಸರು.  ಕೊಯ್ದ ನಂತರ ಮೂರು ದಿನ ಕೆಡದೆ ಉಳಿಯುತ್ತದೆ. ಉತ್ತಮ ಬೆಳೆ ಬಂದರೆ ಎಕರೆಗೆ 35,000 ರೂ.  ಆದಾಯ ಪಡೆಯಬಹುದು.

ಹಿಂದೆ ಪೊಟ್ಟು ಸೌತೆಯನ್ನು ತಳ್ಳುಗಾಡಿಯಲ್ಲಿಟ್ಟುಕೊಂಡು ಮಾರುತ್ತಿದ್ದರು. ತ್ರಿಶೂರು - ಕೊಡುಂಗಲ್ಲೂರು ಹೆದ್ದಾ
ರಿಯ ಬದಿಯಲ್ಲಿ ನಾಲ್ಕು ವರ್ಷಗಳಿಂದ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿ ಯಾಹ್ಯಾ  ಈ ಸೌತೆ ಹಣ್ಣಿನಿಂದ ಜ್ಯೂಸ್ ತಯಾರಿಸಿ ಮಾರಾಟ ಮಾಡುತ್ತಾರೆ. ಹಣ್ಣನ್ನೂ ಮಾರಾಟ ಮಾಡುತ್ತಾರೆ. ಕಿಲೋಗೆ 25ರಿಂದ 40 ರೂ ಬೆಲೆ ಇದೆ. ಹಣ್ಣಿನ ಜ್ಯೂಸ್‌ಗೆ ಲೋಟಕ್ಕೆ ಹತ್ತು ರೂ. ನವಿರಾದ ಪರಿಮಳದ ಜ್ಯೂಸ್ ಬೇಸಿಗೆಯಲ್ಲಿ ಎಲ್ಲರಿಗೂ ಇಷ್ಟವಾಗುತ್ತದೆ.

ಯಾಹ್ಯಾ ಒಪ್ಪಂದ ಮಾಡಿಕೊಂಡು ಮೂರು ಎಕರೆ ಗದ್ದೆಯಲ್ಲಿ ಜ್ಯೂಸ್ ಸೌತೆ ಬೆಳೆಯುತ್ತಾರೆ. ಸುಮಾರು ನಾಲ್ಕು ಟನ್ ಹಣ್ಣು ಸಿಗುತ್ತದೆ. ಫೆಬ್ರವರಿಯಲ್ಲಿ ಅಂಗಡಿ ತೆರೆದು ಏಪ್ರಿಲ್ ಕೊನೆವರೆಗೆ ಅಂದರೆ ಮಳೆ ಆರಂಭವಾಗುವವರೆಗೆ ಹಣ್ಣು, ಜ್ಯೂಸ್ ಮಾರುತ್ತಾರೆ. ಬೇರೆಯವರು ಬೆಳೆದ ಹಣ್ಣುಗಳನ್ನು ಖರೀದಿಸಿ ಮಾರುತ್ತಾರೆ. ದಿನಕ್ಕೆ 6,000ರೂ ವರೆಗೆ  ವ್ಯಾಪಾರ ಆಗುತ್ತದಂತೆ. ಇದರಲ್ಲಿ ಜ್ಯೂಸ್‌ನಿಂದ ಅರ್ಧದಷ್ಟು ಹಣ ಬರುತ್ತದೆ. ಪೊಟ್ಟು ವೆಳ್ಳರಿಯ ಜ್ಯೂಸ್ ಮಾಡಲು ಮಿಕ್ಸಿ ಬೇಕಿಲ್ಲ. ಕೈಯಿಂದ ಕಿವುಚಿದರೂ ಸಾಕು.

ಕೊಡುಂಗಲ್ಲೂರು ಸರಹದ್ದಿನಲ್ಲಿ ಸುಮಾರು ಮುನ್ನೂರು ಎಕರೆಯಲ್ಲಿ ಇದನ್ನು ಬೆಳೆಯುತ್ತಾರೆ. ಬೆಳೆದ ಹಣ್ಣು ದೊಡ್ಡ ಪ್ರಮಾಣದಲ್ಲಿ ಎರ್ನಾಕುಲಂಗೆ ರವಾನೆಯಾಗುತ್ತದೆ.

 ‘ಜ್ಯೂಸ್ ಸೌತೆ’ ಮಾರಾಟಕ್ಕೆ ಯಾಹ್ಯಾ ಹಾಕಿಕೊಟ್ಟ ದಾರಿ ಎಷ್ಟು ಜನಪ್ರಿಯ ಆಗಿದೆ ಗೊತ್ತೇ? ನಾಲ್ಕೇ ವರ್ಷಗಳಲ್ಲಿ ಹೆದ್ದಾರಿ ಬದಿಯಲ್ಲಿ  ‘ಕಕ್ಕರಿ ಸ್ಟಾಲ್’ ಸಂಖ್ಯೆ ಹತ್ತಕ್ಕೇರಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.