ADVERTISEMENT

ತಳಿ ಅಭಿವೃದ್ಧಿಯ 'ಗೋಟ್ ಫಾರಂ'

ಗೋವಿಂದ ಕುಲಕರ್ಣಿ
Published 12 ನವೆಂಬರ್ 2018, 19:30 IST
Last Updated 12 ನವೆಂಬರ್ 2018, 19:30 IST
ಗೋಟ್ ಫಾರಂ
ಗೋಟ್ ಫಾರಂ   

ಕೃಷಿಯಲ್ಲಿ ಉಪ ಆದಾಯಕ್ಕಾಗಿ ನಾಲ್ಕೈದು ಕುರಿ ಅಥವಾ ಮೇಕೆಗಳನ್ನು ಸಾಕುವುದು ಸಾಮಾನ್ಯ. ಇತ್ತೀಚೆಗೆ ಕೆಲವು ಯುವಕರು ವಿದೇಶಿ ಮೇಕೆ ತಳಿಗಳನ್ನು ಖರೀದಿಸಿ ತಂದು ಹೈಟೆಕ್ ಶೆಡ್ ಗಳನ್ನು ನಿರ್ಮಿಸಿ, ವೈಜ್ಞಾನಿಕವಾಗಿ ವಿಧಾನದಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ.

ಹೊಸ ವಿಷಯವೇನೆಂದರೆ, ಆಡು ಸಾಕಾಣಿಕೆ ಜೊತೆಗೆ, ತಳಿ ಅಭಿವೃದ್ಧಿ ಮಾಡಿ ಮರಿಗಳನ್ನು ಮಾರುತ್ತಾ, ’ಆಡು ಸಾಕಾಣಿಕೆ’ಗೆ ಉದ್ಯಮ ರೂಪ ನೀಡುತ್ತಿದ್ದಾರೆ. ಅಂಥದ್ದೊಂದು ‘ಆಡಿನ ಫಾರಂ’ ಮೈಸೂರು ಸಮೀಪದ ಬಿದರಹಳ್ಳಿ ಹುಂಡಿಯಲ್ಲಿದೆ. ವಿಜಯಕುಮಾರ್ ಈ ಫಾರಂನ ಮಾಲೀಕರು.

2011ರಲ್ಲಿ ಈ ಫಾರಂ ಆರಂಭಿಸಲಾಗಿದೆ. ಆರು ಎಕರೆ ಪ್ರದೇಶದಲ್ಲಿರುವ ಈ ಫಾರಂನಲ್ಲಿ ಸುಸಜ್ಜಿತ ಶೆಡ್ ನಿರ್ಮಿಸಲಾಗಿದೆ. ಮೇಕೆ ಜತೆಗೆ, ಹಸುಗಳನ್ನು ಸಾಕಿದ್ದಾರೆ. ಮೂರು ಎಕರೆಯಲ್ಲಿ ಸಿಒ3, ಸಿಒ4, ಸಿಒ5, ಸಿಒ29 ತಗಳಿಗಳ ಮೇವು ಬೆಳೆಯುತ್ತಾರೆ. ಅಗತ್ಯಬಿದ್ದರಷ್ಟೇ ಹೊರಗಿನಿಂದ ಮೇವು ಖರೀದಿಸುತ್ತಾರೆ.

ADVERTISEMENT

ಫಾರಂನಲ್ಲಿ ಸುಮಾರು 700 ಆಡುಗಳಿವೆ. ಇದರಲ್ಲಿ 200 ಹೋತಗಳು ಹಾಗೂ 600 ರಷ್ಟು ಮೇಕೆಗಳಿವೆ.ಒಂದು ಮೇಕೆ ವರ್ಷಕ್ಕೆ ಎರಡು ಬಾರಿ ಮರಿ ಹಾಕುತ್ತದೆ. ಒಂದು ಬಾರಿಗೆ ಎರಡು ಮರಿಗಳನ್ನು ಹಾಕುತ್ತದೆ. ಪ್ರತಿ ದಿನ ಒಬ್ಬ ಪಶು ವೈದ್ಯರು ಬಂದು ಭೇಟಿ ನೀಡಿ ಅವುಗಳ ಆರೋಗ್ಯ ಪರೀಕ್ಷಿಸುತ್ತಾರೆ. ಫಾರಂನಲ್ಲಿ ಕಾಯಂ ಆಗಿ ಹತ್ತು ಮಂದಿ ಕಾರ್ಮಿಕರು, ಆಡುಗಳಿಗೆ ಮೇವು, ನೀರು, ಆರೈಕೆ ಮಾಡುತ್ತಾರೆ.

