ADVERTISEMENT

ಸೋನಾ ಸುಗಂಧಕ್ಕೆ 'ಮಲ್ಲಿಗೆ ಸಾಥ್'

ಅಮೃತ ಭೂಮಿ 34

ಸುರೇಶ ಎನ್.ಧಾರವಾಡಕರ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST
ಮೈಸೂರು ಮಲ್ಲಿಗೆ ಭತ್ತದ ಗದ್ದೆಯಲ್ಲಿ ಚಿದಾನಂದಪ್ಪ
ಮೈಸೂರು ಮಲ್ಲಿಗೆ ಭತ್ತದ ಗದ್ದೆಯಲ್ಲಿ ಚಿದಾನಂದಪ್ಪ   

ರಾಯಚೂರು ಜಿಲ್ಲೆ ಸೋನಾ ಮಸೂರಿ ರುಚಿಗೆ ಹೆಸರುವಾಸಿ. ಹೊರ ರಾಜ್ಯಗಳಲ್ಲೂ ಕಂಪು ಸೂಸಿದೆ ಈ `ಸೋನಾ'. ಅಂಥ ಸೋನಾ ಮಸೂರಿಯ ಘಮಲಿನ ನಡುವೆ ಭತ್ತದ ದೇಸಿ ತಳಿ `ಮೈಸೂರು ಮಲ್ಲಿಗೆ'ಯ ಸುಗಂಧವನ್ನೂ ಬೀರಿದ್ದಾರೆ ಸಿಂಧನೂರು ತಾಲ್ಲೂಕಿನ ಹೊಸಳ್ಳಿ ಕ್ಯಾಂಪ್ ನಿವಾಸಿ ಚಿದಾನಂದಪ್ಪ ಅಂಗಡಿ.

ಇಂದು ರಾಯಚೂರು ಜಿಲ್ಲೆಯಲ್ಲಿ ನೀರಿಲ್ಲದೇ ಭತ್ತ ಬೆಳೆಯುವುದಿಲ್ಲ ಎಂಬ ಪರಿಸ್ಥಿತಿ. ಜಿಲ್ಲೆಯ ಮೇಲ್ಭಾಗದ ಹಾಗೂ ಕೆಳಭಾಗದ ರೈತರು ತುಂಗೆಯ ಸಲುವಾಗಿ ಜಗಳ ಕಾಯುವುದು, ರಸ್ತೆ ತಡೆ ನಡೆಸುವುದು ಸರ್ವೇ ಸಾಮಾನ್ಯ. ಆದರೆ, ಚಿದಾನಂದಪ್ಪ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇರುವ ನೀರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ವ್ಯವಸ್ಥೆ ಬಗ್ಗೆ ಗಮನಹರಿಸಿದ್ದಾರೆ. ಅದಕ್ಕೆ ಅವರು ಮೈಸೂರು ಜಿಲ್ಲೆಯ ಟಿ.ನರಸೀಪುರದ ಕೃಷಿಕ ಶ್ರಿನಿವಾಸಮೂರ್ತಿ ಅವರಿಂದ ಕಡಿಮೆ ನೀರಿನಲ್ಲಿ ಅಧಿಕ ಬೆಳೆ ಬೆಳೆಯುವ ದೇಸಿ ತಳಿಯಾದ `ಮೈಸೂರು ಮಲ್ಲಿಗೆ' ಬೀಜ ತಂದಿದ್ದಾರೆ. ಮೊದಲು ಮನೆ ಬಳಕೆಗೆ ಅಂತ ಒಂದು ಎಕರೆಯಲ್ಲಿ `ಮೈಸೂರು ಮಲ್ಲಿಗೆ' ತಳಿ ನಾಟಿ ಮಾಡಿದ್ದಾರೆ. ಇದು ಈಗ ತೋಟದ ತುಂಬ ಮಲ್ಲಿಗೆ ಹೂವಿನ ಪರಿಮಳ ಸೂಸುತ್ತಿದೆ.

