ADVERTISEMENT

ಮಂಡಲ, ಜಲಚರ, ಹೆಣ್ಣಿನ ಭಾವ

ಶಶಿಕುಮಾರ್ ಸಿ.
Published 15 ಜೂನ್ 2018, 13:47 IST
Last Updated 15 ಜೂನ್ 2018, 13:47 IST
ಶ್ವೇತಾ ಅವರ ಕಲಾಕೃತಿ
ಶ್ವೇತಾ ಅವರ ಕಲಾಕೃತಿ   

ಮೀನಿನ ಹೆಜ್ಜೆಗಳ ಹಿಂದೆ ಅಡಗಿ ಕುಳಿತ ಹೆಣ್ಣಿನ ನಿಗೂಢ ಮನಸು, ಆಹಾರ ಅರಸಿ ಮೆಟ್ಟಿಲು ಏರುವ ಜಿಂಕೆ, ಮಂಡಲ ಪರಿಕಲ್ಪನೆಯಲ್ಲಿ ರೂಪುಗೊಂಡ ತರಹೇವಾರಿ ಚಿತ್ತಾರಗಳು...

ಒಂದಕ್ಕೊಂದು ಭಿನ್ನತೆವುಳ್ಳ, ಸಂದೇಶ ಸಾರುವುದರಲ್ಲಿ ಒಂದನ್ನೊಂದು ಮೀರಿಸುವಂತಿದ್ದ ಸಮಕಾಲೀನ ಚಿತ್ರಕಲಾಪ್ರಕಾರದ ಈ ಕಲಾಕೃತಿಗಳು ವಸಂತನಗರದ ಆರ್ಟ್ ಹೌಸ್‌ನ ಗೋಡೆಗಳಿಗೆ ಬೆಚ್ಚಗೆ ಅಂಟಿಕೊಂಡಿವೆ. ಅಂದಹಾಗೇ ಇವುಗಳನ್ನು ವಾಟರ್‌ ಕಲರ್, ಲೇಖನಿ ಹಾಗೂ ಶಾಯಿ ಬಳಸಿ ಚಿತ್ರಿಸಿದವರು ಕಲಾವಿದೆ ಶ್ವೇತಾ ವೈ.

ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಸವಿನಕಟ್ಟೆ ಗ್ರಾಮದ ಶ್ವೇತಾ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ಬೆಂಗಳೂರಿನಲ್ಲಿ. ಸದ್ಯ ಪತಿ ಕುಮಾರ್‌ ಜೊತೆ ಮೈಸೂರಿನಲ್ಲಿ ವಾಸವಿದ್ದಾರೆ. ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಬಳಿಕ ಶ್ವೇತಾ, ತನ್ನ ತಂದೆ ಯತಿರಾಜಯ್ಯ ಅವರ ಮಾರ್ಗದರ್ಶನದಂತೆ ಆಯ್ದುಕೊಂಡ ಕ್ಷೇತ್ರ ಚಿತ್ರಕಲೆ.

ADVERTISEMENT

ಗಿರಿನಗರದಲ್ಲಿದ್ದ ಚೇತನ್ ಫೈನ್ ಆರ್ಟ್‌ನಲ್ಲಿ ‘ಬ್ಯಾಚುಲರ್ ಇನ್ ವಿಶ್ಯುವಲ್ ಆರ್ಟ್‌’ ಕೋರ್ಸ್‌ ಪೂರ್ಣಗೊಳಿಸಿರುವ ಅವರು ಚಿತ್ರಕಲಾ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬ ದೃಢ ನಿರ್ಧಾರದಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಇನ್ ವಿಶುವಲ್ ಆರ್ಟ್‌ ಕೋರ್ಸ್‌ ಅಭ್ಯಾಸ ಮಾಡಿದ್ದಾರೆ. ಸದ್ಯ ‘ಎ ಜರ್ನಿ ಆಫ್ ಮಂಡಲ’ ಪರಿಕಲ್ಪನೆಯಲ್ಲಿ ಅವರು ರಚಿಸಿದ 21 ಕಲಾಕೃತಿಗಳನ್ನು ಆರ್ಟ್‌ ಹೌಸ್‌ನಲ್ಲಿ ಪ್ರದರ್ಶನ ಮಾಡಲಾಗಿದೆ. ಶನಿವಾರವೂ ಪ್ರದರ್ಶನ ಇರಲಿದೆ.

