ADVERTISEMENT

ಹುದಿಯಲ್ಲಿ ನೀರು ಬದುವಿನಲ್ಲಿ ಹರಳು!

ಗಾಣಧಾಳು ಶ್ರೀಕಂಠ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST
ಹರಳು ಗಿಡದೊಂದಿಗೆ ರೇವಣ್ಣ ದಂಪತಿ
ಹರಳು ಗಿಡದೊಂದಿಗೆ ರೇವಣ್ಣ ದಂಪತಿ   

ಹೊಲದ ಸುತ್ತ ನಿರ್ಮಿಸುವ ಬದು ಕೇವಲ ಜಮೀನಿನ ಗಡಿ ಗುರುತಿಸುವ ರೇಖೆಯಲ್ಲ. ಅದು ಮಳೆ ನೀರು ಇಂಗಿಸುವ ಇಂಗು ಗುಂಡಿ. ಮಳೆ ನೀರಿನೊಡನೆ ಕೊಚ್ಚಿ ಹೋಗುವ ಫಲವತ್ತಾದ ಮಣ್ಣನ್ನು ತಡೆದು, ಉತ್ಕೃಷ್ಟ ಗೊಬ್ಬರ ಉತ್ಪಾದಿಸುವ ಕಾಂಪೋಸ್ಟ್ ಖಜಾನೆ. ಜೊತೆಗೆ ನಿತ್ಯ ಖರ್ಚಿಗೆ ಹಣ ನೀಡುವ ತಾಣ.

ಹೊಲದಲ್ಲಿ ಅಂದಾಜು ನೂರೈವತ್ತು ಮೀಟರ್ ಬದು. ಪಕ್ಕದಲ್ಲಿ ಅಷ್ಟೇ ಉದ್ದದ ಹತ್ತಾರು ಹುದಿ (ಟ್ರಂಚ್)ಗಳು. ಬದುವಿನ ಮೇಲುದ್ದಕ್ಕೂ ಹರಳು ಗಿಡಗಳ ಸಾಲು. ಗಿಡಗಳಲ್ಲಿ ಗೊಂಚಲಾದ ಹರಳು. ಪಕ್ಕದಲ್ಲಿ ನಿಂತಿದ್ದ ರೈತ ರೇವಣ್ಣ ಅವರು ಗಿಡದಲ್ಲಿನ ಹರಳು ಹಿಸುಕುತ್ತಾ, `ಈ ವರ್ಷ ಮೂರು ಕ್ವಿಂಟಲ್ ಬೀಜ ಸಿಕ್ತು. ಕೆ.ಜಿ.ಗೆ 40 ರೂಪಾಯಿ' ಎಂದರು.

ರೇವಣ್ಣ ಪಾಲಿಗೆ ಹೊಲದಲ್ಲಿರುವ ಬದು ಉಪ ಆದಾಯದ ತಾಣ. ಪಕ್ಕದಲ್ಲಿರುವ ಹುದಿ ನೀರಿಂಗಿಸುವ ಗುಂಡಿ, ಗೊಬ್ಬರ ಉತ್ಪಾದಿಸುವ ಕಾಂಪೋಸ್ಟ್ ಖಜಾನೆ. ಬದುವಿನಿಂದ ಉಪ ಆದಾಯ, ಹುದಿಯಿಂದ ಖರ್ಚಿನ ಮೇಲೆ ಹಿಡಿತ. ಇದು ರೇವಣ್ಣ ಅವರ ಹುದಿ-ಬದುವಿನ ಲೆಕ್ಕಾಚಾರ.

ರೇವಣ್ಣ ಅವರದ್ದು ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಸಮೀಪದ ದೊಡ್ಡ ಬುಕ್ಕಸಾಗರ. ಅವರಿಗೆ 4 ಎಕರೆ ಜಮೀನಿದೆ. ವಾಣಿಜ್ಯಕ್ಕಾಗಿ ಆಲೂಗಡ್ಡೆ, ಈರುಳ್ಳಿ, ಟೊಮೆಟೊ, ಆಹಾರಕ್ಕಾಗಿ ರಾಗಿ, ಜೋಳ ಬೆಳೆಯುತ್ತಾರೆ. ಮಳೆಯಾಶ್ರಿತ ಕೃಷಿಯಾದರೂ ವಾಣಿಜ್ಯ ಬೆಳೆಗಾಗಿ ಎರಡು ಕೊಳವೆಬಾವಿ ಕೊರೆಸಿದ್ದಾರೆ. ಮಳೆ ಕೊರತೆ, ಸುತ್ತ-ಮುತ್ತ ನೀರು ನಿಲ್ಲುವ ಕೆರೆ, ಕುಂಟೆ ಇಲ್ಲವಾದ್ದರಿಂದ ಬೇಸಿಗೆಯಲ್ಲಿ ಎರಡೂ ಕೊಳವೆ ಬಾವಿಗಳು ಖಾಲಿ ಖಾಲಿ !

