ಬ್ರಿಟಿಷರು ಭಾರತದ ಬಹುತೇಕ ಎಲ್ಲ ಸಂಸ್ಥಾನಗಳಲ್ಲೂ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡ ನಂತರ, ಅವರ ಆಡಳಿತದ ಅನುಕೂಲಕ್ಕೆ ತಕ್ಕಂತೆ ತಾವು ಗೆದ್ದ ಪ್ರದೇಶಗಳನ್ನು ವಿಂಗಡಿಸಿಕೊಂಡಿದ್ದರು. ಈ ವಿಭಾಗದ ಕ್ರಮ ಸರಿಯಲ್ಲ ಎನ್ನುವುದು ಬ್ರಿಟಷರಿಗೂ ತಿಳಿದಿತ್ತು.
ಅದನ್ನು ನಿವಾರಿಸಲು ಅವರೂ ಪ್ರಯತ್ನ ಮಾಡುತ್ತಿದ್ದರು. ಅದರ ಫಲವಾಗಿಯೇ 1918ರಲ್ಲಿ ಸಿದ್ಧವಾದದ್ದು ಮಾಂಟೆಗೋ-ಚೆಲ್ಮ್ಸ್‌ಫರ್ಡ್ ವರದಿ. ಒಡೆದು ಆಳುವ ನೀತಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿದ್ದ ಬ್ರಿಟಿಷರು ಟಿಪ್ಪುಸುಲ್ತಾನನ ಮರಣಾನಂತರ ಕಾನಡಾ ಜಿಲ್ಲೆ ಮತ್ತು ಹೈದರಾಬಾದ್ ನಿಜಾಮನಿಂದ ದತ್ತಕವಾಗಿ ಪಡೆದಿದ್ದ ಬಳ್ಳಾರಿ ಜಿಲ್ಲೆಯನ್ನು ಮದ್ರಾಸ್ ಆಡಳಿತ ಕೇಂದ್ರಕ್ಕೂ, ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳನ್ನು ಮುಂಬಯಿ ಆಡಳಿತ ಕೇಂದ್ರಕ್ಕೂ ಸೇರಿಸಿದ್ದರು. ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲೇ ಉಳಿದಿದ್ದವು.
ಮೈಸೂರು ಸಂಸ್ಥಾನವು ಮೈಸೂರು ಒಡೆಯರ ಆಳ್ವಿಕೆಗೆ ಸೇರಿದ್ದರೆ, ಕೊಡಗು, ಕೊಡಗಿನ ರಾಜರ ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಇನ್ನೂ ಹಲವು ಪ್ರದೇಶಗಳು ಸಂಸ್ಥಾನಿಕರ ವಶದಲ್ಲಿದ್ದವು. ಹೀಗೆ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದ ಪ್ರದೇಶಗಳು ಬೇರೆ ಬೇರೆ ಅಧಿಕಾರಗಳಲ್ಲಿ ಹಂಚಿಹೋಗಿದ್ದವು.
ಈ ಎಲ್ಲ ಪ್ರದೇಶಗಳನ್ನೂ ಪುನಃ ಒಂದು ಆಡಳಿತವ್ಯಾಪ್ತಿಗೆ ತರುವ ಪ್ರಯತ್ನಗಳು 20ನೇ ಶತಮಾನದ ಆರಂಭದಿಂದಲೂ ನಡೆದವು. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಬೆಸೆಯುವ ಕೆಲಸ ಮಾಡಿದರೂ ಆಡಳಿತಾತ್ಮಕವಾಗಿ ಒಂದಾಗಲು ಶಾಸನ ಸಭೆಗಳ ಒಪ್ಪಿಗೆಯನ್ನು ಪಡೆಯಲೇಬೇಕಾಗಿತ್ತು.
