ADVERTISEMENT

ಸಾವಯವ ಸಿರಿ ಮುತ್ತಣ್ಣ

ಟಿ.ಶಿವಕುಮಾರ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೆೀ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರಲ್ಲಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಕಾಮನಹಳ್ಳಿಯ ಯುವ ರೈತ ಮುತ್ತಣ್ಣ ಅವರೂ ಒಬ್ಬರು.

ತಾಲ್ಲೂಕು ಕೇಂದ್ರದಿಂದ 3 ಕಿ ಮೀ ಮಂಥಗಿ ರಸ್ತೆಯಲ್ಲಿ ಕ್ರಮಿಸಿದರೆ ಎರಡೂ ಕಡೆಗಳಲ್ಲಿ ಸುಂದರ ತೋಟಗಳು ಗೋಚರಿಸುತ್ತವೆ. ಆ ತೋಟದ ಬಾಗಿಲಲ್ಲಿ ~ಭೂಮಿಪುತ್ರ ಎಸ್ಟೇಟ್~ ಎಂಬ ನಾಮಫಲಕ ಕಣ್ಣಿಗೆ ಬೀಳುತ್ತದೆ.
 
ಒಂದು ಕ್ಷಣ ಆ ತೋಟದಲ್ಲಿನ ಸೊಬಗನ್ನು ಸವಿಯಬೇಕು ಎನಿಸುತ್ತದೆ. ಇದು ಮುತ್ತಣ್ಣನವರ ಹೊಲ. ಅವರ ಲೆಕ್ಕಾಚಾರದ ಬೇಸಾಯ ಹಾಗೂ ಪರಿಶ್ರಮದ ದುಡಿಮೆಯನ್ನು ಅಲ್ಲಿ ನೋಡಬಹುದು. ಅವರ ಕೃಷಿಯ ಯಶೋಗಾಥೆಯನ್ನು ಕೇಳಿದರೆ ರೈತರಲ್ಲಿ ಅಭಿಮಾನ ಮೂಡುತ್ತದೆ.

ಅವರದು ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮ. ಕುರಿಗಳನ್ನು ಕಾಯುವ ಅಲೆಮಾರಿ ಕುಟುಂಬದಿಂದ ಬಂದವರು. ಸುಮಾರು ಮೂರು ಸಾವಿರ ಕುರಿಗಳ ಹಿಂಡಿನೊಡನೆ ನೂರಾರು ಕಿ.ಮೀ ಸಂಚರಿಸುತ್ತಾ, ಅವರಿವರ ಹೊಲದಲ್ಲಿ ಕುರಿಗಳನ್ನು ನಿಲ್ಲಿಸುತ್ತಾ, ಹೊಲದ ಮಾಲೀಕರು ಕೊಟ್ಟ ಕಾಳು- ಕಡಿ ಮತ್ತು ಕೊಂಚ ಹಣದಲ್ಲೇ ತೃಪ್ತಿಪಡುತ್ತಿದ್ದರು.

ಊರಿಂದ ಊರಿಗೆ ಅಲೆದಾಟ ಸಾಕೆನಿಸಿತು. ಕುರಿಗಳನ್ನು ಮಾರಿ ಬಂದ ಹಣ ಮತ್ತು ಅಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ ತನ್ನ ಮಾವನ ಊರಾದ ಕಾಮನಹಳ್ಳಿಯ ಹತ್ತಿರ ತಗ್ಗು ದಿನ್ನೆ ಮತ್ತು ಮುಳ್ಳು ಕಂಟಿಗಳಿಂದ ಕೂಡಿದ ಸುಮಾರು 28 ಎಕರೆ ಭೂಮಿಯನ್ನು 1999 ರಲ್ಲಿ ಖರೀದಿಸಿದರು.

ನರ್ಸರಿಯಲ್ಲೂ ಮುತ್ತಣ್ಣನಿಗೆ ಲಾಭ
ಇಂಥ ಬಂಜರು ಭೂಮಿಯಲ್ಲಿ ಏನು ಬೆಳೆ ಬಂದೀತು ಎಂದು ಧೈರ್ಯಗೆಡಲಿಲ್ಲ. ಇದ್ದಷ್ಟು ಸಮತಟ್ಟು ಜಾಗದಲ್ಲಿ ಗೋವಿನಜೋಳ, ಅಲಸಂದಿ, ರಾಗಿ, ಉದ್ದು ಮುಂತಾದವನ್ನು ಬೆಳೆದರು. ಆದರೆ ಅಷ್ಟೊಂದು ಲಾಭ ಬರಲಿಲ್ಲ. ನಂತರ ಮಾವಿನ ಗಿಡಗಳನ್ನು ನೆಡಲು ತೀರ್ಮಾನಿಸಿದರು.
 
