ADVERTISEMENT

ಉತ್ತರಾಯಣ

ಕಥಾಸ್ಪರ್ಧೆ 2012 : ಮೆಚ್ಚುಗೆ ಪಡೆದ ಕಥೆ

ಡಾ.ಲೋಕೇಶ ಅಗಸನಕಟ್ಟೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ಸಂಸಾರವೆಂಬ ಹೆಣ ಎದ್ದು ನಗುತಿರೆ
ತಿನಬಂದ ನಾಯ ಜಗಳವ ನೋಡಿರೇ
-ಪ್ರಭು ಅಲ್ಲಮ

ಮಳೆ ಬಿಟ್ಟರೂ ಮರದ ಹನಿ ಬಿಡದು- ಎಂಬ ಗಾದೆ ಮಾತು ಆಚಾರ‌್ಯರಿಗೆ ಹೊಸದೇನಲ್ಲ. ಆಗಾಗ ಅನುಭವಕ್ಕೆ ಬಂದದ್ದೆ. ಆದರೆ, ಈಗ ಮಾತ್ರ ಅದರ ಅನುಭವ ತೀವ್ರವಾಗಿ ತಟ್ಟುತ್ತಿರುವಂತೆ ತೋರಿ ಒಂಚೂರು ಕಸಿವಿಸಿಗೊಂಡರು. ಭುಜವನ್ನು ಅಲ್ಲಾಡಿಸಿ ಅಂಗಿಯ ಮೇಲೆ ಬಿದ್ದು ಕಿರಿ ಕಿರಿ ಮಾಡುತ್ತಿದ್ದ ಹನಿಗಳನ್ನು ಝಾಡಿಸಲು ಯತ್ನಿಸಿದರು. ಅದರಲ್ಲಿ ಕೊಂಚ ಯಶಸ್ವಿಯಾದಂತೆ ತೋರಿ ಉಲ್ಲಸಿತರಾದರು.

ಮಟ ಮಟ ಮಧ್ಯಾಹ್ನವೇ ಹಿಡಿದುಕೊಂಡಿದೆ ಮಳೆ. ಯಾರಿಗೆ ಗೊತ್ತು ಇಂಥಾ ಅಪವೇಳೆಯಲ್ಲಿ ಇದು ಹೀಗೆ ರಚ್ಚೆ ಹಿಡಿಯಬಹುದೆಂದು. ಸುತ್ತಲೂ ಏಕಾಏಕಿ ಮೋಡಗಳು ದಟ್ಟೈಸಿಕೊಂಡು ಅಮರಿಕೊಂಡಿವೆ. ಮಂದಿಯೆಲ್ಲಾ ಗರ್ಕಾಗಿ ಕಟ್ಟಡದ ಸೂರುಗಳನ್ನು ಆಶ್ರಯಿಸಿದ್ದಾರೆ. ತಾವು ಹೀಗೆ ಮರದಡಿಯಲ್ಲಿ ನಿಲ್ಲುವ ಬದಲು ಕಟ್ಟಡವೊಂದರ ಬಳಿಗೆ ಓಡಿಹೋಗಿ ನಿಲ್ಲಬಹುದಿತ್ತಲ್ಲಾ...? ಅಕಸ್ಮಾತ್ ಓಡುವಾಗ ಎಡವಿ ಬಿದ್ದು ಕಾಲು ಮುರಿದರೆ? ಕಾಲು ಮುರಿಯುವುದೊತ್ತಟ್ಟಿಗಿರಲಿ ಇದಕ್ಕಾಗಿ ರಾತ್ರಿ ಮಗನಿಂದ ಮೊಬೈಲ್‌ನಲ್ಲಿ ಮಾತು ಕೇಳಬೇಕಲ್ಲಾ- ಎನ್ನುವ ಭಯಕ್ಕೆ ಮರವನ್ನೆ ಆಶ್ರಯಿಸಿ ನಿಂತ ಆಚಾರ‌್ಯರಿಗೆ ಕಳ್ಳಗಂಜಿ ಕಾಡಹೊಕ್ಕ ಅನುಭವವಾಯ್ತು.

ಅರೇ! ನನ್ನೊಬ್ಬನ ಹೊರತು ಮರದ ಕೆಳಗೆ ಯಾರೂ ಇದ್ದಂತಿಲ್ಲವೆಂದು ಭಾಸವಾಗಿ ಸುತ್ತಲೂ ನೋಡಿದರು. ಒಂದು ಚಕ್ಕಳವೆದ್ದ ಹಸು ಮಲಗಿ ಮೆಲುಕು ಹಾಕುತ್ತಿದೆ. ಯಾರೋ ಸಾಕಿ ಬೆಳೆಸಿ ಈಗ ಹೊರಗಟ್ಟಿರುವ ನಾಯಿ, ಚರ್ಮವೆಲ್ಲಾ ಜೋತು ಬಿದ್ದು, ಮೂಳೆಗಳು ಎದ್ದು ಕಾಣುತ್ತಿವೆ. ಬೆನ್ನ ಮೇಲೆ ಕಾಸಿನಷ್ಟು ಅಗಲದ ಗಾಯ; ಕೀವು ತುಂಬಿದೆ. ಕೀವು ಹೀರಲು ನೊಣಗಳು ದಂಡೇ ದಾಳಿ ಇಡುತ್ತಿವೆ. ಅದ್ದರಿಸಲು ದನಿಯಾಗಲಿ, ಬಾಲವೆತ್ತಲು ಶಕ್ತಿಯಾಗಲಿ ಇಲ್ಲದೆ ಅದು `ಕುಂಯ್ಯೋ' ಎನ್ನುತ್ತಿದೆ ಪಾಪ! ಪುಣ್ಯಾತ್ಮರು ಮರೆತು ಬಿಟ್ಟ ಬೆಲ್ಟು ಮಾತ್ರ ಅದರ ಕೊರಳಲ್ಲಿ ಅದರ ಗತವನ್ನು ಹೇಳುತ್ತಿದೆ.

ತಲೆಯನ್ನು ಮೇಲೆತ್ತಿ ಮರವನ್ನು ನೋಡಿದ ಆಚಾರ‌್ಯರು `ಅಯ್ಯೋ ನಾನೆಂತ ಬೆಪ್ಪ' ಎಂದುಕೊಂಡರು. ರೆಂಬೆ ಕೊಂಬೆಗಳನ್ನು ಉದ್ದಕ್ಕೆ ಚಾಚಿ ತೊಂಗಲಿಂದ ಯಾವಾಗಲೂ ಗಿಡಿದಿದ್ದ ಮರವಲ್ಲವೆ ಇದು. ಈಗೇನಾಗಿದೆ -ನಾಯಿಯ ಹಾಗೆ! ಅದಕ್ಕೆಂದೇ ಕಾಣುತ್ತದೆ ಥರಾವರಿ ಬಣ್ಣಗಳ ಹೊಳಪುಗನ್ನಡಿಗಳಿಂದ ಶೋಭಾಯಮಾನವಾಗಿರುವ ಈ ಕಟ್ಟಡದ ಕೆಳಗೆ ಎಲ್ಲರೂ ನಿಂತಿದ್ದಾರೆ. ತಾವು ಅಲ್ಲಿಗೆ ಹೋದರಾಯ್ತೆಂದು ಅವರು ಮುಗಿಲನ್ನೊಮ್ಮೆ ನೋಡಿದರು. ಅದು ಕಿಸ್ಸಕ್ಕಂತ ನಕ್ಕಿತು. “ನೀನು ಹೆಜ್ಜೆ ಕಿತ್ತರೆ, ನಾನು ಧೋ ಧೋ ಎನ್ನುವೆ...” ಎಂದಂತಾಗಿ ಹಿಂದಕ್ಕೆ ಸರಿದು ಬೊಡ್ಡೆಗೆ ಆತು ನಿಂತರು. ಉದುರುವ ಮರದ ಹನಿಗಳಿಂದ ತಪ್ಪಿಸಿಕೊಳ್ಳುವ ಪ್ರತಿತಂತ್ರ ಹೂಡಿ ಆಟ ಆಡತೊಡಗಿದರು.

