ADVERTISEMENT

ಒಲಿಂಪಿಕ್ಸ್‌ಗೆ ಅಂಚೆಚೀಟಿಗಳ ಮೊಹರು

ನಾಗೇಶ್ ಶೆಣೈ ಪಿ.
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಆಧುನಿಕ ಒಲಿಂಪಿಕ್ಸ್‌ನಷ್ಟೇ ಇತಿಹಾಸ ಒಲಿಂಪಿಕ್ ಕ್ರೀಡೆಗಳಿಗೆ ಸಂಬಂಧಪಟ್ಟ ಅಂಚೆ ಚೀಟಿಗಳಿಗಿವೆ. 1896ರಲ್ಲಿ ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ ಕ್ರೀಡೆಗಳ ಸಂದರ್ಭದಲ್ಲೇ ವಿವಿಧ ಮುಖಬೆಲೆಯ 12 ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗಿತ್ತು.
 
ನಂತರ ಆತಿಥ್ಯ ವಹಿಸುವ ಇತರ ದೇಶಗಳೂ ಒಲಿಂಪಿಕ್ ನೆನಪಿಗೆ ಅಂಚೆ ಚೀಟಿಗಳನ್ನು ಹೊರತರತೊಡಗಿದವು. 1924ರ ಪ್ಯಾರಿಸ್ ಒಲಿಂಪಿಕ್ಸ್ ಆತಿಥ್ಯ ವಹಿಸಿತ್ತು. ಆಗ ಫ್ರಾನ್ಸ್ ದೇಶದ ಜೊತೆಗೆ ಮೊದಲ ಬಾರಿ ಇನ್ನೂ ಆರು ದೇಶಗಳು ಅಂಚೆ ಚೀಟಿಗಳನ್ನು ಹೊರತಂದವು. ನಂತರದ ಒಲಿಂಪಿಕ್ಸ್ ಸಂದರ್ಭದಲ್ಲಿ ಅಂಚೆ ಚೀಟಿಗಳನ್ನು ಹೊರತರುವ ಆತಿಥೇಯ ದೇಶದ ಜತೆಗೆ ಇತರ ದೇಶಗಳ ಸಂಖ್ಯೆಯೂ ಏರುತ್ತ ಹೋಯಿತು.

ಒಲಿಂಪಿಕ್ಸ್‌ನ ಅಂಚೆಚೀಟಿಗಳಲ್ಲಿ ವಿವಿಧ ಕ್ರೀಡೆಗಳನ್ನು ಒಳಗೊಂಡ ಚಿತ್ರಗಳು, ಒಲಿಂಪಿಕ್ಸ್ ಮ್ಯಾಸ್ಕೆಟ್, ಐದು ಬಳೆಗಳ ಚಿತ್ರಗಳು ಮೂಡತೊಡಗಿದ್ದವು. ಪೈಪೋಟಿ ಎಂಬಂತೆ ದೊಡ್ಡ ದೇಶಗಳ ಜತೆಗೆ ಸಮೋವಾ, ಲಿಚೆನ್‌ಸ್ಟಿನ್, ಲಕ್ಸೆಂಬರ್ಗ್, ವನಾಟು ಸೇರಿದಂತೆ ಅನೇಕ ಪುಟ್ಟ ರಾಷ್ಟ್ರಗಳೂ ವಿವಿಧ ಆಕಾರದ ವರ್ಣರಂಜಿತ ಅಂಚೆಚೀಟಿಗಳನ್ನು ಹೊರತರತೊಡಗಿದವು.