ಸ್ವಾತಂತ್ರ್ಯಪೂರ್ವ ಕರ್ನಾಟಕದಲ್ಲಿದ್ದ ಸಣ್ಣಪುಟ್ಟ ಸಂಸ್ಥಾನಗಳ ಶಾಸನಸಭೆಗಳಲ್ಲೂ ಕನ್ನಡ ಭಾಷಿಕ ಪ್ರದೇಶಗಳ ಆಡಳಿತಾತ್ಮಕ ಏಕೀಕರಣಕ್ಕೆ ಒಪ್ಪಿಗೆ ಅವಶ್ಯಕತೆ ಇತ್ತು. ಆದರೆ, ಭಾರತವು ಗಣರಾಜ್ಯವಾದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಾಸನಸಭೆಗಳಲ್ಲಿ ಮಸೂದೆ ಮಂಡನೆಯಾಗಿ, ಚರ್ಚೆಯ ನಂತರ ಅನುಮೋದನೆ ಪಡೆಯಬೇಕಾಗಿತ್ತು.
ಸ್ವಾತಂತ್ರ್ಯ ಬರುವುದಕ್ಕೆ ಎಷ್ಟೋ ಮುಂಚಿನಿಂದಲೂ ಶಾಸನಸಭೆಗಳಲ್ಲಿ ಕರ್ನಾಟಕ ಏಕೀಕರಣದ ಪ್ರಯತ್ನಗಳು ನಡೆದಿವೆ. ಆ ಪ್ರಯತ್ನಗಳಲ್ಲಿ ಮೊದಲು ಗಮನ ಸೆಳೆಯುವುದು ಮದ್ರಾಸ್ ವಿಧಾನಸಭೆಯಲ್ಲಿ ಆಗ ವಿಧಾನಪರಿಷತ್ ಸದಸ್ಯರಾಗಿದ್ದ ಡಾ.ಯು.ರಾಮರಾವ್ ಅವರು 1926ರಲ್ಲೊಮ್ಮೆ ಮತ್ತು 1928ರಲ್ಲಿ ಮತ್ತೊಮ್ಮೆ `ಹರಿದು ಹಂಚಿ ಹೋಗಿರುವ ಕರ್ನಾಟಕವನ್ನು ಒಂದು ಮಾಡುವ~ ಸಾಧ್ಯತೆಗಳನ್ನು ಪರಿಶೀಲಿಸಲು ಒಂದು ಸಮಿತಿಯ ರಚನೆ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆ.
ಆದರೆ ಎರಡು ಸಲವೂ ಅವರ ಪ್ರಸ್ತಾವನೆಗೆ ಬೆಂಬಲ ಸಿಕ್ಕಿರಲಿಲ್ಲ. 1929ರ ಆಗಸ್ಟ್ 8ರಂದು ಮದರಾಸ್ ಪ್ರಾಂತ್ಯದ ವಿಧಾನಪರಿಷತ್‌ನಲ್ಲಿ ಬಳ್ಳಾರಿಯ ಪಿ.ಶಿವರಾವ್ ಅವರು `ಕನ್ನಡ ಮಾತನಾಡುವ ಜನರೇ ಅಧಿಕವಾಗಿರುವ ಮುಂಬಯಿ, ಮದರಾಸ್ ಮತ್ತು ಕೊಡಗು ಪ್ರಾಂತ್ಯಗಳನ್ನು ಸೇರಿಸಿ ಕರ್ನಾಟಕ ಪ್ರಾಂತ್ಯ ರಚನೆಗೆ ಸರ್ಕಾರವನ್ನು ಒತ್ತಾಯಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಅದನ್ನು ಎ.ರಂಗನಾಥ ಮೊದಲಿಯಾರ್, ಜೆ.ಎ.ಸಲ್ದಾನ, ಎ.ಬಿ.ಶೆಟ್ಟಿ, ಡಾ.ಆರ್.ನಾಗನಗೌಡ ಮತ್ತು ಇನ್ನೂ ಹಲವರು ಬೆಂಬಲಿಸಿದರು. ವಿಧಾನಪರಿಷತ್ತು ಪ್ರಸ್ತಾವನೆಯನ್ನು ಸ್ವೀಕರಿಸಿತಾದರೂ ಸರ್ಕಾರ ಅದನ್ನು ವಿರೋಧಿಸಿತು.
