ADVERTISEMENT

ಹೈನುಗಾರ ಎಂಜಿನಿಯರ್‌

ಡಾ.ಸೋಮಶೇಖರ ಎಸ್ ರುಳಿ.
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಕೃಷಿಯೆಂದರೆ ಮೂಗು ಮುರಿದು ಉದ್ಯೋಗ ಅರಸಿ ಪಟ್ಟಣಗಳತ್ತ ವಲಸೆ ಹೋಗುವವರೇ ಹೆಚ್ಚು. ಆದರೆ ಇಲ್ಲೊಬ್ಬ ಎಂಜಿನಿಯರ್‌, ಎಂಜಿನಿಯರಿಂಗ್‌ ಹುದ್ದೆ ತ್ಯಜಿಸಿ ಕೃಷಿಯೇ ಸರ್ವಸ್ವ ಎಂದು ಇದರಲ್ಲಿಯೇ ಸಾಧನೆ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ. ಇವರ ಹೆಸರು ಮಹೇಂದ್ರ ಶಹಾ.

ಊರು ಗುಲ್ಬರ್ಗ ಜಿಲ್ಲೆಯ ಸೇಡಂ. ಜಿಲ್ಲೆಯ ಔರಂಗಬಾದ್‌ನಲ್ಲಿ ಪ್ರಖ್ಯಾತ ಟಿ.ವಿ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ಮಹೇಂದ್ರ, 14 ವರ್ಷಗಳ ಹಿಂದೆ ಅದನ್ನು ಬಿಟ್ಟು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಅನೇಕರಿಗೆ ಉದ್ಯೋಗವನ್ನೂ ಒದಗಿಸಿಕೊಟ್ಟಿದ್ದಾರೆ.

ವ್ಯವಸ್ಥಿತ ಯೋಜನೆ
ಹಿರಿಯರು ನಡೆಸಿಕೊಂಡು ಬರುತ್ತಿದ್ದ ಚಿಕ್ಕ ಡೈರಿಗೆ ಪುನಃಶ್ಚೇತನ ನೀಡಲು ನಿರ್ಧರಿಸಿದ ಅವರು, ಅದಕ್ಕಾಗಿ ಒಂದು ವ್ಯವಸ್ಥಿತ ಯೋಜನೆ ಸಿದ್ಧಪಡಿಸಿದರು. ಉತ್ತಮ ಹಾಲು ಕೊಡುವ ಮುರ್ರಾ  ತಳಿಯ ಎಮ್ಮೆ ಖರೀದಿಸಿದರು. ಅವುಗಳಿಗೆ ವೈಜ್ಞಾನಿಕವಾದ ಪಾಲನೆ- ಪೋಷಣೆಯ ಕ್ರಮಗಳನ್ನು ಅನುಸರಿಸಿದರು. ವಿಶೇಷವಾಗಿ ಅವುಗಳಿಗೆ ಕೊಡುವ ಆಹಾರದ ಕುರಿತು ಬಹಳ ಕಾಳಜಿ ತೆಗೆದುಕೊಂಡರು.

ಏಕೆಂದರೆ ಆಹಾರದಿಂದ ಅವುಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಅಲ್ಲದೆ ಅದೇ ಆಹಾರದ ಫಲದಿಂದ ಒಳ್ಳೆಯ ಗುಣಮಟ್ಟದ ಹಾಲಿನ ಇಳುವರಿ ಬರಬೇಕು. ಅದಕ್ಕಾಗಿ ಅವರು ಪ್ರತಿ ಎಮ್ಮೆಯ ಹಾಲಿನ ಇಳುವರಿಯ ಆಧಾರದ ಮೇಲೆ ಅದಕ್ಕೆ ಕೊಡಬೇಕಾದ ದಾಣಿ ಮಿಶ್ರಣದ ಪ್ರಮಾಣವನ್ನು ನಿಗದಿ ಮಾಡಿದರು. ಬರೀ ಪ್ರಮಾಣವನ್ನು ನಿಗದಿ ಪಡಿಸುವುದಷ್ಟೇ ಅಲ್ಲದೆ ಎಮ್ಮೆಗಳು ಇಷ್ಟ ಪಟ್ಟು ಆಹಾರ ಸೇವಿಸುವಂತೆ ಮಾಡಲು ಅದಕ್ಕೆ ಬೆಲ್ಲ, ಉಪ್ಪನ್ನು ಹದವಾಗಿ ಬೆರೆಸಿ ರುಚಿಕಟ್ಟಾದ ದಾಣಿ ಮಿಶ್ರಣವನ್ನು ಒದಗಿಸಿ ಅಕ್ಷರಶಃ ಜಾನುವಾರುಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಯಿಂದ ನೋಡಿಕೊಂಡರು.

