ಕೃಷಿ ಲಾಭದಾಯಕವಲ್ಲ ಎಂದು ಕೈಕಟ್ಟಿ ಕುಳಿತರೆ ಕೆಲಸ ಸಾಗದು ಎಂದು ಅರಿತವರು ಹುಬ್ಬಳ್ಳಿ ತಾಲ್ಲೂಕು ಅದರಗುಂಚಿಯ ರಾಜೇಶ್ವರಿ ಪಾಟೀಲ. ಕಾನೂನು ಪದವೀಧರರಾಗಿರುವ ರಾಜೇಶ್ವರಿ ವಕೀಲಿ ವೃತ್ತಿಯನ್ನು ಕೈಬಿಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬಸವಣ್ಣನವರ ‘ಕಾಯಕವೇ ಕೈಲಾಸ’ ಮಾತನ್ನು ಸಾಕಾರಗೊಳಿಸುವತ್ತ ಮುನ್ನಡೆದಿದ್ದಾರೆ.
ಬಿ.ಎ, ಎಲ್.ಎಲ್.ಬಿ ಪದವೀಧರೆಯಾದ ರಾಜೇಶ್ವರಿ ಅವರು, ‘ವಿದ್ಯೆ ಅರಿವನ್ನು ವಿಸ್ತರಿಸಬೇಕೇ ವಿನಾ ತೋರಿಕೆಗೆ ಬಳಕೆಯಾಗಬಾರದು’ ಎಂದು ನಂಬಿದವರು. ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಮೂಲದ ರಾಜೇಶ್ವರಿ ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ಉದ್ಯಮಿ ವೀರನಗೌಡ ಅವರನ್ನು ವಿವಾಹವಾದ ನಂತರ ಕೃಷಿಯತ್ತ ಮುಖ ಮಾಡಿದವರು.
ತಂದೆಯ ಮನೆಯಿಂದ ಬಳುವಳಿಯಾಗಿ ಬಂದ 60 ಎಕರೆ ಭೂಮಿ ಜೊತೆಗೆ ಸೋದರುತ 40 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಂಡಿರುವ ಶ್ರಮ ಜೀವಿ ಎಂದು ಗುರುತಿಸಿಕೊಂಡಿದ್ದಾರೆ.
ಇವರ ಗಂಡನ ಮನೆಯಲ್ಲಿ ಸಾಕಷ್ಟು ಶ್ರೀಮಂತಿಕೆ ಇದೆ. ಆದರೆ ‘ವಿದ್ಯಾವಂತರು ಕೃಷಿ ಕಡೆಗೆ ಮುಖ ಮಾಡಿದರೆ, ವಿಶ್ವವೇ ಭಾರತದೆಡೆಗೆ ಮುಖ ಮಾಡುತ್ತದೆ’ ಎಂಬ ಮಹಾತ್ಮ ಗಾಂಧೀಜಿ ಅವರ ಮಾತನ್ನು ಆದರ್ಶವಾಗಿಸಿಕೊಂಡು ಕೃಷಿ ಕೆಲಸ ಕೈಗೊಂಡಿದ್ದಾರೆ. ರಂಟೆ, ಕುಂಟೆ ಹೊಡೆಯುವುದು, ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುವುದು, ನಾಟಿ ಮಾಡುವುದು, ಫಸಲು ಕಟಾವು ಮಾಡುವುದು, ಕೊಳವೆ ಬಾವಿಯಲ್ಲಿ ತಾಂತ್ರಿಕ ತೊಂದರೆಯಾದರೆ ಅದನ್ನು ಸರಿಪಡಿಸುವುದು ಹೀಗೆ ಹಲವು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಇಷ್ಟ ಪಟ್ಟು ಕಲಿತುಕೊಂಡಿದ್ದಾರೆ.
‘ಇಬ್ಬರು ಮಕ್ಕಳಿಗೆ ಅಮ್ಮನಾಗಿದ್ದೇನೆ. ಮಾಡುವ ಕೆಲಸದ ಮೇಲೆ ಪ್ರೀತಿಯಿದೆ. ನನ್ನಿಚ್ಛೆಯಂತೆ ಬದುಕಲು ಪ್ರೋತ್ಸಾಹಿಸುವ ಕುಟುಂಬ, ನನ್ನನ್ನು ಸದಾ ಪ್ರೇರಿಪಿಸುವ ರೈತ ಸ್ನೇಹಿತರಿದ್ದಾರೆ ಇದಕ್ಕಿಂತ ನನಗೇನು ಬೇಕು?’ ಎಂದು ಪ್ರಶ್ನಿಸುತ್ತಾರೆ 39 ವರ್ಷದ ರಾಜೇಶ್ವರಿ.
