ADVERTISEMENT

ಯಕ್ಷಗಾನ: ಪ್ರಕೃತಿ ಸಂರಕ್ಷಣೆ ಸಂದೇಶ ಚಂದ್ರಮಂಡಲ ಚರಿತೆ

ಜನಪದ, ನಾಟಕ, ಯಕ್ಷಗಾನದಂಥ ಕಲೆಗಳೊಂದಿಗೆ ಪರಿಸರ ಜಾಗೃತಿ ಸಾರುವ ಯತ್ನಗಳು ಬಹಳ ಕಾಲದಿಂದ ನಡೆಯುತ್ತಿವೆ. ಅದೇ ಸಾಲಿಗೆ ಸೇರುತ್ತದೆ ‘ಚಂದ್ರಮಂಡಲ ಚರಿತೆ’ ಪ್ರಸಂಗ..

ಅವಿನಾಶ್ ಬಿ.
Published 19 ಏಪ್ರಿಲ್ 2025, 21:42 IST
Last Updated 19 ಏಪ್ರಿಲ್ 2025, 21:42 IST
<div class="paragraphs"><p>ಯಕ್ಷಗಾನ ಚಂದ್ರಮಂಡಲ ಚರಿತೆಯಲ್ಲಿ ರಾಜ ಚಂದ್ರಮಂಡಲ ಹಾಗೂ ಮಂತ್ರಿ ವೃದ್ಧಿ</p></div>

ಯಕ್ಷಗಾನ ಚಂದ್ರಮಂಡಲ ಚರಿತೆಯಲ್ಲಿ ರಾಜ ಚಂದ್ರಮಂಡಲ ಹಾಗೂ ಮಂತ್ರಿ ವೃದ್ಧಿ

   

ಸಂವಹನದ ಶಕ್ತಿಶಾಲಿ ಮಾಧ್ಯಮವಾಗಿರುವ ಯಕ್ಷಗಾನ ಕಲೆಯು ರಂಜನೆಯ ಜತೆಜತೆಗೇ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಕೂಡ ಹಿಂದೆ ಬಿದ್ದದ್ದಿಲ್ಲ. ಪರಿಸರ ರಕ್ಷಣೆ, ಸಾಕ್ಷರತೆ, ಅಸ್ಪೃಶತೆ ನಿವಾರಣೆ, ಕೋಮು ಸೌಹಾರ್ದತೆ, ಸಣ್ಣ ಉಳಿತಾಯ, ಆರೋಗ್ಯ ರಕ್ಷಣೆ ಮುಂತಾದ ಸಾಮಾಜಿಕ ಸಂದೇಶಗಳನ್ನು ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳ ಮೂಲಕ ಜನಮಾನಸಕ್ಕೆ ತಲುಪಿಸಲು ಸಾಕಷ್ಟು ಪ್ರಯತ್ನಗಳು ಹಿಂದಿನಿಂದಲೂ ಆಗುತ್ತಿದ್ದವು. ಈ ಸಾಲಿಗೆ ಹೊಚ್ಚ ಹೊಸ ಸೇರ್ಪಡೆಯೆಂದರೆ, ಪರಿಸರ ನಾಶ ತಡೆದು, ನೆಲ-ಜಲ-ಪ್ರಕೃತಿಯ ಸುದೀರ್ಘ ಬಾಳಿಕೆಗಾಗಿ ಜಾಗೃತಿ ಸಂದೇಶ ಸಾರುವ 'ಚಂದ್ರಮಂಡಲ ಚರಿತೆ'.

ಮಾನವನ ದುರಾಸೆಯ ಫಲವಾಗಿ ಭೂಮಂಡಲದ ಜೀವಜಲ, ಮಣ್ಣು ಜೊತೆಗೆ ಮನಸುಗಳು ಕೂಡ ವಿಷಯುಕ್ತವಾಗಿವೆ. ಹೊಸ ತಲೆಮಾರಿನವರು ಸುಖಲೋಲುಪತೆಯತ್ತಲೇ ಮನ ಮಾಡುತ್ತಿರುವುದು ಈಗಿನ ಧಾವಂತದ ಯುಗದ ಪರಿಣಾಮ.

