ADVERTISEMENT

ಬಾಳೆ ತೋಟದಲ್ಲಿ ತರಕಾರಿ ಘಮಲು

ಸಹನಾ ಕಾಂತಬೈಲು
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಬಾಳೆಯ ಜತೆಯಲ್ಲಿ ತರಕಾರಿ ಬೆಳೆಯುವ ಪ್ರಯತ್ನ ಅಪರೂಪ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ರೈತ ಮನೋಜ್ ಕುಮಾರ್ ಅವರು ಬಾಳೆ ತೋಟದಲ್ಲಿ ತರಕಾರಿಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಮನೋಜ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಬಾಳೆ ಬಗೆಗೆ ಮಾಹಿತಿ ಪಡೆದು ನೇಂದ್ರ ಬಾಳೆ ಬೆಳೆಯಲು ನಿರ್ಧರಿಸಿದರು. ಸಂಘದಿಂದ ನೆರವು ಪಡೆದು ಒಂದು ಕಂದುವಿಗೆ 8 ರೂಪಾಯಿಯಂತೆ 78 ನೇಂದ್ರ ಬಾಳೆ ಕಂದುಗಳನ್ನು ಖರೀದಿಸಿದರು. ಮನೆ ಮುಂದಿನ ಹತ್ತು ಸೆಂಟ್ಸ್ ಜಾಗದಲ್ಲಿ ಗಿಡದಿಂದ ಗಿಡಕ್ಕೆ ಆರಡಿ ಅಂತರ, ಒಂದೂವರೆ ಅಡಿ ಆಳದ, ಎರಡಡಿ ಉದ್ದಗಲದ ಗುಣಿಗಳನ್ನು ತೋಡಿ ಪ್ರತಿ ಗುಣಿಗೂ ಒಂದೊಂದು ನ್ಯಾಪ್ತಲೀನ್ (ಬಟ್ಟೆ ಕರ್ಪೂರ) ಗುಳಿಗೆಯನ್ನು ಇಟ್ಟು ಸಸಿ ನಾಟಿ ಮಾಡಿದರು. ನ್ಯಾಪ್ತಲೀನ್ ಗುಳಿಗೆ ಇಟ್ಟರೆ ಬಾಳೆಗೆ ಸುಳಿ ರೋಗ ಬರುವುದಿಲ್ಲ ಎಂಬುದು ಮನೋಜ್ ಅವರ ಅನುಭವ. ನಡುವಿನ ಜಾಗದಲ್ಲಿ ಅಲ್ಲಲ್ಲಿ ಗುಣಿ ತೆಗೆದು ಹಟ್ಟಿ ಗೊಬ್ಬರ, ಸುಡುಮಣ್ಣು ಮಿಶ್ರ ಮಾಡಿ ಅಲಸಂದೆ, ಹೀರೆ, ಬೆಂಡೆ, ಜೋಳ, ಮೆಣಸು, ಬೀನ್ಸ್, ಮುಳ್ಳುಸೌತೆ ಬಿತ್ತಿದರು. ಅಂಚಿನಲ್ಲಿ ಗೆಣಸಿನ ಬಳ್ಳಿಗಳನ್ನು ನೆಟ್ಟರು.

ಬಾಳೆ ಗಿಡಗಳಿಗೆ ಹಟ್ಟಿ ಗೊಬ್ಬರದ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಯೂರಿಯಾವನ್ನು ಹಾಕಿದ್ದಾರೆ. ತರಕಾರಿಗೆ ಸೆಗಣಿ, ಗಂಜಲ ಮಾತ್ರ ಹಾಕಿದ್ದಾರೆ. ರಸಗೊಬ್ಬರ ಬಳಸಿಲ್ಲ. ಈಗ ಬಾಳೆ ನೆಟ್ಟು ಮೂರು ತಿಂಗಳು ಕಳೆದಿದೆ. ಏಳು ತಿಂಗಳಲ್ಲಿ ಗೊನೆ ಬಿಡುವ ನಿರೀಕ್ಷೆ ಮನೋಜ್ ಅವರದು. ಬಾಳೆ ಗಿಡಗಳಿಗೆ ಹನಿ ನೀರಾವರಿ ಅಳವಡಿಸಿದ್ದಾರೆ. ಅದೇ ನೀರು ತರಕಾರಿಗೂ ಸಾಕಾಗುತ್ತದೆ.