ಉಳುಮೆಯೇ ಬದುಕು
ಬಾಲ್ಯದಲ್ಲಿ ಊರಿನಲ್ಲಿರಬೇಕಾದರೆ ಕೃಷಿ ಚಟುವಟಿಕೆಗಳೆಂದರೆ ಇವರಿಗೆ ಹೆಚ್ಚು ಪ್ರೀತಿ. ಊರಿನ ಪರಿಸರ, ಜೀವನದಿಂದ ಸಾಕಷ್ಟು ಪ್ರೇರಿತರಾಗಿದ್ದ ರಾಜೇಶ್ವರಿ ಅವರಲ್ಲಿ ಕೃಷಿಯಲ್ಲಿಯೇ ನೆಲೆಯೂರುವ ಆಸೆ ಟಿಸಿಲೊಡೆದಿತ್ತು. ಪ್ರಾಥಮಿಕ ಶಿಕ್ಷಣವನ್ನು ಹಂದಿಗನೂರಿನ ಸರ್ಕಾರಿ ಶಾಲೆ, ಪ್ರೌಢಶಿಕ್ಷಣವನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಪೂರೈಸಿ, ಇಷ್ಟದ ಮೇರೆಗೆ ಪಿಯು ಶಿಕ್ಷಣವನ್ನು ಬೆಳಗಾವಿ ಜಿಲ್ಲೆಯ ಕಿತ್ತೂರಿನ ರಾಣಿ ಚೆನ್ನಮ್ಮ ಸೈನಿಕ ವಸತಿ ಶಾಲೆಯಲ್ಲಿ ಪೂರೈಸಿದರು.
‘ಸೈನಿಕ ಶಾಲೆಯ ಶಿಕ್ಷಣ ಬದುಕನ್ನು ನೋಡುವ ರೀತಿಯನ್ನು ಕಲಿಸಿಕೊಟ್ಟಿತು. ಛಲ, ಆತ್ಮ ವಿಶ್ವಾಸ, ಸಾಧಿಸುವ ಹಂಬಲ ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿತು’ ಎನ್ನುವ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನೂ ಪೂರೈಸಿ 2000ದಲ್ಲಿ ವಿವಾಹವಾದರು.
ಅನಂತರ ಅತ್ತೆ–ಮಾವನ ಒಪ್ಪಿಗೆ ಪಡೆದು ಕೃಷಿ ಚಟುವಟಿಕೆ ಆರಂಭಿಸಿದರು. ಆರಂಭದಲ್ಲಿ ಸಾಕಷ್ಟು ಏಳು–ಬೀಳುಗಳನ್ನು ಕಂಡರೂ ಸೋಲಿನಿಂದ ಎದೆಗುಂದದೆ ಗೆಲುವಿನಿಂದ ಬೀಗದೇ ಸತತ 14 ವರ್ಷದಿಂದ ಕೃಷಿಯೊಂದಿಗೆ ಬದುಕನ್ನು ಬೆಸೆದುಕೊಂಡಿದ್ದಾರೆ. 60 ಎಕರೆ ಕೃಷಿ ಭೂಮಿಯಲ್ಲಿ 20 ಎಕರೆ ನೀರಾವರಿ ಆಸರೆ ಇದ್ದು, ಅಲ್ಲಿ ಕಬ್ಬು, ಗೋವಿನ ಜೋಳ, ಭತ್ತ, ಕಲ್ಲಂಗಡಿ, ಹಸಿ ಮೆಣಸಿನಕಾಯಿ, ಶೇಂಗಾ ಬೆಳೆಯುತ್ತಾರೆ. ಇನ್ನು 40 ಎಕರೆ ಭೂಮಿಯಲ್ಲಿ ಮಳೆಯಾಶ್ರಿತ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.
ಒಟ್ಟು ಐದು ಕೊಳವೆ ಬಾವಿಗಳಿದ್ದು, ಐದು ಮಂದಿ ಕೂಲಿಯಾಳುಗಳು ಹೊಲದಲ್ಲಿ ನಿರಂತರವಾಗಿ ದುಡಿಯುತ್ತಾರೆ. ಬೆಳಿಗ್ಗೆ 6 ಗಂಟೆಗೆ ಎದ್ದು ಮಕ್ಕಳಿಬ್ಬರನ್ನೂ ಶಾಲೆಗೆ ಕಳುಹಿಸಿದರೆ ಹೊಲದಲ್ಲೇ ಕೆಲಸ. ಸಂಜೆ ವಾಪಾಸ್. ಅಂದಹಾಗೆ ಎಲ್ಲ ಖರ್ಚು ಕಳೆದು ವಾರ್ಷಿಕ ₨ 15–18 ಲಕ್ಷ ಲಾಭವನ್ನು ಕೃಷಿಯಿಂದ ಗಳಿಸುತ್ತಿದ್ದಾರೆ. ಸದ್ಯ 20 ಎಕರೆ ಕಬ್ಬು, 30 ಎಕರೆ ಗೋವಿನ ಜೋಳ, 8 ಎಕರೆ ಹಸಿಮೆಣಸಿನ ಕಾಯಿಯ ಫಸಲು ಇದೆ.
