ADVERTISEMENT

ಸೌತೆ ಮಿಡಿ ಬೆಳೆವ ಗಜಾಪುರ

ಭೀಮಣ್ಣ ಗಜಾಪುರ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ಕೂಡ್ಲಿಗಿ ತಾಲ್ಲೂಕಿನ ಗಜಾಪುರದ ರೈತರು ಏಳೆಂಟು ವರ್ಷಗಳ ಹಿಂದೆ ಹಣ ನೋಡುತ್ತಿದ್ದುದು ವರ್ಷದಲ್ಲಿ ಎರಡೇ ಸಂದರ್ಭಗಳಲ್ಲಿ. ಮಳೆಗಾಲದ ಸುಗ್ಗಿ ಮತ್ತು ಬೇಸಿಗೆಯಲ್ಲಿ ಶೇಂಗಾ ಮಾರಾಟದ ಸಮಯದಲ್ಲಿ. ಉಳಿದ ದಿನಗಳಲ್ಲಿ  ಅವರು ಸಾಲಕ್ಕಾಗಿ ದಲ್ಲಾಲಿಗಳ ಅಂಗಡಿಗಳ ಮುಂದೆ ಕುಳಿತು ಕಾಯುತ್ತಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಈಗ ಅವರು ವಿದೇಶಗಳಲ್ಲಿ ಬೇಡಿಕೆ ಇರುವ ಮಿಡಿ ಸೌತೆ (ಗರ್ಕಿನ್) ಬೆಳೆದು ಪ್ರತಿ ತಿಂಗಳೂ ಸಾವಿರಾರು ರೂಪಾಯಿ ವಹಿವಾಟು ನಡೆಸುತ್ತಾರೆ.

ಕೂಡ್ಲಿಗಿ ತಾಲೂಕಿನಲ್ಲಿ ಸೌತೆ ಮಿಡಿ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಇಪ್ಪತ್ತೆರಡಕ್ಕೂ ಹೆಚ್ಚು ಕಂಪೆನಿಗಳು ಲಗ್ಗೆ ಇಟ್ಟಿವೆ. ತಾಲ್ಲೂಕಿನಲ್ಲಿ ಹಲವಾರು ರೈತರು ಮೂರ್ನಾಲ್ಕು ವರ್ಷಗಳಿಂದ ಸೌತೆ ಮಿಡಿ ಬೆಳೆಯುತ್ತಿದ್ದಾರೆ.

ಕಂಪೆನಿಯೊಂದು ಗಜಾಪುರವೊಂದರಲ್ಲಿಯೇ 100 ಎಕರೆ ಪ್ರದೇಶದಲ್ಲಿ  ಸೌತೆ ಮಿಡಿ ಬೆಳೆಯಲು ರೈತರಿಗೆ ಉತ್ತೇಜನ ನೀಡುತ್ತಿದೆ. ಇತರ ಕಂಪನಿಗಳು ಗ್ರಾಮಕ್ಕೆ ಲಗ್ಗೆ ಇಟ್ಟಿವೆ. ಗಜಾಪುರದ ಕಲ್ಲುಮಿಶ್ರಿತ ಮಣ್ಣು ಗುಣಮಟ್ಟದ ಸೌತೆ ಬೆಳೆಯಲು ಸೂಕ್ತವಾಗಿದೆ. ಮಿಡಿ ಸೌತೆ ಬೆಳೆಯುವ ರೈತರಷ್ಟೇ ಅಲ್ಲ, ಅವನ್ನು ಖರೀದಿಸುವ ಕಂಪೆನಿಗಳು ಹಣ ಮಾಡುತ್ತಿವೆ.

ಸೌತೆ ಮಿಡಿ ಬೆಳೆಯಲು ಕಂಪನಿಗಳು ರೈತರಿಗೆ ನೂರಾರು ರೂಪಾಯಿ ಮುಂಗಡ ಹಣ ನೀಡುತ್ತವೆ. ಬೀಜ, ಔಷಧಿ, ಗೊಬ್ಬರವನ್ನು ಸಾಲದ ರೂಪದಲ್ಲಿ ನೀಡುತ್ತವೆ. ರೈತರು ಬೆಳೆದ ಮಿಡಿ ಸೌತೆಗಳನ್ನು ಖರೀದಿಸುತ್ತವೆ. ರೈತರಿಗೆ ಕೊಡಬೇಕಾದ ಹಣದಲ್ಲಿ ಮುಂಗಡವಾಗಿ ಕೊಟ್ಟ ಹಣವನ್ನು ಮುರಿದುಕೊಳ್ಳುತ್ತಾರೆ.
 