ಮುಂಬಯಿಯ ವಿಧಾನಪರಿಷತ್‌ನಲ್ಲೂ 1929ರ ಆಗಸ್ಟ್ 12ರಂದು ಧಾರವಾಡದ ವಿ.ಎನ್.ಜೋಗ್ ಕರ್ನಾಟಕ ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ಕೆಳಕಂಡ ಠರಾವನ್ನು ಮಂಡಿಸಿದರು.
`ಈ ಸಭೆಯು ಮಾನ್ಯ ಗವರ್ನರ್-ಇನ್-ಕೌನ್ಸಿಲ್ ಅವರಿಗೆ ಭಾರತ ಸರ್ಕಾರವನ್ನು ಕನ್ನಡ ಭಾಷೆ ಮಾತನಾಡುವ ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯಗಳು ಮತ್ತು ಕೊಡಗು ರಾಜ್ಯಗಳನ್ನು ಒಟ್ಟುಗೂಡಿಸಿ ಗವರ್ನರ್ ಅವರ ನೇತೃತ್ವದಲ್ಲಿ ಎಲ್ಲಾ ಶಾಸಕಾಂಗ, ಕಾರ್ಯಾಂಗ ಮತ್ತು ಆಡಳಿತ ಅಧಿಕಾರಗಳುಳ್ಳ ಸ್ವತಂತ್ರ ಮತ್ತು ಸ್ವಾಯತ್ತ ಪ್ರಾಂತ್ಯವನ್ನಾಗಿ ರಚಿಸಲು ಪ್ರೇರೇಪಿಸಬೇಕೆಂದು ಶಿಫಾರ್ಸು ಮಾಡುತ್ತದೆ~.
ಸಭೆಯಲ್ಲಿದ್ದ ಎಲ್ಲರೂ ಠರಾವನ್ನು ಅನುಮೋದಿಸಿದರಾದರೂ, ಹಾಜರಿದ್ದ ಸದಸ್ಯರ ಸಂಖ್ಯೆಯೇ ಕಡಿಮೆ ಇದ್ದುದರ ಜೊತೆಗೆ ಸರ್ಕಾರವೇ ಠರಾವನ್ನು ಬಲವಾಗಿ ವಿರೋಧಿಸಿತು.
ಪ್ರಾಂತಿಕ ವಿಧಾನಸಭೆಗಳಲ್ಲಿ ನಿರ್ಣಯಗಳಾಗದೆ ಕೇಂದ್ರ ಶಾಸನಸಭೆಯು ಯಾವುದೇ ಚರ್ಚೆಯನ್ನೂ ಮಾಡಲು ಸಾಧ್ಯವಿರಲಿಲ್ಲ. ಪ್ರಾಂತಿಕ ವಿಧಾನಸಭೆಗಳಲ್ಲಿ ಕನ್ನಡ ಸದಸ್ಯರ ಸಂಖ್ಯೆಯೇ ಕಡಿಮೆ ಇರುತ್ತಿತ್ತು. ಮುಂಬಯಿ ವಿಧಾನಸಭೆಯ ಒಟ್ಟು 111 ಸದಸ್ಯರ ಪೈಕಿ ಕನ್ನಡ ಸದಸ್ಯರ ಸಂಖ್ಯೆ ಕೇವಲ ಎರಡು. ಮದ್ರಾಸಿನ ವಿಧಾನಸಭೆಯ ಒಟ್ಟು 123 ಸದಸ್ಯರ ಪೈಕಿ ಕನ್ನಡಿಗರ ಸಂಖ್ಯೆ ಕೇವಲ ಐದು. ಇದು ಕನ್ನಡಿಗರ ಅಸಹಾಯಕ ಪರಿಸ್ಥಿತಿಯ ಅರಿವು ಮಾಡಿಸುತ್ತದೆ.