ವಿವಿಧ ಜಾತಿಯ ಆಡುಗಳು

ಫಾರಂನಲ್ಲಿ ಸಿರೋಯಿ, ಜನ್ಮಾಪೇರಿ, ಬೀತಲ್, ಪರ್ವಸಾರಿ, ಬೋಯರ್ ಸೇರಿದಂತೆ ವಿಧ ವಿಧ ಜಾತಿಯ ತಳಿಗಳಿವೆ. ಸ್ಥಳೀಯ ತಳಿ ಸೇರಿದಂತೆ ನೆರೆ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಮೇಕೆ ಮರಿಗಳನ್ನು ಖರೀದಿಸುತ್ತಾರೆ. ಹೊಸ ತಳಿಗಳ ಮರಿಗಳನ್ನು ತಂದು ಸಾಕಣೆ ಮಾಡುತ್ತಾರೆ. ನಂತರ ಅವುಗಳಿಂದ ಪುನಃ ಮರಿ ಮಾಡಿಸಿ ಮಾರಾಟ ಮಾಡುತ್ತಾರೆ. ಸಹಜವಾಗಿ ಮೇಕೆಯ ತಳಿ ಅಭಿವೃದ್ಧಿ ಮಾಡುತ್ತಾರೆ. ಹಸುಗಳಿಗೆ ಕೆಲವೊಮ್ಮೆ ಕೃತಕಗರ್ಭಧಾರಣೆ ಮಾಡಿಸುವುದೂ ಇದೆ.

ವಾರ್ಷಿಕವಾಗಿ ಸುಮಾರು ಮುನ್ನೂರು ಮೇಕೆ ಮರಿಗಳನ್ನು ಮಾರಾಟ ಮಾಡುತ್ತಾರೆ. ಒಂದು ಮರಿ ಬೆಲೆ ₹ 10 ಸಾವಿರ ದಾಟುತ್ತದೆ. ‘ಮರಿಗಳು ಮಾರಾಟವಾದರೆ ಮಾತ್ರ ಉತ್ತಮ ಲಾಭ ಬರುತ್ತದೆ, ಮರಿಗಳನ್ನು ಬೆಳೆಸಿ ದೊಡ್ಡವಾಗಿಸಿ ಮಾರಾಟ ಮಾಡಿದರೆ, ಖರ್ಚು ಹೆಚ್ಚಾಗುತ್ತದೆ’ ಎನ್ನುತ್ತಾರೆ ಫಾರಂನ ನಿರ್ವಾಹಕ ಸಾಜನ್.

‘ಬೇರ ಪ್ರಾಣಿಗಳನ್ನು ಸಾಕುವುದಕ್ಕಿಂತ ಆಡುಗಳ ಪೋಷಣೆ ತುಸು ಸುಲಭ. ಇವುಗಳಿಗೆ ಇಂಥ ಮೇವನ್ನೇ ಹಾಕಬೇಕೆಂಬ ನಿಯಮವಿಲ್ಲ. ರೋಗಗಳು ಕಡಿಮೆ. ಕಡಿಮೆ ಬೀಳುವ ಪ್ರದೇಶದಲ್ಲೂ ಸುಲಭವಾಗಿ ಬೆಳೆಯುತ್ತವೆ. ಚಳಿ ಎದುರಿಸು ಶಕ್ತಿ ಹೊಂದಿದೆ. ಸ್ಥಳಿಯವಾಗಿ ಸಣ್ಣ ಹಿಡುವಳಿದಾರ ರೈತರು ಕಡಿಮೆ ಬಂಡವಾಳದೊಂದಿಗೆ ಮೇಕೆ ಸಾಕಣೆ ಮಾಡಬಹದು’ ಎಂದು ನಿರ್ವಹಣೆಯ ಅನುಭವ ಹಂಚಿಕೊಳ್ಳುತ್ತಾರೆ ಸಾಜನ್.

ಮಾಂಸ, ಗೊಬ್ಬರ ಮಾರಾಟ

ಆಡು ಸಾಕಾಣಿಕ ಕೇಂದ್ರ ಕೇವಲ ತಳಿ ಅಭಿವೃದ್ಧಿ ಮತ್ತು ಮಾರಾಟಕ್ಕಷ್ಟೇ ಸೀಮಿತವಾಗಿಲ್ಲ. ಈ ಕೇಂದ್ರದಿಂದ ಆಡಿನ ಗೊಬ್ಬರ, ಹಾಲನ್ನು ಮಾರಾಟ ಮಾಡುತ್ತಾರೆ.

ಆಡಿನ ಗೊಬ್ಬರಕ್ಕೆ ತುಂಬಾ ಬೇಡಿಕೆ ಇದೆ. ಗದ್ದೆ ಮಾಡುವವರು ಕೇಂದ್ರಕ್ಕೇ ಬಂದು ಗೊಬ್ಬರ ಖರೀದಿಸುತ್ತಾರೆ. ಪ್ರತಿ ಟನ್‌ಗೆ ₹ 4 ಸಾವಿರ ದರವಿದೆ. ಬೇಡಿಕೆ ಹೆಚ್ಚಿದಾಗ ಬೆಲೆಯೂ ಹೆಚ್ಚುತ್ತದೆ. ಕೇಂದ್ರದಲ್ಲಿ ಆಡಿನ ಗೊಬ್ಬರ ಪರಿಶುದ್ಧವಾಗಿರುವ ಕಾರಣ ಹೆಚ್ಚು ಹಣ ನೀಡಿ ಖರೀದಿಸುವ ರೈತರು ಇದ್ದಾರೆ. ತಿಂಗಳಿಗೆ ಅಂದಾಜು 6 ಟನ್ ನಷ್ಟು ಗೊಬ್ಬರ ಮಾರಾಟವಾಗುತ್ತದೆ. ಸಿರೋಯಿ, ಆಫ್ರಿಕಾದ ಬೋಯರ್ ಮೇಕೆ ಮರಿಯು ಮಾಂಸವನ್ನು ಒಂದು ಕೆ.ಜಿಎಗೆ ₹ 2,500 ರಂತೆ ಮಾರಾಟ ಮಾಡುತ್ತಾರೆ. ಬಕ್ರೀದ್ ಹಬ್ಬದ ವೇಳೆ ಹೆಚ್ಚು ಮೇಕೆಗಳು ಮಾರಾಟವಾಗುತ್ತವಂತೆ.

