ಹೌದು! ಹಣ್ಣಿನ ರಾಜ ಎನಿಸಿರುವ ಮಾವಿಗೆ ಸದ್ಯ ಬೂದಿರೋಗ ಕಾಣಿಸಿಕೊಂಡಿದೆ. ಈ ರೋಗವು `ಓಯಿಡಿಯಂ ಮ್ಯೋಜಿಫೆರೆ~ ಎನ್ನುವ ಶಿಲೀಂದ್ರದಿಂದ ಬರುತ್ತದೆ. ಎಲೆ, ದೇಟು, ಹೂಗೊಂಚಲು, ಹೀಚುಕಾಯಿ ಮತ್ತು ಹಣ್ಣುಗಳ ಮೇಲೆ ಬೂದಿಬಣ್ಣದ ಹಿಟ್ಟನ್ನು ಚೆಲ್ಲಿರುವ ಹಾಗೆ ರೋಗದ ಲಕ್ಷಣಗಳು ಕಾಣಬಹುದು.
ಇದನ್ನು ನೋಡಿದಾಗ ಮಾವಿನ ಹೂ ಗೊಂಚಲು ಮನುಷ್ಯರಂತೆ ಸುಂದರವಾಗಿ ಕಾಣಲು ಪೌಡರ್ ಮೆತ್ತಿಕೊಂಡಿರಬೇಕು ಎಂದೆನಿಸುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಮಾವಿನ ಹೂ ಗೊಂಚಲು, ಹೀಚುಕಾಯಿ, ದೇಟು ಮತ್ತು ಕಿರಿದಾದ ಹಣ್ಣುಗಳ ಮೇಲೆ ಇರುವ ಈ ಬೂದಿ ಶಿಲೀಂದ್ರದ `ಪ್ರಸಾದ~ ಎಂದು ಗೊತ್ತಾಗುತ್ತದೆ.
ಇಂತಹ ರೋಗ ಲಕ್ಷಣಗಳು ಕಂಡುಬಂದಾಗ ಅಂಗಾಂಶಗಳಲ್ಲಿ ಉಸಿರಾಟ ಕ್ರಿಯೆ ಹೆಚ್ಚಾಗಿ ದ್ಯುತಿ ಸಂಶ್ಲೇಷಣಾಕ್ರಿಯೆ ಕಡಿಮೆಯಾಗಿ ಮರದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ರೋಗಪೀಡಿತ ಭಾಗಗಳು ಉದುರಿ ಬೀಳುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಅಲ್ಲದೆ ಹೂ ಗೊಂಚಲಿಗೆ ರೋಗ ಬಂದರೆ ಕಾಯಿ ಬಿಡದೆ ಸಂಪೂರ್ಣ ಬೆಳೆ ಹಾನಿ ಆಗುತ್ತದೆ.
ಹೂ ಬಿಡುವ ಸಮಯದಲ್ಲಿ ಬರುವ ಮಳೆ ಅಥವಾ ಇಬ್ಬನಿ ಈ ರೋಗದ ತೀವ್ರತೆ ಹೆಚ್ಚಿಸುತ್ತದೆ. ಬೂದಿರೋಗದ ಶಿಲೀಂದ್ರ ಕಣಗಳು ಗಾಳಿಯ ಸಹಾಯದಿಂದ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಮತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡುತ್ತವೆ.
ನಿರ್ವಹಣೆ ಹೇಗೆ?
ಹೂ ಬಿಟ್ಟ ಕೂಡಲೇ ಶಿಲೀಂದ್ರ ನಾಶಕಗಳಾದ ಕಾರ್ಬನೆಡೈಜಿಮ್ 1 ಗ್ರಾಂ ಅಥವಾ ಕರಗುವ ಗಂಧಕ 3 ಗ್ರಾಂ ಅಥವಾ ಪ್ರೊಪಿಕೋನಾಜೋಲ್ 1 ಮಿಲೀ ಅಥವಾ ಟೈಡೋ ಮಾರಫ್ 1 ಮಿಲೀ ಅಥವಾ ಟ್ರೈಡೋಮೆಫಾನ್ 1 ಮಿಲೀ, ಇದರಲ್ಲಿ ಯಾವುದನ್ನಾದರೂ ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ತಯಾರಿಸಿದ ದ್ರಾವಣವನ್ನು ಸಿಂಪಡಿಸಬೇಕು.
ಹೀಗೆ 15 ದಿನಗಳಿಗೊಮ್ಮೆ ರೋಗದ ತೀವ್ರತೆಗೆ ಅನುಗುಣವಾಗಿ 2 ರಿಂದ 3 ಸಾರಿ ಸಿಂಪರಣೆ ಮಾಡುವುದರಿಂದ ಮಾವಿನ ಬೆಳೆಯಲ್ಲಿ ಬೂದಿರೋಗ ನಿಯಂತ್ರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.