ADVERTISEMENT

ಹ್ಯುಂಡೇ ಮೋಟಾರ್ ಇಂಡಿಯಾ ಪ್ರತಿಷ್ಠಾನದ ಆರ್ಟ್ ಫಾರ್ ಹೋಪ್ 2025ರ ರಾಷ್ಟ್ರ ಮಟ್ಟದ ಅನುದಾನಕ್ಕೆ ಆಯ್ಕೆಯಾಗಿರುವ ಮತ್ತು ಮೂಡಲಪಾಯದ ನಾಡಿನಲ್ಲಿ ಪಡುವಲಪಾಯ ಯಕ್ಷಗಾನದ ಸೊಗಡನ್ನು, ಕಂಪನ್ನು ಪಸರಿಸುತ್ತಾ, ದಶಮಾನೋತ್ಸವದ ಹೊಸ್ತಿಲಲ್ಲಿರುವ ತುಮಕೂರಿನ 'ಯಕ್ಷದೀವಿಗೆ'ಯ ಹೆಗ್ಗಳಿಕೆ 'ಚಂದ್ರಮಂಡಲ ಚರಿತೆ'. ಪ್ರಸಂಗಕರ್ತೃ ಹಿರಿಯ ಅರ್ಥಧಾರಿ, ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಳೆ. ತುಮಕೂರು ಕನ್ನಡ ಭವನದಲ್ಲಿ ಈ ಪ್ರಸಂಗವು ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತಲ್ಲದೆ ಸುಳ್ಯ, ಪುತ್ತೂರುಗಳಲ್ಲಿಯೂ ತನ್ನ ಛಾಪು ಮೂಡಿಸಿದೆ. ಸಂದೇಶವುಳ್ಳ ಈ ಯಕ್ಷಗಾನವನ್ನು ಪ್ರದರ್ಶಿಸಿದವರು ಬಯಲುಸೀಮೆ ತುಮಕೂರಿನ ಮಕ್ಕಳು ಎಂಬುದು ಮತ್ತೊಂದು ವಿಶೇಷ. ಯಕ್ಷದೀವಿಗೆಯ ಮೂಲಕ ಹೊಸದಾಗಿ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಯಕ್ಷಗಾನದ ಚೌಕಟ್ಟಿನಲ್ಲಿ

ಪಾತ್ರಗಳು, ಸನ್ನಿವೇಶಗಳು ಮತ್ತು ಅವುಗಳ ಆಹಾರ್ಯಕ್ಕೂ ವಿಶೇಷ ಗಮನ ನೀಡಿ ಯಕ್ಷಗಾನೀಯ ಚೌಕಟ್ಟಿನಲ್ಲಿ ಈ ಪ್ರಸಂಗವನ್ನು ಪ್ರದರ್ಶಿಸಲಾಗಿದೆ. ರಾಜ-ಮಂತ್ರಿ, ಘೋರ-ಗರಳ ಅಸುರರು, ಜಲದೇವಿ, ಭೂದೇವಿ, ಬಕಪಕ್ಷಿ, ಊರ ಜನರು, ಮುನಿಯ ಪಾತ್ರಗಳಿವೆ. ಚಂದ್ರಮಂಡಲ ಎಂಬ ಪ್ರಜಾ ಪರಿಪಾಲಕ ರಾಜನಿದ್ದರೆ, ವಿವೇಚನೆಯಿಲ್ಲದ ಮಂತ್ರಿಗಳ ಪ್ರತಿನಿಧಿಯಾಗಿ ವೃದ್ಧಿ ಎಂಬ ಸಚಿವ, ರಾಜ್ಯಕ್ಕೆ ಹೊಸ ಕೈಗಾರಿಕೆಗಳು ಬೇಕು, ಯಂತ್ರೋಪಕರಣಗಳು, ಕಡಿಮೆ ಶ್ರಮದಿಂದ ಹೆಚ್ಚು ಸಂಪಾದನೆ ಮಾಡುವಂತೆ ರಾಸಾಯನಿಕಗಳಿಂದಲೇ ಕೃಷಿ ಉತ್ಪಾದನೆ ಹೆಚ್ಚಿಸಬೇಕು, ಲಾಭ ಮಾಡಬೇಕು ಎಂದೆಲ್ಲ ವಾದಿಸುತ್ತಾನೆ. ಆಧುನಿಕ ಕಾಲದ ಹುಡುಗರ ಮೋಜು-ಮಸ್ತಿಯ ಮನೋಭಾವದ ಪ್ರತಿನಿಧಿಗಳಾಗಿ ಅಮರೇಶ ಮತ್ತವನ ಗೆಳೆಯ-ಗೆಳತಿಯರ ವಿಹಾರ ಗಮನ ಸೆಳೆಯುತ್ತದೆ. ಎಲ್ಲೂ ಸಪ್ಪೆಯಾಗದಂತೆ, ವೀರ, ಶೃಂಗಾರ, ಹಾಸ್ಯ, ಕರುಣ, ರೌದ್ರ, ಅದ್ಭುತ, ಶಾಂತ ರಸಗಳ ಸಮಪಾಕವಿಲ್ಲಿದೆ.