ಮೊದಲೆ ನಿಶ್ಚಯಿಸಿಕೊಂಡು ಬಂದಂತೆ ಬ್ಯಾಂಕಿನ ಮೆಟ್ಟಲನ್ನೇರಿ, ಕೌಂಟರಿನ ಮುಂದೆ ನಿಂತು ಎಲ್ಲಾ ಮುಗಿಸಿಕೊಂಡು ಬಂದದ್ದಾಯ್ತು. ಅದೇ ವಾಸುಕಿ, ಪರಿಚಿತ ನಗೆ, ನಮಸ್ಕಾರ `ಒಳ್ಳೆ ಮಗನನ್ನು ಪಡೆದಿದ್ದೀರಿ ಬಿಡಿ' ಎಂಬ ಮಾತು. `ಈ ವಯಸ್ಸಿಗೆ ಅಂಥಾ ಕಂಪನಿಯ ಹೆಚ್.ಆರ್.ಡಿ. ಆಗುವುದೇನು? ತಿಂಗಳಿಗೆ ಲಕ್ಷ ಲಕ್ಷ ಸಂಬಳ ಎಣಿಸುತ್ತಾನೆಂದರೇನು? ನಿಜಕ್ಕೂ ನೀವು ಅದೃಷ್ಟವಂತರು' ಎಂಬ ಮಾತು. ಎಲ್ಲರೆದಿರು ಇಂಥಾ ಮಾತುಗಳನ್ನು ಕೇಳಿ ಉಬ್ಬುವುದರಲ್ಲಿ ಒಂಥಾರಾ ಖುಷಿ ಖುಷಿ. ಉಬ್ಬರ ಇಳಿದಾದ ಮೇಲಲ್ಲವೆ ಕಡಲಿನ ಭರತದ ರೂಪ ಏನೆಂಬುದು ತಿಳಿವುದು.

ವಾಸುಕಿಗೆ ಬಂದ ಕಾರಣ ಹೇಳಿ “ಇನ್ನು ಮುಂದೆ ಬ್ಯಾಂಕಿನ ನನ್ನ ವ್ಯವಹಾರಗಳನ್ನು ಮೆಸೇಜ್ ಮೂಲಕ ತಿಳಿಸುವುದು ಬೇಡ” ಎಂದು ಮನವಿಯೊಂದನ್ನು ಕೊಟ್ಟು `ಯಾಕೆ, ಏನು' ಎಂಬ ಅವನ ಪ್ರಶ್ನೆಗಳಿಗೆ ಉತ್ತರಿಸದೆ ಬ್ಯಾಂಕ್ ಮೆಟ್ಟಿಲು ಇಳಿಯುವಾಗಲೆ ಆಚಾರ‌್ಯರು ನೆಮ್ಮದಿಯ ಉಸಿರು ಬಿಟ್ಟರು.

ತನ್ನ ಮೊಬೈಲ್ ನಂಬರನ್ನು ಬ್ಯಾಂಕಿಗೆ ಕೊಟ್ಟು ಅದು ತಮ್ಮದೆಂದು ಹೇಳಿದ್ದಲ್ಲದೆ ನನ್ನ ವ್ಯವಹಾರಗಳನ್ನು ಸಲೀಸಾಗಿ ತಿಳಿದುಕೊಳ್ಳುವ ಹುನ್ನಾರ ನಡೆಸಿದನಲ್ಲಾ! ವ್ಯವಹಾರಗಳ ಮೇಲೆ ಕಣ್ಣಿರಿಸಿ “ಅದ್ಯಾಕೆ?”, “ಇದ್ಯಾಕೆ?”, “ದುಡ್ಡೇನು ಮಾಡಿದಿರಿ?” ಎಂದು ಪತ್ತೇದಾರಿಕೆ ಮಾಡಿ ತಮ್ಮ ಮೇಲೆ ಪಾರುಪತ್ಯ ಮಾಡುವುದು, ಕೋರ್ಟ್‌ಮಾರ್ಷಲ್‌ಗೆ ಎಳೆದು ನಿಲ್ಲಿಸುವುದು, ತಾನೇನೋ ಭಾರಿ ಭಾರಿ ಯೋಜನೆಗಳನ್ನು ಇರಿಸಿರುವುದಾಗಿಯೂ, ಅದಕ್ಕೆ ಸಾಕಷ್ಟು ಹಣ ಬೇಕಾಗಿರುವುದಾಗಿಯೂ, ನೀವಿಬ್ಬರೂ ನಗರವೂ ಅಲ್ಲದ ಊರೂ ಅಲ್ಲದ ಊರಲ್ಲಿ ಕುಳಿತು ಹೀಗೆ ದುಂದು ಮಾಡಿದರೆ `ನಾ ಏನು ಮಾಡಲಿ?' ಎಂದು ತಾರಕದಲ್ಲಿ ಕನಲುವುದು- ಇಂದಿಗೆ ನಿಲ್ಲುವುದಲ್ಲವೆ?..., ಗಾಳಿಯ ರಭಸಕ್ಕೆ ಮರ ತೊನೆದಾಡಿದಂತೆ, ಮರದಿಂದ ಹನಿಗಳು ಮತ್ತೆ ಮತ್ತೆ ಉದುರತೊಡಗಿದವು.

ADVERTISEMENT

ಮೊನ್ನೆಯಷ್ಟೆ ಅವಳ ಅರ್ಥರೈಟಿಸ್‌ಗೆಂದು ಎಕ್ಸರೇ, ಮಾತ್ರೆ, ಮುಲಾಮು ಅಂತ ಒಂದಿಷ್ಟು ಖರ್ಚಾಗಿತ್ತು. ಕಡ್ಡಿ ಮುರಿದ ಕನ್ನಡಕ ಕಿವಿ ಮೇಲೆ ಕೂರುವುದಿಲ್ಲವೆಂದು ಹಟ ಮಾಡಿತು. `ನಿನಗೇನನ್ನೂ ಇನ್ನು ನಾವು ಕಾಣಿಸುವುದಿಲ್ಲ' ಎಂದು ಗ್ಲಾಸ್‌ಗಳು ಮುಷ್ಕರ ತೆಗೆದ ಮೇಲೆಯೇ ಕನ್ನಡಕವನ್ನು ಬದಲಿಸಲು ನಿರ್ಧರಿಸಿದ್ದು. ಎಷ್ಟೊಂದು ವರ್ಷಗಳೇ ಉರುಳಿದುವಲ್ಲ ಅವು ನನ್ನ ಕಣ್ಣಾಗಿ. ಈಗಲೂ ಅವು ತೋರಿಸುವುದನ್ನು ಮೊದಲ ಹಾಗೆಯೇ ತೋರಿಸುತ್ತಿರಬಹುದೇನೋ? ಕಾಣುವುದಕ್ಕೆ ಕಣ್ಣುಗಳಿಗೂ ಒಂದು ಸಾಮರ್ಥ್ಯ ಬೇಕಲ್ಲ.

ಅವಾದರೂ ಏನು ಮಾಡಿಯಾವು. ಅದೇ ವಾಸುಕಿ ಬ್ಯಾಂಕಿನಲ್ಲಿ ಸಿಕ್ಕಾಗ “ಹೇಗೂ ಬದಲಾಯಿಸುತ್ತೀರಂತೆ ಕಣ್ಣನ್ನೊಮ್ಮೆ ಚೆಕ್ ಮಾಡಿಸಿ” ಎಂದಿದ್ದ. ಎಂಥಾ ಘಳಿಗೆಗೆ ಒದಗಿ ಬಂದ ಮಾರಾಯ. ಅವ ಹೇಳದಿದ್ದರೆ ನಾನು ಡಾಕ್ಟರ್ ಸನಿಹಕ್ಕೂ ಸುಳೀತಿರಲಿಲ್ಲ. ಆವಾಗಲೆ ಅಲ್ಲವೆ ತಮಗೆ ಶುಗರ್ ಕಂಡಾಪಟ್ಟೆ ಏರಿರುವುದು ತಿಳಿದಿದ್ದು. “ಹೀಗೆ ಬಿಟ್ಟರೆ ನೀವು ಕಣ್ಣನ್ನೆ ಕಳೆದುಕೊಳ್ಳುವಿರಿ, ಚಿಂತೆ ಮಾಡ್ಲಿಕ್ಕೆ ಏನಿದೆ ನಿಮಗೆ, ಬಂಗಾರದ ಮೊಟ್ಟೆ ಇಡೋ ಮಗ, ಸೊಸೆ... ಮುದ್ದಾದ ಮೊಮ್ಮಕ್ಕಳು- ಇನ್ನೇನು ಬೇಕು?” ಎಂದು ಡಾಕ್ಟರ್ ಅಪ್ಪಣ್ಣನವರು ಕೈಹಿಡಿದು ಹೇಳಿದರು. ಲಿಕ್ವಿಡ್ ಪ್ರೊಫೈಲ್, ಈಸಿಜಿ, ಕಿಡ್ನಿ- ಏನೇನೋ ಪರೀಕ್ಷೆ ಮಾಡಿಸಿ ಒಂದಿಷ್ಟು ಮಾತ್ರೆಗಳನ್ನು ಬರೆದು ಕೊಟ್ಟು, “ಟೆನ್‌ಷನ್ ಮಾಡ್ಕೊಬೇಡಿ... ಒಂದಿಷ್ಟು ಆರಾಮ್ ಮಾಡ್ರಿ” ಎಂದು ಕಳಿಸಿದ್ದರು.