ಅವರ ಇಂಥ ಪ್ರಯತ್ನಗಳಿಂದಾಗಿ ಆರಂಭದಲ್ಲಿ   ದಿನಕ್ಕೆ  ೨೫–-೩೦ ಲೀಟರುಗಳಷ್ಟಿದ್ದ ಉತ್ಪಾದನೆ ದಿನ-ದಿನಕ್ಕೂ ಏರುತ್ತ ಹೋಗಿ ಈಗ ೨೫೦ ಲೀಟರುಗಳವರೆಗೆ ಬಂದಿದೆ. ಅವರು ಉತ್ಪಾದಿಸುವ ಗಟ್ಟಿಯಾದ, ತಾಜಾ ಹಾಲು ಸೇಡಂನಲ್ಲೆಲ್ಲ ತುಂಬಾ ಜನಪ್ರಿಯವಾಗಿದ್ದು ಅದಕ್ಕೆ ಪರ್ಯಾಯ ಇಲ್ಲ ಎನ್ನುವಂತಾಗಿದೆ.

ಎಮ್ಮೆಗಳಿಗೂ ಮೊಳಕೆ ಕಾಳು
ಮಹೇಂದ್ರ ಪ್ರಯೋಗಶೀಲರು. ಗುಣಮಟ್ಟದ ಹಾಲು ಉತ್ಪಾದನೆಯ ನಿಟ್ಟಿನಲ್ಲಿ ಖರ್ಚು ಕಡಿಮೆ ಮಾಡಬಲ್ಲ, ಪೌಷ್ಟಿಕ ಆಹಾರ ಒದಗಿಸಬಲ್ಲ ಹೊಸ-ಹೊಸ ತಂತ್ರಗಳ ಆವಿಷ್ಕಾರದಲ್ಲಿ ತೊಡಗಿಕೊಂಡವರು. ತಮ್ಮ ಈ ಪ್ರಯೋಗಶೀಲತೆಯಿಂದಾಗಿ, ಜಾನುವಾರುಗಳಿಗೆ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಸತ್ವಯುತವಾದ ಆಹಾರ ಒದಗಿಸಬೇಕು ಎನ್ನುವುದು ಅವರ ಆಶಯ. ಅದಕ್ಕಾಗಿ ನಾವು ಮೊಳಕೆ ಕಾಳುಗಳನ್ನು ತಿನ್ನುವಂತೆ ಎಮ್ಮೆಗಳಿಗೂ ತಿನ್ನಿಸುವ ವಿಧಾನವೊಂದನ್ನು ಅವರು ಕಂಡು ಕೊಂಡಿದ್ದಾರೆ.

ಅದಕ್ಕೆ ಅವರು ಆಯ್ದು ಕೊಂಡಿರುವುದು ಮೆಕ್ಕೆ ಜೋಳವನ್ನು.  ಮೆಕ್ಕೆ ಜೋಳದ ಕಾಳುಗಳನ್ನು ನೆನೆಸಿ, ಅವುಗಳನ್ನು ಸಣ್ಣ-ಸಣ್ಣ ಪ್ಲಾಸ್ಟಿಕ್ ಟ್ರೇಗಳಲ್ಲಿ ಬಿತ್ತುತ್ತಾರೆ. ಹತ್ತು ದಿನಗಳಲ್ಲಿ ಸುಮಾರು ೮-–೧೦ ಸೆಂಟಿ ಮೀಟರಿನಷ್ಟು ಮೊಳಕೆಗಳು ಬರುತ್ತವೆ. ಇವುಗಳನ್ನು ಕಿತ್ತು ಚೆನ್ನಾಗಿ ತೊಳೆದು ಎಮ್ಮೆಗಳಿಗೆ ತಿನಿಸುತ್ತಾರೆ. ಎಮ್ಮೆಗಳೂ ಹಸಿರು ಮೊಳಕೆ ಕಾಳುಗಳನ್ನು ಬಹಳ ಇಷ್ಟ ಪಟ್ಟು ತಿನ್ನುತ್ತವೆ. ಮಹೇಂದ್ರ ಶಹಾ ಅವರು ಹೇಳುವಂತೆ ಮೆಕ್ಕೆಜೋಳದ ಮೊಳಕೆ ಕಾಳುಗಳು ಬಹಳ ಪೌಷ್ಟಿಕ ಆಹಾರ. ವಿಟಮಿನ್‌ಗಳು ಹಾಗೂ ಪ್ರೊಟೀನುಗಳಿಂದ ಶ್ರೀಮಂತವಾಗಿರುತ್ತವೆ. ಇವುಗಳ ಜೊತೆಗೆ ಒಮೆಗಾ -೩ ಎನ್ನುವ ಕೊಬ್ಬಿನ ಆಮ್ಲ, ಆಂಟಿಯಾಕ್ಸಿಡಂಟ್ ಆಗಿ ಕೆಲಸ ಮಾಡುತ್ತವೆ.