ಅಭಿವೃದ್ಧಿಯ ನಾಗಾಲೋಟದಲ್ಲಿ ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆ ನೆಲ ಮತ್ತು ಜಲ. ನೆಲಕ್ಕೂ ವಿಷ ಉಣಿಸುತ್ತಿದ್ದೇವೆ, ಜಲವನ್ನೂ ಕಲುಷಿತಗೊಳಿಸುತ್ತಿದ್ದೇವೆ. ಇದರ ನಡುವೆ ಸಾಂಕ್ರಾಮಿಕ ರೋಗಗಳು ಮಾನವ ನಿರ್ಮಿತವಾಗಿ ಹುಟ್ಟಿಕೊಂಡು, ಮಾನವನಿಗೇ ಸವಾಲಾಗಿ, ಭಸ್ಮಾಸುರನಂತೆ ಬೆಳೆಯತೊಡಗಿವೆ. ಇದರ ಬಗೆಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸಬೇಕಾದ ಅಗತ್ಯವಿರುವುದರಿಂದ ಯಕ್ಷಗಾನ ಎಂಬ ರಂಗ ಮಾಧ್ಯಮದ ಮೂಲಕ, ಮನರಂಜನೆಯನ್ನೂ, ಬೋಧನೆಯನ್ನೂ ನೀಡುವಂತೆ ಕಥೆ ಹೆಣೆಯಲಾಗಿದೆ ಎಂದಿದ್ದಾರೆ ಪ್ರಸಂಗಕರ್ತೃ ಗಣರಾಜ ಕುಂಬ್ಳೆ.

ತುಮಕೂರಿನಲ್ಲಿ ಯಕ್ಷದೀವಿಗೆ ಸಂಸ್ಥೆಯ ಮೂಲಕ ಸ್ಥಳೀಯರನ್ನು ಸಜ್ಜುಗೊಳಿಸಿ ರಂಗಕ್ಕೇರಿಸಿದವರು ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿಬಂತಿ ಪದ್ಮನಾಭ ಹಾಗೂ ಆರತಿ ಪಟ್ರಮೆ ದಂಪತಿ. ದಶಮಾನೋತ್ಸವ ವರ್ಷದಲ್ಲಿ ಮಕ್ಕಳಲ್ಲಿ ಕನ್ನಡ ಭಾಷೆ ಬೆಳೆಸುವ ಮತ್ತು ಸಂಸ್ಕಾರ ಮೂಡಿಸುವ ಯಕ್ಷಗಾನವನ್ನು ಇನ್ನಷ್ಟು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದಿದ್ದಾರೆ ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ.

ಇಂಥ ಸಂದೇಶವೊಂದು ವಿದ್ಯಾರ್ಥಿಗಳ ಮನದಲ್ಲಿ ಅಚ್ಚೊತ್ತಿದರೆ, ಯಕ್ಷಗಾನದ ವಿಸ್ತರಣೆಯೊಂದಿಗೆ ಪರಿಸರ ನಾಶದ ಬಗೆಗೆ ಕಾಳಜಿ ತೋರುವುದಕ್ಕೂ ಇದು ಪಠ್ಯೇತರ ಕೊಡುಗೆಯಾದೀತು.
***

ಯಕ್ಷಗಾನ ಚಂದ್ರಮಂಡಲ ಚರಿತೆಯಲ್ಲಿ ರಾಜ ಚಂದ್ರಮಂಡಲ ಹಾಗೂ ಮಂತ್ರಿ ವೃದ್ಧಿ
ಯಕ್ಷಗಾನ ಚಂದ್ರಮಂಡಲ ಚರಿತೆಯಲ್ಲಿ ರಾಜ ಚಂದ್ರಮಂಡಲ ಹಾಗೂ ಮಂತ್ರಿ ವೃದ್ಧಿ

ಹಿನ್ನೋಟ...