‘ಚಿತ್ರಕಲೆಯ ನಂಟು ಬೆಳೆಯಲು ತಂದೆಯೇ ಸ್ಪೂರ್ತಿ. ಕಲೆಯ ಮಹತ್ವ ತಿಳಿಸಿಕೊಟ್ಟ ಅವರು, ಎಸ್ಎಸ್‌ಎಲ್‌ಸಿ ಬಳಿಕ ಬ್ಯಾಚುಲರ್ ಇನ್ ವಿಶ್ಯುವಲ್ ಆರ್ಟ್‌ಗೆ ನನ್ನನ್ನು ಸೇರಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ವಿಶುವಲ್ ಆರ್ಟ್ ವಿಭಾಗದ ಮುಖ್ಯಸ್ಥ ಜಯಕುಮಾರ್ ಚಿತ್ರಕಲೆಯ ಹೊರ ಹಾಗೂ ಒಳ ಜಗತ್ತಿನ ಬಗ್ಗೆ ಪರಿಚಯಿಸಿಕೊಟ್ಟರು. ಅವರಿಂದ ಮತ್ತಷ್ಟು ಪ್ರಭಾವಕ್ಕೊಳಗಾಗಿ ಈ ಕ್ಷೇತ್ರದಲ್ಲಿ ಸಕ್ರಿಯಳಾದೆ’ ಎನ್ನುತ್ತಾರೆ ಶ್ವೇತಾ.

‘ಸಮಕಾಲೀನ ಚಿತ್ರಕಲಾ ಪ್ರಕಾರ ನನಗೆ ಇಷ್ಟವಾದದ್ದು. ಮನದಾಳದ ಭಾವನೆಗಳಿಗೆ ಕಾಗದದ ಮೇಲೆ ವಾಟರ್‌ ಕಲರ್‌ನಿಂದ ರೂಪ ನೀಡಲು ನನ್ನ ಮನಸು ಸದಾ ಆತೊರೆಯುತ್ತದೆ. ಅದೇ ದಾಟಿಯಲ್ಲಿ ಸಾಕಷ್ಟು ಕಲಾಕೃತಿಗಳನ್ನು ರಚಿಸಿದ್ದೇನೆ. ಅದರ ಮುಂದುವರೆದ ಭಾಗವೇ ‘ಎ ಜರ್ನಿ ಆಫ್ ಮಂಡಲ’ ಎನ್ನುತ್ತಾರೆ ಅವರು.

ಮಂಡಲ ಒಬ್ಬೊಬ್ಬರಿಗೂ ಭಿನ್ನವಾಗಿ ಕಾಣುತ್ತದೆ. ನನ್ನ ದೃಷ್ಟಿಕೋನದಲ್ಲಿ ಅದು ಸುಂದರವಾದ ಆಕಾರ. ಅದರೊಳಗಿನ ಜೀವ ವೈವಿದ್ಯತೆ ಅದ್ಭುತವಾದದ್ದು. ಹೆಣ್ಣಿನ ಮನಸಿಗೆ ಇದು ಹೇಗೆ ಕಾಣುತ್ತದೆ ಎಂಬುದರ ಪ್ರತಿರೂಪವೇ ‘ಎ ಜರ್ನಿ ಆಫ್ ಮಂಡಲ’ ಎನ್ನುವ ಅವರು ಮಂಡಲದೊಳಗೆ ಜಲಚರಗಳ ಜೀವ ವೈವಿದ್ಯತೆಗೆ ಕುಂಚದ ಸ್ಪರ್ಶ ನೀಡಿ ತನ್ನೊಳಗಿನ ಭಾವನೆಗಳಿಗೆ ಆಕಾರ ನೀಡಿದ್ದಾರೆ.

ಮಂಡಲದ ಆಕಾರದೊಳಗೆ ವಿಷ್ಣು ಚಕ್ರ, ತಾವರೆ ಹೂವು, ಲಕ್ಷ್ಮೀ, ನೀರು, ನದಿ, ಮೀನು, ಆಕ್ಟೋಪಸ್, ಪ್ರಾಣಿ ಪಕ್ಷಿಗಳನ್ನು ಕೂಡಿಸಿ ಚಿತ್ರಿಸಿರುವುದು ಈ ಕಲಾವಿದೆಯ ವಿಶೇಷ. ಇವುಗಳನ್ನು ನೋಡುವಾಗ ಮನಸ್ಸು ಪ್ರಪುಲ್ಲವಾಗುತ್ತದೆ ಎಂಬುದು ಕಲಾವಿದೆಯ ಇಂಗಿತ.

‘ನೀರಿನಲ್ಲಿ ಮೀನಿನ ಹೆಜ್ಜೆ, ಹೆಣ್ಣಿನ ಮನಸು ಅರಿಯುವುದು ಎರಡೂ ಸಾಧ್ಯವಿಲ್ಲ. ಹೆಣ್ಣಿನ ಕಣ್ಣಿಗೆ ಪ್ರತಿಯೊಂದು ವಿಭಿನ್ನವಾಗಿ ಕಾಣುತ್ತದೆ. ಅದೇ ರೀತಿ ನನ್ನ ಕಣ್ಣಿಗೆ ಕಂಡ ಮಂಡಲ ಹಾಗೂ ಜಲಚರಗಳನ್ನು ಕಲೆಯೆಂಬ ಭಾಷೆಯನ್ನು ಕಾಗದದ ಮೇಲೆ ರೂಪಿಸಿದ್ದೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.