ದೇಶ ಭಾಷೆಗಳ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲಾ ಆಯಾ ಭಾಷೆಗಳಲ್ಲಿಯೇ ಜ್ಞಾನ ಸೃಷ್ಟಿಯ ಅಗತ್ಯದ ಕುರಿತ ಅನೇಕ ಮಾತುಗಳನ್ನು ನಾವೆಲ್ಲಾ ಮತ್ತೆ ಮತ್ತೆ ಕೇಳಿದ್ದೇವೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಈ ಕ್ಷೇತ್ರದಲ್ಲಿ ನಡೆದಷ್ಟು ಕೆಲಸಗಳು ಮತ್ತೆ ನಡೆಯಲಿಲ್ಲ.
ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಜ್ಞಾನ ಸೃಷ್ಟಿ ಎಂಬುದು ಕೇವಲ ಸಾಹಿತ್ಯಕ್ಕೆ ಸೀಮಿತವಾದ ಕೆಲಸವಾಗಿಬಿಟ್ಟಿತು. ಅದನ್ನು ಮೀರಿದ್ದೇನಾದರೂ ಸ್ವಲ್ಪ ನಡೆದಿದ್ದರೆ ಅದು ಜಾನಪದ ಸಂಶೋಧನಾ ಕ್ಷೇತ್ರದಲ್ಲಿ. ಸಾಹಿತ್ಯ ಮತ್ತು ಸಂಸ್ಕೃತಿಗಳಷ್ಟೇ ಸುಲಭವಾಗಿ ಕನ್ನಡದಲ್ಲಿ ಅಭಿವ್ಯಕ್ತಿಸಲು, ಚರ್ಚಿಸಲು ಸಾಧ್ಯವಿರುವ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ `ಜ್ಞಾನ ಸೃಷ್ಟಿ~ ಎಂಬ ಪರಿಕಲ್ಪನೆ ಇನ್ನೂ ವಾಸ್ತವವಾಗಿಲ್ಲ.
ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಇಂಗ್ಲಿಷ್ ಭಾಷೆಯ ಜಾಗತೀಕರಣ ಪ್ರಕ್ರಿಯೆಗೆ ಚಾಲನೆ ದೊರೆತ ಮೇಲೆ ಇಂಗ್ಲಿಷ್ ಎಂಬುದು ಅಕಡೆಮಿಕ್ ವಲಯದ ಅಧಿಕೃತ `ಸಾಮಾನ್ಯ ಭಾಷೆ~ಯಾಗಿ ಪರಿವರ್ತನೆಗೊಂಡಿತು. ಈ ಪಲ್ಲಟವನ್ನು ಎದುರಿಸುವುದಕ್ಕೆ ಪ್ರಪಂಚಾದ್ಯಂತ ಇಂಗ್ಲಿಷೇತರ ಭಾಷೆಗಳು ಹಲವು ಇನ್ನೂ ತಿಣುಕಾಡುತ್ತಲೇ ಇವೆ.
ಈ ಹಿನ್ನೆಲೆಯಲ್ಲಿ `ಸಂಶೋಧನೆ~ ಎಂಬ ಪರಿಕಲ್ಪನೆಯನ್ನು ಕನ್ನಡದಲ್ಲಿಯೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂಥ ಕೃತಿಯೊಂದನ್ನು ರಚಿಸಿರುವ ಎಂ.ಚಂದ್ರ ಪೂಜಾರಿಯವರ ಪ್ರಯತ್ನವನ್ನು ಒಂದು ಬಗೆಯಲ್ಲಿ `ಇಂಗ್ಲಿಷ್‌ನ ಜಾಗತೀಕರಣ~ಕ್ಕೆ ಬಂದ ಪ್ರತಿಕ್ರಿಯೆಯಾಗಿ ನೋಡಬಹುದು.
ಕನ್ನಡ ವಿಶ್ವವಿದ್ಯಾಲಯವೂ ಸೇರಿದಂತೆ ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ `ಸಂಶೋಧನೆ~ಗಳನ್ನು ದೃಷ್ಟಿಯಲ್ಲಿಟ್ಟುಕೊಂಡೂ ಈ ಕೃತಿಯ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅಕಡೆಮಿಕ್ ಸಂಶೋಧನೆ ಎಂಬುದು ಅರಿವನ್ನು ಹುಡುಕುವ, ಇರುವ ಅರಿವನ್ನು ಸುಧಾರಿಸುವ ಅಥವಾ ಹೊಸ ಸಂದರ್ಭದಲ್ಲಿ ಅರಿವನ್ನು ಗ್ರಹಿಸುವ ವಿಧಾನವಷ್ಟೇ ಆಗಿ ಉಳಿದಿಲ್ಲ.
