ADVERTISEMENT

ವಿವಿಧ ಬೆಳೆ;ಲಾಭದ ಹೊಳೆ

ವಿದ್ಯಾಶ್ರೀ ಎಸ್.
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ತಳ ಮುಟ್ಟಿದೆ. 1.500 ಅಡಿವರೆಗೂ ಕೊಳವೆ ಬಾವಿ ಕೊರೆಯಿಸಿದರೂ ನೀರಿನ ಸೆಲೆ ಕಾಣಿಸುವುದು ಕಷ್ಟ. ಈ ಅಭಾವದ ನಡುವೆಯೂ ಕೃಷಿ ನಂಬಿದವರನ್ನು ಕೈ ಬಿಡುವುದಿಲ್ಲ ಎನ್ನುವುದನ್ನು ತೋರಿಸಿದ್ದಾರೆ ದೇವನಹಳ್ಳಿ ತಾಲ್ಲೂಕಿನ ಬಿಡುಗಾನಹಳ್ಳಿಯ ರೈತ ಮಂಜುನಾಥ್.

ಉಳುಮೆಯ ಜ್ಞಾನದ ಜೊತೆಗೆ ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು, ನೀರಿನ ಬಳಕೆ ಹೇಗೆ... ಇಂತಹ ಸಾಮಾನ್ಯ ಜ್ಞಾನ ರೈತನಿಗೆ ಸಿದ್ಧಿಸಿರಬೇಕು ಎನ್ನುವುದಕ್ಕೆ ನಿದರ್ಶನವಾಗಿ ಕಾಣುತ್ತದೆ ಅವರ ಕೃಷಿ ಕಾಯಕ.

ತಮ್ಮ 16 ಎಕರೆ ಜಮೀನನ್ನು ಬಹು ಬೆಳೆಗೆ ಮೀಸಲಿಟ್ಟಿರುವ ಮಂಜುನಾಥ್, ತೋಟಗಾರಿಕೆ ಮತ್ತು ತರಕಾರಿ ಬೆಳೆಗಳ ಮೂಲಕ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಗಳಿಸುತ್ತಿದ್ದಾರೆ. ಐದು ಎಕರೆಯಲ್ಲಿ ದ್ರಾಕ್ಷಿಯನ್ನು ಪ್ರಧಾನವಾಗಿ ಬೆಳೆಯುತ್ತಿರುವ ಇವರು, ಬೆಲೆ ಏರಿಳಿತದ ಕಾರಣ ದ್ರಾಕ್ಷಿಯಿಂದಲೇ ಬದುಕು ಸಾಗುವುದಿಲ್ಲ ಎನ್ನುವುದನ್ನು ಕಂಡುಕೊಂಡು ತರಕಾರಿ ಬೆಳೆಗಳನ್ನೂ ಇದರೊಂದಿಗೆ ಬೆಳೆಯುತ್ತಿದ್ದಾರೆ. ಈ ತರಕಾರಿ ಕೃಷಿಯೇ ಅವರ ಆರ್ಥಿಕತೆಗೆ ಮೂಲ. ಕ್ಯಾರೆಟ್‌, ಬೀಟ್‌ರೂಟ್‌, ಟೊಮೆಟೊ, ಆಲೂಗಡ್ಡೆ, ಕಡಲೆ­ಕಾಳು ಸೇರಿದಂತೆ ವಿವಿಧ ತರಕಾರಿ ಮತ್ತು ಕಾಳುಗಳನ್ನು ಬೆಳೆಯುತ್ತಾರೆ.