ಖರ್ಚಿನ ಮೇಲೆ ಖರ್ಚು ಎಂದು ತಮಗೂ ಅನ್ನಿಸಿದ್ದಿದೆ. ಮಾಡುವುದಾದರೂ ಏನು? ತಾನು ಜೀವನ ಪೂರ್ತಿ ಸಂಪಾದಿಸಿದ್ದರಲ್ಲಿ ಒಂದು ಮನೆ ಕಟ್ಟಿಸಿದ್ದಲ್ಲದೆ, ಇವನ ಓದು, ಮದುವೆ ಅಂತ ಮಾಡಿ ಮುಗಿಸಿದ್ದಷ್ಟಕ್ಕೆ ವೃತ್ತಿಯ ಆಯಸ್ಸು ಮುಗಿದೇಬಿಟ್ಟಿತು. ಬರುತ್ತಿರುವ ಪೆನ್‌ಷನ್ ಕಡಿಮೆಯೇನಲ್ಲ. ನಮ್ಮಿಬ್ಬರ ಬದುಕು ನೀಗುವುದಲ್ಲದೆ ಇನ್ನೂ ಮುಕ್ಕಾಲು ಭಾಗದಷ್ಟು ಮಿಗುತ್ತದೆ. ಹೊಸ ಸೀರೆಯೇ? ಬಟ್ಟೆ ಬಂಗಾರವೆ? ಹರಿದ ಬ್ಲೌಸ್‌ನ ಈಗಲೂ ಹೊಲಿದುಕೊಂಡು ಉಡುತ್ತಾಳೆ. ಇದೆಲ್ಲ ಬೇಕೇನೆ? ಎಂದರೆ `ಖರ್ಚು' ಎಂದು ಬಾಯಿಮುಚ್ಚಿಸುತ್ತಾಳೆ.

ತಿನ್ನುವ ಕಾಲದಲ್ಲಿ ತಿನ್ನಲಿಲ್ಲ. ಉಡುವಾಗ ಉಡಲಿಲ್ಲ. ಈಗಲೂ ಹೀಗಂದರೆ, ಮುಪ್ಪಿಗೆ ಹಣವನ್ನು ಮುತುವರ್ಜಿ ಮಾಡುವ ಕಾಳಜಿ ಯಾಕಾಗಿಯೋ..., ನಿವೃತ್ತಿಯ ನಂತರ ಬಂದ ಲಕ್ಷ ಲಕ್ಷ ಹಣವನ್ನು ಅವನೇ ಹೊತ್ತೊಯ್ದ. “ಬೇಕೆಂದಾಗ ಕಳಿಸುತ್ತೇನೆ. ಒಂದು ಕಡೆ ಜಮೆಯಾಗಿರಲಿ” ಎಂಬ ಅವನ ಮಾತಿಗೆ ಇವಳೂ `ಸೈ' ಎಂದಳು. “ನಾವು ಅದರ ದೇಖರೇಖಿ ಮಾಡೋದು ಕಷ್ಟ... ಕಳ್ಳಕಾಕರು ಬೇರೆ” ಎಂದು ಕನಲುತ್ತಾಳೆ. “ಬ್ಯಾಂಕ್... ಎಫ್.ಡಿ. ಕೊನೆಗಾಲದಲ್ಲಿ ಅದು ಮಕ್ಕಳಂತೆ ಕೈ ಹಿಡಿಯುತ್ತದೆ” -ಅಂಥ ಏನೆಲ್ಲಾ ಹೇಳಿದ್ರೂ `ಅವ್ನಿಗೆ ಅದ್ನ ಕೊಟ್ಟು ಬಿಡ್ರಿ' ಎಂಬುದೊಂದೆ ಅವಳ ವರಾತ.

ಡಿಸಿಆರ್‌ಜಿಯನ್ನಾದರೂ ತಾನು ತೆಗೆದುಕೊಳ್ಳದಿದ್ದರೆ ಅದರ ಮೇಲಿನ ಅಸಲು, ಬಡ್ಡಿಯಾದರೂ ಉಳಿಯುತ್ತಿತ್ತು. ಹಾಗಂದೂ ನೋಡಿದ್ದೇನೆ. `ನಡುವೆ ಏನಾದರೂ ಹೆಚ್ಚು ಕಮ್ಮಿಯಾದರೆ ಹಣವನ್ನು ಕಟ್ಟಬೇಕಿಲ್ಲವಂತಲ್ಲ. ಸುಮ್ನೆ ತೊಗೊಳ್ಳಿ' ಅಂತ ಅವನು ಜಬರ್ದಸ್ತು ಮಾಡುತ್ತಾನೆ. ಸಾಲಕ್ಕೆ ನನ್ನ ಸಾವನ್ನೇ ಸಮಾ ಮಾಡುವಂತೆ ಆಲೋಚಿಸುತ್ತಾನೆ. ಅವನಿಗೆಲ್ಲವನ್ನು ಕೊಟ್ಟು ಬಿಡಿ ಎಂಬುದೇ ಅವಳ ವರಾತ. ಅವಳ ಬಳಿ ಅವನು ಏನೇನು ಕನಸುಗಳನ್ನು ಹರಡಿ ಅದರ ಮೇಲೆ ಸ್ವರ್ಗ ಕಟ್ಟುವ ಕಥೆಯನ್ನು ಬರೆದಿದ್ದನೋ ಏನೋ ಯಾರು ಬಲ್ಲರು? ಅವಳ ಮಾತನ್ನು ಮೀರುವುದಕ್ಕಾದರೂ ತಮಗಾದೀತೆ?

ವಯಸ್ಸಾದಂತೆಲ್ಲ ಯಾಕೋ ಏನೋ ನಾನು ಅವಳಿಗೆ ಅಧೀನನಾಗುತ್ತಿದ್ದೇನೆ ಎಂದೆನಿಸುತ್ತಿದೆ. ಮೊದಲೆಲ್ಲ ಮೌನಗೌರಿಯರಂತೆ, ಪತಿಯ ಅಜ್ಞಾನುಪಾಲಕರಂತೆ ತಲೆತಗ್ಗಿಸಿ ನಡೆಯುವ ಇವರೆಲ್ಲ ಮುಂದೊಂದು ದಿನ ಹೀಗೆ ತಮ್ಮ ಮೇಲೆಯೆ ಜಬರ್ದಸ್ತು ಮಾಡುತ್ತಾರೆಂದು ಯಾವ ಗಂಡಸು ತಾನೆ ಎಣಿಸಿರುವನು. `ಬಾಳಿನುದ್ದಕ್ಕೂ ಅವನ ದರ್ಪವನ್ನು ಸಹಿಸಿಕೊಂಡ ಅವರೀಗ ಸೇಡು ತೀರಿಸಿಕೊಳ್ಳುತ್ತಾರೆ' ಎಂದು ಒಂದು ಸಂಜೆಯ ವಾಯುವಿಹಾರದಲ್ಲಿ ಅದ್ಯಾರೋ ಸಿಮೋನ್ ದ ಬೋವ ಎನ್ನುವವಳ ಹೆಸರು ಹೇಳಿ ಪ್ರೊ.ಚಂದನ್ `ಸ್ತ್ರೀಯರೆ ಹೀಗೆ'- ಎಂದು ಷರಾ ಬರೆದಿದ್ದರು. ತಾವು ಕಲಿತ, ಕಲಿಸಿದ ಸಂಸ್ಕೃತ ಸಾಹಿತ್ಯದಲ್ಲಿ ಇಂಥದ್ದನ್ನು ಓದಿರದ ಆಚಾರ‌್ಯರು, ಮತ್ತಿತರರು ಇರಬಹುದೆಂದು ತಲೆಯಾಡಿಸಿದ್ದರು.

ತಲೆಯಾಡಿಸಿದ್ದು ನಿಜವಾದರೂ ತಾವು ತಮ್ಮ ಹೆಂಡತಿಯ ಮೇಲೆ ದರ್ಪ ಮಾಡಿದ್ದು ನೆನಪೇ ಇಲ್ಲ. ನೆನಪಿನ ನವಿಲು ಗರಿಯನ್ನೂ, ಹಾಯಿದೋಣಿಯನ್ನು ಹಾಯಿಸಿ ನೋಡಿದರೆ, ಅಲ್ಲೆಲ್ಲಾ ಬರೀ ಕಾಮನಬಿಲ್ಲಿನ ತೋಟ, ಗರಿಗೆದರಿ ಕುಣಿವ ನವಿಲ ನರ್ತನವೆ! ಅವಳಿಗೇನು ಕೊರತೆ ಮಾಡಿದೆ? ಏನೂ ಇಲ್ಲ ಎಂಬ ಭಾವ ಮೂಡುವ ಘಳಿಗೆಯಲ್ಲೇ ಆಚಾರ‌್ಯರಿಗೆ ತನ್ನದು ಎರಡನೆಯ ಸ್ಥಾನವೆ - ಎಂಬುದು ತಿಳಿಯಿತು. ಅವಳು ಯಾವಾಗಲೂ ಮಗನ ಪರವೇ. ಮೊದಲು ಮಗನೆ... ನಂತರ ತಾವು. ಆ ಹೊತ್ತು ಇವಳೂ ಸೊಸೆಯೂ ಮಗನ ಪರವೇ ನಿಂತರಲ್ಲಾ..., ಮೊಮ್ಮಕ್ಕಳು ಮಾತ್ರ “...ಅಯ್ಯೋ ಪಾಪ... ತಾತ...” ಅಂದವು.