ಒಂದು ಕೆ.ಜಿ ಮೆಕ್ಕೆಜೋಳದ ಕಾಳುಗಳಿಂದ ಮೂರು ಕೆ.ಜಿಯಷ್ಟು ಹಸಿರು ಮೇವು ಸಿಗುತ್ತದಷ್ಟೇ ಅಲ್ಲದೆ, ಒಣ ಕಾಳುಗಳಲ್ಲಿರುವುದಕ್ಕಿಂತ ಐದು ಪಟ್ಟು ಹೆಚ್ಚಿನ ವಿಟಮಿನ್ ಹಾಗೂ ಪ್ರೊಟೀನುಗಳು ಲಭ್ಯವಾಗುತ್ತವೆ ಎಂದು ಅವರು ಹೇಳುತ್ತಾರೆ. ಖರ್ಚಿನಲ್ಲಿ ಕೂಡಾ ಈ ವಿಧಾನ ಬಹಳ ಮಿತವ್ಯಯಿಯಾಗಿದೆ ಎಂದೇ ಹೇಳಬೇಕು. ಒಂದು ಕೆ.ಜಿ ದಾಣಿ ಮಿಶ್ರಣ ತಯಾರಿಸಲು ಸುಮಾರು ಇಪ್ಪತ್ತು ರೂಪಾಯಿ ಖರ್ಚಾದರೆ, ಮೆಕ್ಕೆ ಜೋಳದ ಮೊಳಕೆ ಕಾಳುಗಳಿಗೆ ಹನ್ನೆರಡು ರೂಪಾಯಿ ಖರ್ಚು ಬರುತ್ತದೆ.

ಮುಂದಿನ ಹೆಜ್ಜೆ
ಮೆಕ್ಕೆಜೋಳದ ಮೊಳಕೆ ಕಾಳುಗಳ ಪ್ರಯೋಗ ಮಾಡುತ್ತಲೇ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಾನುವಾರುಗಳಿಗೆ ದಾಣಿ ಮಿಶ್ರಣವನ್ನು ಸಂಪೂರ್ಣವಾಗಿ ನಿಲ್ಲಿಸಿ ಮೊಳಕೆ ಕಾಳುಗಳೊಂದಿಗೆ, ಅಜೋಲ್ಲಾ ತಿನ್ನಿಸುವ ವಿಚಾರ ಮಾಡುತ್ತಿದ್ದಾರೆ. ದಾಣಿ ಮಿಶ್ರಣಕ್ಕೆ ಪರ್ಯಾಯವಾಗಿ ಅವರೆ, ಅಲಸಂದೆ, ಹುರುಳಿಯಂಥ ದ್ವಿದಳ ಧಾನ್ಯಗಳು, ಮೆಕ್ಕೆಜೋಳ, ಸಜ್ಜೆ, ಜೋಳಗಳಂಥ ಏಕದಳ ಧಾನ್ಯಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೆಳೆದು ಎರಡು ತಿಂಗಳ ಹಸಿರು ಬೆಳೆಯನ್ನು ಕೊಯಿಲು ಮಾಡಿ ಜಾನುವಾರುಗಳಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

ಅವರ ಪ್ರಕಾರ ಈ ಆಹಾರ ಪದ್ಧತಿಯಿಂದಾಗಿ ಜಾನುವಾರುಗಳ ಅರೋಗ್ಯ ಸುಧಾರಿಸಿ, ಸುಸ್ಥಿರವಾಗಿರುತ್ತದಲ್ಲದೆ, ಖರ್ಚು ಹೆಚ್ಚೂ- ಕಡಿಮೆ ಶೇ. ೪೦ ರಷ್ಟು ಕಡಿಮೆಯಾಗುತ್ತದೆ. ಸದ್ಯಕ್ಕೆ ಅವರು ಒಂದು ವರ್ಷಕ್ಕೆ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು ಆಹಾರಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ.

ADVERTISEMENT

ಹಸಿರು ಮೇವು, ಅಜೋಲ್ಲಾ ಹಾಗೂ ಮೊಳಕೆ ಕಾಳುಗಳಿಂದಾಗಿ  ನಾಲ್ಕು ಲಕ್ಷಗಳಷ್ಟು ಖರ್ಚು ಅಲ್ಲದೆ ಅದರ ಜೊತೆಗೆ ಅನವಶ್ಯಕ ಶ್ರಮ ಕಡಿಮೆಯಾಗುತ್ತದೆ ಎನ್ನುತ್ತಾರೆ. ಮಹೇಂದ್ರ ಶಹಾ ಅವರ ಈ ಪ್ರಯೋಗ ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಬಹಳ ಅನುಕೂಲಕರವಾಗಿ ಪರಿಣಮಿಸಬಹುದು.
-ಡಾ. ಸೋಮಶೇಖರ ಎಸ್ ರುಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.