‘ನೀರಿನ ಅಭಾವವೇ ಪರ್ಯಾಯ ಮಾರ್ಗ ಕಂಡುಕೊಳ್ಳಲು ಕಾರಣ. ಮಳೆ ಆಶ್ರಯದಲ್ಲಿ ವರ್ಷಕ್ಕೆ 3 ರಿಂದ 4 ಬೆಳೆ ತೆಗೆಯುತ್ತೇನೆ. ಮೊದಲ ಮಳೆಗೆ ಕಡಿಮೆ ನೀರು ಬೇಡುವ ಕೊತ್ತಂಬರಿ ಬೆಳೆಯುತ್ತೇನೆ. ಜೂನ್‌ನಲ್ಲಿ ಅವರೆ, ಬೀಟ್‌ರೂಟ್‌ ಬೆಳೆಯುತ್ತೇನೆ. ಅವರೆ ಬೆಳೆಗೆ 30 ರಿಂದ 40 ಅಡಿ ಅಂತರ ಬಿಡುತ್ತೇನೆ. ಅವರೆ ಸಸಿ ಬೆಳೆಯುವ ಹಂತದಲ್ಲಿರುವಾಗಲೇ ಬೀಟ್‌ರೂಟ್‌ ಬೆಳೆ ಕೈಗೆ ಬಂದಿರುತ್ತದೆ. ನಂತರ ಕಡಲೆಕಾಯಿ ಬೆಳೆಯಲು ಅನುಕೂಲವಾಗುತ್ತದೆ. ಬೀಟ್‌ರೂಟ್‌ಗೆ ಉತ್ತಮ ಬೆಲೆ ಸಿಕ್ಕಿದ ವೇಳೆ ಒಂದು ಎಕರೆಗೆ ಒಂದೂವರೆ ಲಕ್ಷ ಗಳಿಸಿದ ಉದಾಹರಣೆಯೂ ಇದೆ’ ಎಂದು ತಮ್ಮ ಕೃಷಿಯ ಕಷ್ಟ ಸುಖವನ್ನು ವಿವರಿಸುತ್ತಾರೆ.

ಕಾಲಮಾನಕ್ಕೆ ತಕ್ಕಂತೆ ಬೆಳೆ: ಮುಖ್ಯವಾಗಿ ರೈತರು ಯಾವ ಬೆಳೆಯನ್ನು ಯಾವ ಕಾಲಕ್ಕೆ ಬೆಳೆದರೆ ಲಾಭ ನಿರೀಕ್ಷಿಸಬಹುದು ಎನ್ನುವುದನ್ನು ಮಂಜುನಾಥ್ ಕಂಡುಕೊಂಡಿದ್ದಾರೆ. ಬೆಲೆ ಏರಿಳಿತದ ನಷ್ಟಗಳು ಅವರನ್ನು ಈ ಕಾಲಮಾನದ ಬೆಳೆ ಪದ್ಧತಿಯತ್ತ ಹೊರಳಿಸಿದೆ. ‘ಬೆಲೆಯಲ್ಲಿ ಆಗಾಗ್ಗೆ ಏರಿಳಿತವಾಗುತ್ತಿರುತ್ತದೆ. ಹಾಗಾಗಿ ಕಾಲಮಾನಕ್ಕೆ ತಕ್ಕಂತೆ ಬೆಳೆ ಬೆಳೆಯುತ್ತೇನೆ. ಜಮೀನಿನಲ್ಲಿ ಒಂದು ಬಾರಿಗೆ ಎರಡರಿಂದ ಮೂರು ಬೆಳೆ ಇದ್ದೇ ಇರುತ್ತದೆ. ಒಂದು ಬೆಳೆ ಕೈ ಕೊಟ್ಟರೂ ಮತ್ತೊಂದು ಕೈ ಹಿಡಿಯುತ್ತದೆ. ಋತುಮಾನವನ್ನು ಗಮನಿಸಿ ಕೃಷಿಗೆ ಮುಂದಾದರೆ ಖಂಡಿತ ನಷ್ಟ ಸಂಭವಿಸದು’ ಎಂದು ತಮ್ಮ ಕೃಷಿ ಅನುಭವವನ್ನು ತಿಳಿಸುತ್ತಾರೆ.