ಮನೆ ಬಳಕೆಗೆ ಅತ್ಯವಶ್ಯಕ ಎನ್ನುವ ಬೆಳೆಗಳನ್ನು ಸಾವಯವ ಕೃಷಿ ಪದ್ಧತಿ ಅನುಸರಿಸಿ ಬೆಳೆಯುತ್ತಿರುವ ಅವರಿಗೆ ಸಾವಯವ ಗೊಬ್ಬರಕ್ಕಾಗಿ ದೊಡ್ಡ ಮಟ್ಟದಲ್ಲಿ ಹಸುಗಳನ್ನು ಸಾಕುವ ಯೋಚನೆ ಇದೆ.
ನೇಗಿಲ ಯೋಗಿಯ ಸಂಘಟನೆ
ತಮ್ಮ ಭಾಗದ ರೈತರು ಮತ್ತು ಯುವ ಸಮೂಹವನ್ನು ಕೃಷಿಯೆಡೆಗೆ ಮುಖಮಾಡುವಂತೆ ಮಾಡಲು ನೇಗಿಲ ಯೋಗಿ ಕೃಷಿ
ಅಭಿಮಾನಿಗಳ ಸಂಘವನ್ನು ಕಳೆದ 5 ತಿಂಗಳ ಹಿಂದೆ ಕಟ್ಟಿರುವ ರಾಜೇಶ್ವರಿ, ಈ ಮೂಲಕ ರೈತರನ್ನು ಬಲಪಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಸಾಕಷ್ಟು ನೀರು ಸಮುದ್ರದ ಪಾಲಾಗುತ್ತಿದೆ.
ರೈತರ ಸಾಲಮನ್ನಾ, ಸಬ್ಸಿಡಿ ಘೋಷಿಸುವ ಬದಲು ಸರ್ಕಾರ ನದಿ ಜೋಡಣೆ ಕೆಲಸಗಳನ್ನು ತುರ್ತಾಗಿ ಮಾಡಬೇಕು. ಉತ್ತಮ ಮಾರುಕಟ್ಟೆ, ಉಗ್ರಾಣ ವ್ಯವಸ್ಥೆ ಮಾಡಿಕೊಟ್ಟರೆ ಸಾಕಷ್ಟು ರೈತರ ಬದುಕು ಉತ್ತಮಗೊಳ್ಳಲಿದೆ. ಅದಕ್ಕಾಗಿ ನಮ್ಮ ಸಂಘದ ಮೂಲಕ ಹೋರಾಟ ಮಾಡುತ್ತೇವೆ ಎನ್ನುತ್ತಾರೆ.
ಕಟ್ಟಿಗೆಯ ಉಳುಮೆ ಸಾಮಾನುಗಳಿಗೆ ಬರ ಬಂದಿದೆ. ಅವುಗಳನ್ನು ನೇಗಿಲಯೋಗಿ ಸಂಘದ ಮೂಲಕ ರೈತರನ್ನೇ ಸಹಭಾಗಿಗಳನ್ನಾಗಿ ಮಾಡಿ ಉತ್ಪಾದನೆಗೆ ಅವಕಾಶ ನೀಡಬೇಕು ಎಂಬ ಮಹತ್ತರ ಹಂಬಲವಿದೆ. ಇದರ ಜೊತೆಗೆ ಮಹಿಳೆಯರ ಸಂಘಟನೆ, ಅವರನ್ನು ಸಬಲಗೊಳಿಸುವ ಕೆಲಸವನ್ನೂ ರಾಜೇಶ್ವರಿ ಮಾಡುತ್ತಿದ್ದಾರೆ.
ಕೃಷಿ ಸಹಕಾರಿ ಪತ್ತಿನ ಸಂಘದ ನಿರ್ದೇಶಕಿಯೂ ಆಗಿರುವ ಅವರು ಶಿಕ್ಷಣ ಸಂಸ್ಥೆಯೊಂದನ್ನೂ ನಡೆಸುತ್ತಿದ್ದಾರೆ. ಅವರ ಸಾಧನೆಯನ್ನೂ ಗುರುತಿಸಿ ಹಲವು ಸಂಘ ಸಂಸ್ಥೆಗಳು, ಧಾರವಾಡದ ಕೃಷಿ ವಿದ್ಯಾಲಯ ‘ಶ್ರೇಷ್ಠ ಕೃಷಿಕ ಮಹಿಳೆ’ ಪ್ರಶಸ್ತಿ ನೀಡಿವೆ.
ಅವರ ಸಂಪರ್ಕಕ್ಕೆ:9448116866.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.