ಸಾವಯವ ಗೊಬ್ಬರ ಉಂಡ ತರಕಾರಿ ಗಿಡಗಳು ಸಮೃದ್ಧವಾಗಿ ಬೆಳೆದು ಫಸಲು ನೀಡಲು ಆರಂಭಿಸಿವೆ. ಬೆಳೆದ ತರಕಾರಿಯನ್ನು ಮನೆಗೆ ಬಳಸಿ ಗೆಳೆಯರಿಗೂ ಹಂಚುತ್ತಾರೆ. ಉಳಿದದ್ದನ್ನು ಮಾರಾಟ ಮಾಡುತ್ತಾರೆ. ಬಾಳೆ ಬೇಸಾಯಕ್ಕೆ ಮನೋಜ್ ಸುಮಾರು ಎರಡು ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಣ ತರಕಾರಿ ಮಾರಾಟದಿಂದ ಬಂದಿದೆ. ಸಾಮಾನ್ಯವಾಗಿ ಬೆಂಡೆಗೆ ಹಳದಿ ರೋಗ ಬರುತ್ತದೆ. ಅದು ಬಾರದಂತೆ ತಡೆಗಟ್ಟಲು ಮನೋಜ್ ಮಾಡುವ ಉಪಚಾರ ಹೀಗಿದೆ. ಬತ್ತದ ಹೊಟ್ಟನ್ನು ಸುಟ್ಟು (ಬೂದಿ ಆಗಬಾರದು) ಅದನ್ನು ಸಾಯಂಕಾಲ ಬೆಂಡೆ ಎಲೆಗಳಿಗೆ ಹರಡಿ ಬೆಳಿಗ್ಗೆ ನೀರಿನಿಂದ ತೊಳೆಯುತ್ತಾರೆ. ಈ ರೀತಿ ಕಾಯಿ ಬಿಡುವವರೆಗೆ ವಾರಕ್ಕೆ ಒಂದು ಬಾರಿ ಮಾಡುತ್ತಾರೆ.

ಗೊಬ್ಬರವನ್ನು ಅವರು ಹೊರಗಿನಿಂದ ಖರೀದಿಸುವುದಿಲ್ಲ. ಐದು ದನ ಸಾಕಿದ್ದಾರೆ. ತೋಟಕ್ಕೆ ಬಳಸಿ ಹೆಚ್ಚಾದ ಸಗಣಿಯನ್ನು ಮಾರುತ್ತಾರೆ. ಹಾಲನ್ನೂ ಮಾರಾಟ ಮಾಡುತ್ತಾರೆ. ದೈನಂದಿನ ಖರ್ಚುಗಳಿಗೆ ತರಕಾರಿಗಳಿಂದ ಬರುವ ಆದಾಯ ಅವರ ಕೈ ಹಿಡಿದಿದೆ.

ಬಾಳೆಯ ಮೊದಲನೇ ವರ್ಷದ ಫಸಲಿನಿಂದ 30 ಸಾವಿರ ರೂಪಾಯಿ ಆದಾಯ ನಿರೀಕ್ಷಿಸಿದ್ದಾರೆ. ಬಾಳೆಯೊಂದಿಗೆ ತರಕಾರಿ ಬೆಳೆಯುವುದು ಲಾಭದಾಯಕ. 10 ಸೆಂಟ್ಸ್‌ನಷ್ಟು ಸಣ್ಣ ಜಾಗದಲ್ಲೂ ಮಿಶ್ರ ಬೇಸಾಯ ಪದ್ಧತಿಯಿಂದ ದೊಡ್ಡ ಮೊತ್ತದ ಹಣ ಪಡೆಯಬಹುದು ಎನ್ನುತ್ತಾರೆ ಮನೋಜ್.

ಸಂಪರ್ಕಕ್ಕೆ- 8722554030.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT