‘ನೀರು ಮತ್ತು ಮಣ್ಣು ಮಾತ್ರ ಒಕ್ಕಲುತನದ ಸಾಧನಗಳಲ್ಲ. ಇವುಗಳ ಜೊತೆಗೆ ಸೂರ್ಯಕಿರಣ ಮತ್ತು ಗಾಳಿಯ ಸದುಪಯೋಗವನ್ನು ಮಾಡಿಕೊಂಡಾಗಲೇ ಉತ್ತಮ ಬೆಳೆ ಪಡೆಯಲು ಸಾಧ್ಯ’ ಎನ್ನುವ ಬೆಳಗಾವಿ ಜಿಲ್ಲೆಯ ರೈತರೊಬ್ಬರ ಹೊಲದಲ್ಲಿ ಏಕದಳ ಹಾಗೂ ದ್ವಿದಳ ಧಾನ್ಯಗಳು ತೆನೆಯಾಡುತ್ತಿವೆ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತಿವೆ.
ಹೌದು. ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದ ಸುರೇಶ ಬಸವಪ್ರಭು ದೇಸಾಯಿ ಅವರ ಹೊಲದ ನೋಟ. ‘ಒಂದೇ ಬೆಳೆ ಪದ್ಧತಿ, ಅತಿಯಾದ ನೀರು, ರಾಸಾಯನಿಕ ಗೊಬ್ಬರ, ಕಳೆನಾಶಕ ಬಳಕೆಯಿಂದ ಹುಲುಸಾದ ಬೆಳೆ ಪಡೆಯಲು ಆಗದು. ಇದು ಅನವಶ್ಯಕ ವೆಚ್ಚಕ್ಕೆ ಮೂಲ. ಇದರಿಂದ ಭೂಮಿಯ ಫಲವತ್ತತೆಯೂ ಹಾಳಾಗುತ್ತದೆ. ಇಳುವರಿಯೂ ಸರಿಯಾಗಿ ಬರುವುದಿಲ್ಲ. ತತ್ಪರಿಣಾಮ ಕೃಷಿ ಬಗೆಗೆ ತಾತ್ಸಾರ ಮನೋಭಾವ ಮೂಡುತ್ತಿದೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಣ್ಣಿನ ಫಲವತ್ತತೆ ನಿರ್ವಹಣೆಯೊಂದಿಗೆ ಒಕ್ಕಲುತನದಿಂದ ಕೈತುಂಬ ಕಾಸು ಗಳಿಸಲು ಶೂನ್ಯ ಬಂಡವಾಳದೊಂದಿಗೆ ಕೈಗೊಳ್ಳುವ ಮಿಶ್ರ ಬೆಳೆಯ ನೈಸರ್ಗಿಕ ಕೃಷಿಯೇ ಅನಿವಾರ್ಯ’ ಎನ್ನುವ ಸುರೇಶ್ ಅವರು ಇದನ್ನು ತಮ್ಮ ಹೊಲದ ಮೂಲಕ ಸಾಬೀತು ಪಡಿಸಿದ್ದಾರೆ. 11 ಎಕರೆ ಹೊಲದಲ್ಲಿ ಕಳೆದ 23 ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು, ಅಲ್ಪಾವಧಿ ಸಂತೋಷ ನೀಡುವ ರಾಸಾಯನಿಕ ಕೃಷಿಗೆ ಸೆಡ್ಡು ಹೊಡೆದು ಮಾದರಿಯಾಗಿದ್ದಾರೆ.
ಬೆಳೆಗಳ ಸಮ್ಮಿಲನ
ಇವರದ್ದು ಮಿಶ್ರ ಕೃಷಿ. ಒಂದೇ ಬೆಳೆ ನಂಬಿಕೊಂಡರೆ ಸಾಧ್ಯವಿಲ್ಲ ಎನ್ನುವ ಇವರ ಹೊಲದಲ್ಲಿ ಬಗೆಬಗೆಯ ಬೆಳೆಗಳು ಬೆಳೆದು ನಿಂತಿವೆ. ಎಲ್ಲ ಕಾಲಗಳಲ್ಲೂ ಒಂದಲ್ಲೊಂದು ಬೆಳೆಗಳು ಹೊಲದಲ್ಲಿ ನಲಿದಾಡುತ್ತಿರುತ್ತವೆ. ಒಂದು ಎಕರೆ ಭೂಮಿಯಲ್ಲಿ 14 ತಿಂಗಳ ಬೆಳೆಯಾದ ಕಬ್ಬು, 7 ತಿಂಗಳ ಬೆಳೆಯಾದ ಅರಿಶಿಣ ಮತ್ತು 3 ತಿಂಗಳ ಬೆಳೆಯಾದ ಸೊಯಾಬೀನ್, ಉದ್ದು, ಹೆಸರು ಮೊದಲಾದ ದ್ವಿದಳ ಧಾನ್ಯಗಳ ಜೊತೆಗೆ ಎಳ್ಳು, ಕೊತ್ತಂಬರಿ, ಮೆಣಸಿನ ಗಿಡಗಳನ್ನು ಬೆಳೆದಿದ್ದಾರೆ. ಅಲ್ಪಕಾಲದ ಬೆಳೆಯಿಂದ 3 ತಿಂಗಳಿನಿಂದಲೇ ಆದಾಯ ಇವರ ಕೈ ಸೇರಲಾರಂಭಿಸುತ್ತದೆ.
