ADVERTISEMENT

ಹಿರೇಮಠ ಸ್ವಾಮೀಜಿಯ ಸಾವಯವ ಕೃಷಿ ಪ್ರೀತಿ, ಬರಡು ನೆಲದಲ್ಲಿ ಹೂವು–ಹಣ್ಣಿನ ತೋಟ

ಕೃಷಿಯಲ್ಲಿ ಅತೀವ ಕಾಳಜಿ

ರಮೇಶ ಎಸ್.ಕತ್ತಿ
Published 10 ಡಿಸೆಂಬರ್ 2018, 19:30 IST
Last Updated 10 ಡಿಸೆಂಬರ್ 2018, 19:30 IST
ಹೂ–ಹಣ್ಣಿನ ತೋಟದಲ್ಲಿ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು
ಹೂ–ಹಣ್ಣಿನ ತೋಟದಲ್ಲಿ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು   

ಆಲಮೇಲ:ಪಟ್ಟಣದಿಂದ ಅರ್ಜುಣಗಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಇಲ್ಲಿನ ಹಿರೇಮಠಕ್ಕೆ ಸೇರಿದ 40 ಎಕರೆ ಕೃಷಿ ಭೂಮಿಯಿದೆ. ಇಲ್ಲಿ ಹಸಿರು ನಳನಳಿಸುತ್ತಿದೆ. ಇದಕ್ಕೆ ಹಿರೇಮಠದ ಚಂದ್ರಶೇಖರ ಸ್ವಾಮೀಜಿಯವರ ಕೃಷಿ ಕಾಳಜಿಯೇ ಪ್ರಮುಖ ಕಾರಣ.

ರೈತರು, ಕೃಷಿ ಬಗ್ಗೆ ಮಾತನಾಡುವ ಮುನ್ನ, ನಾವೇ ಕೃಷಿಯಲ್ಲಿ ತಲ್ಲೀನರಾಗಬೇಕು. ಅನುಭವ ಪಕ್ವಗೊಳಿಸಿಕೊಳ್ಳಬೇಕು. ಆಗ ನೈಜ ಚಿತ್ರಣ ಅರಿವಾಗಲಿದೆ ಎಂಬ ಉದ್ದೇಶದಿಂದ ಭೂ ತಾಯಿಯ ಸೇವೆಗಿಳಿದವರು ಸ್ವಾಮೀಜಿ. ಆರಂಭದಲ್ಲಿ ನಷ್ಟ ಅನುಭವಿಸಿ, ಮಿಶ್ರ ಬೆಳೆಯ ಲಾಭದ ಬಗ್ಗೆ, ಸಾವಯವ ಕೃಷಿಗೆ ಒಲವು ನೀಡಬೇಕಾದ ಅನಿವಾರ್ಯತೆಯನ್ನು ಚಂದ್ರಶೇಖರ ಸ್ವಾಮೀಜಿ ಇಲ್ಲಿ ವಿವರಿಸಿದ್ದಾರೆ.

ಹಣ್ಣಿನ ತೋಟ

ADVERTISEMENT

ಎರಡು ಎಕರೆಯಷ್ಟು ಭೂಮಿ ಗರಸು ಮಣ್ಣಿನಿಂದ ಬರಡು ಬಿದ್ದಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸ್ವಾಮೀಜಿ ಹಣ್ಣು, ಹೂವಿನ ತೋಟ ನಿರ್ಮಿಸುವ ಸಂಕಲ್ಪ ತೊಟ್ಟರು. ಇದೀಗ ಇಲ್ಲಿ ನೂರಾರು ಹಣ್ಣಿನ ಗಿಡಗಳಿವೆ. ಹಲ ಬಗೆಯ ಪುಷ್ಪಗಳು ನಿತ್ಯವೂ ಅರಳುತ್ತಿವೆ. ಹಕ್ಕಿಗಳ ಚಿಲಿಪಿಲಿ ಕಲರವ ನಿರಂತರವಾಗಿರಲಿದೆ.

ಮಾವು, ಚೆಕ್ಕು, ಪೇರಲ, ಅಂಜೂರ, ಖಾಜು, ಸೀತಾಫಲ, ಬೆಟ್ಟದ ನೆಲ್ಲಿ, ಹಲಸು... ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳಿಗೆ ಇಲ್ಲಿ ಜಾಗ ಸಿಕ್ಕಿದೆ. 50ಕ್ಕೂ ಹೆಚ್ಚು ಪತ್ರಿಗಿಡಗಳು, 50ಕ್ಕೂ ಹೆಚ್ಚು ಸಾಗುವಾನಿ, ತೆಂಗಿನ ಮರಗಳು ಇಲ್ಲಿವೆ. ಇವುಗಳ ನಡುವೆ ಕಣಗಿಲ, ಪಾರಿಜಾತ, ಮಲ್ಲಿಗೆ, ಗುಲಾಬಿ, ಚೆಂಡು, ಸುಗಂಧರಾಜಾ ಮೊದಲಾದ ಹೂವು ಅರಳಿ ಕಂಗೊಳಿಸುತ್ತಿವೆ.

ಹನಿ ನೀರಾವರಿ ಪದ್ಧತಿಯಿಂದ ನೀರುಣಿಸುತ್ತಿದ್ದಾರೆ. ಊರಲ್ಲಿದ್ದಾಗ ತಪ್ಪದೇ ಹಾಜರಿ. ಪ್ರತಿ ಗಿಡದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಚಂದ್ರಶೇಖರ ಸ್ವಾಮೀಜಿ ಹವ್ಯಾಸವನ್ನಾಗಿಸಿಕೊಂಡಿದ್ದಾರೆ.