ಅದೊಂದು ಪದವಿಯನ್ನು ಪಡೆಯುವ ಮಾರ್ಗವೂ ಆಗಿದೆ. ಈ ಪದವಿ ನಿರ್ದಿಷ್ಟ ಹುದ್ದೆಗಳಿಗೆ ಬೇಕಾದ ಅರ್ಹತೆಯನ್ನು ಸಂಪಾದಿಸುವ, ಬಡ್ತಿಗೆ ಬೇಕಾದ ಅರ್ಹತೆಯನ್ನುಗಳಿಸುವ ಮಾರ್ಗವೂ ಆಗಿದೆ. ಅಂದರೆ ಸಂಶೋಧನೆಯನ್ನು ಕೈಗೊಳ್ಳುವವನ ಮುಂದೆ ಇರುವ ಗುರಿ ಕೇವಲ ಅರಿವಿನ ವಿಸ್ತಾರವಷ್ಟೇ ಆಗಿರುವುದಿಲ್ಲ.
ಇದೊಂದು ಕೊರತೆಯೋ ಅಥವಾ ಮಿತಿಯೋ ಆಗಬೇಕಾಗಿರಲಿಲ್ಲ. ಆದರೆ ಭಾರತೀಯ ಸಂದರ್ಭದಲ್ಲಿ ಆಗಬಾರದ್ದು ಆಗುವುದಕ್ಕೆ ಹೆಚ್ಚಿನ ಕಾರಣಗಳೇನೂ ಬೇಕಾಗುವುದಿಲ್ಲ ಎಂಬುದಕ್ಕೆ ಸಂಶೋಧನಾ ಕ್ಷೇತ್ರವೂ ಒಂದು ಉದಾಹರಣೆ.
ಒಂದು ನಿರ್ದಿಷ್ಟ ವಿಷಯದ ಕುರಿತಂತೆ ಒಂದಷ್ಟು ಮಾಹಿತಿ ಸಂಗ್ರಹಿಸಿ ಒಂದು ಪುಸ್ತಕ ಬರೆಯುವುದಕ್ಕೂ ಎಂ.ಫಿಲ್, ಪಿಎಚ್.ಡಿ ಅಥವಾ ಡಿ.ಲಿಟ್‌ನ ಭಾಗವಾಗಿ ಸಂಶೋಧನಾ ಪ್ರಬಂಧವೊಂದನ್ನು ರಚಿಸುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಈ ಪರಿಕಲ್ಪನಾತ್ಮಕ ವ್ಯತ್ಯಾಸವನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ ಕನ್ನಡದಲ್ಲೇ ವಿವರಿಸಲು ಚಂದ್ರಪೂಜಾರಿ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.
ಅವರ ಕೆಲಸ ಕೇವಲ ಪರಿಕಲ್ಪನೆಯನ್ನು ವಿವರಿಸುವುದಕ್ಕಷ್ಟೇ ಸೀಮಿತವಾಗಿಲ್ಲ ಎಂಬುದು ಇಲ್ಲಿ ಬಹಳ ಮುಖ್ಯ. ಸಂಶೋಧನೆಯೆಂದರೆ ಕೇವಲ ಒಂದು ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟಿನೊಳಗೆ ನಿರ್ದಿಷ್ಟ ವಿಧಾನದ ಮೂಲಕ ನಿರ್ದಿಷ್ಟ ಸಮಸ್ಯೆಯೊಂದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಷ್ಟೇ ಆಗಿ ಉಳಿಯುವುದಿಲ್ಲ.
ಏಕೆಂದರೆ ಇಲ್ಲಿ ಆರಿಸಿಕೊಳ್ಳುವ ಸಮಸ್ಯೆ, ಅದನ್ನು ಗ್ರಹಿಸಲು ಬಳಸುವ ಸೈದ್ಧಾಂತಿಕ ಚೌಕಟ್ಟು ಮತ್ತು ವಿಶ್ಲೇಷಣೆಗೆ ಬಳಕೆಯಾಗುವ ವಿಧಾನಗಳು ಒಟ್ಟು ಸಾಮಾಜಿಕ, ರಾಜಕೀಯ ಒಲವುಗಳಿಂದ ಮುಕ್ತವಾಗಿರುವ ನಿರಪೇಕ್ಷ ಸಂಗತಿಯಲ್ಲ.
ಆದ್ದರಿಂದ ಸಂಶೋಧನೆಯೆಂದರೆ ಒಂದು ರಾಜಕೀಯ ನಿಲುವಿನ ನಿರೂಪಣೆಯೂ ಆಗಬಹುದು. ಇಂಥದ್ದೊಂದು ಸಂದರ್ಭದಲ್ಲಿ ಸಂಶೋಧಕನ ಆಯ್ಕೆ ಯಾವುದು? ಈ ಬಹಳ ಸಂಕೀರ್ಣವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ದಿಕ್ಕಿನಲ್ಲಿ ಚಂದ್ರಪೂಜಾರಿಯವರ ಕೃತಿ ಬಹಳ ಮಹತ್ವದ್ದಾಗಿದೆ.
ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವನ್ನು `ಸಮಸ್ಯೀಕರಿಸುವ~ ಕುರಿತಂತೆ ಚರ್ಚಿಸುವ ಅಧ್ಯಾಯದಲ್ಲಿ ಚಂದ್ರ ಪೂಜಾರಿಯವರು ಆಯ್ದುಕೊಂಡಿರುವ ಉದಾಹರಣೆಗಳು ಅವರ ಚಿಂತನೆಯ ದಿಕ್ಕನ್ನು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ ಆಯ್ಕೆಯನ್ನು ಸೂಚಿಸುತ್ತವೆ.
ಪ್ರತ್ಯೇಕ ಕೊಡಗಿನ ಬೇಡಿಕೆಯ ಉದಾಹರಣೆಯನ್ನು ತೆಗೆದುಕೊಂಡು ಅದನ್ನು ಸಮಸ್ಯೀಕರಿಸಲು ಯತ್ನಿಸುವ ಲೇಖಕರು `ಕೊಡಗರು ಮಾತ್ರ ಕೊಡಗಿನ ಮೂಲನಿವಾಸಿಗಳೇ? ಇತರ ಜಾತಿ ಜನರು ಅಲ್ಲಿನ ಮೂಲ ನಿವಾಸಿಗಳಲ್ಲವೇ? ತಾವು ಮಾತ್ರ ಅಲ್ಲಿನ ಮೂಲ ನಿವಾಸಿಗಳೆಂದು ಕೊಡವರು ಘೋಷಣೆ ಮಾಡಿ ಕೊಡಗಿನ ಪ್ರತ್ಯೇಕತೆಯನ್ನು ಬಯಸಿದರೆ ಉಳಿದ ಸಮುದಾಯಗಳ ಸ್ಥಿತಿ ಏನಾಗುತ್ತದೆ?~ ಎಂಬ ಪ್ರಶ್ನೆಗಳಿಗೆ ತಲುಪುತ್ತಾರೆ.
ಈ ಪ್ರಶ್ನೆಗಳಿಗೆ ತಲುಪುವ ಹಾದಿಯಲ್ಲಿ ವಿವರಿಸಲಾಗಿರುವ `ಕಲ್ಪಿತ ಸತ್ಯ~, `ರಚಿತ ಸತ್ಯ~ ಎಂಬ ಪರಿಕಲ್ಪನೆಗಳು ಹೇಗೆ ಸಮಸ್ಯೀಕರಣವನ್ನು ಪ್ರಭಾವಿಸಬಹುದು ಎಂಬುದರ ಕುರಿತು ಚರ್ಚೆಯ ಅಗತ್ಯವಿತ್ತು ಎನಿಸುತ್ತದೆ.
ವಿಷಯಗಳನ್ನು ಮಂಡಿಸುವ ಕ್ರಮ ಮತ್ತು ವಿಧಾನವೂ ಒಂದು ಸಂವಾದದ ಸ್ವರೂಪದಲ್ಲಿದೆ. ಪ್ರಶ್ನೆಗಳನ್ನು ಎತ್ತುತ್ತಾ ಅದಕ್ಕೆ ಉತ್ತರಗಳನ್ನು ಹುಡುಕುತ್ತಾ ಸಾಗುವ ಈ ಕ್ರಿಯೆ ಆಸಕ್ತ ಸಾಮಾನ್ಯ ಓದುಗನಿಗೂ ಅಪ್ಯಾಯಮಾನವಾಗುತ್ತದೆ. ಪರಿಣಾಮವಾಗಿ ಅತ್ಯಂತ ತಾಂತ್ರಿಕ ಎನಿಸಬಹುದಾದ ವಿವರಗಳೂ ಕೂಡಾ ಸರಳವಾಗಿ ಓದುಗನ ಮನಸ್ಸಿನೊಳಕ್ಕೆ ಇಳಿಯುತ್ತವೆ.
ಅಷ್ಟೇಕೆ ಯಾವುದಾದರೂ ನಿರ್ದಿಷ್ಟ ಪರಿಕಲ್ಪನೆಯೊಂದರ ಕುರಿತ ಉಲ್ಲೇಖವಿದ್ದರೆ ಅದರ ಕುರಿತ ಹೆಚ್ಚಿನ ಮಾಹಿತಿಗೆ ಅಗತ್ಯವಿರುವ ಪುಸ್ತಕ ಅಥವಾ ಸಂಪ್ರಬಂಧದ ವಿವರಗಳೂ ಆಯಾ ಅಧ್ಯಾಯಗಳ ಕೊನೆಯಲ್ಲಿಯೇ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.