ಕೃಷಿಯ ಅಗತ್ಯತೆಗೆ ಅನುಗುಣವಾಗಿ ಹೈನುಗಾರಿಕೆಯನ್ನೂ ಕೈಗೊಂಡಿರುವ ಅವರು ತಮ್ಮ ಕೃಷಿಗೆ ಇದು ಪೂರಕವಾಗಿದೆ ಎನ್ನುತ್ತಾರೆ. ದಿನಕ್ಕೆ ಸರಾಸರಿ 25 ಲೀಟರ್ ಹಾಲನ್ನು ಉತ್ಪಾದಿಸುತ್ತಾರೆ. ಹಸುಗಳ ಜೊತೆಗೆ ಕುರಿ, ಕೋಳಿ ಸಾಕಿರುವುದರಿಂದ ಗೊಬ್ಬರದ ಚಿಂತೆ ಇಲ್ಲ. ಮೊದಲು ಬೆಳೆಗಳಿಗೆ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದ ಅವರು ಆ ಗೊಬ್ಬರದಿಂದ ಇಳುವರಿ ಮತ್ತು ಭೂಮಿಯ ಫಲವತ್ತತೆ ಕ್ಷೀಣಿಸಿದ್ದನ್ನು ಸೂಕ್ಷ್ಮವಾಗಿ  ಗಮನಿಸಿ, ಕೊಟ್ಟಿಗೆ ಗೊಬ್ಬರದ ಮೊರೆ ಹೋದರು.

‘ಮೊದಲೆಲ್ಲ ರಾಸಾಯನಿಕ ಗೊಬ್ಬರವನ್ನೇ ಅಧಿಕವಾಗಿ ಬಳಸುತ್ತಿದ್ದೆ. ರಾಸಾಯನಿಕ ಬಳಕೆ ಅಧಿಕವಾದಂತೆ ಗಿಡಗಳಿಗೆ ಹಾನಿಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಹಾಗಾಗಿ ತಿಪ್ಪೆಗೊಬ್ಬರವನ್ನೇ ಹೆಚ್ಚಾಗಿ ಬಳಸಲು ಪ್ರಾರಂಭಿಸಿದೆ. ಇದರಿಂದ ಇಳುವರಿಯೂ ಅಧಿಕವಾಗಿದೆ. ಮನೆಯಲ್ಲಿಯೇ ರಾಸುಗಳಿರುವುದರಿಂದ ಗೊಬ್ಬರಕ್ಕೆ ಹಣ ವ್ಯಯಿಸುವ ಅಗತ್ಯವಿಲ್ಲ ಎನ್ನುತ್ತಾರೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ನೀಡಿದ ಮೂರು ಕೆ.ಜಿ ಕಡಲೆಕಾಳು ಬೀಜದಿಂದ, ಒಂದು ಕ್ವಿಂಟಲ್‌ ಬೆಳೆ ಬೆಳೆದು ಎಲ್ಲರ ಗಮನ ಸೆಳೆದಿದ್ದ ಮಂಜುನಾಥ ಅವರಿಗೆ ‘ಉತ್ತಮ ಕೃಷಿಕ’ ಎಂದು ತಾಲ್ಲೂಕು ಮಟ್ಟದ ಪ್ರಶಸ್ತಿ ಲಭಿಸಿದೆ. ಅಲ್ಲದೆ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನೂ ನೀಡಿದೆ.

‘ಕೃಷಿ ಬಗೆಗಿನ ತಾಂತ್ರಿಕ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆಯಿಂದ ಪಡೆದುಕೊಳ್ಳುತ್ತೇನೆ. ಆದರೆ ಇಳುವರಿ ಹೆಚ್ಚಳಕ್ಕೆ ರೈತ ಗಿಡಗಳ ಜೊತೆ ಮಧುರವಾದ ಸಂಬಂಧ ಬೆಳೆಸಿಕೊಳ್ಳಬೇಕು. ದಿನನಿತ್ಯ ಅದರ ಕಾಳಜಿ ವಹಿಸಬೇಕು. ನಾನು ದಿನದಲ್ಲಿ ಹತ್ತರಿಂದ ಹನ್ನೆರಡು ಗಂಟೆ ಗಿಡಗಳ ಆರೈಕೆಯಲ್ಲಿಯೇ ಕಾಲ ಕಳೆಯುತ್ತೇನೆ. ಅವುಗಳ ಜೊತೆ ನಮ್ಮ ಸಂಬಂಧ ಬೆಳೆದಂತೆ ಬೆಳೆಯ ಇಳುವರಿ ಕೂಡ ಹೆಚ್ಚುತ್ತದೆ’ ಎಂದು ತಮ್ಮ ಯಶಸ್ಸಿನ ಗುಟ್ಟನ್ನು ನೆನೆಯುತ್ತಾರೆ.

