ಕಬ್ಬು ವಾಣಿಜ್ಯ ಬೆಳೆಯಾಗಿ ಕೈತುಂಬ ಆದಾಯ ತಂದರೂ, ದುಡ್ಡು ಕೈಸೇರುವುದು ವಿಳಂಬವಾಗುತ್ತದೆ. ಇಂಥ ಪರಿಸ್ಥಿತಿ ಎದುರಿಸಲು ಕೆಲವು ನೀರಾವರಿ ರೈತರು ನಿರಂತರ ಆದಾಯ ನೀಡುವ ಹಣ್ಣು, ತರಕಾರಿ ಬೆಳೆಯುವತ್ತ ಹೆಜ್ಜೆ ಹಾಕಿದ್ದಾರೆ.
ಹೀಗೆ ತರಕಾರಿಯತ್ತ ಹೊರಳಿದ ಕಬ್ಬು ಬೆಳೆಗಾರರಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕು ತುಕ್ಕಾನಟ್ಟಿ ಗ್ರಾಮದ ಕೃಷಿಕ ಬಾಳಪ್ಪ ಕೆಂಪಣ್ಣ ಬಬಲಿ ಒಬ್ಬರು.
ಹಿಂದೆ ಎರಡು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದ ಬಾಳಪ್ಪ, ಸಕಾಲಕ್ಕೆ ಕಬ್ಬು ಕಟಾವಾಗದೇ ತೀವ್ರ ಸಮಸ್ಯೆ ಎದುರಿಸಿದರು. ಇದರಿಂದ ಬೇಸತ್ತ ಅವರು ಕಬ್ಬು ಬಿಟ್ಟು ತರಕಾರಿ ಕೃಷಿ ಆರಂಭಿಸಿದರು. ಒಟ್ಟು ಜಮೀನಿನ ಕಾಲು, ಅರ್ಧ ಎಕರೆ ತಾಕನ್ನಾಗಿ ಮಾಡಿ, ತರಕಾರಿ ಬೆಳೆಯಲಾರಂಭಿಸಿದರು. ಈಗ ಮೂರು ತಿಂಗಳ ಹಿಂದೆ ಅರ್ಧ ಎಕರೆಗೆ ಹಾಕಿದ್ದ ಸೋರೆಕಾಯಿ ಉತ್ತಮ ಫಸಲು ಬಿಟ್ಟು, ಅವರಿಗೆ ಲಕ್ಷ ಆದಾಯ ತಂದುಕೊಟ್ಟಿದೆ.
ಎರಡು ಎಕರೆ ಹತ್ತು ಗುಂಟೆ ಜಮೀನು ಪೂರ್ಣ ತರಕಾರಿ ಇದೆ. ಎಲ್ಲವುದಕ್ಕೂ ನೀರು ಪೂರೈಸಲು ಮೂರು ಇಂಚು ನೀರು ಚೆಲ್ಲುವ ಕೊಳವೆ ಬಾವಿ ಇದೆ. ನೀರು ಹೆಚ್ಚಿದ್ದರೂ, ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಸೌಲಭ್ಯ ಅಳವಡಿಸಿದ್ದಾರೆ.
ಸೋರೆಕಾಯಿ ನಾಟಿ
ಜೂನ್ ಮೊದಲ ವಾರ ಭೂಮಿ ಉಳುಮೆ ಮಾಡಿಸಿ, ತಿಪ್ಪೆಗೊಬ್ಬರ ಮಣ್ಣಿನಲ್ಲಿ ಬೆರೆಸಿ, ಬದು ಮಾಡಿ ಕೈಯಿಂದ ಅಂಗುಲ ಮಾಡಿ ಪಾಲಿ ಮಲ್ಚಿಂಗ್ ಪೇಪರ್ ರೋಲ್ ಹಾಕಿ ಮಣ್ಣೇರಿಸಿದರು. ಐದು ಅಡಿ ಸಾಲಿನ ಅಂತರದಲ್ಲಿ ನಾಲ್ಕು ಅಡಿಗೊಂದರಂತೆ ಸೋರೆಕಾಯಿ ಬೀಜ ನಾಟಿ ಮಾಡಿದರು. ಇದು ಮೂರು ತಿಂಗಳ ಬೆಳೆ. 40 ರಿಂದ45ನೇ ದಿನಕ್ಕೆ ಫಲಿತಗೊಂಡು ಕಾಯಿಕಟ್ಟಲು ಆರಂಭಿಸಿದವು. 70 ರಿಂದ 80 ದಿನಕ್ಕೆ ಕಾಯಿ ಮಾಗಿ ಮಾರುಕಟ್ಟೆಗೆ ಹೊರಡಲು ಸಿದ್ಧವಾದವು.