ಕಳೆದ ಬಾರಿ ಊರಿಗೆ ಅವರೆಲ್ಲ ಬಂದಾಗ ಏನಾಯ್ತೆಂಬುದನ್ನು ನೆನೆದರೆ ಮೈ ಉರಿದು ಹೋಗುತ್ತದೆ. ಬಾಗಿಲು ಮುಂದೆ ಮಾಡಿ ಅವನು ಡ್ರೆಸ್ ಮಾಡುತ್ತಿದ್ದನೆಂದು ಕಾಣುತ್ತದೆ. ಹೊರಗಡೆ ಗೂರ್ಖನ ವರಾತ “ಸಾಬ್ ಸಾಬ್‌” ಎನ್ನುತ್ತಿದ್ದಾನೆ. ತಿಂಗಳ ಮಾಮೂಲಿ ಕೊಡೋಣವೆಂದು ದುಡ್ಡು ತರಲು ರೂಂ ಒಳಗೆ ಹೋದದ್ದೇ ತಡ ಅವನು “ಏನಪ್ಪಾ, ಸ್ವಲ್ಪಾನೂ ತಿಳಿಬಾರ‌್ದೆ ಡ್ರೆಸ್ ಮಾಡ್ತಾ ಇದ್ದೀನಿ” ಅಂತ ಅಂದು, ಮೆಲುದನಿಯಲ್ಲಿ `ಕಾಮನ್‌ಸೆನ್ಸ್' ಅಂತ ಏನೇನೋ ಗೊಣಗಿದ. ಒಬ್ಬನೇ ಕನ್ನಡಿ ಮುಂದೆ ನಿಂತು ಮೈ ಮೇಲೆಲ್ಲ ಪೌಡರ್ ಸುರಿದುಕೊಂಡು ಪ್ಯಾಂಟಿಗೆ ಬೆಲ್ಟ್ ಏರಿಸುತ್ತಾ ಅಂಡರ್‌ವೇರ್ ಬನಿಯನ್ ಮೇಲೆ ನಿಂತಿದ್ದ. ಆಗಬಾರದ್ದಾದರೂ ಏನಾಯ್ತೀಗ? ಎಂಬುದೇ ತಮಗೆ ಅರ್ಥವಾಗದೆ ಬೆಪ್ಪಾಗಿ ನಿಂತರು ಆಚಾರ‌್ಯರು.

ಮನುಷ್ಯ ಮನುಷ್ಯರ ನಡುವೆ ಅಂತರ ಏರ್ಪಡಲು ಒಂದೇ ಒಂದು ನೆಪ ಸಾಕೆಂಬುದು ಅಂದು ಆಚಾರ‌್ಯರಿಗೆ ಮನವರಿಕೆಯಾಯ್ತು. ಸಣ್ಣ ಹುಡುಗನಾಗಿದ್ದಾಗಿನಿಂದ ಹಿಡಿದು ಹೈಸ್ಕೂಲು ಮೆಟ್ಟಿಲೇರುವವರೆಗೂ ಅವರೇ ಇವನಿಗೆ ಸ್ನಾನ ಮಾಡಿಸಬೇಕಿತ್ತು. ಎಷ್ಟು ಬಾರಿ `ನೀನೇ ಮಾಡುವುದನ್ನು ಕಲ್ತುಕೋ' ಎಂದರೂ ಕೇಳಿದ್ದುಂಟೆ. “ಅಪ್ಪಾ ಬನೀನು ಅಂಡರ್‌ವೇರ್ ತೆಗೆದಿದ್ದೀನಿ, ಚಳಿ ಆಗ್ತದೆ ಬೇಗ ಬಾರಪ್ಪಾ” ಎಂದು ಬಚ್ಚಲಲ್ಲಿ ನಿಂತು ಕೂಗತೊಡಗಿದನೆಂದರೆ ಅಕ್ಕಪಕ್ಕದವರೂ ಇಣಿಕಿ ಹಾಕಬೇಕು.

ಅವನಿಗೆ ಸ್ನಾನ ಮಾಡಿಸುವುದೆಂದರೆ ಆಚಾರ‌್ಯರಿಗೂ ಖುಷಿಯ ವಿಚಾರವೇ. ಆದರೆ, `ಇವನು ಕಲಿಯುವುದು ಯಾವಾಗ' ಎಂಬ ಕಕ್ಕುಲಾತಿ. ಸರಿ ಸ್ನಾನಕ್ಕೆ ತೊಡಗಿಕೊಂಡರಂತೂ ಅಲ್ಲೂ ಅವರು ಮೇಷ್ಟ್ರೆ. ಹೇಗೆ ನೀರನ್ನು ಹದಮಾಡಿಕೊಳ್ಳಬೇಕೆಂಬುದರಿಂದ ಆರಂಭಿಸಿ ಉರುಟು ಕಲ್ಲಿನಿಂದ ಮೊದಲು ಮೈಯನ್ನು ಉಜ್ಜಿ ಮಣ್ಣನ್ನು ತೆಗೆದು ಅನಂತರ ಸೋಪನ್ನು ಹೇಗೆ ಹಚ್ಚಬೇಕು ಎಂದೂ, ಕಂಕುಳ, ಸಂದುಗಳನ್ನು ಜನನೇಂದ್ರಿಯವನ್ನು ಹೇಗೆ ಸ್ವಚ್ಛಮಾಡಬೇಕೆಂಬುದು ಇಲ್ಲವಾದರೆ ಬರುವ ಫಂಗಸ್ ಕಾಯಿಲೆಯ ಬಗ್ಗೆಯೇ ದೊಡ್ಡ ಉಪನ್ಯಾಸ.

ಅವನು ಉಂ, ಹೂ... ಎನ್ನುತ್ತಿದ್ದನೇ ವಿನಾ- ಏನು ಕಲಿತನೋ ಬಿಟ್ಟನೋ... ಮಜ್ಜನಕ್ಕಂತೂ ಕಲ್ಲಾಗಿ ನಿಂತುಬಿಡುತ್ತಿದ್ದ. ನೆತ್ತಿಯ ಮೇಲಿನಿಂದ ಬಿಸಿನೀರನ್ನು ಹೊಯ್ದರೆ ಹಿತವಾದ ಆನಂದವನ್ನು ಅವನು ಪಡುತ್ತಾನೆಂಬುದನ್ನು ಬಲ್ಲ ಆಚಾರ‌್ಯರು ಎರಡೆರಡು ತಂಬಿಗೆ ಹೆಚ್ಚು ನೀರನ್ನು ಅಡಿಯಿಂದ ಮುಡಿಯವರೆಗೆ ಇಳಿದು ಬರುವಂತೆ ಸುರಿಯುತ್ತಿದ್ದರು. ಆಮೇಲೆ ಬಿಳಿದಾದ ಟವೆಲ್‌ನಿಂದ ಅವನನ್ನು ಒರೆಸಿ ಬಟ್ಟೆ ಹಾಕಿ ಕಳಿಸುತ್ತಿದ್ದರು. ಅವನ ದೇಹದ ಪ್ರತಿಭಾಗವೂ ಆಚಾರ‌್ಯರ ಭಿತ್ತಿಯಲ್ಲಿ ಚಿತ್ರವತ್ತಾಗಿ ಮೂಡಿಬಿಟ್ಟಿದೆ.

ಎಡಗೈ ಮೇಲಿರುವ ಮಚ್ಚೆಯಿಂದ ಹಿಡಿದು ಅವನ ದೇಹದಲ್ಲಿ ಎಷ್ಟು ಮಚ್ಚೆಗಳಿವೆಯೆಂಬ ಲೆಕ್ಕವನ್ನು ಅವರು ನೀಡಬಲ್ಲರು. ಹಾಗಿದ್ದವನಿಗೆ ಈಗ ನನ್ನ ಪ್ರವೇಶದಿಂದ ಅವಮಾನವಾಯ್ತೆ? `ಅಯ್ಯಾ ನಿನ್ನ ದೇಹದ ಪ್ರತಿ ಅಂಗವನ್ನು ನಾನು ನೋಡಿ ಬಲ್ಲೆ. ಸುಮ್ನೆ ಬಟ್ಟೆ ಹಾಕಿಕೊಂಡು ಬಾ' ಎಂದು ಒರಟಾಗಿ ಅನ್ನಬೇಕೆನಿಸಿತಾದರೂ ಹಿಂದಿನ ದಿನದ ಘಟನೆ ನೆನಪಾಗಿ ಬೀರುವಿನಿಂದ ಹಣ ಎತ್ತಿ ತಂದು ಗೂರ್ಖನಿಗೆ ಕೊಟ್ಟು ಸಾಗು ಹಾಕಿದರು.