ಮೇಕೆ, ಹಸುವಿನ ಹಾಲು

ಮೇಕೆ ಹಾಲು ಖರೀದಿಸುವವರೂ ಇದ್ದಾರೆ. ಒಂದು ಲೀಟರ್ ಗೆ ₹ 200 ಬೆಲೆ. ಒಂದು ಮೇಕೆಯಿಂದ ದಿನಕ್ಕೆ ಅರ್ಧ ಲೀಟರ್ ಹಾಲು ಕರೆಯಬಹುದು. ಮರಿಗಳು ಕುಡಿದು ಉಳಿದ ಹಾಲನ್ನು ಮಾತ್ರ ಮಾರಾಟ ಮಾರುತ್ತಾರೆ.

ಮೇಕೆ ಜೊತೆಗೆ ಹಸುಗಳನ್ನು ಸಾಕಿದ್ದಾರೆ. ಎಚ್.ಎಫ್, ಜರ್ಸಿ, ಗಿರ್ ತಳಿಗಳ 20 ಹಸುಗಳಿವೆ. ನಿತ್ಯ ಸುಮಾರು 150 ಲೀಟರ್ ಹಾಲು ಕರೆಯುತ್ತಾರೆ. ಮೈಸೂರಿನ ಡೇರಿಗೆ ಹಾಲನ್ನು ಮಾರಾಟ ಮಾಡುತ್ತಾರೆ.

ಕೃಷಿ ಜತೆಗೆ ಆಡು ಸಾಕಾಣಿಕೆ ಮಾಡುವುದು ಉತ್ತಮ. ‘ಹತ್ತು ಆಡಿನ ಮರಿ ಸಾಕಿದರೆ, ಹತ್ತು ವರ್ಷಗಳಲ್ಲಿ ಇಪ್ಪತ್ತು ಮರಿಗಳಾಗುತ್ತವೆ. ಸಾಕಷ್ಟು ಲಾಭಾಂಶ ಬರುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ ಆಡು ಸಾಕಾಣಿಕ ಕೇಂದ್ರದ ಸಿಇಒ ಆರ್ಯ. ಆಡು ಸಾಕಾಣಿಕೆ, ತಳಿ ಅಭಿವೃದ್ಧಿಗಾಗಿ ಸಾಜನ್ ಮೊಬೆಲ್ ಸಂಖ್ಯೆ 9448434518 ಸಂಪರ್ಕಿಸಬಹುದು.

‘ಉಪ ಆದಾಯ ನೀಡುವ ಆಡುಸಾಕಾಣಿಕೆ’

‘ಹಳ್ಳಿ ಬಿಟ್ಟು ನಗರದತ್ತ ಉದ್ಯೋಗ ಅರಸಿ ಹೋಗುತ್ತಿರುವ ಯುವಕರಿಗೆ ಉಪ ಕಸುಬು ಸೃಷ್ಟಿಸುವುದಕ್ಕಾಗಿ ಆಡು ಸಾಕಾಣಿಕ ಕೇಂದ್ರ ಆರಂಭಿಸಿದೆ’ ಎನ್ನುತ್ತಾರೆ ಆಡು ಸಾಕಾಣಿಕ ಕೇಂದ್ರದ ಮಾಲೀಕ ವಿಜಯಕುಮಾರ್.

‘ಕೃಷಿ ಜತೆಗೆ ಉಪ ಆದಾಯ ನೀಡುವ ಇಂಥ ಚಟುವಟಿಕೆಗಳು ಹೆಚ್ಚು ಹೆಚ್ಚು ಆರಂಭವಾಗಬೇಕು. ಈ ಹಿನ್ನೆಲೆಯಲ್ಲಿ ಇನ್ನು ಎರಡು ವರ್ಷಗಳಲ್ಲಿ ಗ್ರಾಮೀಣ ಯುವಸಮೂಹಕ್ಕೆ ತರಬೇತಿ ನೀಡುವುದಕ್ಕಾಗಿ ಹೆಗ್ಗಡದೇವನಕೋಟೆ ಬಳಿ ಪಶುಪಾಲನ ತರಬೇತಿ ಕೇಂದ್ರವನ್ನೂ ಸ್ಥಾಪಿಸುವ ಉದ್ದೇಶವಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.