ನೀರು, ಕೀಟ-ರೋಗ ನಿರ್ವಹಣೆ
ಕಾಲುವೆ ನೀರು ಅನುಕೂಲತೆ ಇದ್ದರೂ, ಜಮೀನು ಕಾಲುವೆ ನೀರು ಹರಿಯುವ ಕೊನೆಯ (ಟೇಲ್ ಎಂಡ್) ಭಾಗದಲ್ಲಿರುವುದರಿಂದ ಆ ನೀರು ಸಿಗುವ ಭರವಸೆ ಕಡಿಮೆ. ಅದಕ್ಕಾಗಿಯೇ ಬಾಳಪ್ಪ ಕೊಳವೆ ಬಾವಿ ಆಶ್ರಯಿಸಿದ್ದಾರೆ. ಹನಿ ನೀರಾವರಿ ಮೂಲಕ ಸಕಾಲಕ್ಕೆ ಪ್ರತಿ ಬಳ್ಳಿಗೂ ನೀರು ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
ಎರಡು ದಿನಕ್ಕೊಮ್ಮೆ ವಿದ್ಯುತ್ ಲಭ್ಯತೆ ಅನುಸರಿಸಿ, ಮೂರು ಗಂಟೆಗಳ ಕಾಲ ಬೆಳೆಗಳಿಗೆ ನೀರು ಉಣಿಸುತ್ತಾರೆ. ಕೀಟ-ರೋಗ ನಿರ್ವಹಣೆಗೆ ಬಳಸುವ ರಸಾವರಿ (ಎರೆಜಲ, ಜೀವಾಮೃತ, ಹುಳಿಮಜ್ಜಿಗೆ, ಬೇವು/ಹೊಂಗೆ/ಬಳ್ಳೊಳ್ಳಿ ಕಷಾಯ) ವೆಂಚುರಿ ಮೂಲಕ ಹನಿ ನೀರಾವರಿಯೊಂದಿಗೆ ಬೆಳೆಗೆ ನೀಡುತ್ತಾರೆ. ಏಳು ವರ್ಷಗಳಿಂದ ಸಾವಯವ ಪದ್ದತಿಯಲ್ಲೇ ತರಕಾರಿ ಬೆಳೆಯುತ್ತಿದ್ದಾರೆ. 2011ರಲ್ಲಿ ತುಕ್ಕಾನಹಟ್ಟಿಯ ಕೃಷಿ ವಿಜ್ಞಾನ ಕೇಂದ್ರದಿಂದ ಬೆಳೆಗಳಿಗೆ ಸಾವಯವ ದೃಢೀಕರಣ ಪ್ರಮಾಣಪತ್ರವನ್ನೂ ಪಡೆದಿದ್ದಾರೆ.
ಕಟಾವು-ಇಳುವರಿ
ಮೊದಲ ಫಸಲನ್ನು ಕೊಯ್ಲು ಮಾಡಿ, ಲೋಳಸೂರು ಗ್ರಾಮದಲ್ಲಿರುವ ‘ಬಿಗ್ ಬಾಸ್ಕೆಟ್’ ಕಂಪನಿಗೆ ನೀಡಿದ್ದಾರೆ. ಒಂದು ಸೋರೆಕಾಯಿಗೆ ₹20ರಂತೆ ದರ ಸಿಕ್ಕಿದೆ. ಬೆಳೆ ಅವಧಿಯಲ್ಲಿ ಒಂದು ಕೆಜಿ ಹಾಗೂ ಮೇಲ್ಪಟ್ಟ ಒಟ್ಟು 5800(ಐದೂವರೆ ಟನ್/ಅರ್ಧ ಎಕರೆಗೆ) ಕಾಯಿಗಳು ಸಿಕ್ಕಿವೆ. ಹತ್ತು ಸಾವಿರ ಖರ್ಚು ಕಳೆದು ನಿವ್ವಳ ₹ 1 ಲಕ್ಷ ಆದಾಯ ಸಿಕ್ಕಿದೆ ಎನ್ನುತ್ತಾರೆ ಬಾಳಪ್ಪ.
ಮಾರಾಟದ ವಿಧಾನ
‘ಕಂಪನಿ ಖರೀದಿಸುವ ಸೋರೆಕಾಯಿಗಳನ್ನು ಗ್ರೇಡಿಂಗ್ ಮಾಡುತ್ತದೆ. ಉತ್ತಮ (ನೇರ, ಕೀಟ-ರೋಗ ಮುಕ್ತ, ನುಣುಪು) ಕಾಯಿಗಳಿಗೆ ಆದ್ಯತೆ ನೀಡುತ್ತದೆ. ಅರ್ಧ ಕೆಜಿ ಹಾಗೂ ಒಂದು ಕೆಜಿ ತೂಕದ ಕಾಯಿಗಳನ್ನು ಖರೀದಿ ಮಾಡುತ್ತದೆ. ಒಟ್ಟು ತೂಕ ನಮೂದಿಸಿ, ಎರಡು ದಿನಗಳಲ್ಲಿ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ’ ಎಂದು ಮಾರುಕಟ್ಟೆ ಪ್ರಕ್ರಿಯೆಯನ್ನು ಬಾಳಪ್ಪ ವಿವರಿಸುತ್ತಾರೆ.