ಅಡುಗೆ ಮನೆಯಲ್ಲಿದ್ದ ಅವಳಿಗೆ ಅವನ ಮಾತು ಕೇಳಿಸಿರಬೇಕು. `ಅವ್ನ ಹೊರಗೆ ಬಂದ ಮೇಲೆ ಹೋಗಿದ್ರೇನು ಪ್ರಪಂಚ ಮುಳುಗ್ತಾ ಇತ್ತಾ?'. `ಎಲಾ ಇವಳಾ' ಎಂದು ಮನಸ್ಸಿನಲ್ಲಿ ಅಂದುಕೊಂಡರೇ ವಿನಾ ಆಚಾರ‌್ಯರು ಬಾಯಿಬಿಡಲಿಲ್ಲ. ಅಷ್ಟರಲ್ಲಾಗಲೇ ಸೊಸೆ ಅಡುಗೆ ಮನೆಯೊಳಗೆ ಕಾಲಿರಿಸಿದ್ದಳು. “ಹೌದು ಮಾವ... ಸ್ವಲ್ಪ ತಾಳಬೇಕಿತ್ತು” ಎಂದು ದನಿ ಸೇರಿಸಿದಳು.

ಯಾಕೋ ಏನೋ ಯಾರಿಗೂ ನಾನು ಬೇಡವಾಗಿದ್ದೇನೆ ಎಂದೆನಿಸಿ ಹಾಲ್‌ಗೆ ಬಂದು ಸೋಫಾದ ಮೇಲೆ ಕೂತರು. ಕಳ್ಳ ಬೆಕ್ಕಿನಂತೆ ಖಿನ್ನತೆಯು ನಿಧಾನಕ್ಕೆ ಹೆಜ್ಜೆ ಇಡತೊಡಗುವಷ್ಟರಲ್ಲೇ ಓಡೋಡಿಬಂದ ಮೊಮ್ಮಕ್ಕಳು “ತಾತ ನೀನೂ ಬೆಂಗ್ಳೂರಿಗೆ ಬಾ, ಅವ್ವನನ್ನೂ ಕರಕೊಂಡು ಬಾ... ಕಾರಲ್ಲಿ ಜಾಗ ಇದೆ...”  ಅಂತ ಮುದ್ದು ಮುದ್ದಾಗಿ ಮಾತಾಡತೊಡಗಿದಂತೆ ಕಳ್ಳ ಬೆಕ್ಕು ನಿಧಾನಕ್ಕೆ ಹೆಜ್ಜೆಯನ್ನು ಹಿಂದಕ್ಕೆ ಇಡುತ್ತಾ ಹೋಯಿತು.

ಊರಿಗೆ ಬಂದಾಗಲೆಲ್ಲಾ ಮೊಮ್ಮಕ್ಕಳು ಹೀಗೆ ದುಂಬಾಲು ಬೀಳುವುದು, ಹಟ ಮಾಡಿ ಅವರಪ್ಪನಿಂದ ಏಟು ತಿಂದು ಮುಸಿ ಮುಸಿ ಅನ್ನುತ್ತಾ ಕಾರೊಳಗೆ ಮುದುಡಿ ಕೂತು ಅಳುತ್ತಳುತ್ತಲೇ ಬೆಂಗ್ಳೂರಿಗೆ ಹೋಗುವುದು ಒಂದು ಸಾಮಾನ್ಯ ಸಂಗತಿಯೆ ಎಂಬತಾಗಿರುವುದೆಂಬುದನ್ನು ಬಲ್ಲ ಆಚಾರ‌್ಯರು ಮುಂದಿನ ಆಟ ನಡೆಯದಂತೆ ಪರದೆ ಎಳೆಯಲು ಸಿದ್ದರಾದರು. “ಆಯ್ತು ನಾವು ಬರ‌್ತೀವಿ, ತಿಂಡಿ ತಿನ್ನೋಗಿ” ಅಂತ ಅಂದಾಗ ಅವು ಖುಷಿಯಿಂದಲೇ ಅಡುಗೆ ಮನೆ ಕಡೆ ಓಡಿ ಅದನ್ನು ಸುದ್ದಿ ಮಾಡಿ ಸಂಭ್ರಮಿಸಿದವು. ಮಕ್ಕಳು ಕರೆದಂತೆ ಇವನಾಗಲಿ, ಸೊಸೆಯಾಗಲೀ ಒಮ್ಮೆಯೂ ಕರೆದದ್ದುಂಟೆ?

ಅದಕ್ಕೆ ಬದಲಾಗಿ ಸಮಯ ಸಂದರ್ಭ ನೋಡಿ ಬೆಂಗಳೂರಿನ ಅಕರಾಳ ವಿಕರಾಳ ಚರಿತ್ರೆಯನ್ನು ಕಟ್ಟುತ್ತಾನೆ. ನಿವೃತ್ತರಿಗೆ, ವಯಸ್ಸಾದವರಿಗೆ ಅದು ವಾಸ ಮಾಡಲು ಯೋಗ್ಯ ಊರಲ್ಲ; ಬಸ್ಸು ಲಾರಿ, ಕಾರು, ಧೂಳು, ಹೊಗೆ- ಇನ್ನು ಏನೇನೋ ಅಬದ್ಧಗಳನ್ನು ಮಾತಿನ ಮಧ್ಯೆ ಎಳೆದು ತಂದು `ನನಗಂತೂ ಕರ್ಮ, ನಿಮಗ್ಯಾಕೆ ಹಿಂಸೆ' ಅಂತ ಮಾತು ಮುಕ್ತಾಯ ಮಾಡಿದರೆ, ಅವನ ಹೆಂಡತಿಯೂ ನಡುನಡುವೆ ಉಪಕಥೆಗಳನ್ನೂ ಸೇರಿಸಿ ಅದೊಂದು `ಹಾರರ್ ಜಗತ್ತು' ಎಂದೇ ಚಿತ್ರಿಸುತ್ತಾಳೆ. ಅವಳು ತಲೆ ಬಗ್ಗಿಸಿ ಕುಳಿತು ಇವನ್ನೆಲ್ಲಾ ಕೇಳುತ್ತಾ ಮಗನಿಗೆ ಇಷ್ಟವಾದ ರೊಟ್ಟಿ ಬಡಿಯುವುದರಲ್ಲಿ ತನ್ಮಯಳಾಗುತ್ತಾಳೆ.

ಆಚಾರ‌್ಯರು ಆ ಊರು ನಿವೃತ್ತರ ಸ್ವರ್ಗವೆಂದು ಕೇಳಿ ಉಂಟು. ಉದ್ಯಾನವನ, ಗುಡಿ, ಗುಂಡಾರ, ಧಾರ್ಮಿಕ, ಸಾಹಿತ್ಯಿಕ- ಅವರವರ ಅಭಿರುಚಿಗೆ ಸಂಬಂಧಿಸಿದ ಸಭೆ ಸಮಾರಂಭಗಳು, ಎಡವಿ ಬಿದ್ದರೆ ಕೈಗೆಟುಕುವ ಆಸ್ಪತ್ರೆಗಳು- ಎಲ್ಲಾ ಅನುಕೂಲಗಳಿಂದ ಸ್ವರ್ಗಸಮಾನವೆಂದೂ, ಎಷ್ಟೋ ಮಕ್ಕಳು ತಮ್ಮ ಅಪ್ಪ ಅಮ್ಮಂದಿರನ್ನು ಅಲ್ಲಿಗೆ ಕರೆಸಿಕೊಂಡಿರುವುದನ್ನು ಅವರು ಕೇಳಿ ಬಲ್ಲರು. ಆದರೆ, ಇವನದು ಇದಕ್ಕೆ ಪ್ರತಿಯಾದ ಚಿತ್ರಣ. ಯಾವಾಗಲೂ ಇವನು ಹಾಗೆಯೇ, ಥೀಸಿಸ್‌ಗೆ ಆ್ಯಂಟಿ ಥೀಸಿಸ್; ಪ್ರಮೇಯಕ್ಕೆ ಪ್ರತಿಪ್ರಮೇಯ. `ಪ್ರಾಣದಂತಿರುವ ಈ ಊರು ಬಿಟ್ಟು ಬರೊಲ್ಲ ಮಾರಾಯ....' ಎಂದು ಅವನ ಮುಖಕ್ಕೆ ಹೊಡೆಯುವಂತೆ ಹೇಳಬೇಕೆಂದು ಎಷ್ಟು ಬಾರಿ ಅಂದುಕೊಂಡಾಗಲೆಲ್ಲಾ ಅವಳ ಕಣ್ಸನ್ನೆಯ ಕಾರಣ ಮೌನವಹಿಸಿದ್ದರು ಆಚಾರ‌್ಯರು.

