ADVERTISEMENT

ಬಿಟಿ ಬೆಂಬಲಕ್ಕೆ ನಿಂತ ಬಿಕೆಎಸ್

ಈರಪ್ಪ ಹಳಕಟ್ಟಿ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

`ನಮ್ಮ ರೈತರ ಜೀವನಮಟ್ಟ ಸುಧಾರಿಸಬೇಕಿದೆ. ಅದಕ್ಕಾಗೇ ನಾವು ರೈತರಿಗೆ ಬಿ ಟಿ ಹತ್ತಿ ಬೆಳೆಯಿರಿ; ಲಾಭ ಗಳಿಸಿರಿ ಎಂದು ಹೇಳುತ್ತೇವೆ~. ಹೀಗೆನ್ನುತ್ತ ಮಾತಿಗೆ ಶುರುವಿಟ್ಟರು `ಫಾರ್ಮರ್ಸ್‌ ಫೋರ್‌0~ (ರೈತರ ವೇದಿಕೆ) ಪತ್ರಿಕೆಯ ಸಂಪಾದಕ ಹಾಗೂ ಭಾರತ ಕೃಷಿಕ್ ಸಮಾಜದ (ಬಿಕೆಎಸ್) ಅಧ್ಯಕ್ಷರೂ ಆದ ಅಜಯ್ ಜಾಖಡ್.

ಬಿಕೆಎಸ್‌ನ ಅಂಗಸಂಸ್ಥೆಯಾದ `ಸಾಮಾಜಿಕ ಅಭಿವೃದ್ಧಿ ಪರಿಷತ್~ (ಸಿಎಸ್‌ಡಿ) ದೇಶವ್ಯಾಪಿ ನಡೆಸಿದ `ಭಾರತದಲ್ಲಿ ಬಿಟಿ ಹತ್ತಿಯಿಂದ ಸಾಮಾಜಿಕ -ಆರ್ಥಿಕ ವ್ಯವಸ್ಥೆಯ ಮೇಲಾಗಿರುವ ಪ್ರಭಾವ~ ಎಂಬ ಸಮೀಕ್ಷಾ ವರದಿಯ ಮಾಹಿತಿ ಹಂಚಿಕೊಳ್ಳಲು ಅವರು ಬೆಂಗಳೂರಿಗೆ ಬಂದಿದ್ದರು.  ಈ ಸಂದರ್ಭದಲ್ಲಿ `ಪ್ರಜಾವಾಣಿ~ ಜತೆ ಮಾತಿಗಿಳಿದರು.

*  ನಿಮ್ಮ ಸಮೀಕ್ಷೆಯ ಹಿಂದಿನ ಉದ್ದೇಶ?
ಕಳೆದ ಒಂದು ದಶಕದ ಅಂಕಿಸಂಖ್ಯೆ ನೋಡಿದರೆ ನಮ್ಮ ದೇಶದ ಹತ್ತಿ ಬೆಳೆಗಾರರಲ್ಲಿ ಶೇ 90 ರಷ್ಟು ರೈತರು ಈಗ ಬಿ ಟಿ ಹತ್ತಿ ಬೆಳೆಯುತ್ತಿದ್ದಾರೆ. ಇದನ್ನು ಬೆಳೆದವರ ಸರಾಸರಿ ವರಮಾನ ಹೆಚ್ಚಳವಾಗಿದ್ದು, ಅವರ ಜೀವನಮಟ್ಟ ಕೂಡ ಗಮನಾರ್ಹವಾಗಿ ಸುಧಾರಿಸಿದ ಅನೇಕ ಉದಾಹರಣೆಗಳು ಸ್ವತಃ ರೈತನಾದ ನನಗೆ ಗೊಚರಿಸಿದವು.
 
ಆದರೆ ಅದನ್ನು ನಾನು ಹೇಳುವುದರಿಂದ ಕೆಲವರು ನಂಬಬಹುದು, ಇನ್ನು ಕೆಲವರು ನಂಬದೇ ಇರಬಹುದು ಅದನ್ನೇ ಒಂದು ಸಮೀಕ್ಷೆ ಮೂಲಕ ರೈತರ ಮುಂದಿಟ್ಟರೆ ಸರಿಯಾದ, ಲಾಭ ತರುವ ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ಕಾರಣಕ್ಕಾಗೇ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದೆವು.