2010ರಲ್ಲಿ ಬುಕ್ಕಸಾಗರ ವ್ಯಾಪ್ತಿಯಲ್ಲಿ ನಬಾರ್ಡ್ ಸಂಸ್ಥೆ, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಜಲಾನಯನ ಅಭಿವದ್ಧಿ ಯೋಜನೆ ಅನುಷ್ಠಾನ ಆರಂಭಿಸಿತು. ರೇವಣ್ಣ ಅವರ ಜಮೀನೂ ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿಕೊಂಡಿತು. ಹಾಗಾಗಿ ಇವರೂ ಯೋಜನೆ ಫಲಾನುಭವಿಯಾದರು. ಯೋಜನೆ ಪ್ರಕಾರ ಪ್ರತಿ ಫಲಾನುಭವಿಯೂ ತನ್ನ ಜಮೀನಿನಲ್ಲಿ ಮಣ್ಣು-ನೀರಿನ ಸಂರಕ್ಷಣೆಗಾಗಿ ಹುದಿ-ಬದುಗಳ ನಿರ್ಮಾಣ ಕಡ್ಡಾಯ.

`ಹುದಿ ತೆಗೆದು ಬದು ಹಾಕಿಸಿದರೆ ಎರಡರಿಂದ - ಮೂರು ಅಡಿ ಖಾಲಿ ಜಾಗ ಬಿಡಬೇಕು. ಉಳುಮೆ ಮಾಡುವುದು ಕಷ್ಟ. ಇಷ್ಟು ಜಾಗದಲ್ಲಿ ಅರ್ಧ ಚೀಲ ರಾಗಿ ಬೆಳೆಯಬಹುದು' ಅಂತ ಕುಂಟು ನೆಪ ಹೇಳುತ್ತಾ, ಹುದಿ-ಬದು ಹಾಕುವ ವಿಚಾರವನ್ನು ಎಲ್ಲ ಫಲಾನುಭವಿಗಳು ವಿರೋಧಿಸುತ್ತಿದ್ದರು. ರೇವಣ್ಣ ಕೂಡ ಅದನ್ನು ಬೆಂಬಲಿಸಿದ್ದರು.

ಈ ರೈತರ ಮನವೊಲಿಕೆಗಾಗಿ ಭೂಮಿ ಸಂಸ್ಥೆ, ತಿಪಟೂರಿನ ಬೈಫ್ ಗ್ರಾಮೀಣ ಸಂಸ್ಥೆಯ ಮೈಲನಹಳ್ಳಿ ಜಲಾನಯನ ಪ್ರದೇಶಕ್ಕೆ ಕ್ಷೇತ್ರಾಧ್ಯಯನಕ್ಕಾಗಿ ಪ್ರವಾಸ ಕರೆದೊಯ್ಯಿತು. ಅಲ್ಲಿನ ಹೊಲವೊಂದರಲ್ಲಿ ಬದುಗಳ ಮೇಲೆ ಬೆಳೆದಿದ್ದ ಕಾಡು ಗಿಡಗಳು, ಹಣ್ಣಿನ ಗಿಡಗಳು ರೈತರನ್ನು ಆಕರ್ಷಿಸಿದವು. ಈ ಗಿಡಗಳಿಂದ ಆದಾಯ ಪಡೆದ ರೈತರನ್ನು ಭೇಟಿಯಾದ ರೇವಣ್ಣ, ಹುದಿ-ಬದುವಿನ ಪ್ರತ್ಯಕ್ಷ- ಪರೋಕ್ಷ ಆದಾಯಗಳ ಬಗ್ಗೆ ಮಾಹಿತಿ ಪಡೆದರು.