1927ರಲ್ಲಿ ರಾವ್ ಬಹದ್ದೂರ್ ಎಸ್.ಟಿ.ಕಂಬಳಿಯವರು ಮುಂಬಯಿ ವಿಧಾನಪರಿಷತ್ತಿನಲ್ಲಿ ಕೇಳಿದ- `ಕರ್ನಾಟಕ ಏಕೀಕಕರಣದ ಬಗ್ಗೆ ಸರ್ಕಾರಕ್ಕೆ ಏನು ತಿಳಿದಿದೆ?~ ಎಂಬ ಪ್ರಶ್ನೆಗೆ ಸರ್ಕಾರವು, 1926ರಲ್ಲಿ ಸಿದ್ಧಪಡಿಸಿದ್ದ `ಏಕೀಕಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ~ ಎಂಬ ಉತ್ತರವನ್ನೇ ನೀಡಿತು.
1938ರ ಏಪ್ರಿಲ್ 4ರಂದು ಮುಂಬಯಿ ಶಾಸನಸಭೆಯಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರು ಮಂಡಿಸಿದ ಮತ್ತು ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಕ್ರಿಯಿಸಿದ ಮಾತುಗಳು ಅಧ್ಯಯನಯೋಗ್ಯವಾಗಿವೆ. ಆ ಚರ್ಚೆಯಲ್ಲಿ ವಿ.ಎನ್.ಜೋಗ್ ಮತ್ತು ಎಸ್.ಟಿ.ಕಂಬಳಿ, ಬಿ.ಜಿ.ಖೇರ್ ಮತ್ತು ಆಲಿ ಮಹಮದ್ ಖಾನ್ ದೆಹ್ಲವಿ ಅವರೂ ಪಾಲ್ಗೊಂಡಿದ್ದರು.
ಪುನಃ 1946ರ ಜುಲೈ 19ರಂದು ಅಂದಾನಪ್ಪ ದೊಡ್ಡಮೇಟಿ ಅವರು ಕನ್ನಡದಲ್ಲೇ ವಿಷಯಮಂಡನೆ ಮಾಡಿ, ಕನ್ನಡಕ್ಕೆ ಗೌರವ ತಂದರು. 1947ರ ಏಪ್ರಿಲ್ 1ರಂದು ಅಂದಾನಪ್ಪ ದೊಡ್ಡಮೇಟಿ ಅವರು ಮುಂಬಯಿ ಶಾಸನಸಭೆಯಲ್ಲಿ ಭಾಷಾವಾರು ಪ್ರಾಂತ ಪುನಾರಚನೆಗೆ ಸಂಬಂಧಿಸಿದ ಗೊತ್ತುವಳಿಯನ್ನು ಹಲವು ಪ್ರಮುಖ ಆಧಾರಗಳ ಸಹಿತ ಮಂಡಿಸಿದಾಗ ನಡೆದ ಚರ್ಚೆಯಲ್ಲಿ ಪಾಲ್ಗೊಂಡವರ ಪೈಕಿ ಪ್ರಮುಖರೆಂದರೆ- ಎಸ್.ಎಲ್.ಕರಂದೀಕರ್, ಬಾಬು ಭಾಯಿ ಪಟೇಲ್, ಬಿ.ಜಿ.ಖೇರ್. ಆಗ ಮುಂಬಯಿ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಜಿ.ಖೇರ್ ಕನ್ನಡದಲ್ಲೂ ಮಾತನಾಡಿದರು. ಸಭೆಯು ಗೊತ್ತುವಳಿಯನ್ನು ಅನುಮೋದಿಸಿತು.