ಗ್ರೇಡಿಂಗ್ ನಂತರ ಉಳಿದ ಹಾಗೂ ಹೆಚ್ಚು ತೂಕದ ಕಾಯಿಗಳನ್ನು ಸಮೀಪದ ಘಟಪ್ರಭಾ, ಗೋಕಾಕ ಪೇಟೆಯ ತರಕಾರಿ ಮಾರಾಟಗಾರರು ಖರೀದಿಸುತ್ತಾರೆ. ಪ್ರತಿ ಕಾಯಿಗೆ ರೂ 10ರಿಂದ 15ವರೆಗೆ ದರ ಸಿಗುತ್ತದೆ. ನಿಗದಿತ ದರ, ತಕ್ಷಣ ಹಣ ಕೊಡುವುದರಿಂದ ಕಂಪೆನಿಗೇ ಕಾಯಿ ಮಾರುವುದು ಉತ್ತಮ ಎನ್ನುವುದು ಬಾಳಪ್ಪ ಬಬಲಿ ಅವರ ಅಭಿಪ್ರಾಯ.
ಸೋರೆಕಾಯಿ ಜತೆಗೆ, ಉಳಿದ ಜಮೀನಿನಲ್ಲಿ ತಲಾ ಹತ್ತು ಗುಂಟೆಯಲ್ಲಿ ಟೊಮೆಟೊ, ಶೇಂಗಾ + ಸೂರ್ಯಕಾಂತಿ ಹಾಗೂ ಬೆಂಡೆ ಕೃಷಿ ಮಾಡುತ್ತಿದ್ದಾರೆ. ತರಕಾರಿ ಸಾಗುವಳಿಯೊಂದಿಗೆ, ಆದಾಯಕ್ಕೆ ಪೂರಕವಾಗಿ 13 ಆಡು, ಎರಡು ಎಮ್ಮೆ, ಎರಡು ಆಕಳು ಇವರಲ್ಲಿವೆ. ಇವರೊಂದಿಗೆ ಕುಟುಂಬ ಸದಸ್ಯರು ಕೃಷಿ ಚಟುವಟಿಕೆಗಳಲ್ಲಿ ನೆರವು ನೀಡುವುದರಿಂದ ಆಳುಗಳ ಅವಲಂಬನೆ ಕಡಿಮೆಯಾಗಿದೆ. ತರಕಾರಿ ಕೃಷಿ ಲಾಭದಾಯಕವಾಗಿದೆ.
ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಭಾಗವಹಿಸಿದ ಹಲವು ಕಾರ್ಯಾಗಾರ, ಅಧ್ಯಯನ ಪ್ರವಾಸಗಳು ಕೃಷಿ ಬದಲಾವಣೆ, ಆಲೋಚನೆಗೆ ಬಲ ತುಂಬಿವೆ ಎನ್ನುತ್ತಾರೆ ಬಾಳಪ್ಪ. ಕಳೆದ ವರ್ಷ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಸೋರೆ - ತರಕಾರಿ ಕೃಷಿಯ ಹೆಚ್ಚಿನ ಮಾಹಿತಿಗಾಗಿ ಬಾಳಪ್ಪ ಅವರನ್ನು 99164 00723 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಎರಡು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದ ಬಾಳಪ್ಪ, ಸಕಾಲಕ್ಕೆ ಕಬ್ಬು ಕಟಾವಾಗದೇ ತೀವ್ರ ಸಮಸ್ಯೆ ಎದುರಿಸಿದರು. ಇದರಿಂದ ಬೇಸತ್ತ ಅವರು ಕಬ್ಬು ಬಿಟ್ಟು ತರಕಾರಿ ಕೃಷಿ ಆರಂಭಿಸಿದರು. ಒಟ್ಟು ಜಮೀನಿನ ಕಾಲು, ಅರ್ಧ ಎಕರೆ ತಾಕನ್ನಾಗಿ ಮಾಡಿ, ತರಕಾರಿ ಬೆಳೆಯಲಾರಂಭಿಸಿದರು. ಈಗ ಮೂರು ತಿಂಗಳ ಹಿಂದೆ ಅರ್ಧ ಎಕರೆಗೆ ಹಾಕಿದ್ದ ಸೋರೆಕಾಯಿ ಉತ್ತಮ ಫಸಲು ಬಿಟ್ಟು, ಅವರಿಗೆ ಲಕ್ಷ ಆದಾಯ ತಂದುಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.