ಪ್ರವಾಸದಿಂದ ವಾಪಸಾದ ನಂತರ, ಹುದಿ-ಬದು ನಿರ್ಮಾಣಕ್ಕೆ ಸಂಕಲ್ಪ ಮಾಡಿದರು. ಭೂಮಿ ಸಂಸ್ಥೆಯವರ ತಾಂತ್ರಿಕ ನೆರವು, ಸಾಂಪ್ರದಾಯಿಕವಾಗಿ ಬದುಗಳ ಮೇಲೆ ಬೆಳೆಯುತ್ತಿದ್ದ ಬೆಳೆಗಳ ನೆನಪು, ಎರಡೂ ಸೇರಿ ಬದುವಿನ ಮೇಲೆ ಹರಳು ಗಿಡಗಳ ನಾಟಿಗೆ ರೇವಣ್ಣ ತೀರ್ಮಾನಿಸಿದರು. ಮಳೆಗಾಲಕ್ಕೆ ಮುನ್ನ ಒಂದೊಂದು ಎಕರೆಯಲ್ಲಿ 450 ಅಡಿ (150 ಮೀಟರ್) ಬದು ನಿರ್ಮಾಣವಾಯಿತು. ಹತ್ತು ಅಡಿ ಉದ್ದ, ಎರಡೂವರೆ ಅಡಿ ಆಳದ ಗುಂಡಿ (ಹುದಿ) ತೆಗೆದರು. ಬದು ಗಟ್ಟಿಗೊಳಿಸುವುದಕ್ಕಾಗಿ ಬದುವಿನ ಮೇಲೆ 5 ಕೆ.ಜಿ. ಹರಳು ಬೀಜಗಳನ್ನು ನಾಟಿ ಮಾಡಿದರು.

ಅಂತರ್ಜಲ ಹೆಚ್ಚಿಸಿದ ಹುದಿ
ಬದುವಿನ ಮೇಲೆ ಬೆಳೆದ ಹರಳು ಹಣ ಕೊಟ್ಟರೆ, ಹುದಿಯಲ್ಲಿದ್ದ ಫಲವತ್ತಾದ ಮಣ್ಣು-ನೀರು-ಗೊಬ್ಬರ ಇಡೀ ಜಮೀನಿನ ಮಣ್ಣಿನ ಗುಣಮಟ್ಟ ಹೆಚ್ಚಿಸಿತು. ಒಂದು ಬಾರಿ ಹದ ಮಳೆ ಸುರಿದರೆ  ಎರಡೂವರೆ ಸಾವಿರ ಲೀಟರ್‌ನಷ್ಟು ನೀರು ಇಂಗುತ್ತಿತ್ತು. ಹುದಿಯಲ್ಲಿ ಶೇಖರಣೆಯಾಗುವ ಗೊಬ್ಬರವನ್ನು ರಾಗಿ ಬೆಳೆಗೆ ಬಳಸಿದ್ದರು. `ಹುದಿಯಲ್ಲಿ ಮಳೆ ನೀರು ಇಂಗಿದ್ದರಿಂದ ಕಳೆದ ವರ್ಷ ನಮ್ಮ ಜಮೀನಿನಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಯಿತು. ಕೊಳವೆ ಬಾವಿಗಳಲ್ಲಿ ಬೇಸಿಗೆಯಲ್ಲೂ ನೀರು ಲಭ್ಯವಾಗುತ್ತಿದ್ದದ್ದೇ ಇದಕ್ಕೆ ಸಾಕ್ಷಿ' ಎನ್ನುತ್ತಾರೆ ರೇವಣ್ಣ.

ಹುದಿಗಳಲ್ಲಿ ನೀರು ನಿಲ್ಲುವುದರಿಂದ ಜಮೀನಿನಲ್ಲಿ ತೇವಾಂಶ ನಿರಂತರವಾಗಿರುತ್ತದೆ. ಹಾಗಾಗಿ ಬೆಳೆಗಳಿಗೆ ಹೆಚ್ಚುವರಿ ನೀರು ಉಣಿಸುವ ಅಗತ್ಯವಿರುವುದಿಲ್ಲ. ಮೊದಲು ಮಳೆ ಕೈಕೊಟ್ಟಾಗ ರಾಗಿ ಬೆಳೆಗೆ ಒಮ್ಮಮ್ಮೆ ಮಧ್ಯಂತರದಲ್ಲಿ ನೀರು ಕೊಡುತ್ತಿದ್ದರು. ಕಳೆದ ವರ್ಷದಿಂದ ಮಧ್ಯಂತರ ನೀರು ಪೂರೈಕೆಯನ್ನು ರೇವಣ್ಣ ನಿಲ್ಲಿಸಿದ್ದಾರೆ. ಯೋಜನೆ ಅನುಷ್ಠಾನಗೊಳ್ಳುತ್ತಿರುವ ಪ್ರದೇಶದಲ್ಲಿ ಇದೊಂದು ಮಾದರಿ ಬೆಳವಣಿಗೆ' ಎನ್ನುತ್ತಾರೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ.