ಮದ್ರಾಸ್ ಶಾಸನಸಭೆಯಲ್ಲಿ ಏಪ್ರಿಲ್ 27, 1947ರಂದು ಡಾ.ಪಿ.ಸುಬ್ಬರಾಯನ್ ಅವರು ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ಪುನಾರಚಿಸುವುದಕ್ಕೆ ಸಂಬಂಧಿಸಿದಂತೆ ಪ್ರಚೋದಕ ಭಾಷಣ ಮಾಡಿ, `ಭಾರತೀಯ ಸಂವಿಧಾನವನ್ನು ರಚಿಸುವಾಗ ಭಾಷಾನುಗುಣವಾಗಿ ಪ್ರಾಂತ್ಯಗಳ ಪುನಾರಚನೆ ಅತ್ಯಂತ ಅವಶ್ಯಕವಾಗಿದೆ.
ಆದ್ದರಿಂದ ಘಟನಾ ಸಮಿತಿಯು ತನ್ನ ಪ್ರಥಮ ಸಭೆಯಲ್ಲೇ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಹಾಗೂ ಹೊಸ ಸಂವಿಧಾನದ ಪ್ರಕಾರ ಭಾಷಾನುಗುಣವಾಗಿ ಭಾರತದ ಪ್ರಾಂತ್ಯಗಳನ್ನು, ಮುಖ್ಯವಾಗಿ ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಆಂಧ್ರಗಳನ್ನು ಪ್ರತ್ಯೇಕ ಪ್ರಾಂತ್ಯಗಳನ್ನಾಗಿ ರಚಿಸುವ ಬಗ್ಗೆ ಯೋಗ್ಯ ಉಪಾಯಗಳನ್ನು ಕೈಗೊಳ್ಳತಕ್ಕದ್ದು~ ಎಂದು ಮಂಡಿಸಿದ ಗೊತ್ತುವಳಿಯು ಸ್ವೀಕಾರವಾಯಿತು.
ಕರ್ನಾಟಕ ಏಕೀಕರಣಕ್ಕಾಗಿ ನಿರಂತರ ಹೋರಾಟ ಮುಂದುವರಿಯಿತು. ಕೆಲವು ಸಂಸ್ಥಾನಗಳು ಏಕೀಕರಣವನ್ನು ವಿರೋಧಿಸಬಹುದು ಎಂಬ ಅಭಿಪ್ರಾಯವೂ ಸುಳ್ಳಾಯಿತು. ಕರ್ನಾಟಕದ ವ್ಯಾಪ್ತಿಗೆ ಸೇರಿದ್ದ ಎಲ್ಲ ಸಂಸ್ಥಾನಗಳೂ ಏಕೀಕರಣವನ್ನು ಬೆಂಬಲಿಸಿದವು. ರಾಜ್ಯ ಪುನರ್ವಿಂಗಡಣಾ ಆಯೋಗದ ರಚನೆಯಾಗಿ, ಅದರ ವರದಿಯು ಸಂಸತ್ತಿನಲ್ಲಿ ಸಲ್ಲಿಕೆಯಾಯಿತು.
ಅದರ ಬಗ್ಗೆ ಸುದೀರ್ಘ ಚರ್ಚೆ ನಡೆದು ಸಂಸತ್ತು ಭಾಷಾವಾರು ಪ್ರಾಂತರಚನೆಗೆ ಅನುಮೋದನೆ ನೀಡಿತು. ರಾ.ಪು. ಆಯೋಗದ ವರದಿಯ ಬಗ್ಗೆ ಮೈಸೂರಿನ ವಿಧಾನಸಭೆಯಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಸುದೀರ್ಘ ವಿವರಣೆ ನೀಡಿ (ನವೆಂಬರ್ 16, 1955), `ವಿಶಾಲ ಮೈಸೂರು ರಾಜ್ಯ~ದ ರಚನೆಗೆ ಬೆಂಬಲ ಸೂಚಿಸಿದರು. ಮೈಸೂರು ಸಂಸ್ಥಾನದ ವಿಧಾನಪರಿಷತ್ತಿನಲ್ಲಿ ರಾ.ಪು. ಆಯೋಗದ ವರದಿಯ ಬಗ್ಗೆ ಚರ್ಚೆ ನಡೆಯಿತು.
