1967ನೇ ಇಸವಿಯ ಫೆಬ್ರುವರಿ ತಿಂಗಳ ಒಂದು ದಿನ. ದೂರದರ್ಶನದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ‘ರಾಮನ ತಾಯಿ ಯಾರು?’ ಎನ್ನುವುದೊಂದು ಪ್ರಶ್ನೆ. ಸ್ಪರ್ಧಿಗಳು ನಿರುತ್ತರ. ಅದೇ ಗ್ರೀಕ್ ಪುರಾಣದ ಬಗ್ಗೆ ಪ್ರಶ್ನೆಗಳು ಬಂದಾಗ ಥಟ್ ಎಂದು ಉತ್ತರ.
‘ಈ ಹುಡುಗರಿಗೆ ಭಾರತೀಯ ಪುರಾಣ ಪಾತ್ರಗಳ ಪರಿಚಯವೇ ಇಲ್ಲವೆ?’- ಕಾರ್ಯಕ್ರಮ ನೋಡುತ್ತಿದ್ದ ಮೂವತ್ತೆಂಟರ ಉತ್ಸಾಹಿಯೊಬ್ಬರಿಗೆ ಪಿಚ್ಚೆನ್ನಿಸಿತು. ಅವರು ನಿಟ್ಟುಸಿರಿಟ್ಟು ಸುಮ್ಮನಾಗಲಿಲ್ಲ. ನಮ್ಮ ಮಕ್ಕಳಿಗೆ ಪುರಾಣ ಕಥೆಗಳನ್ನು ಪರಿಚಯಿಸಲು ಏನಾದರೂ ಮಾಡಬೇಕು ಎಂದು ಯೋಚಿಸತೊಡಗಿದರು. ಆಗ ಅವರಿಗೆ ಹೊಳೆದದ್ದು ‘ಅಮರ ಚಿತ್ರ ಕಥಾ’ ಮಾಲಿಕೆ. ಆ ವ್ಯಕ್ತಿಯ ಹೆಸರು ಅನಂತ ಪೈ.
ಅನಂತ ಪೈ (17.09.1929 - 24.02.2011) ಕಾರ್ಕಳದವರು. ಎರಡು ವರ್ಷದ ಮಗುವಾಗಿದ್ದಲೇ ಅಪ್ಪಅಮ್ಮನನ್ನು ಕಳಕೊಂಡ ಅವರು ಅಜ್ಜನ ಕಣ್ಣಳತೆಯಲ್ಲಿ ಬೆಳೆಯತೊಡಗಿದರು. ಹನ್ನೆರಡನೇ ವಯಸ್ಸಿನಲ್ಲಿ ಅಜ್ಜನೂ ಕಣ್ಮುಚ್ಚಿದಾಗ ಸೋದರ ಸಂಬಂಧಿಯೊಂದಿಗೆ ಮುಂಬಯಿಗೆ ಹೋದರು. ಆ ಮಹಾನಗರಿಯೇ ಅವರ ಕರ್ಮಭೂಮಿಯಾಯಿತು.
ಮುಂಬಯಿಗೆ ಹೋದ ಬಾಲಕನಿಗೆ ಆರಂಭದಲ್ಲಿ ಎಲ್ಲವೂ ಅಯೋಮಯವೆನ್ನಿಸಿತ್ತು. ಆವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದ ವಿದ್ಯಾರ್ಥಿಗೆ ಮಹಾನಗರದಲ್ಲಿ ಒಳ್ಳೆಯ ಶಾಲೆಯಲ್ಲಿ ಪ್ರವೇಶ ದೊರಕುವುದು ಕನಸೇ ಆಗಿತ್ತು. ಕೊನೆಗೆ ಮಾಹಿಂನ ‘ಓರಿಯಂಟ್ ಶಾಲೆ’ಯಲ್ಲಿ ಪ್ರವೇಶ ದೊರೆಯಿತು. ಅಲ್ಲಿನ ಶಿಕ್ಷಕರು ಅನಂತರ ಮೇಲೆ ಅಪಾರ ಪ್ರಭಾವ ಬೀರಿದ್ದರು. ಮುಂಬಯಿ ವಿಶ್ವವಿದ್ಯಾಲಯದಿಂದ ಎರಡು ಪದವಿಗಳನ್ನೂ ಪಡೆದರು. ಎಂಟು ಭಾಷೆಗಳನ್ನು ಮಾತನಾಡಲಿಕ್ಕೆ ಕಲಿತರು.
