ADVERTISEMENT

ಬೀಳು ನೆಲದಲ್ಲಿ ಕಾಕಡ ಕಾರುಬಾರು

ಚಂದ್ರಹಾಸ ಚಾರ್ಮಾಡಿ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಪುಷ್ಪ ಕೃಷಿಯನ್ನೇ ನಂಬಿ ಬದುಕುವ ಅಸಂಖ್ಯಾತ ಕುಟುಂಬಗಳು ರಾಜ್ಯದಲ್ಲಿವೆ. ಆದರೆ ಪುಷ್ಪೋದ್ಯಮವನ್ನು ಕೈಗೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆಗಾಗ ಬರುವ ರೋಗಗಳು, ನಾಟಿ, ಕೊಯ್ಲು ಹೀಗೆ ಬೆಳೆಗಾರನಿಗೆ ಬೆಳೆಯ ಕುರಿತು ಅನುಭವವಿರಬೇಕಾದುದು ಅಷ್ಟೇ ಮುಖ್ಯ.

ಇನ್ನು ರಾಸಾಯನಿಕಗಳ ಬಳಕೆಯಿಲ್ಲದೆ ಸಾವಯವ ವಿಧಾನದಲ್ಲಿ ಹೂವುಗಳನ್ನು ಬೆಳೆಯುವ ಪ್ರಯತ್ನಗಳು ನಡೆದಿರುವುದು ತೀರಾ ಕಡಿಮೆ. ಈ ಮಾತಿಗೆ ಅಪವಾದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರೊಡುಗಿಯ ನಾಗಪ್ಪ. ಅವರು ಕಳೆದ ನಾಲ್ಕು ವರ್ಷಗಳಿಂದ ಸಾವಯವದಲ್ಲಿ ಕಾಕಡ ಹೂ ಬೆಳೆದು ಯಶಸ್ವಿಯಾಗಿದ್ದಾರೆ, ಸಾಕಷ್ಟು ಹಣ ಗಳಿಸುತ್ತಿದ್ದಾರೆ.

ಅವರ ಎರಡೂವರೆ ಎಕರೆ ಭೂಮಿ ತುಂಬಾ ಕಾಕಡ ಗಿಡಗಳಿವೆ. ಒಂದು ಎಕರೆಗೆ ಗಿಡ ನಾಟಿ, ನೀರು, ಗೊಬ್ಬರ ಸೇರಿ ವರ್ಷಕ್ಕೆ 50 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಹೂ ಮಾರಿ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ಮದುವೆ, ಸನ್ಮಾನ ಕಾರ್ಯಕ್ರಮ ಮುಂತಾದ ಶುಭಕಾರ್ಯಗಳಲ್ಲಿ ಬಳಸುವ ಕಾಕಡಕ್ಕೆ ಋತುಗಳಿಗೆ ಅನುಗುಣವಾಗಿ ಕಿಲೊಗೆ 30 ರಿಂದ 200 ರೂ. ದರ ಸಿಗುತ್ತದೆ.

ಇವರು ನಿತ್ಯ ಸರಾಸರಿ 30 ರಿಂದ 35 ಕಿಲೊ ಹೂ ಕೊಯ್ಯುತ್ತಾರೆ. ಕಳೆದ ವರ್ಷ ಕೇವಲ ಮೂರೇ ವಾರದಲ್ಲಿ ಲಕ್ಷಕ್ಕೂ ಮಿಕ್ಕು ಆದಾಯ ಬಂದಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಆಗಸ್ಟ್ ಮತ್ತು ಅಕ್ಪೋಬರ್‌ನಲ್ಲಿ ಹೆಚ್ಚು ಹೂ ದೊರೆಯುತ್ತದೆ.

ಆದರೆ ಆಗ ಬೇಡಿಕೆ ಅಷ್ಟಾಗಿ ಇರುವುದಿಲ್ಲ. ಮಾರ್ಚ್‌ನಲ್ಲಿ ಇಳುವರಿ ತೀರಾ ಕಡಿಮೆ ಇರುತ್ತದೆ. ಆದರೆ ಬೇಡಿಕೆ ಪರವಾಗಿಲ್ಲ. ದಸರಾ, ದೀಪಾವಳಿ ಹೊತ್ತಿನಲ್ಲಿ ಹೂವಿನ ಬೇಡಿಕೆ ಮುಗಿಲು ಮುಟ್ಟುತ್ತದೆ.

ಕಾಕಡ ಗಿಡದಿಂದ ವರ್ಷದಲ್ಲಿ ಹತ್ತು ತಿಂಗಳು ಹೂ ಸಿಗುತ್ತದೆ. ಕಡಿಮೆಯೆಂದರೆ ಒಂದು ಗಿಡಕ್ಕೆ ಮೂರರಿಂದ ನಾಲ್ಕು ಕಿಲೊ ಹೂ ಪಡೆಯಬಹುದು ಎಂಬುದು ಅವರ ಅನುಭವದ ಮಾತು.

 ಬೆಳೆಯ ಕುರಿತು ಸಮಯಕ್ಕೆ ಸರಿಯಾದ ಮಾಹಿತಿ, ಮಾರ್ಗದರ್ಶನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊರೆತಿದೆ. ಪರಿಣಾಮವಾಗಿ ಐದು ವರ್ಷಗಳ ಹಿಂದೆ ಖಾಲಿ ಬಿದ್ದಿದ್ದ ಎರಡೂವರೆ ಎಕರೆ ಭೂಮಿಯಲ್ಲಿ ಇದೀಗ ಕಾಕಡದ್ದೇ ಕಾರುಬಾರು.

ನಾಟಿ ಹೇಗೆ?
ಭೂಮಿ ಹದ ಮಾಡಿಕೊಂಡು ಒಂದು ಅಡಿ ಗುಂಡಿ ಮಾಡಿ ಐದೂವರೆ ಅಡಿ ಸುತ್ತಳತೆಯಲ್ಲಿ ಗಿಡವನ್ನು ನೆಡಬೇಕು. ಜೂನ್, ಜುಲೈ ತಿಂಗಳಲ್ಲಿ ನಾಟಿ ಮಾಡಿದರೆ ಆರು ತಿಂಗಳಲ್ಲಿ ಹೂ ನೀಡುತ್ತದೆ. ಒಂದು ಎಕರೆಯಲ್ಲಿ 1500 ಗಿಡವನ್ನು ನೆಡಬಹುದಂತೆ. ಗಿಡಗಳಿಗೆ ವಾರಕ್ಕೆ ಎರಡು ಸಲ ನೀರುಣಿಸಬೇಕು.

ನಾಟಿಯ ಆರಂಭದಲ್ಲಿ, ಗಿಡ ಚಿಗುರು ಬರುವಾಗ, ನಂತರ ಮೂರು ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರವನ್ನು ನೀಡಬೇಕು.ಒಂದು ಗಿಡ ಹತ್ತರಿಂದ ಹದಿನೆಂಟು ವರ್ಷಗಳ ಕಾಲ ಬದುಕುತ್ತದೆ. ನಾಟಿಗೆ ಬೇಕಾದ ಗಿಡಗಳು ಬೆಳೆಗಾರರ ಬಳಿ ಲಭ್ಯ. ಮಾಹಿತಿ ಬೇಕಾದಲ್ಲಿ ನಾಗಪ್ಪ ಅವರ ಮೊಬೈಲ್ ನಂ  99002 29473.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.