1955ರ ಸೆಪ್ಟೆಂಬರ್ 6ರಂದು ಮೈಸೂರು ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲಗೌಡರು ಸುದೀರ್ಘ ಭಾಷಣ ಮಾಡಿ, `ಮೈಸೂರು ಮತ್ತಿತರ ಕನ್ನಡ ಪ್ರದೇಶಗಳ ಆರ್ಥಿಕ ಮತ್ತು ವಾಣಿಜ್ಯಗಳಲ್ಲಿ ಕಂಡುಬರುವ ವೈಷಮ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಬಾರದು~ ಎಂದು ತಿಳಿಸಿ, ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಒಮ್ಮತದ ನಿರ್ಣಯಕ್ಕೆ ಬರಲು ಸಭೆಯನ್ನು ಕೋರಿದ್ದರು.
1955ರ ನವೆಂಬರ್ 29, 30 ಮತ್ತು ಡಿಸೆಂಬರ್ 1ರಂದು ಸಭೆ ಸೇರಿದ ಮೈಸೂರು ಸಂಸ್ಥಾನದ ವಿಧಾನಮಂಡಲವು `ಬಳ್ಳಾರಿಯನ್ನು ಬೇರ್ಪಡಿಸಬಾರದು ಮತ್ತು ಹೊಸ ರಾಜ್ಯಕ್ಕೆ ಮೈಸೂರು ಎಂದು ಹೆಸರಿರಬೇಕು~ ಎಂಬ ತಿದ್ದುಪಡಿಯೊಡನೆ ವರದಿಯನ್ನು ಅಂಗೀಕರಿಸಿತು. ಹೀಗೆ 1956ರ ನವೆಂಬರ್ 1ರಂದು ಕನ್ನಡಿಗರು ಬಹುಸಂಖ್ಯಾತರಾಗಿದ್ದ ಪ್ರದೇಶಗಳೆಲ್ಲವೂ ಸೇರಿ ಮೈಸೂರು ರಾಜ್ಯ ರಚನೆಗೆ ಹಾದಿ ಸುಗಮವಾಯಿತು.
ರಾಜ್ಯದ ಹೆಸರು ಮಾತ್ರ ಮೈಸೂರು ಎಂದೇ ಉಳಿದದ್ದು ಕೆಲವರಿಗೆ ಅಪ್ರಿಯವೇ ಆಗಿತ್ತು. ಕೆಲವು ಶಾಸಕರಂತೂ ಹೆಸರಿನ ಬದಲಾವಣೆಗೆ ಪ್ರಯತ್ನವನ್ನು ಮುಂದುವರಿಸಿದ್ದರು. ಅಂತಹವರ ಪೈಕಿ ರೋಣದ ಅಂದಾನಪ್ಪ ದೊಡ್ಡಮೇಟಿ ಅವರೂ ಒಬ್ಬರು. 1957ರ ಸೆಪ್ಟೆಂಬರ್ 30ರಂದು ಅವರು ಮೈಸೂರು ರಾಜ್ಯದ ವಿಧಾನಸಭೆಯಲ್ಲಿ, `ಮೈಸೂರು~ ರಾಜ್ಯದ ಪ್ರಸ್ತುತ ಹೆಸರನ್ನು `ಕರ್ನಾಟಕ~ ರಾಜ್ಯ ಎಂದು ಕೂಡಲೇ ಬದಲಾಯಿಸಲು ಭಾರತ ಸರ್ಕಾರಕ್ಕೆ ಸಲಹೆ ಮಾಡಬೇಕು~ ಎಂಬ ಠರಾವನ್ನು ಮಂಡಿಸಿ, ಹೆಸರಿನ ಬದಲಾವಣೆಗೆ ಕಾರಣಗಳನ್ನು ವಿವರವಾಗಿ ಮತ್ತು ವಿಚಾರಪೂರ್ಣವಾಗಿ ಮಂಡಿಸಿದರು. ಚರ್ಚೆಯಲ್ಲಿ ಸಿ.ಜೆ.ಮುಕ್ಕಣ್ಣಪ್ಪ, ಎನ್.ರಾಚಯ್ಯ, ಕೆ.ಪುಟ್ಟಸ್ವಾಮಿ, ಎಂ.ರಾಮಪ್ಪ ಮತ್ತಿನ್ನೂ ಅನೇಕ ಶಾಸಕರು ಪಾಲ್ಗೊಂಡರು.ಠರಾವಿನ ಬಗ್ಗೆ ಒಮ್ಮತ ಮೂಡಲಿಲ್ಲ.