ಬರವಣಿಗೆ ಮತ್ತು ಪ್ರಕಾಶನದಲ್ಲಿ ಆಸಕ್ತಿ ಹೊಂದಿದ್ದ ಅನಂತ ಪೈ ಮೊದಲು ನೌಕರಿ ಆರಂಭಿಸಿದ್ದು ‘ಮಾನವ್’ ಎನ್ನುವ ನಿಯತಕಾಲಿಕೆ ಆರಂಭಿಸುವ ಮೂಲಕ (1954). ಮಾನಸಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಆ ನಿಯತಕಾಲಿಕೆ ಹೆಚ್ಚುಕಾಲ ಬಾಳಲಿಲ್ಲ. 1961ರಲ್ಲಿ ಪ್ರಕಾಶನ ಸಂಸ್ಥೆಯೊಂದರ ಪುಸ್ತಕ ವಿಭಾಗದಲ್ಲಿ ಸೇರ್ಪಡೆಯಾದ ಪೈ, ‘ಇಂದ್ರಜಾಲ ಕಾಮಿಕ್ಸ್’ ಪ್ರಕಟಣೆಯಲ್ಲಿ ತೊಡಗಿಕೊಂಡರು. ಅಮೆರಿಕದಲ್ಲಿ ಜನಪ್ರಿಯವಾಗಿದ್ದ ಫ್ಯಾಂಟಮ್, ಮಾಂಡ್ರೇಕ್‌ರನ್ನು ಭಾರತದಲ್ಲೂ ಪರಿಚಯಿಸಿದರು. ಹೀಗೆ ಕಾಮಿಕ್ಸ್‌ಗಳ ಸಂಗದಲ್ಲಿ ಮುಳುಗಿದ್ದ ಪೈ ಅವರ ಬದುಕಿನ ದಿಕ್ಕು ಬದಲಿಸಿದ್ದು ದೂರದರ್ಶನದಲ್ಲಿ ಪ್ರಕಟವಾದ ಒಂದು ಕ್ವಿಜ್ ಕಾರ್ಯಕ್ರಮ.
ಮಕ್ಕಳಿಗೆ ಪುರಾಣ ಕಥನಗಳನ್ನು ಮುಟ್ಟಿಸುವ ಐಡಿಯಾ ಹೊಳೆದದ್ದೇ, ಪೈ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ‘ಇಂಡಿಯಾ ಬುಕ್‌ಹೌಸ್’ ಸೇರಿಕೊಂಡರು. ಅಲ್ಲಿ, ಅವರಿಗೆ ‘ಇಂಡಿಯಾ ಬುಕ್‌ಹೌಸ್’ನ ಮುಖ್ಯಸ್ಥರಾದ ಜಿ.ಎಲ್.ಮೀರಾಚಂದಾನಿ ಒತ್ತಾಸೆಯಾಗಿ ನಿಂತರು. ಇದರ ಫಲವಾಗಿ ರೂಪುಗೊಂಡಿದ್ದು ‘ಅಮರ ಚಿತ್ರ ಕಥಾ’ ಮಾಲಿಕೆ. 1976ರಲ್ಲಿ ‘ಕೃಷ್ಣ’ ಪುಸ್ತಕದ ಮೂಲಕ ಆರಂಭವಾದ ಮಾಲಿಕೆ ಭಾರತೀಯ ಮಕ್ಕಳ ಮನಸ್ಸು ಗೆಲ್ಲಲು ಹೆಚ್ಚು ದಿನ ತಗುಲಲಿಲ್ಲ.
ರಾಮಾಯಣ, ಮಹಾಭಾರತದ ಅನೇಕ ಕಥನಗಳನ್ನು ಪೈ ಅವರು ಚಿತ್ರಕಥೆಯ ಮೂಲಕ ಮಕ್ಕಳಿಗೆ ಮುಟ್ಟಿಸಿದರು. ಈ ಮಾಲಿಕೆ ಎಷ್ಟರಮಟ್ಟಿಗೆ ಜನಪ್ರಿಯವಾಯಿತೆಂದರೆ, ಅನಂತ ಪೈ ಮಕ್ಕಳ ಪಾಲಿಗೆ ‘ಅಂಕಲ್ ಪೈ’ ಆಗಿಬಿಟ್ಟರು.
1969ರಲ್ಲಿ ಅನಂತ ಪೈ ‘ರಂಗ್ ರೇಖಾ ಫೀಚರ್ಸ್’ ಸ್ಥಾಪಿಸಿದರು. ಇದು ಭಾರತದ ಮೊತ್ತಮೊದಲ ಕಾಮಿಕ್ ಮತ್ತು ಕಾರ್ಟೂನ್ ಸಿಂಡಿಕೇಟ್. ‘ಟಿಂಕಲ್’ ಪೈ ಅವರ ಮಕ್ಕಳ ಪ್ರೀತಿಗೆ ಇನ್ನೊಂದು ಉದಾಹರಣೆ. 1981ರಲ್ಲಿ ಆರಂಭಗೊಂಡ ಈ ಮಕ್ಕಳ ಪತ್ರಿಕೆ ಚಿಣ್ಣರ ಕನಸುಗಳಿಗೆ ಕಚಗುಳಿ ಇಡುವಂತಿತ್ತು.