ಅವನಿಗೇನು ತಮ್ಮನ್ನು ಕರೆಯಬಾರದೆಂಬ ಹಟವಿದ್ದಂತೆ ಕಾಣದಿದ್ದರೂ ಇಲ್ಲದ ರೇಜಿಗೆಯನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧನಿದ್ದಂತೆ ಕಾಣಲಿಲ್ಲ. ಹಿಂದಿನ ದಿನದ ಘಟನೆ ಅವನನ್ನು ಇಲ್ಲಿ ಬಾಧಿಸುತ್ತಿದ್ದುದು ಅವನ ಇಂದಿನ ವರ್ತನೆಗಳಲ್ಲೇ ಪ್ರಕಟಿತವಾಗುತ್ತಿದೆ. ಅವನನ್ನು ಇಂದು ಯಾರನ್ನು ರಮಿಸಲಾರದ ಮನಸ್ಥಿತಿಯಲ್ಲಿದ್ದಂತೆ ತೋರುತ್ತಿಲ್ಲ. ಅವಳ ಮಾತು ಹಾಗೆ ಇಂದು ಹೀಗೆ ಗಾಳಿಯಲ್ಲಿ ತೇಲಿಹೋಯ್ತು. ಕನಲಿದಳು... ಹುಡುಗರಿಬ್ಬರನ್ನು ದರದರನೆ ಎಳೆದು ಕೂಡಿಸಿ ಕೆನ್ನೆಗೆರಡು ಬಾರಿಸಿಯೇ ಬಿಟ್ಟಳು.

ಹಾಲಿನಿಂದ ಓಡೋಡಿಬಂದ ಆಚಾರ‌್ಯರು “ನಾವು ಬರೊಲ್ಲ ಬಿಡಮ್ಮ... ಅವ್ರಿಗ್ಯಾಕೆ ಅಷ್ಟು ಹೊಡಿತೀಯಾ... ಏನೋ ಮಕ್ಳು... ದೊಡ್ಡವರ ಮನಸ್ಸನ್ನ ಅವ್ರ ತಿಳಿಲಾರವು” ಎಂದು ಮಕ್ಕಳನ್ನು ಬಿಡಿಸಿಕೊಂಡು ಬಿಲ್‌ಕುಲ್ ಹೇಳಿಯೇಬಿಟ್ಟರು. “ನಿಮ್ಮಜ್ಜಿಗೆ ಬೆಂಗ್ಳೂರು ನೀರು ಒಗ್ಗೊಲ್ಲ... ಅಲ್ಲಿಗೆ ಬಂದ್ರೆ ಅವ್ಳ ಆರೋಗ್ಯ ಹಾಳಾಗುತ್ತೆ ಪುಟ್ಟ, ಅವಳು ಚೆನ್ನಾಗಿರ‌್ಬೇಕೋ ಬ್ಯಾಡ್ವೋ?” ಎಂದು ಹೇಳೋಹೊತ್ತಿಗೆ ಅವಕ್ಕೇನೋ ಅರ್ಥವಾದಂತಾಗಿ ಸುಮ್ಮನೆ ಎದ್ದು ಹೊರ ನಡೆದವು. ತಿಂಡಿಯನ್ನು ತಿನ್ನದೆ ಅವನೂ ಸೊಸೆಯೂ ಒಂದೊಂದು ಬ್ಯಾಗುಗಳನ್ನು ಎತ್ತಿಕೊಂಡು ಕಾರಿಗೇರಿಸಿ ಹೇಳದೇ ಕೇಳದೆ ಕಾಲು ತೆಗೆದರು. ಅಡುಗೆ ಮನೆಯಲ್ಲಿ ಅವಳು ಮುಸಿ ಮುಸಿ ಅಳುತ್ತಿದ್ದುದು ಆಚಾರ‌್ಯರಿಗೆ ಕೇಳದೇ ಇರಲಿಲ್ಲ.

ಇವನು ಹೀಗೆಯೇ, ಅಪ್ಪ, ಅಮ್ಮರನ್ನು ಹುಟ್ಟಿದಾರಾಭ್ಯ ಗೋಳು ಹೊಯ್ದುಕೊಂಡವನೆ. ಅವಳ ಎದೆಯಲ್ಲಿ ಹಾಲು ಇಲ್ಲದಾಗ ಮೇಲು ಹಾಲು ಹಾಕಿ ಸಾಕಿದ್ದೊಂದು ಹರಸಾಹಸ. ಮಧ್ಯರಾತ್ರಿಯೆದ್ದು ಹಾಲಿಗಾಗಿ ಹಂಬಲಿಸುವುದು. ನೀರು ಕಾಯಿಸಿ ಪೌಡರ್ ಹಾಕಿ ಹಾಲು ಮಾಡಿ ಅವನ ತುಟಿಗೆ ಇಡುವ ಹೊತ್ತಿಗೆ ಅವನ ಚೀರಾಟ ಮುಗಿಲು ಮುಟ್ಟುತ್ತಿತ್ತು. ದೊಡ್ಡವನಾದರೆ ಸರಿಹೋಗುತ್ತಾನೆ. ಶಾಲೆಗೆ ಸೇರಿದ ಮೇಲೆ, ಹೈಸ್ಕೂಲು. ಕಾಲೇಜು, ಒಂದು ಕೆಲಸ, ಕೊನೆಗೆ ಮದುವೆ ಮಾಡಿದರೆ ಸರಿಯಾಗುತ್ತಾನೆ- ಎಂದು ಕಾದು ನೋಡುವುದೇ ಆಯ್ತು. ಕಾಯುತ್ತಾ ಬಂದದ್ದೇ ಪುಣ್ಯ. ಹೆಜ್ಜೆ ಹೆಜ್ಜೆಗೂ ಒಂದಲ್ಲಾ ಒಂದು ರೇಜಿಗೆ, ಉಪದ್ವ್ಯಾಪ. ಬಿಡದೆ ಸುರಿವ ಮರದ ಮಳೆಯ ಹನಿಗಳ ಹಾಗೆ.
`ಇವನನ್ನು ಯಾಕಾದರೂ ಹೆತ್ತೆನೋ' ಎಂದು ಸರಿರಾತ್ರಿಯಲ್ಲಿ ಅವಳು ಗೋಳಿಟ್ಟ ಘಳಿಗೆಗಳು ಎಷ್ಟಿಲ್ಲ?

`ಯಾರ‌್ಯಾರಿಗೋ, ಎಂಥೆಂಥವರಿಗೋ ಒಳ್ಳೆಯ ಮಕ್ಕಳು ಹುಟ್ಟಿದವು ತನಗೆ ಮಾತ್ರ ಇಂಥವನು ಹುಟ್ಟಿ ಬಿಟ್ಟನಲ್ಲಾ' ಎಂದು ಗೋಳಿಟ್ಟಾಗೆಲ್ಲ ಇದೇ ಆಚಾರ‌್ಯರು ಸಮಾಧಾನಿಸಿದ್ದಾರೆ. “ಮತ್ತೊಬ್ಬರೊಂದಿಗೆ ಹೋಲಿಕೆ ಮಾಡುವುದರಿಂದಲೇ ನಿನಗೆ ಹೀಗೆಲ್ಲಾ ದುಃಖ ಆಗುತ್ತಿದೆ” ಎಂದೆಲ್ಲ ತಮ್ಮ ಪಾಂಡಿತ್ಯ ಬಳಸಿ ಸಮಾಧಾನಿಸಿದ್ದೂ ಇದೆ. ಅವಳಿಗೇನೋ ಇವರು ಸಮಾಧಾನ ಹೇಳಿದರೂ ತಾವೂ ಹಾಗೆಯೇ ಒಳಗೊಳಗೆ ಸಂಕಟಪಟ್ಟುಕೊಂಡರಲ್ಲದೆ `ಪ್ರಾರಬ್ಧ' ಎಂಬ ಮಾತನ್ನು ಅಂದುಕೊಂಡದ್ದೂ ಉಂಟು. ಅವನ ಸ್ವಭಾವವೇ ಹಿಂಸಾರತಿಯದ್ದಿರ ಬಹುದೆಂಬ ತೀರ್ಮಾನಕ್ಕೆ ಅವರು ಬಂದೂ ಬಿಟ್ಟಿದ್ದರು.

