`ಹಸಿರು ಹಾದಿಯಲ್ಲಿ ಹುಲಿರಾಯ~ (ಲೇ: ಡಿ.ಜಿ. ಮಲ್ಲಿಕಾರ್ಜುನ, ಆ. 5) ಲೇಖನ ಓದಿದ ನಂತರ ಮನಸ್ಸನ್ನು ವಿಷಾದ ಕವಿಯಿತು. ಹುಲಿ ಸಂರಕ್ಷಣೆ ಆಗಬೇಕು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಅದಕ್ಕೋಸುಗ ಪರಿಸರ ಪ್ರೇಮಿಗಳನ್ನು ಹಾಗೂ ಪ್ರಾಣಿಪ್ರಿಯರನ್ನು ಅವುಗಳ ವೀಕ್ಷಣೆಯಿಂದ ದೂರ ಮಾಡುವುದು ಸರಿಯಲ್ಲ. ಹೀಗಾದಲ್ಲಿ ಮುಂದೊಂದು ದಿನ ಎಲ್ಲವನ್ನೂ ಚಿತ್ರಗಳಲ್ಲೇ ನೋಡಬೇಕಾದೀತು ಎನ್ನುವ ಲೇಖನದ ಮಾತು ನಿಜವಾದೀತು!
-ಅ. ಮೃತ್ಯುಂಜಯ, ಪಾಂಡವಪುರ
ಡಾ. ಬಸವರಾಜ ಸಾದರ ಅವರ `ಆರೋಗ್ಯಕರ ಜಗತ್ತು ಮತ್ತು ವೈದ್ಯ ದೇವರುಗಳು~ ಲೇಖನ ವಿಭಿನ್ನವಾಗಿದೆ. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ವಿವರಗಳ ಬರಹ ಒಂದು ರೀತಿಯ ರನ್ನಿಂಗ್ ಕಾಮೆಂಟರಿ ರೀತಿಯಲ್ಲಿದೆ. ವೈದ್ಯ ವೃತ್ತಿಯಲ್ಲಿರುವ ಯುವ ವೈದ್ಯರೆಲ್ಲ ಓದಲೇಬೇಕಾದ ಬರಹವಿದು.
-ನಾರಾಯಣ ಯಾಜಿ, ಶಿರಾಲಿ
`ವೈದ್ಯ ದೇವರುಗಳು~ ಬರಹ ಆಪ್ತವಾಗಿದೆ. ಇಂಥ ದೇವರುಗಳ ಕಾರಣದಿಂದಲೇ ನಮ್ಮ ಸಮಾಜ ಆರೋಗ್ಯಕರವಾಗಿದೆ.
-ಶೇಖರಚಂದ್ರ, ಧಾರವಾಡ
`ನುಡಿಯೊಳಗಾಗಿ~ ಅಂಕಣ ಮಾಲಿಕೆಯಲ್ಲಿನ ಓ.ಎಲ್. ನಾಗಭೂಷಣ ಸ್ವಾಮಿ ಅವರ ಭಾಷಾ ಚಿಂತನೆಗಳು ಹಲವು ಆಯಮಾಗಳನ್ನು ಹೊಂದಿವೆ. ಜಗತ್ತಿನ ಒಂಟಿಬಡುಕ ಭಾಷೆ, ಜಗತ್ತಿನ ಪ್ರಥಮ ಕವಯತ್ರಿ, ನಾಲ್ಕು ಸಾವಿರದ ಮುನ್ನೂರು ವರ್ಷಗಳ ಹಿಂದಿನ ಸ್ತ್ರೋತ್ರಗಳ ವಿವರಗಳು- ಭಾಷೆಯ ಬ್ರಹ್ಮಾಂಡವನ್ನೇ ಅವರು ಅನಾವರಣಗೊಳಿಸುತ್ತಿದ್ದಾರೆ. ನಾನೊಮ್ಮೆ ಅವಿಭಾಜ್ಯ ರಷ್ಯಾದಲ್ಲಿದ್ದ ಕಜಕೀಸ್ತಾನದ ಹೆಣ್ಣುಮಕ್ಕಳ ನೃತ್ಯ ನೋಡಿದ್ದೆ. ಈಚೆಗೆ ಕೊಡಗಿನ ಹೆಣ್ಣುಮಕ್ಕಳ ನೃತ್ಯ ನೋಡಿದೆ.
ನೃತ್ಯದಲ್ಲಿ, ರೂಪದಲ್ಲಿ, ಬಣ್ಣದಲ್ಲಿ ಅದೇನು ಸಾಮ್ಯ ಎನಿಸಿತು. ರಷ್ಯಾದಲ್ಲಿ ಕೊಡಗಿನ ಸಾಂಸ್ಕೃತಿಕ ವಿಚಾರಗಳುಂಟು. ಎತ್ತಣಿಂದಲೋ ಬಂದುಳಿದ ಈ ಅಡವಿ ಕುಲವು ಹೀಗೆ ಜಗತ್ತಿನ ಚಲನೆಯನ್ನು ಸಂಕರವನ್ನು ತನ್ನ ಒಡಲಿನಲ್ಲಿ ಅಡಗಿಸಿಕೊಂಡಿರಬಾರದೇಕೆ ಎನಿಸಿತು. ಇಂಥ ಅಧ್ಯಯನಗಳು ಗೋಳೀಕರಣದ ಸಂಕರ ಅಧ್ಯಯನಕ್ಕೆ ದಾರಿದೀಪಗಳಾಗುತ್ತವೆ.
-ಡಾ. ರಾಜೇಗೌಡ ಹೊಸಹಳ್ಳಿ, ಬೆಂಗಳೂರು
ಡಾ. ಆಶಾ ಬೆನಕಪ್ಪ ಮತ್ತು ಓ.ಎನ್.ಎನ್. ನಾವು ಕಾಣುತ್ತಿರುವ ಹಾಗೂ ಬದುಕುತ್ತಿರುವ ಎರಡು ಜಗತ್ತಿನ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತಿದ್ದಾರೆ. ಒಂದು ಅಂಕಣ ಮಾನವೀಯ ಕಣ್ಣನ್ನು ತೆರೆಸುವಂತಿದ್ದರೆ, ಇನ್ನೊಂದು ಮಾಲಿಕೆ ಆ ಮಾನವೀಯತೆಯ ಸಂಪನ್ನ ಗೊಳಿಸುವ ಸಂಸ್ಕಾರವನ್ನು ಹರಿತಗೊಳಿಸುವಂತಿದೆ.
-ರಾಜೇಶ, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.