ಆದರೆ ಹೊರಗಿನಿಂದ ಸಸಿಗಳನ್ನು ತರಲು ಬಹಳ ಹಣ ಬೇಕು ಎಂದುಕೊಂಡು ಸ್ವಂತ ನರ್ಸರಿ ಶುರು ಮಾಡಿದರು. ಮೊದಲ ವರ್ಷವೇ 10 ಸಾವಿರ ಮಾವಿನ ಸಸಿ ಬೆಳೆಸಿದರು. ಈಗ ನರ್ಸರಿಯೊಂದರಿಂದಲೇ ವರ್ಷಕ್ಕೆ 6-7 ಲಕ್ಷ ರೂ ದುಡಿಯುತ್ತಿದ್ದಾರೆ.

ಇದರಲ್ಲೆಗ 20-25 ವಿವಿಧ ರೀತಿಯ ಗುಲಾಬಿ ಗಿಡಗಳು, ಅಡಿಕೆ ಸಸಿಗಳು, ಕರಿಬೇವು, ಬಿದಿರು, ಚಿಕ್ಕು, ಮೂರು ರೀತಿಯ ಪೇರಲ, ವೆನಿಲ್ಲಾ, ಬಾರೀಹಣ್ಣು, ಸಪೋಟ,10 ಕ್ಕೂ ಅಧಿಕ ಜಾತಿಯ ಮಾವು, ಕಿತ್ತಳೆ ಮುಂತಾದ ಸಸಿಗಳನ್ನು ಬೆಳೆಸಿ ಮಾರುತ್ತಿದ್ದಾರೆ.

ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ಮುಂಡಗೋಡು, ದಾವಣಗೆರೆ ಮುಂತಾದ ಕಡೆಗಳಿಂದಲೂ ಮುತ್ತಣ್ಣನವರ ನರ್ಸರಿಯ ಸಸಿಗಳಿಗೆ ಭಾರೀ ಬೇಡಿಕೆಯಿದೆ.
ತೋಟದ ಸುತ್ತ ವಿಷಯುಕ್ತ ಗಿಡಗಳ ಬೇಲಿ ಹಾಕಿ 10 ಎಕರೆಯಲ್ಲಿ ಅಡಿಕೆ ಮತ್ತು ಅದರ ನಡುವೆ ಬಾಳೆ ನೆಟ್ಟಿದ್ದಾರೆ. ಅಲ್ಲೆಗ ತಲಾ 3 ಸಾವಿರ ಅಡಿಕೆ ಮತ್ತು ಬಾಳೆಯಿದೆ.
 
10 ಎಕರೆ ಮಾವು, 9 ಎಕರೆ ಚಿಕ್ಕು, 2 ಎಕರೆಯಲ್ಲಿ ತೆಂಗು, ಮೀನು ಸಾಕಣೆ, ಉಳಿದ ಭೂಮಿಯಲ್ಲಿ ಭತ್ತ ಕಬ್ಬು ಹಾಕಿದ್ದಾರೆ. ಮೊದಲು ಅಡಿಕೆ ಮತ್ತು ತೆಂಗಿನ ಹೂವು ಉದುರುತ್ತಿದ್ದವು. ಈಗ ಜೇನು ಸಾಕಣೆ ಮಾಡಿದ್ದಾರೆ.
 
ಈ ಹುಳುಗಳಿಂದ ಪರಾಗ ಸ್ಪರ್ಶ ನಡೆಯುತ್ತದೆ. ಇದರಿಂದ ಹೂವು ಉದುರುವುದು ಕಡಿಮೆಯಾಗಿ ಬೆಳೆ ಇಳುವರಿ ಜಾಸ್ತಿಯಾಗಿದೆ ಎನ್ನುತ್ತಾರೆ. ಆರಂಭದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದ ಮುತ್ತಣ್ಣ ತೋಟಗಾರಿಕೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈಗ ಅಪ್ಪಟ ಸಾವಯವ ಕೃಷಿಗೆ ಇಳಿದಿದ್ದಾರೆ.

ದಿನವಿಡೀ ತೋಟದಲ್ಲಿಯೇ ಕಳೆಯುವ ಅವರು 28 ಎಕರೆ ಭೂಮಿಯ ಜೊತೆಗೆ ಈಗ ಮತ್ತೆ 6 ಎಕರೆ ಖರೀದಿಸಿದ್ದಾರೆ. ತಾನೇ ಎರೆಹುಳು ಗೊಬ್ಬರ ತಯಾರಿಸುತ್ತಾರೆ. 6 ತಿಂಗಳಿಗೊಮ್ಮೆ ಎಲ್ಲ ಗಿಡಕ್ಕೆ ಅರ್ಧ ಕಿಲೊ ಎರೆಹುಳು ಗೊಬ್ಬರ ಕೊಡುತ್ತಾರೆ.
 