*  ಸಮೀಕ್ಷೆ ನಡೆಸಿದ ಕಾರ್ಯಕ್ಷೇತ್ರ?
ಇಂದು ದೇಶದಲ್ಲಿ 60-70 ಲಕ್ಷ ರೈತರು ಬಿ ಟಿ ಹತ್ತಿಯನ್ನು ಬೆಳೆಯುತ್ತಿದ್ದಾರೆ. ಅಧಿಕವಾಗಿ ಬೆಳೆಯುವ ಕರ್ನಾಟಕ ಒಳಗೊಂಡಂತೆ ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ರಾಜಸ್ತಾನ, ಮಧ್ಯಪ್ರದೇಶ, ಆಂಧ್ರ, ತಮಿಳುನಾಡು ಮತ್ತು ಗುಜರಾತ್‌ಗಳಲ್ಲಿ ಈ ಸಮೀಕ್ಷೆ ನಡೆಸಿದ್ದೇವೆ.

1050 ರೈತರನ್ನು ಹಾಗೂ 300 ಕೃಷಿ ಕಾರ್ಮಿಕರನ್ನು ಸಂದರ್ಶಿಸಿ ಮಾಹಿತಿ ಪಡೆದು, ಅದನ್ನು ಕೇಂದ್ರ ಕೃಷಿ ಸಚಿವಾಲಯ, ಆರ್ಥಿಕ ಸಮೀಕ್ಷೆ, ಯುಎಸ್‌ಡಿಎ, ಯುಎನ್‌ಸಿಎಲ್‌ಎಡಿ ಮತ್ತು ಎಫ್‌ಎಒಎಸ್‌ಟಿಎಟಿ  ಹೀಗೆ ಕೃಷಿ ಸಂಬಂಧಿತ ಸಂಸ್ಥೆಗಳ ದತ್ತಾಂಶಗಳೊಂದಿಗೆ ತಾಳೆ ಹಾಕಿ ವರದಿ ಸಿದ್ಧಪಡಿಸಿದ್ದೇವೆ.

*  ಸಮೀಕ್ಷೆಯಲ್ಲಿ ಕಂಡು ಬಂದ ಅಂಶವೇನು?
ಬಿ ಟಿ ಹತ್ತಿ ಕಾಲಿಟ್ಟ ನಂತರ ದೇಶದ ಹತ್ತಿ ರಫ್ತು ಶೇ 75ರಷ್ಟು ಅಧಿಕವಾಗಿದೆ. ಹತ್ತಿ ಬೆಳೆಯುವ ಕ್ಷೇತ್ರ ಶೇ 4.91ರಷ್ಟು ಹೆಚ್ಚಳವಾಗಿದೆ. ಬೀಜದ ಬೇಡಿಕೆ ಶೇ 76 ರಿಂದ 71ಕ್ಕೆ ಇಳಿದಿದೆ. ಕೀಟಬಾಧೆ ಶೇ 90ರಷ್ಟು ನಿಯಂತ್ರಣವಾಗಿದೆ.

ಒಟ್ಟಾರೆ ಬಿ ಟಿ ಬೆಳೆಯವ ರೈತರ ಸರಾಸರಿ ಆದಾಯದಲ್ಲಿ ಶೇ 375ರಷ್ಟು ಏರಿಕೆಯಾಗಿದೆ. ಆದರೂ ರೈತರ ಆತ್ಮಹತ್ಯೆಗೆ ನೀರಾವರಿ ಸೌಲಭ್ಯದ ಕೊರತೆ, ಸಾಲ ಸಮಸ್ಯೆ, ಬೆಂಬಲ ಬೆಲೆ ಕೊರತೆಯೇ ಕಾರಣವೆಂಬ ಅಂಶವೂ ಬೆಳಕಿಗೆ ಬಂದಿದೆ.

*  ಬಿಟಿ ಹತ್ತಿಯನ್ನೆ ಏಕೆ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿರಿ?
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಮಾಜದಲ್ಲಿ ಇಂದು `ಬಿ ಟಿ~ ಎಂಬ ಹೆಸರಿನಲ್ಲಿ ಹೆಚ್ಚುತ್ತಿರುವ `ವಾದ - ವಿವಾದ~ದಿಂದ.