ವರ್ಷಕ್ಕೆ ಎರಡು ಬಾರಿ ಅರಿಶಿಣ ಬೆಳೆ ಪಡೆದಿದ್ದಾರೆ. ವರ್ಷಕ್ಕೆ ಒಂದು ಎಕರೆಯಲ್ಲಿ ಈ ಎಲ್ಲ ಬೆಳೆಗಳಿಂದ ರೂ. 2.32 ಲಕ್ಷ ಲಾಭ ಗಳಿಸಿರುವ ಕುರಿತು ಲೆಕ್ಕ ಕೊಡುತ್ತಾರೆ.
‘ದೇಶದಲ್ಲಿ ಸಾವಿರಾರು ವರ್ಷಗಳಿಂದ ಕೃಷಿ ಸಂಸ್ಕೃತಿ ಬೆಳೆದು ಬಂದಿದೆ. ಆದರೆ, ನೀರಾವರಿ ಹೆಚ್ಚಿದಂತೆಲ್ಲಾ ಕೃಷಿ ಕ್ಷೇತ್ರವೇ ಕಳೆಗುಂದುತ್ತಿದೆ. ಅತಿಯಾದ ನೀರು, ವಿಷಪೂರಿತ ಕಳೆನಾಶಕ, ರಸಗೊಬ್ಬರ ಬಳಕೆ ಮತ್ತು ಏಕ ಬೆಳೆ (Mono croping) ಪದ್ಧತಿಯಿಂದ ಭೂಮಿ ಸತ್ವಹೀನವಾಗುತ್ತಿದೆ. ಬೆಳೆಗಳು ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತಿವೆ. ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಪರಿವರ್ತನೆ ತರಲು ನೈಸರ್ಗಿಕ ಕೃಷಿಯೇ ಅತ್ಯುತ್ತಮ ಬೇಸಾಯ ಪದ್ಧತಿಯಾಗಿದೆ’ ಎನ್ನುವುದು ಸುರೇಶ್ ಅವರ ಅನುಭವದ ಮಾತು.
ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ನೀರಿನ ಹಿತಮಿತ ಬಳಕೆ ಅವರ ಯಶಸ್ಸಿನ ಗುಟ್ಟು. ಕೃಷಿ ತ್ಯಾಜ್ಯವನ್ನು ಹಾಳುಗೆಡವದ ಸುರೇಶ್ ಅವರು ಅದನ್ನೇ ಬೆಳೆಗಳಿಗೆ ಮುಚ್ಚಿಗೆಯಾಗಿ ಬಳಸುತ್ತಿದ್ದಾರೆ. ಫಲಪ್ರದ ದ್ಯುತಿ ಸಂಶ್ಲೇಷಣೆಗಾಗಿ ಇಚ್ಛಿತ ಪ್ರಮಾಣದ ಸೂರ್ಯರಶ್ಮಿಯನ್ನು ಪಡೆದುಕೊಳ್ಳುವುದು ಅತ್ಯವಶ್ಯಕ ಎನ್ನುವುದು ಅವರ ಅಂಬೋಣ.
ಸೂರ್ಯನ ಕಿರಣಗಳ ಲಭ್ಯತೆಗೆ ಅನುಗುಣವಾಗಿ ಬೆಳಗಳ ಅಂತರ ನಿರ್ವಹಣೆ ಮಾಡುವಲ್ಲಿ ಅವರದ್ದು ಎತ್ತಿದ ಕೈ. ಹೀಗೆ ಮಾಡಿದರೆ ಮಾತ್ರ ಹೊಲದ ಮಣ್ಣು ಸಂಪದ್ಭರಿತಗೊಂಡು ಹುಲುಸಾದ ಬೆಳೆ ಬೆಳೆಯಬಹುದು ಎನ್ನುವ ಕಿವಿಮಾತಿನೊಂದಿಗೆ ಇದನ್ನು ಸಾಬೀತು ಪಡಿಸಿ ತೋರಿಸಿದ್ದಾರೆ. ‘ಈ ಬೇಸಾಯ ಪದ್ಧತಿ ಅನುಷ್ಠಾನದಿಂದ ಗುಡ್ಡದಲ್ಲೂ ದುಡ್ಡು ಗಳಿಸಬಹುದು’ ಎಂದು ರಾಜಾರೋಷವಾಗಿ ಹೇಳುತ್ತಾರೆ ಸುರೇಶ ದೇಸಾಯಿ.
ಪಂಚಮಹಾಭೂತಗಳನ್ನು ಸಮರ್ಥವಾಗಿ ದುಡಿಸಿಕೊಳ್ಳುವ ನೈಸರ್ಗಿಕ ಕೃಷಿ ಶೂನ್ಯ ಬಂಡವಾಳದಿಂದಲೇ ಜೀವವೈವಿಧ್ಯಯತೆಯನ್ನು ಸೃಷ್ಟಿಸಿ ಬಿಡುತ್ತದೆ. ಕೃಷಿಯಲ್ಲಿ ಜೀವವೈವಿಧ್ಯತೆಯನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಸಾಧಿಸಿರುವುದೇ ಸುರೇಶ್ ಕೃಷಿ ಸಾಧನೆಯ ಗುಟ್ಟು ಎಂದರೆ ಅತಿಶಯೋಕ್ತಿ ಆಗಲಾರದು.
ಇವರ ಸಾಧನೆಯನ್ನು ಸರ್ಕಾರ ಕೂಡ ಗುರುತಿಸಿದೆ. ನೈಸರ್ಗಿಕ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ಇವರಿಗೆ 2005–06ರಲ್ಲಿ ಸರ್ಕಾರ ‘ಕೃಷಿ ಪಂಡಿತ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಪರ್ಕಕ್ಕೆ: 9480448256.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.