ಇಷ್ಟಕ್ಕೂ ಬದುವಿನ ಮೇಲೆ ಹರಳು ಬೀಜಕ್ಕಾಗಿ ರೇವಣ್ಣ ವ್ಯಯಿಸಿರುವುದು 600 ರೂಪಾಯಿ ಮಾತ್ರ. ಉಳಿದ ಎಲ್ಲ ಒಳಸುರಿಗಳು, ಇತರೆ ಕೃಷಿ ಚಟುವಟಿಕೆಗೆ ಬಳಸಿ ಉಳಿದಂತಹವು. ಇಲ್ಲಿ ಖರ್ಚಾಗಿರುವುದು ಆಳಿನ ಕೂಲಿ ಮಾತ್ರ. ಒಂದು ಪಕ್ಷ ಒಂದೆರಡು ಸಾವಿರ ರೂಪಾಯಿ ಖರ್ಚಾದರೂ, ಪ್ರತ್ಯಕ್ಷ - ಪರೋಕ್ಷ ಆದಾಯಲೆಕ್ಕ ಹಾಕಿದರೆ, ಹಾಕಿದ ಬಂಡವಾಳ ಕನಿಷ್ಠ ಎನ್ನುತ್ತಾರೆ ರೇವಣ್ಣ. ಸದ್ಯ ಬೇಸಿಗೆಯಾದ್ದರಿಂದ ಬದುವಿನ ಮೇಲಿನ ಹರಳು ಗಿಡಗಳು ಎಲೆ ಉದುರಿಸಿಕೊಂಡು ನಿಂತಿವೆ. ಮುಂದಿನ ವರ್ಷದ ಫಸಲಿಗಾಗಿ ಚಿಗುರೊಡೆಯಲು ಹೊಸ ಮಳೆಗಾಗಿ ಕಾಯುತ್ತಿವೆ!

ಬದುವಿನಲ್ಲಿ ವರ್ಷದಲ್ಲೇ ಫಲ
ವರ್ಷ ಕಳೆಯುತ್ತಲೇ ಬದುವಿನ ಮೇಲೆ ಹರಳಿನ ಗಿಡಗಳು ಎದೆಯುದ್ದ ಬೆಳೆದು ನಿಂತವು. ಪ್ರತಿ ಗಿಡಗಳಲ್ಲೂ ಗೊಂಚಲು ಗೊಂಚಲು ಹರಳು ಕಾಯಿಗಳು ಜೋತಾಡಿದವು. `ವರ್ಷಕ್ಕೆ ಮೂರು ಕ್ವಿಂಟಲ್ ಒಣ ಹರಳು ಸಿಕ್ಕಿತು. ಮಾರುಕಟ್ಟೆಯಲ್ಲಿ ಕೆ.ಜಿ ಹರಳಿಗೆ 40 ರೂ. ಬೆಲೆ. `ಸ್ವಲ್ಪ ಹರಳನ್ನು ನಾವೇ ಬೇಯಿಸಿಕೊಂಡು ಎಣ್ಣೆ ಮಾಡಿಕೊಂಡೆವು. ಮನೆಗೊಂದಿಷ್ಟು ಬಳಸಿಕೊಂಡು ಉಳಿದ ಎಣ್ಣೆಯನ್ನೂ ಮಾರಾಟ ಮಾಡಿದೆವು. ಆ ವರ್ಷ ಹುದಿ- ಬದುವಿನಿಂದ ಮನೆಯ ಖರ್ಚಿಗಾಗುವಷ್ಟು ಹಣ ಸಿಕ್ಕಿತು' ಎಂದು ರೇವಣ್ಣ ದಂಪತಿ ಮೌಲ್ಯವರ್ಧನೆಯ ಲಾಭವನ್ನು ವಿವರಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.