*  ಸಮೀಕ್ಷೆಯಿಂದ ನಿಮಗೆ ಲಾಭವೇನು?
`ಸಾಮಾಜಿಕ ಅಭಿವೃದ್ಧಿ ಪರಿಷತ್~ ಭಾರತದ ಅಭಿವೃದ್ಧಿ ಕ್ಷೇತ್ರದ ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ. ಇದು ದೇಶದಲ್ಲಿ ಒಂದು ನ್ಯಾಯಸಮ್ಮತವಾದ ಸಾಮಾಜಿಕ ವರ್ಗ ನಿರ್ಮಿಸಬೇಕೆಂಬ ತುಡಿತವುಳ್ಳ ಸಮಾನ ಮನಸ್ಕ ಸಾಮಾಜಿಕ ಕಾರ್ಯಕರ್ತರ ಮತ್ತು ಸಮಾಜ ವಿಜ್ಞಾನಿಗಳ ಅನೌಪಚಾರಿಕ ಅಧ್ಯಯನ ಗುಂಪು. ನಾವು ಈ ಸಮೀಕ್ಷೆಯನ್ನು ನಿಸ್ವಾರ್ಥದಿಂದ ಮಾಡಿದ್ದೇವೆಯೇ ವಿನಾಃ ಯಾವುದೇ ಲಾಭ ಅಪೇಕ್ಷಿಸಿ ಅಲ್ಲ.

*  ನಿಮ್ಮ ಸಮೀಕ್ಷೆಯ ಹಿಂದೆ ಬಿ ಟಿ ಕಂಪೆನಿಗಳ ಹಿತಾಸಕ್ತಿ ಅಡಗಿದೆ ಎಂಬ ಆರೋಪಗಳಿವೆಯಲ್ಲ?
ಬಹುತೇಕರು ನಮ್ಮ ಈ  ಸಮೀಕ್ಷೆಯನ್ನು ಹೀಗೆಯೇ ತಪ್ಪಾಗಿ ಭಾವಿಸಿಕೊಂಡಿದ್ದಾರೆ. ವಾಸ್ತವದಲ್ಲಿ ನಾವು ಈ ಸಮೀಕ್ಷೆಗೆ ಯಾವುದೇ ಖಾಸಗಿ ಕಂಪೆನಿಯಿಂದಾಗಲಿ, ಭಾರತ ಸರ್ಕಾರದಿಂದಾಗಲಿ ಹಾಗೂ ಯಾವುದೇ ಎನ್‌ಜಿಓಗಳಿಂದಾಗಲಿ ಒಂದೇ ಒಂದು ಪೈಸೆ ಧನಸಹಾಯ  ಪಡೆದಿಲ್ಲ. ಭಾರತ ಕೃಷಿಕ ಸಮಾಜಕ್ಕೆ ರೈತರು ನೀಡಿದ ದೇಣಿಗೆಯಿಂದ ನಡೆಸ್ದ್ದಿದೇವೆ. ಇದರ ಹಿಂದೆ ರೈತ ಪರ ಕಾಳಜಿ ಬಿಟ್ಟು ಮತ್ತೇನೂ ಇಲ್ಲ.

*  ಲಾಭ ಇರುವುದಾದರೆ ಬಿ ಟಿ ತಳಿಯನ್ನು ಸರ್ಕಾರವೇ ಅಭಿವೃದ್ಧಿಪಡಿಸಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ನೀಡುವಂತೆ ಏಕೆ ನೀವು ಧ್ವನಿ ಎತ್ತಬಾರದು?
 ಖಂಡಿತ. ಬೇರೆ ದೇಶಗಳು ನಮ್ಮ ದೇಶವನ್ನು ಮಾರುಕಟ್ಟೆ ಮಾಡಿಕೊಂಡು ದೋಚುವ ಸಂಸ್ಕೃತಿಯನ್ನು ನಾವು ವಿರೋಧಿಸುತ್ತೇವೆ. ಈ ನಿಟ್ಟಿನಲ್ಲಿ ಬಿ ಟಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ನೀಡಿ, ಬಿ ಟಿ ತಳಿಯನ್ನು ಸ್ಥಳೀಯವಾಗಿ ಸರ್ಕಾರ ತಾನೇ ಅಭಿವೃದ್ಧಿಪಡಿಸಿ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ನಾವು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪರಿಸರ ಸಚಿವರಾಗಿದ್ದ ಜೈರಾಮ್ ರಮೇಶ್ ಅವರಿಗೆ ಪತ್ರ ಕೂಡ ಬರೆದ್ದ್ದಿದೇವೆ.