ಕಣ್ಣೀರು ಒರೆಸಿಕೊಳ್ಳುತ್ತಲೆ ಬಂದು ಆಚಾರ‌್ಯರ ಪಕ್ಕದಲ್ಲಿ ಕುಳಿತ ಅವಳು ಮನೆಯನ್ನೆಲ್ಲಾ ಕಣ್ಣಾಡಿಸಿ ನೋಡಿ “ಪ್ರಾಣ ಹೋದರೂ ಮನೆಯನ್ನು ಮಾತ್ರ ಮಾರಬೇಡಿ” ಎಂದು ಸೋಫಾಕ್ಕೆ ಒರಗಿದಳು. ಇದೊಂದು ವಿಷಯದಲ್ಲಾದರೂ ನನ್ನ ಪರ ನಿಂತಳಲ್ಲಾ ಎಂದು ಹೆಮ್ಮೆಯಿಂದ ಆಚಾರ‌್ಯರು ಅವಳನ್ನು ನೋಡಿದರು. ಹೌದು ಇಂದು ಚಮನ್‌ಲಾಲ್ ಬರುತ್ತಾನೆ, ಅವನಿಗೆ ಸ್ಪಷ್ಟವಾಗಿ ಹೇಳಿಯೇ ತೀರಬೇಕೆಂದುಕೊಂಡರು.

ಇದೆಲ್ಲ ಆರಂಭವಾದದ್ದೇ ಈ ಚಮನ್‌ಲಾಲ್ ತಮ್ಮ ಪಕ್ಕದ ಮನೆಯನ್ನು ಖರೀದಿ ಮಾಡಿದಂದಿನಿಂದ. ಊರು ಬೆಳೆ ಬೆಳೆದು ನಗರವಾದ ಮೇಲೆ ತಮ್ಮ ಮನೆಯೂ ನಗರದ ಮಧ್ಯಭಾಗದಲ್ಲಿಯಿದೆಯೆಂಬುದು ಆಚಾರ‌್ಯರಿಗೆ ಮೊದಮೊದಲಿಗೆ ಹೆಮ್ಮೆಯ ವಿಷಯವಾಗಿತ್ತು. ಆದರೆ ಅದೇ ತಮ್ಮ ಮನೆ ಮುಳುವಾಗಲು ಕಾರಣವಾಗುತ್ತದೆಂದು ಅವರು ಯೋಚಿಸಿಯೇ ಇರಲಿಲ್ಲ. ಪಕ್ಕದ ಮನೆಯನ್ನು ಕೆಡವಿ ಕಾಂಪ್ಲೆಕ್ಸ್ ಕಟ್ಟಬೇಕೆಂಬ ಉದ್ದೇಶವಿರಿಸಿಯೇ ಅವನು ಖರೀದಿಸಿದ್ದನಂತೆ. ಅದರ ಜಾಗ ಕಾಂಪ್ಲೆಕ್ಸಿಗೆ ತೀರಾ ಚಿಕ್ಕದ್ದೆನಿಸಿ ಅಕ್ಕಪಕ್ಕದ ಮನೆಗಳ ಮೇಲೂ ಕಣ್ಣು ಹಾಕಿದ್ದ. ಹಿಂದಿನ, ಮುಂದಿನ ಎಲ್ಲ ಮನೆಗಳೂ ಅವನ ದೃಷ್ಟಿಯಲ್ಲಿ ಕರಗಿ ಹೋದವು.

ಉಳಿದಿರುವುದು ಆಚಾರ‌್ಯರ ಮನೆ ಮಾತ್ರ. ಹತ್ತು ಹಲವು ಬಾರಿ ಎಡತಾಕಿದಾಗಲೂ ಆಚಾರ‌್ಯರು ಜಪ್ಪಯ್ಯ ಎನ್ನಲಿಲ್ಲ. ಆಗ ಚಮನ್‌ಲಾಲನಿಗೆ ಹೊಳೆದದ್ದೇ ಪಕ್ಕದ ಮನೆಯನ್ನು ಖರೀದಿಸಲು ಹೂಡಿದ ತಂತ್ರ. ಹೈದ್ರಾಬಾದಿನಲ್ಲಿರುವ ಅವರ ಮಗನನ್ನು ಸಂಪರ್ಕಿಸಿ ಹಣದ ಆಮಿಷ ತೋರಿ `ನಿಮ್ಮ ಅಮ್ಮಂದು ಅಪ್ಪಂದು ಜವಾಬ್ದಾರಿ ನಂಗಿರಲಿ' ಅಂತ ಹೇಳಿ ಅವನನ್ನು ಯಾಮಾರಿಸಿ ಮನೆ ಖರೀದಿಸಿಯೇ ಬಿಟ್ಟ. ನೆಲೆ ಇಲ್ಲದೆ ಮೇಲೆ ಈಗ ಯಾವುದೋ ಒಂದು ವೃದ್ಧಾಶ್ರಮದಲ್ಲಿ ಅವರು ಸಾವನ್ನು ಎದುರು ನೋಡುತ್ತಿದ್ದಾರೆ.

ಅಂದು ರಾತ್ರಿಯೇ ಮೊಬೈಲು ಕಿಣಿಕಿಣಿಸಿತು. ಚಮನ್‌ಲಾಲ್ ಮಗನನ್ನು ಛೂ ಬಿಡುತ್ತಾನೆಂದು ಎಣಿಸಿದಂತೆಯೇ ಆಯ್ತು. ತಾವು ಬೆಂಗಳೂರಲ್ಲಿ ದೊಡ್ಡ ಸೈಟು ಖರೀದಿ ಮಾಡಲು ಹಣ ಬೇಕಿದ್ದು, ನಿಮ್ಮ ನಿವೃತ್ತಿಯ ಹಣ ಯಾತಕ್ಕೂ ಸಾಲದೆಂದೂ, ಸೈಟುಗಳ ರೇಟು ಮುಗಿಲು ಮುಟ್ಟಿದೆಯೆಂದೂ, ತನ್ನ ಹೆಂಡತಿ ಡ್ಯೂಪ್ಲೆಕ್ಸ್ ಮನೆಯ ಕನಸಿನಲ್ಲಿರುವಳೆಂದೂ, ಅದನ್ನು ಸಾಕಾರಗೊಳಿಸಲು ನೀವು ಸಹಕರಿಸಬೇಕೆಂದೂ, ಚಮನ್‌ಲಾಲ್‌ನ ಸಲಹೆಯನ್ನು ನೀವು ಕೇಳಬೇಕೆಂದೂ ಉವಾಚಿಸಿದ. ಈ ಬಾರಿ ಆಚಾರ‌್ಯರು ಉತ್ತರ ನೀಡದೆ ಅವಳಿಗೆ ಮೊಬೈಲ್ ಕೊಟ್ಟು ಸುಮ್ಮನಾದರು. ಅವಳು ಎಂದೂ ತಳೆಯದ ಚಾಮುಂಡಿ ಅವತಾರವನ್ನು ತಾಳಿ `ಬಿಲ್‌ಕುಲ್' ಆಗುವುದಿಲ್ಲವೆಂದು ಫೋನು ಕುಕ್ಕಿಟ್ಟು ಬಿಟ್ಟಳು. ಮತ್ತೆ ಮತ್ತೆ, ರಿಂಗಣಿಸಿ ಫೋನು ಎತ್ತದಾದಾಗಲೇ ಅವನು ಮಡದಿ ಮಕ್ಕಳೊಂದಿಗೆ ಬಂದು ಇಳಿದದ್ದು. 

ಮೊದಲೇ ಯೋಚಿಸಿಕೊಂಡಿರಬೇಕು. ಚಮನ್‌ಲಾಲ್ ಸಂಜೆ ಬಂದು ಮನೆಯ ಸುದ್ದಿ ತೆಗೆದ. `ನಿಮ್ಮ ಅಪ್ಪಾವ್ರಿಗೆ ತಿಳ್ಸಿ ಹೇಳಿ...' ಅಂದ. `ನಾನು ಒಳ್ಳೇನಲ್ಲಾ...' ಅಂತಲೂ ಬೆದರಿಸಿದ. `ಒಂದೈದು ಲಕ್ಷ ಜಾಸ್ತೀನೆ ತಗಳ್ರೀ...' ಅಂದ. ಯಾವುದಕ್ಕೂ ಆಚಾರ‌್ಯರೂ, ಹೆಂಡತಿಯೂ ಪ್ರತಿಕ್ರಿಯಿಸಲಿಲ್ಲ. ಅವರದ್ದು ಒಂದೇ ಮಾತು- `ಮನೆ ಮಾರುವುದಿಲ್ಲ'.