ವಿನಾಯಕ ರೈತ ಶಕ್ತಿ ಗುಂಪು
ಮಾರುಕಟ್ಟೆಯಲ್ಲಿ ಗ್ರಾಹಕ ಮತ್ತು ಕೃಷಿಕನ ನಡುವೆ ನೇರ ಸಂಬಂಧ ಇಲ್ಲದ ಕಾರಣ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಸಮಸ್ಯೆಗೂ ಮಂಜುನಾಥ್ ಉಪಾಯ ಕಂಡುಕೊಂಡಿದ್ದಾರೆ. ‘ವಿನಾಯಕ ರೈತ ಶಕ್ತಿ’ ಎಂಬ ಸಂಘ ಕಟ್ಟಿದ್ದಾರೆ. ಇಲ್ಲಿ 16 ಸದಸ್ಯರಿದ್ದಾರೆ. ಈ ಸಂಘದ ಸದಸ್ಯರು ಬೆಂಗಳೂರು ಮತ್ತು ಸುತ್ತಮುತ್ತಲಿನ ಊರಿನ ಗ್ರಾಹಕರಿಗೆ ನೇರವಾಗಿ ರೈತರ ಉತ್ಪನ್ನಗಳನ್ನು ಒದಗಿಸುತ್ತಾರೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಗ್ರಾಹಕರಿಗೂ ಕಡಿಮೆ ಬೆಲೆಗೆ ಉತ್ಪನ್ನಗಳು ದೊರೆಯುತ್ತವೆ.

ಒಂದು ಕೆ.ಜಿ ದ್ರಾಕ್ಷಿ ಮೂಲ ಬೆಲೆ 10 ರೂಪಾಯಿ ಇದ್ದರೆ, ಮಾರುಕಟ್ಟೆಯಲ್ಲಿ 50–60 ರೂಪಾಯಿ ಇರುತ್ತದೆ. ಆದರೆ ಸಂಘದ ಮೂಲಕ 20 ರೂಪಾಯಿಗೆ ದ್ರಾಕ್ಷಿಯನ್ನು ಗ್ರಾಹಕರಿಗೆ ನೀಡುತ್ತಾರೆ. ಅಬಕಾರಿ ಮಂಡಳಿಯಿಂದ  ವೈನ್‌ ತಯಾರಿಕೆ ಕುರಿತು ತರಬೇತಿ ನೀಡುವಂತೆ ಸಂಘದ ವತಿಯಿಂದ ಕೇಳಿಕೊಂಡಿದ್ದೇವೆ. ಅಲ್ಲದೆ ಇತ್ತೀಚೆಗೆ ನಗರಗಳಲ್ಲಿ ಬ್ರ್ಯಾಂಡ್‌ ಪರಿಕಲ್ಪನೆ ಕೂಡ ಹೆಚ್ಚುತ್ತಿದೆ. ಹಾಗಾಗಿ ನಮ್ಮ ಉತ್ಪನ್ನಗಳನ್ನು ಜನರಿಗೆ  ಬ್ರ್ಯಾಂಡ್‌ ಮೂಲಕ ತಲುಪಿಸುವ ಯೋಚನೆಯೂ ಇದೆ ಎನ್ನುತ್ತಾರೆ ಮಂಜುನಾಥ್.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.