‘ಅಮರ ಚಿತ್ರ ಕಥಾ’ ಮಾಲಿಕೆಯ ಪುಸ್ತಕಗಳು ಪ್ರಸ್ತುತ ವರ್ಷಕ್ಕೆ 30 ಲಕ್ಷ ಪುಸ್ತಕಗಳು ಖರ್ಚಾಗುತ್ತವೆ. ಇಂಗ್ಲಿಷ್ ಹಾಗೂ ಸುಮಾರು ಇಪ್ಪತ್ತು ಭಾರತೀಯ ಭಾಷೆಗಳಲ್ಲಿ ಈ ಕಥನಗಳು ಪ್ರಕಟಗೊಳ್ಳುತ್ತಿವೆ. ಈವರೆಗೆ ‘ಅಮರ ಚಿತ್ರ ಕಥಾ’ ಮಾಲಿಕೆಯ ಸುಮಾರು ನಾಲ್ಕುನೂರ ನಲವತ್ತಕ್ಕೂ ಹೆಚ್ಚು ಶೀರ್ಷಿಕೆಗಳ ಕೋಟ್ಯಂತರ ಪುಸ್ತಕಗಳು ಖರ್ಚಾಗಿವೆ.
ದೇವದೇವತೆಯರ ಕಥೆಗಳನ್ನು ಮಕ್ಕಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಪೈ ಅವರು ತಮ್ಮದೇ ಆದ ಸಿದ್ಧಾಂತಗಳನ್ನು ರೂಪಿಸಿಕೊಂಡಿದ್ದರು. ದೇವರುಗಳನ್ನು ಆದಷ್ಟು ಮಾನವೀಯಗೊಳಿಸುವ ಮೂಲಕ ಅವರನ್ನು ಮಕ್ಕಳಿಗೆ ಹತ್ತಿರವಾಗಿಸುವುದು ಅವರ ಹಂಬಲವಾಗಿತ್ತು. ‘ರಾಮ ಆದರ್ಶ ಪುರುಷನಾದರೆ, ಕೃಷ್ಣ ಮನುಷ್ಯರಿಗೆ ಹೆಚ್ಚು ಹತ್ತಿರವಾದವನು’ ಎನ್ನುವುದು ಅವರ ಅನಿಸಿಕೆಯಾಗಿತ್ತು. ಆ ಕಾರಣದಿಂದಲೇ ತಮ್ಮ ಹೃದಯಕ್ಕೆ ಹತ್ತಿರವಾದ ಕೃಷ್ಣನ ಕುರಿತೇ ಮೊದಲ ಕಾಮಿಕ್ ಪುಸ್ತಕ ರೂಪಿಸಿದರು (‘ಕೃಷ್ಣ’ ಕಾಮಿಕ್ಸ್ ಪುಸ್ತಕ ಈವರೆಗೆ ಎಂಬತ್ತು ಮುದ್ರಣಗಳನ್ನು ಕಂಡಿದೆ).
ಮಕ್ಕಳ ಪಠ್ಯದಲ್ಲಿ ಚಿತ್ರಕಥೆಯ ಪುಸ್ತಕಗಳೂ ಒಂದು ಭಾಗವಾಗಿರಬೇಕು. ಇದರಿಂದ ಕಲಿಕೆ ಪರಿಣಾಮಕಾರಿ ಆಗುವುದಲ್ಲದೆ, ಮಕ್ಕಳ ಮನೋವಿಕಾಸವೂ ಸಾಧ್ಯವಾಗುತ್ತದೆ ಎನ್ನುವುದು ‘ಅಂಕಲ್ ಪೈ’ ಅವರ ನಂಬಿಕೆಯಾಗಿತ್ತು. ಕಾಲಲ್ಲಿ ಕಸುವಿದ್ದಾಗ ಎರಡು ಕಚೇರಿಗಳಲ್ಲಿ ದಿನಕ್ಕೆ ಕನಿಷ್ಠ ಹನ್ನೆರಡು ತಾಸುಗಳಷ್ಟು ದುಡಿಯುತ್ತಿದ್ದ ಪೈ ಅವರಿಗೆ ಮಕ್ಕಳನ್ನು ಕಂಡರೆ ಅಪರಿಮಿತ ಅಕ್ಕರೆ. ವಿಪರ್ಯಾಸವೆಂದರೆ ಅವರಿಗೆ ಮಕ್ಕಳೇ ಇರಲಿಲ್ಲ.
ಇತ್ತೀಚೆಗೆ ಮೆಟ್ಟಿಲು ಜಾರಿ ಪೆಟ್ಟು ಮಾಡಿಕೊಂಡಿದ್ದ ಅನಂತ ಪೈ ಘಾಸಿಗೊಂಡಿದ್ದರು. ಅವರ ಅಭಿಮಾನಿಗಳು ದೆಹಲಿಯಲ್ಲಿ ಪೈ ಅಂಕಲ್‌ಗೆ ಸನ್ಮಾನ ಸಮಾರಂಭವೊಂದನ್ನು ಏರ್ಪಡಿಸಿದ್ದರು. ಆ ಸಮಾರಂಭಕ್ಕೆ ಹೋಗುವ ಆಸೆ ಪೈ ಅವರಿಗಿತ್ತು. ಆದರೆ, ಅದಕ್ಕೆ ಮೊದಲೇ, ಫೆ.21ರಂದು ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.