ಸೊಸೆ-ಮಗ ಬುಸುಗುಡಲಾರಂಭಿಸಿದರು. ಒಂದು ಹೆಜ್ಜೆ ಮುಂದೆ ಹೋಗಿ `ನಿಮ್ಮಿಂದ ಇಷ್ಟಾದ್ರೂ ಸಹಾಯವಾಗದಿದ್ರೆ ಹೆಂಗೇ?' ಅಂದ್ರು. “ಮನೆ ಹೋಯ್ತೊಂತ ಹೆದ್ರಿಕೆ ಬ್ಯಾಡಿ ಸೋಮಿ, ಊರಾಚೆಗಿನ ಬಡವಾಣೇಲಿ ಒಂದು ಮನಿ ಭೋಗ್ಯಕ್ಕೆ ಆಕುಸಿಕೊಡ್ತೀನಿ” ಅಂತ ಮತ್ತೆ ಚಮನ್‌ಲಾಲ್ ನುಡಿದಿದ್ದೇ ತಡ- `...ಇಷ್ಟು ಅನುಕೂಲ ಯಾರು ಮಾಡಿಕೊಡ್ತಾರೆ?' ಅಂತ ಮಗನೂ, `ಊರ ಹೊರ‌್ಗೆ ಗಾಳಿ-ಬೆಳ್ಕು ಎಲ್ಲ ಶುದ್ಧವಾಗಿರುತ್ತೆ' ಅಂತ ಸೊಸೇನೂ ರಾಗ ತೆಗೆದರು. ಯಾವುದಕ್ಕೂ ಆಚಾರ‌್ಯರಾಗಲಿ, ಅವರ ಹೆಂಡತಿಯಾಗಲಿ ಪ್ರತಿ ಮಾತು ತೆಗೆಯದೆ ಮೌನವಾದರು.

ತಾವಿರುವ ಮನೆಯನ್ನು ಎಷ್ಟೊಂದು ಪ್ರೀತಿಯಿಂದ ಕಟ್ಟಿದ್ದರು. ಕಾಸಿಗೆ ಕಾಸು ಸೇರಿಸಿ ಕಟ್ಟಿದ ಕನಸಿನ ಮನೆ. ಹಲವಾರು ವರ್ಷ ಉಸಿರಾಡಿದ, ನಗೆಚೆಲ್ಲಿದ, ರೋದಿಸಿದ, ಸಂಭ್ರಮಿಸಿದ ಮನೆ. ಸುತ್ತಲೆಲ್ಲಾ ಅನುಕೂಲಗಳು. ಕೊಂಚ ದೂರದಲ್ಲೇ ನರಸಿಂಹನ ದೇವಸ್ಥಾನ. ಆಚೆಯೇ ಪುಷ್ಕರಣಿ, ಪಕ್ಕದಲ್ಲೇ ಆಲದ ಮರ. ದಿನವೂ ಅಲ್ಲಿಂದ ಕೇಳಿಬರುವ ಗಂಟೆ, ಜಾಗಟೆ, ಶ್ಲೋಕಗಳ ಆಹ್ಲಾದ. ಅಂಗಡಿ ಮುಂಗಟ್ಟು ಸಾಲು. ಅದರ ಪಕ್ಕದಲ್ಲೆ ಆಸ್ಪತ್ರೆ, ಕೊನೆಗಾಲದಲ್ಲಿ ಇರಲು ಹೇಳಿ ಮಾಡಿಸಿದ ಜಾಗ.

ಎಂದೋ ಅವರು ತೀರ್ಮಾನಿಸಿದ್ದು ಈ `ನಾರಸಿಂಹನೇ' ತಮಗೆ ಗತಿ ಮತ್ತು ಮತಿ ಎಂದು. ಯಃಕಶ್ಚಿತ್ ಹಣಕ್ಕಾಗಿ, ಇನ್ನಾರದೋ ಸುಖ-ಹಿತಕ್ಕಾಗಿ ಈ ಮನೆಯನ್ನು ಮಾರುವುದರಲ್ಲಿ ಯಾವ ಪುರುಷಾರ್ಥವಿದೆ. ಆಚಾರ‌್ಯರಿಗಿಂತ ಅವರ ಮಡದಿಯೇ ಮುಂದೆ ನಿಂತು `ಮಾರಲಾರೆವು' ಎಂದು ಕಡ್ಡಿ ತುಂಡುಮಾಡಿದಂತೆ ಮಾತಾಡಿದ್ದಳು. ಮಗನೂ ಸೊಸೆಯೂ ಮುಖ ಊದಿಸಿಕೊಂಡು, ರಾತ್ರಿಯೆಲ್ಲಾ ಗುಸುಗುಸು ಮಾತನಾಡಿ ಊರಿಗೆ ಹೊರಡುವಾಗಲೇ ಗೂರ್ಖ ಬಂದು `ಸಾಬ್-ಸಾಬ್' ಎಂದು ಕರೆದದ್ದೂ ಆಚಾರ‌್ಯರು ರೂಂ ಒಳಗೆ ಹೋಗಿ ಅವನಿಂದ ಬೈಸಿಕೊಂಡು ಬಂದದ್ದು.

ನಾಲ್ಕಾರು ಮರದ ಹನಿಗಳು ಬಿದ್ದು ಆಚಾರ‌್ಯರು ಗಲಿಬಿಲಿಗೊಂಡರು. ಮಳೆಗೆ ಹೆದರಿ ಮರದಡಿ ಬಂದರೆ ಮರವೂ ಕಾಡುತ್ತಿದೆಯಲ್ಲಾ ಎಂದೆನಿಸಿತು. ನೊಣಗಳ ಆಕ್ರಮಣ ಜಾಸ್ತಿ ಆದಂತೆಲ್ಲಾ ನಾಯಿ ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಬಾಲವನ್ನೆತ್ತಿ ಬಡಿಯಲು ಯತ್ನಿಸುತ್ತಿತ್ತು. ಅಂಗಾತ ಮಲಗಿ ಗಾಯವನ್ನು ಭೂತಾಯ ತೊಡೆಯ ಮೇಲಿರಿಸಿ ನೊಣಗಳಿಂದ ಪಾರಾಗಲು ಹವಣಿಕೆ ಹೂಡುತ್ತಿತ್ತು. ಚಮನ್‌ಲಾಲ್ ಇಂದೂ ಬರಬಹುದು. ಅವನು ಮತ್ತೆ ಮನೆಗೆ ಕಾಲಿಡದಂತೆ ಮಾಡಲು ಏನಾದರೂ ಮಾಡಬೇಕು. ಅವನು ಮತ್ತೆ ಮಗನಿಂದ ಒತ್ತಾಯ ಹೇರಿಸುವುದರಿಂದ ಬಿಡುಗಡೆಗೊಳ್ಳಲೇಬೇಕು.

ತಕ್ಷಣ ಅವರಿಗೆ ಉಪಾಯವೊಂದು ಹೊಳೆಯಿತು. ತನ್ನ ಬಳಿ ಈ ಕರ್ಣಪಿಶಾಚಿ ಇರುವುದರಿಂದ ತಾನೆ ಅವನು ಪೋನಾಯಿಸುವುದು. ತಕ್ಷಣ ಆಚಾರ‌್ಯರು ಮೊಬೈಲ್‌ನ ಸಾಕೆಟ್ ಬಿಚ್ಚಿ ಸಿಮ್‌ನ್ನು ತೆಗೆದು ದೂರಕ್ಕೆ ಬಿಸಾಡಿದರು. ಕೆಸರು ನೀರಲ್ಲಿ ಅದು ನೆನೆಯತೊಡಗಿದ್ದನ್ನ ನೋಡಿದ ಆಚಾರ‌್ಯರಿಗೆ ತರ್ಪಣ ಬಿಟ್ಟಂತ ಭಾವ ಮೂಡಿತು.

ಮೋಡಗಳು ದಟ್ಟೈಸಿವೆ. ಅದಕ್ಕೆ ಹೆದರಿ ಇನ್ನೂ ಎಷ್ಟು ಹೊತ್ತು ಹೀಗೆ ಮರದಡಿ ನಿಂತು ಕಾಯುವುದು? ಏನಾದರಾಗಲಿ ಎಂದು ರಸ್ತೆಗೆ ಕಾಲಿಟ್ಟರು. ತಕ್ಷಣವೆ ಕೋಲ್ಮಿಂಚೊಂದು `ಫಳ್' ಎಂದು ಭೂಮಿ ಆಕಾಶಕ್ಕೂ ಮೂಡಿತು. ಅದರ ಬೆನ್ನ ಹಿಂದೆಯೇ ಗುಡುಗಿನ ಮೊಳೆತ. ಯಾವುದಕ್ಕೂ ಸೊಪ್ಪು ಹಾಕದೆ ಧಡ ಧಡ ಹೆಜ್ಜೆ ಇಟ್ಟು ಹೊರಟ ಆಚಾರ‌್ಯರ ನೋಡಿ ಕನ್ನಡಿ ಕಟ್ಟಡಗಳ ಕೆಳಗೆ ನಿಂತ ಜನ ವಿಸ್ಮಿತರಾದರು. ಮಿಂಚು, ಗುಡುಗುಗಳ ಆರ್ಭಟ ನಿಲ್ಲದೆ ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.