ವಾರಕ್ಕೊಮ್ಮೆ ನೀರು
ವಾರಕ್ಕೊಮ್ಮೆ ಬರುವ ಕಾಲುವೆ ನೀರನ್ನು ಹೊಲಕ್ಕೆ ಹಾಯಿಸುತ್ತಾರೆ. ನೀರನ್ನು ಹೆಚ್ಚು ಹೊತ್ತು ಹೊಲದಲ್ಲಿ ನಿಲ್ಲಿಸುವುದಿಲ್ಲ. ಸೋನಾ ಮಸೂರಿ ಹಾಗೂ ಇತರೇ ಭತ್ತದ ತಳಿಗಳಂತೆ `ಮೈಸೂರು ಮಲ್ಲಿಗೆ' ದೇಸಿ ತಳಿಗೆ ಹೆಚ್ಚು ನೀರು ಬೇಕಿಲ್ಲ. ತಿಪ್ಪೆಗೊಬ್ಬರಕ್ಕಾಗಿ ಅವರ ಮನೆಯಲ್ಲಿ 12 ಎಮ್ಮೆ, 3 ಹಸು, 2 ನಾಟಿ ಹಸು, 2 ಎತ್ತುಗಳಿವೆ. ತಿಪ್ಪೆಗೊಬ್ಬರ ಹಾಗೂ ಕುರಿಹಿಕ್ಕೆಗೆ ತೇವಾಂಶ ಹಿಡಿದಿಡುವ ಸಾಮರ್ಥ್ಯ ಇದೆ. ಅದಕ್ಕಾಗಿ ಮತ್ತೆ ಗೊಬ್ಬರ ಹಾಕಿಲ್ಲ. ಬದಲಾಗಿ ಹಸಿರೆಲೆ ಗೊಬ್ಬರಕ್ಕಾಗಿ ಡಾವಿಂಚಿ ಹಾಗೂ ಅಜೋಲಾ ಸಸ್ಯ ಬೆಳೆಸಿದ್ದಾರೆ.

`ರಾಸಾಯನಿಕ ಔಷಧಿಗಳಿಂದ ಆಗುತ್ತಿರುವ ಪರಿಣಾಮ, ಮೌಲ್ಯವರ್ಧನೆಯ ನೆಪದಲ್ಲಿ ಆಗುತ್ತಿರುವ ಕಲಬೆರಕೆಯ ಬಗ್ಗೆ ಯೋಚನೆ ಬಂದಾಗ ನೈಸರ್ಗಿಕ  ಕೃಷಿಯತ್ತ ಹೊರಳಿದೆ. ನೈಸರ್ಗಿಕ, ಸಾವಯವ ಸಂಸ್ಥೆಗಳ ಒಡನಾಟದಿಂದ ಇಂದು ಕೃಷಿಯಲ್ಲಿ ಇಷ್ಟೊಂದು ಪ್ರಗತಿ ಸಾಧ್ಯವಾಗಿದೆ.

`ಮೈಸೂರು ಮಲ್ಲಿಗೆ' ಭತ್ತದ ತಳಿಗೆ ಹೆಚ್ಚು ನೀರು ಬೇಕಿಲ್ಲ. ಮೈಸೂರು ಭಾಗದಲ್ಲಿ ತಂಪಾದ ವಾತಾವರಣ ಇರುತ್ತದೆ. ಅಲ್ಲಿನ ವಾತಾವರಣಕ್ಕೆ ಈ ಭತ್ತದ ಬೆಳೆ ತುಂಬಾ ಚೆನ್ನಾಗಿ ಬರುತ್ತದೆ. ನಮ್ಮ ಭಾಗದ ಬಿಸಿಲಿಗೆ ಬೆಳೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇತ್ತು ಎನ್ನುತ್ತಾರೆ.

ಬೆಣ್ಣೆಜೇಕು ಕಳೆ
`ಈ ಮೈಸೂರು ಮಲ್ಲಿಗೆ ಭತ್ತದ ಜೊತೆ ಬೆಣ್ಣೆಜೇಕು ಕಳೆ ಹೆಚ್ಚು ಬೆಳೆಯುತ್ತದೆ. ಕಳೆ ಕೀಳುವುದೇ ಹೆಚ್ಚಿನ ಕೆಲಸ ಅಷ್ಟೇ. ಕಳೆಯನ್ನು ಕಿತ್ತು ಹಾಕಿದ್ದೇವೆ. ಬೆಣ್ಣೆಜೇಕು ಕಳೆ ತುಂಬಾ ಮೆತ್ತಗೆ ಇರುವುದರಿಂದ ಬೇರು ಸಮೇತ ಕಿತ್ತು ಬರುತ್ತದೆ. ಅದಕ್ಕಾಗಿ ನಾವೇನೂ ಔಷಧಿ ಅಥವಾ ಬೇರೆ ಯಾವುದೇ ಕೀಟನಾಶಕ ಸಿಂಪರಣೆ ಮಾಡಿಲ್ಲ' ಎನ್ನುತ್ತಾರೆ ಚಿದಾನಂದಪ್ಪ.

  ಭತ್ತದ ನಾಡು ಎಂದೇ ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯಲ್ಲಿ ಹೆಚ್ಚು ಕೀಟನಾಶಕ ಹಾಗೂ ರಸಗೊಬ್ಬರ ಬೇಡುವ ಸುಧಾರಿತ ತಳಿಗಳ ಮಧ್ಯೆ ನೈಸರ್ಗಿಕ ಕೃಷಿ ಸಣ್ಣಗೆ ವಾಸನೆ ಬೀರಿದೆ. ಸಂಪರ್ಕಕ್ಕೆ 9902366620
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.