1950ರ ದಶಕದಲ್ಲಿ ಜಾಪಾನಿ ಕೃಷಿ ವಿಜಯ (ಮಣಿಲ ಶಿವಶಂಕರ ಪುಣಚಾ) ಅಲ್ಲದೆ ನಂತರವೂ  70 ರಿಂದ 90ರ ದಶಕಗಳಲ್ಲಿ ಸಾಕಷ್ಟು ಸಾಮಾಜಿಕ ಜಾಗೃತಿ ಮೂಡಿಸುವ ಪ್ರಸಂಗಗಳು ರಚನೆಯಾದವು. ಕುಟುಂಬ ಯೋಜನೆ ಅಥವಾ ಮಿತ ಸಂತಾನ ಮಹಿಮೆ (ಇಡಗುಂಜಿ ಶಿವರಾಮ ಭಂಡಾರಿ) ಮಿತ ಸಂತಾನ (ಗುಂಡೂ ಸೀತಾರಾಮ ರಾವ್) ಅಕ್ಷರ ವಿಜಯ ಮತ್ತು ನಿಸರ್ಗ ಸಂಧಾನ (ಹೊಸ್ತೋಟ ಮಂಜುನಾಥ ಭಾಗವತ) ಕುಟುಂಬ ಯೋಜನೆ (ಅಂಬೆಮೂಲೆ ಗೋವಿಂದ ಭಟ್) ಜನ ಕಲ್ಯಾಣ (ಸೂರ್ಯನಾರಾಯಣ ಭಟ್ ಬೆಳಾಲು) ಸಂತತಿ ನಿರೋಧ ಸಂಗ್ರಾಮ ಅಥವಾ ಕುಟುಂಬ ಕಲ್ಯಾಣ (ಕಡಬ ಅನಂತ ರಾವ್) ಇಳೆಯಣ್ಣನ ಕಥೆ (ಗೋಪಾಲಕೃಷ್ಣ ನಾಯರಿ) ಘೋರ ಮಾರಕ ರುಧಿರ ಮೋಹಿನಿ ಮದಿರಾಸುರ ಮರ್ದನ (ಅಮೃತ ಸೋಮೇಶ್ವರ) ಶೀಲ ಸಂಕ್ರಾಂತಿ (ದಿವಾಕರ ಹೆಗಡೆ) ಏಡ್ಸ್ ಮಹಾತ್ಮೆ (ಬಿ.ಎಂ.ಶೆಣೈ) ಏಡ್ಸಾಸುರ (ಮೂಕಾಂಬಿಕಾ ವಾರಂಬಳ್ಳಿ) ಸಂಜೀವಿನಿ (ಕದ್ರಿ ನವನೀತ ಶೆಟ್ಟಿ) ಗುನ್ಯಾಸುರ ವಧೆ (ಭಾಸ್ಕರ ರೈ ಕುಕ್ಕುವಳ್ಳಿ) ಮದ್ಯೋಚ್ಚಾಟನೆ (ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್) ಪೋಲಿಯಾಸುರ ಮರ್ದನ (ನಾರಾಯಣ ಪಿ. ಶೆಟ್ಟಿ) ಮುಂತಾದ ಪ್ರಸಂಗಗಳು ಹಲವೆಡೆ ರಂಗಸ್ಥಳದಲ್ಲಿ ಮೆರೆದಿವೆ. ಇತ್ತೀಚೆಗೆ ಕೋವಿಡ್ ಕಾಡಿದ ಕಾಲದಲ್ಲಿ 'ಕೊರೊನಾಸುರ ಕಾಳಗ' (ಎಂ.ಎ.ಹೆಗಡೆ ಮತ್ತು ಡಿ.ಎಸ್.ಶ್ರೀಧರ್) ಕೂಡ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.