ಹತ್ತು ಕಿಲೊ ಸಗಣಿ, ಹತ್ತು ಲೀಟರ್ ಗೋಮೂತ್ರ, ಎರಡು ಕಿಲೊ ಬೆಲ್ಲ, ಎರಡು ಕಿಲೊ ಹುರುಳಿ ಹಿಟ್ಟು, ಸ್ವಲ್ಪ ಮಣ್ಣು ಸೇರಿಸಿ ಕಲಸಿ ಎರಡು ಮೂರು ದಿನ ಇಟ್ಟು `ಜೀವಾಮೃತ~ ತಯಾರಿಸುತ್ತಾರೆ. ಇದು ಒಂದು ಎಕರೆಗೆ ಸಾಲುತ್ತದೆ. ಇದನ್ನು 15 ದಿವಸಕ್ಕೊಮ್ಮೆ ಗಿಡದ ಬುಡಕ್ಕೆ ಕೊಡುತ್ತಾರೆ. ರಾಸಾಯನಿಕಯುಕ್ತ ಕೃಷಿಗಿಂತ ಸಾವಯವ ವಿಧಾನದಲ್ಲೇ ಹೆಚ್ಚು ಲಾಭ ಇದೆ ಎನ್ನುವುದು ಅವರ ಅನುಭವ.

ನೈಸರ್ಗಿಕ ಕೃಷಿಗೆ ಬೇಕಾದ ಸಗಣಿ ಗಂಜಲಕ್ಕಾಗಿ 15 ಹಸು ಸಾಕಿದ್ದಾರೆ. ಅವುಗಳ ಉಸ್ತುವಾರಿಯನ್ನು ಅವರ ಹೆಂಡತಿ ಗೌರಮ್ಮ ನೋಡಿಕೊಳ್ಳುತ್ತಾರೆ. ಹಸುಗಳ ಆಹಾರದಲ್ಲಿ ಅಜೋಲಾ ಮಿಶ್ರ ಮಾಡುತ್ತಾರೆ. ಅದಕ್ಕಾಗಿ ಧಾರವಾಡ ಕೃಷಿ ವಿವಿಯಿಂದ ಒಂದು ಹಿಡಿ ಅಜೋಲಾ ಸಸ್ಯ ತಂದಿದ್ದರು.
 
10 ಅಡಿ ಉದ್ದ 1 ಅಡಿ ಅಗಲ ಗುಂಡಿಯಲ್ಲಿ ಪ್ಲಾಸ್ಟಿಕ್ ಹಾಳೆ ಹಾಕಿ ಮಣ್ಣು ಮತ್ತು ನೀರನ್ನು ಹಾಕಿ ಅದರಲ್ಲಿ ಅಜೋಲಾ ಬೆಳೆಸಿದ್ದರು. ಒಂದು ವಾರದಲ್ಲಿ ಗುಂಡಿ ತುಂಬ ತುಂಬಿಕೊಂಡ ಅಜೋಲಾವನ್ನು ನಿತ್ಯ ಒಂದು ಹಿಡಿಯಂತೆ ದನಗಳ ಮುಸುರಿಯಲ್ಲಿ ಸೇರಿಸಿ ಕುಡಿಸುತ್ತಾರೆ. ಇದರಿಂದ ದನಗಳು ಕೊಡುವ ಹಾಲಿನ ಪ್ರಮಾಣ ಹೆಚ್ಚಾಗಿದೆಯಂತೆ.

ಈ ವರ್ಷದಿಂದ ಮೀನು ಕೃಷಿಗೆ ಕೈ ಹಾಕಿದ್ದು, ಹೊಲದ ಗುಂಡಿಯಲ್ಲಿ ಸುಮಾರು 8000 ಕಾಡ್ಲಾ. ಬೆಳ್ಳಿಗಡ್ಡೆ ಮೀನಿನ ಮರಿಗಳನ್ನು ಸಾಕಿದ್ದಾರೆ. ಜಮೀನಿನ ಖಾಲಿ ಜಾಗದಲ್ಲಿ ಬೀಟೆ, ಗಾಳಿ, ಹಲಸು, ಅಕೇಷಿಯಾ ಇತ್ಯಾದಿ ಮರ ಬೆಳೆಸಿದ್ದಾರೆ.

 7 ಕೊಳವೆ ಬಾವಿಗಳಿದ್ದು, ಅದರ ಮೂಲಕ ತುಂತುರು ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಇದರ ಜತೆಗೆ ಮೂಲ ಕಸುಬಾದ ಕುರಿ ಸಾಕಣೆಯನ್ನೂ ಬಿಟ್ಟಿಲ್ಲ. 1500 ಕುರಿಗಳ ಹಿಂಡು ಬೆಳೆಸಿದ್ದಾರೆ.

ನೈಸರ್ಗಿಕ ಕೃಷಿಯ ಪ್ರತಿಪಾದಕ ಸುಭಾಷ್ ಪಾಳೇಕರ್ ಅವರಿಂದ ಪ್ರೇರಿತರಾದ ಮುತ್ತಣ್ಣ ಸಾವಯವ ಕೃಷಿಕರ ಸಂಘವನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ. ಅವರ ವರ್ಷದ ಆದಾಯ 75 ರಿಂದ 80 ಲಕ್ಷ ರೂಪಾಯಿ.

ಮುತ್ತಣ್ಣನವರ ಹೊಲ ಸುತ್ತಲಿನ ರೈತರ ಪಾಲಿಗೆ ಸಾವಯವ ಪ್ರಯೋಗಶಾಲೆ. ಅವರ ಸಂಪರ್ಕ ಸಂಖ್ಯೆ 97431 55774. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.