ಪಾಲಿಹೌಸ್‌ನಲ್ಲಿ ಸಾವಯವ ಕೃಷಿ

ಒಂದು ಎಕರೆಯಲ್ಲಿ ₹ 18 ಲಕ್ಷ ವೆಚ್ಚ ಮಾಡಿ ಪಾಲಿಹೌಸ್ ನಿರ್ಮಿಸಿದ್ದಾರೆ. ತೋಟಗಾರಿಕೆ ಇಲಾಖೆ ₹ 10 ಲಕ್ಷ ಅನುದಾನ ನೀಡಿದ್ದರೆ, ಮಠದಿಂದಲೇ ₹ 8 ಲಕ್ಷ ವೆಚ್ಚ ಭರಿಸಿದ್ದಾರೆ.

ಇದು ಅತ್ಯಾಧುನಿಕ ಮಾದರಿಯಲ್ಲಿದೆ. ಹೊರ ವಾತಾವರಣದಿಂದ ರಕ್ಷಿಸಿ, ಶುಷ್ಕ ವಾತಾವರಣ ನಿರ್ಮಿಸುತ್ತದೆ. ಕೃತಕ ಮೋಡದ ವಾತಾವರಣ ನಿರ್ಮಿಸುವ, ಅಲ್ಲಿಂದ ಬೆಳೆಗೆ ಬೇಕಾಗುವ ವಾತಾವರಣ ನೀಡುವ ಬಗೆ ಇದಾಗಿದೆ. ಮೊದಲ ಹಂತವಾಗಿ 8 ಸಾವಿರ ಡಬ್ಬು ಮೆಣಸಿನಕಾಯಿ ಅಗಿಗಳನ್ನು ತಂದು ನಾಟಿ ಮಾಡಿ, ಚೆನ್ನಾಗಿ ಬೆಳೆದು ಮಾರುಕಟ್ಟೆಗೆ ಸಾಗಿಸಿದ್ದಾರೆ. ಸಾವಯವ ಬೆಳೆಯಾಗಿದ್ದರಿಂದ ಬೇಡಿಕೆ ಹೆಚ್ಚಿತ್ತು ಎನ್ನುತ್ತಾರೆ ಸ್ವಾಮೀಜಿ.

ಪ್ರತಿ ಕೆ.ಜಿ.ಗೆ ₹ 20 ಬೆಲೆ ಸಿಕ್ಕಿದೆ. ಇನ್ನೂ ಹೆಚ್ಚು ಬೆಲೆ ಬರಬೇಕಿತ್ತು. ಸಾವಯವ ತರಕಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯಾಗಬೇಕು ಎಂಬ ಆಗ್ರಹ ಹಿರೇಮಠ ಶ್ರೀಗಳದ್ದು.

ಇದೀಗ ಪಾಲಿಹೌಸ್‌ನಲ್ಲಿ ಹಿರೇಕಾಯಿ, ಹಾಗಲಕಾಯಿ, ವಿವಿಧ ಜಾತಿಯ ಗುಲಾಬಿ ಬೆಳೆಯಿದೆ. ನಿತ್ಯವೂ ಒಬ್ಬರಿಗೆ ಕಾಯಂ ಕೆಲಸ. ಅಗತ್ಯವಿದ್ದಾಗ ಹೆಚ್ಚಿನ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಉಳಿದ ಜಮೀನಿನಲ್ಲಿ ಮೆಣಸಿನಕಾಯಿ, ಉಳ್ಳಾಗಡ್ಡಿ, ಕಬ್ಬು ಬೆಳೆದಿದ್ದೇವೆ. ಇವುಗಳಿಂದವೂ ಆದಾಯ ದೊರಕುತ್ತಿದೆ ಎಂದು ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ಪ್ರಾಣಿ ಪ್ರಿಯರು...

ಮಠದಲ್ಲಿ, ಹೊಲದಲ್ಲಿ ಹಲವು ಪಕ್ಷಿ, ಪ್ರಾಣಿಗಳನ್ನು ಸಾಕಿ ಪೋಷಿಸುತ್ತಿದ್ದಾರೆ ಸ್ವಾಮೀಜಿ. ಬಾಲ್ಯದಿಂದಲೂ ಇವರಿಗೆ ಪ್ರಾಣಿಗಳೆಂದರೇ ಬಲು ಪ್ರೀತಿ. ಜಿಂಕೆ, ಮೊಲ, ಪಾರಿವಾಳ, ಗಿಳಿ ಮೊದಲಾದ ಪಕ್ಷಿ ಸಂಕುಲ ಇವರ ಆಸರೆಯಲ್ಲಿದೆ.

ಗುಜರಾತ್‌ನ ಗಿರ್‌ ತಳಿಯ ಎರಡು ಆಕಳು ಸೇರಿದಂತೆ 12ಕ್ಕೂ ಹೆಚ್ಚು ಆಕಳು ಇಲ್ಲಿವೆ. ಮಠಕ್ಕೆ, ಕೆಲಸಗಾರರಿಗೆ ಸಾಕಾಗುವಷ್ಟು ಹೈನು ನಮ್ಮಲ್ಲೇ ಸಿಗುತ್ತದೆ ಎನ್ನುತ್ತಾರೆ ಸ್ವಾಮೀಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.