1972ರ ಜುಲೈ ತಿಂಗಳಿನಲ್ಲಿ ಮುಖ್ಯಮಂತ್ರಿ ದೇವರಾಜ ಅರಸುರವರು ವಿಧಾನಸಭೆಯಲ್ಲಿ ಮಂಡಿಸಿದ್ದ ಠರಾವು ಹೀಗಿದೆ. `ಭಾರತ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು `ಕರ್ನಾಟಕ~ ಎಂದು ಬದಲಾಯಿಸಬೇಕೆಂದು ಈ ಸಭೆಯವರು ತಮ್ಮ ಖಚಿತ ಅಭಿಪ್ರಾಯವನ್ನು ಘೋಷಿಸಿ, ಈ ಬಗ್ಗೆ ಅಗತ್ಯವಾದ ಸಂವಿಧಾನದ ತಿದ್ದುಪಡಿಗಳನ್ನು ರಾಜ್ಯ ಸರ್ಕಾರದವರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಈ ಸಭೆಯು ಶಿಫಾರ್ಸು ಮಾಡುತ್ತದೆ~.
ಮುಖ್ಯಮಂತ್ರಿಗಳ ಸುದೀರ್ಘ ವಿವರಣೆಯ ನಂತರ ಸಭಾಧ್ಯಕ್ಷರು ನಿರ್ಣಯವನ್ನು ಸಭೆಯ ಒಪ್ಪಿಗೆಗೆ ಮಂಡಿಸಿದಾಗ ಎಲ್ಲಾ ಸದಸ್ಯರೂ ಜಯಕಾರದೊಡನೆ ಅವಿರೋಧವಾಗಿ ಅನುಮೋದಿಸಿದರು.
ರಾಜ್ಯದ ಅರಣ್ಯ ಸಚಿವರಾಗಿದ್ದ ಕೆ.ಎಚ್.ಪಾಟೀಲರು ಇದೇ ಠರಾವನ್ನು ಮೈಸೂರು ರಾಜ್ಯದ ವಿಧಾನಪರಿಷತ್ತಿನಲ್ಲಿ ಮಂಡಿಸಿ, ಸರ್ವ ಸದಸ್ಯರ ಒಪ್ಪಿಗೆ ಪಡೆದರು.
ಹೀಗೆ ಭಾಷಾವಾರು ಪ್ರಾಂತವಾಗಿ ಏಕೀಕರಣಗೊಂಡು ಮೈಸೂರು ಎಂಬ ಹೆಸರು ಪಡೆದಿದ್ದ ರಾಜ್ಯವು `ಕರ್ನಾಟಕ~ ಎಂಬ ಹೆಸರನ್ನು ಪಡೆಯಿತು.
ಲೇಖಕರು ಹಿರಿಯ ಇತಿಹಾಸಕಾರರು ಮತ್ತು ಶಾಸನ ತಜ್ಞರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.