*  ಬಿಟಿ ತಳಿಯಿಂದ ಸ್ಥಳೀಯ ತಳಿಗಳು ಕಣ್ಮರೆಯಾಗುತ್ತವಲ್ಲ?
ಹೊಸದನ್ನು ಅಳವಡಿಸಿಕೊಂಡಾಗ ಅನುಕೂಲ, ಅನಾನುಕೂಲ ಎರಡೂ ಇರುತ್ತವೆ. ಹಾಗಂತ ಹೊಸತು ಅಳವಡಿಸಿಕೊಳ್ಳುವುದು ಮೂರ್ಖತನ ಎನ್ನಲಾದೀತೆ? ಇದೀಗ ನಮ್ಮ ದೇಶದಲ್ಲಿ ಬಳಸುವ ಬಹುತೇಕ ಕೀಟನಾಶಕ ಹೊರದೇಶದ ಉತ್ಪನ್ನಗಳಲ್ಲವೆ? ಆದರೂ ಈ ವಿಷಯದಲ್ಲಿ ನಾನು ಹೆಚ್ಚು ಮಾತನಾಡಲಾರೆ. ಅಂತಿಮ ಆಯ್ಕೆ ರೈತರಿಗೆ ಬಿಟ್ಟದ್ದು.

*  ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಕಂಡು ಬಂದ ಅಂಶವೇನು?
ಕರ್ನಾಟಕದಲ್ಲಿ ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಾವು ಸಮೀಕ್ಷೆ ನಡೆಸಿ ಪಡೆದ ಮಾಹಿತಿಯನ್ನು ಸ್ಥಳೀಯ ಕೃಷಿ ಸಂಬಂಧಿತ ದತ್ತಾಂಶಗಳೊಂದಿಗೆ ತುಲನೆ ಮಾಡಿ ವಿಶ್ಲೇಷಿಸಿದೆವು. ಅದರ ಪ್ರಕಾರ 2004 -05ರಲ್ಲಿ 18 ಹೆಕ್ಟೇರ್‌ನಲ್ಲಿದ್ದ ಬಿ ಟಿ ಹತ್ತಿ ಈಗ ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶ ಆವರಿಸಿಕೊಂಡಿದೆ.

ರಾಜ್ಯದಲ್ಲಿ ಹತ್ತಿ ಬೆಳೆ ಪ್ರದೇಶ ಶೇ 2.07 ರಷ್ಟು, ಉತ್ಪಾದನೆ ಶೇ 8.45ರಷ್ಟು, ಇಳುವರಿ ಶೇ 83.03ರಷ್ಟು, ರೈತರ ಸರಾಸರಿ ವರಮಾನ ಶೇ 740ರಷ್ಟು ಹೆಚ್ಚಳವಾಗಿದೆ. ಅಲ್ಲದೇ ಶೇ 91ರಷ್ಟು ರೈತರ ಪ್ರಕಾರ ಸ್ಥಳೀಯ ತಳಿಗಿಂತ ಬಿ ಟಿ ಅಧಿಕ ಇಳುವರಿ ನೀಡುತ್ತದೆ.

* ರೈತರಿಗೆ ನಿಮ್ಮ ಕಿವಿಮಾತು? 
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಚಟುವಟಿಕೆಯ ವೆಚ್ಚ ಈ ಎಲ್ಲದರಲ್ಲೂ ಮಿತವ್ಯಯ ತರುವ ಹಾಗೂ ಅಧಿಕ ಇಳುವರಿ ನೀಡುವ ಬಿ ಟಿ ಹತ್ತಿ ಬೆಳೆಯಿರಿ, ಲಾಭ ಪಡೆದು ಗುಣಮಟ್ಟದ ಜೀವನ ನಡೆಸಿ.

* ನಿಮ್ಮ ಭವಿಷ್ಯದ ಯೋಜನೆಗಳೇನು ?
ಮುಂದಿನ ತಿಂಗಳು ನಾವು ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ನೇರ ಹೂಡಿಕೆ (ಎಫ್‌ಡಿಐ) ವಿಷಯ ಕುರಿತು ವಿಚಾರ ಸಂಕಿರಣ ನಡೆಸುತ್ತೇವೆ. ಹಾಗಂತ ನಾವು ಎಫ್‌ಡಿಐ ಪರ, ವಿರೋಧವಾಗಿ ಇಲ್ಲ.

ನಮ್ಮ ಗುರಿ ರೈತರು- ಗ್ರಾಹಕರ ಮಧ್ಯೆ ಹುಟ್ಟಿಕೊಂಡಿರುವ ಬಹು ಬಗೆಯ ದಲ್ಲಾಳಿಗಳನ್ನು ಮಟ್ಟಹಾಕುವುದು. ಎಫ್‌ಡಿಐ ಬಂದರೆ ರೈತರ ಶೋಷಣೆ ಕಡಿಮೆಯಾಗಿ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಅನ್ನುವುದೇ ನನ್ನ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.