ಹೀಗಾಗಿ ರೈತರಿಗೆ ಬಂಡವಾಳ ಹಾಕದೇ ಮಿಡಿ ಸೌತೆ ಬೆಳೆಯುವ ಅವಕಾಶ ಸಿಕ್ಕಿದೆ.
ಇಡೀ ಗ್ರಾಮ ಸೌತೆ ಮಿಡಿ ಬೆಳೆಯುತ್ತಿದೆಯೇ ಎಂಬ ಭಾವನೆ ಬರುತ್ತದೆ. ಬೀಜ ಹಾಕಿದ 35 ದಿನಗಳಲ್ಲಿ ಕಾಯಿ ಬಿಡುವ ಸೌತೆ ಬಳ್ಳಿಗೆ ಐದಾರು ಅಡಿ ಎತ್ತರದ ಕೋಲುಗಳನ್ನು ಆಸರೆ ಕೊಡಬೇಕು.
 
ಮುಂದೆ 40 ರಿಂದ 45 ದಿನಗಳಲ್ಲಿ ಸೌತೆ ಬಳ್ಳಿ ತುಂಬಾ ಕಾಯಿಗಳು ಬಿಡುತ್ತವೆ. ತೀರಾ ಎಳೆಯ ಸೌತೆ ಮಿಡಿಗಳಿಗೆ ಕಿಲೋಗೆ 19 ರೂಪಾಯಿ. ಸ್ವಲ್ಪ ದೊಡ್ಡ ಸೈಜಿನ 2ನೇ ದರ್ಜೆಯ ಮಿಡಿಗಳಿಗೆ 12 ರೂಪಾಯಿ, 3ನೇ ದರ್ಜೆಯ ಮಿಡಿಗಳಿಗೆ 6 ಅಥವಾ 8 ರೂ, ಸ್ವಲ್ಪ ಬಲಿತ 4ನೇ ದರ್ಜೆ ಮಿಡಿಗಳಿಗೆ 1ರಿಂದ 4 ರೂ ಬೆಲೆ ಸಿಗುತ್ತದೆ. ತೀರಾ ಎಳೆಯ ಮಿಡಿಗಳಿಗೆ ಹೆಚ್ಚು ಬೆಲೆ. ಬಲಿತ ಕಾಯಿಗಳಿಗೆ ಬೆಲೆ ಕಡಿಮೆ. ನಿತ್ಯ ಸಂಜೆ ರೈತರು ಮಿಡಿಗಳನ್ನು ಕಿತ್ತು ವಿಂಗಡಿಸಿ ಕಂಪನಿಗೆ ಕೊಡುತ್ತಾರೆ.

ಗಜಾಪುರದ ರೈತರು ಮುಕ್ಕಾಲು ಎಕರೆ ಭೂಮಿಯಲ್ಲಿ ನಾಲ್ಕು ಟನ್ ಮಿಡಿ ಸೌತೆ ಬೆಳೆಯುತ್ತಾರೆ. ಒಂದು ಟನ್ ಸೌತೆ ಎಳೆ ಮಿಡಿಗಳಿಗೆ ಹದಿನೇಳು ಸಾವಿರ ರೂ ಬೆಲೆ ಇದೆ. ಬೇಸಾಯದ ಖರ್ಚು ಕಳೆದು ಸುಮಾರು 30 ರಿಂದ 35 ಸಾವಿರ ರೂ ಆದಾಯ ಪಡೆಯಬಹುದು ಎನ್ನುತ್ತಾರೆ ಮೂರು ವರ್ಷಗಳಿಂದ ಸೌತೆ ಬೆಳೆಯುತ್ತಿರುವ ರೈತ ಬಣಕಾರ ಬಸವರಾಜ.

1997ರಲ್ಲಿ ಗ್ಲೋಬಲ್ ಗ್ರೀನ್ ಹೆಸರಿನ ಕಂಪನಿಯೊಂದು ಕೂಡ್ಲಿಗಿ ತಾಲೂಕಿನಲ್ಲಿ ಸೌತೆ ಮಿಡಿ ಬೆಳೆಯಲು ರೈತರಿಗೆ ಉತ್ತೇಜನ ನೀಡಿತು. ಆಗ ಬೆರಳೆಣಿಕೆಯ ರೈತರು ಬೆಳೆಯುತ್ತಿದ್ದರು. ಈಗ ನೂರಾರು ರೈತರು ಬೆಳೆಯುತ್ತಿದ್ದಾರೆ. ಇಲ್ಲಿ ಬೆಳೆದ ಮಿಡಿ ಸೌತೆ ಕಾಯಿಗಳನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸುತ್ತಾರೆ. ಈ ಉಪ್ಪಿನಕಾಯಿ ಯುರೋಪ್ ದೇಶಗಳಿಗೆ ರಫ್ತಾಗುತ್ತದೆ.                                                                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.