ನಮ್ಮೂರಲ್ಲೇ ನಿಧಾನ!
ಒಲಿಂಪಿಕ್ಸ್ ಅಂಚೆ ಚೀಟಿ ಹೊರತರುವಲ್ಲಿ ಭಾರತ ಸ್ವಲ್ಪ ನಿಧಾನ ಮಾಡಿತು. 1968ರ ಮೆಕ್ಸಿಕೊ ಒಲಿಂಪಿಕ್ಸ್ ಸಂದರ್ಭದಲ್ಲಿ ಮೊದಲ ಬಾರಿ ಭಾರತ ಒಲಿಂಪಿಕ್ಸ್ ಬಳೆಗಳ ಚಿತ್ರವನ್ನು ಹೊಂದಿರುವ ಎರಡು ಬೇರೆ ಬೇರೆ ವರ್ಣಗಳ ಅಂಚೆ ಚೀಟಿಯನ್ನು ಹೊರತಂದಿತ್ತು. ನಂತರ 2008ರ ಬೀಜಿಂಗ್ ಕ್ರೀಡೆಗಳವರೆಗೆ ನಿಯಮಿತವಾಗಿ ಒಲಿಂಪಿಕ್ಸ್ ಅಂಚೆ ಚೀಟಿಗಳು ಬಂದಿವೆ.

ಈ ಬಾರಿಯ ಲಂಡನ್ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಭಾರತ ಅಂಚೆ ಇಲಾಖೆ ಇದುವರೆಗೂ ಅಂಚೆ ಚೀಟಿ ಬಿಡುಗಡೆ ಮಾಡದಿರುವುದು `ಫಿಲಾಟೆಲಿಸ್ಟ್~ (ಸಂಗ್ರಾಹಕ)ಗಳಲ್ಲಿ ನಿರಾಸೆ ಮೂಡಿಸಿದೆ.

ಈಗಾಗಲೇ ಲಂಡನ್ ಒಲಿಂಪಿಕ್ಸ್ ನೆನಪಿಗಾಗಿ ಆತಿಥೇಯ ರಾಷ್ಟ್ರದ (ಇಂಗ್ಲೆಂಡ್) ಜತೆಗೆ ಮಾಲ್ಟಾ, ಲಕ್ಸೆಂಬರ್ಗ್, ಆಸ್ಟ್ರೇಲಿಯ, ಸಿಂಗಪುರ, ಎಸ್ಟೊನಿಯಾ, ಸ್ಲೊವೇನಿಯ, ಕಜಕಸ್ತಾನ, ಉಕ್ರೇನ್ ಸೇರಿದಂತೆ ಹಲವು (ಈ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ) ರಾಷ್ಟ್ರಗಳು ವಿವಿಧ ಸಂಖ್ಯೆಯ ಅಂಚೆ ಚೀಟಿಗಳನ್ನು ಹೊರತಂದಿವೆ. ಈ ಹಿನ್ನೆಲೆಯಲ್ಲಿ ಭಾರತದ ನಿಧಾನಗತಿ ಅಚ್ಚರಿ ಮೂಡಿಸಿದೆ.

ಭಾರತ ಈ ಹಿಂದೆ ಒಲಿಂಪಿಕ್ ಕ್ರೀಡೆಗಳಿಗೆ ಸಂಬಂಧಿಸಿ ಅಂಚೆ ಚೀಟಿಗಳ ಜತೆ ಕಳೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮಿನಿಯೇಚರ್ ಷೀಟ್ (ಅಂಚೆ ಚೀಟಿಗಳ ಜತೆ ಆಕರ್ಷಕ ಹಿನ್ನೆಲೆ) ಹೊರತಂದಿತ್ತು. 1968ರಿಂದ ವಿಶೇಷ (ಸ್ಪೆಷಲ್) ಕವರ್‌ಗಳನ್ನೂ ಹೊರತಂದಿದೆ.

ಇತರೆ ಸಂದರ್ಭದಲ್ಲಿ ಹಾಕಿ ಮಾಂತ್ರಿಕ  ಧ್ಯಾನ್‌ಚಂದ್ ಅವರ ಅಂಚೆ ಚೀಟಿಯನ್ನೂ ಹೊರತಂದಿತ್ತು. ದೆಹಲಿ ಕಾಮನ್ವೆಲ್ತ್ ಕ್ರೀಡೆಗಳ ಸಂದರ್ಭದಲ್ಲಿ ಆಕರ್ಷಕ ಅಂಚೆ ಚೀಟಿಗಳು, ಮಿನಿಯೇಚರ್ ಷೀಟ್‌ಗಳನ್ನು ಭಾರತೀಯ ಅಂಚೆ ಹೊರತಂದಿತ್ತು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.