ADVERTISEMENT

ಛಲದಂಕ ಟೆರ‌್ರಿಯ ನೆನಪಲ್ಲಿ...

ಚಾಣುಕ್ಯ.ಎಂ
Published 10 ಡಿಸೆಂಬರ್ 2011, 19:30 IST
Last Updated 10 ಡಿಸೆಂಬರ್ 2011, 19:30 IST

ಅದೊಂದು ಸಾವಿನ ಹಾದಿ. ಆತನಿಗೆ ಇದ್ದದ್ದು ಒಂದೇ ಕಾಲು. ನಡೆದು ಸಾಗಿದ್ದು ಐದು ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್. ಸಂಗ್ರಹಿಸಿದ್ದು ಮಿಲಿಯನ್‌ಗಟ್ಟಲೆ ಹಣ. ಕ್ಯಾನ್ಸರ್‌ಗೆ ನಿಧಿ ಸಂಗ್ರಹಿಸಲು ದಶಕಗಳ ಹಿಂದೆ ಸಹಸ್ರಾರು ಮೈಲಿ ನಡೆದು ಸಾಗಿದ ಈ ಇತಿಹಾಸ ಪುರುಷನ ಹೆಸರು ಟೆರ‌್ರಿ ಫಾಕ್ಸ್. ಈತನದ್ದು ಹೃದಯ ವಿದ್ರಾವಕ ಕಥೆ.

1958ರ ಜುಲೈ 28ರಂದು ಕೆನಡಾದ ವಿನ್ನಿಪೆಗ್ ಪ್ರಾಂತ್ಯದ ಮನ್ನಿತೋಬ ಎಂಬಲ್ಲಿ ರೋಲಿ ಫಾಕ್ಸ್ ಹಾಗೂ ಬೆಟ್ಟಿ ಫಾಕ್ಸ್ ದಂಪತಿಗೆ ಎರಡನೇ ಮಗನಾಗಿ ಜನಿಸಿದ ಟೆರ‌್ರಿ ಸ್ಟ್ಯಾನ್ಲಿ ಫಾಕ್ಸ್‌ಗೆ ಕ್ರೀಡೆಯಲ್ಲಿ ಅಪಾರ ಆಸಕ್ತಿ. ಜಗತ್ತೇ ಮೆಚ್ಚುವ ಅಥ್ಲೀಟ್ ಆಗಬೇಕೆಂಬ ಹೆಬ್ಬಯಕೆ.

ಬಾಸ್ಕೆಟ್‌ಬಾಲ್, ಫುಟ್‌ಬಾಲ್ ಹಾಗೂ ಬೇಸ್‌ಬಾಲ್‌ನಲ್ಲಿ ಪ್ರಶಸ್ತಿ ಗಳಿಸಿ ಶಾಲಾ ಹಂತದಲ್ಲೇ ಭರವಸೆಯ ಕ್ರೀಡಾ ಪಟುವಾಗಿ ಗುರುತಿಸಿಕೊಂಡ ಟಿರ‌್ರಿ ಕ್ಯಾನ್ಸರ್ ಜಾಗೃತಿಗೆ ಕೈಗೊಂಡ ಸಾಹಸ ಯಾತ್ರೆ ಅಪರೂಪದ್ದು.

 ಕ್ರೀಡೆಯಲ್ಲಿ ಯಶಸ್ಸು ಗಳಿಸಿದ್ದ ಟೆರ‌್ರಿ ಜೀವನದಲ್ಲಿ ವಿಧಿ ಕ್ಯಾನ್ಸರ್ ರೂಪದಲ್ಲಿ ಕಾಡಿತು. 18ನೇ ವಯಸ್ಸಿನಲ್ಲಿಯೇ ಮೂಳೆ ಕ್ಯಾನ್ಸರ್‌ಗೆ ತುತ್ತಾದ ಈತನ ಬಲಗಾಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬೇರ್ಪಡಿಸಲಾಯಿತು. ಜೀವನ ನಿರ್ವಹಣೆಗಾಗಿ ಟೆರ‌್ರಿಗೆ ಕೃತಕ ಕಾಲನ್ನು ಅಳವಡಿಕೆ ಮಾಡಲಾಯಿತು. ಆದರೂ ಆತ ಹತಾಶನಾಗಲಿಲ್ಲ.

`ಮ್ಯಾರಥಾನ್ ಆಫ್ ಹೋಪ್~ (ಭರವಸೆಯ ನಡಿಗೆ) ಹೆಸರಿನಲ್ಲಿ ಕ್ಯಾನ್ಸರ್ ಜಾಗೃತಿಗೆ ಸಾವಿರಾರು ಕಿ.ಮೀ. ದೂರಕ್ಕೆ ಏಕಾಂಗಿಯಾಗಿ ಪಯಣ ಪ್ರಾರಂಭಿಸಿದ. ತನ್ನ ಸಹೋದರನ ನೆರವಿನೊಂದಿಗೆ ಅಟ್ಲಾಂಟಿಕ್ ಸಾಗರದಿಂದ ಶಾಂತ ಸಾಗರದ ಕಡೆಗೆ ಈತ ನಡೆದು ಕ್ರಮಿಸಿದ್ದು ಒಟ್ಟು 5,373 ಕಿ.ಮೀ. 143 ದಿನಗಳ ಕಾಲ ಕೆನಡಾದ ಮುಖ್ಯ ರಸ್ತೆಗಳ ಮೇಲೆ ತನ್ನ ಕೃತಕ ಕಾಲಿನ ನೆರವಿನಿಂದ ನಡೆದು ಸಿಕ್ಕ ಸಿಕ್ಕವರ್ಲ್ಲಲಿ ಕ್ಯಾನ್ಸರ್ ಪೀಡಿತರಿಗೆ ನೆರವಾಗುವಂತೆ ಕೋರಿದ.
 
ಮಾರ್ಗಮಧ್ಯೆ ಭಾಷಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ. ಕೆನಡಾದ ಪ್ರತೀ ಪ್ರಜೆ ಕ್ಯಾನ್ಸರ್ ಪೀಡಿತರ ನೆರವಿಗಾಗಿ ಕನಿಷ್ಠ ಒಂದು ಡಾಲರ್ ನೀಡಬೇಕೆಂಬುದು ಟೆರ‌್ರಿಯ ಮನವಿಯಾಗಿತ್ತು. ಆತನ ನಡಿಗೆಗೆ ವೈದ್ಯರ ವಿರೋಧ ವ್ಯಕ್ತವಾದರೂ ಅದನ್ನು ಲೆಕ್ಕಿಸಲಿಲ್ಲ.

ಟೆರ‌್ರಿ ಖ್ಯಾತಿ ಎಷ್ಟರ ಮಟ್ಟಿಗಿತ್ತೆಂದರೆ ಕೆನಡಾದ ಮುಕ್ಕಾಲು ಭಾಗದಷ್ಟು ಪ್ರಜೆಗಳು ಆತನನ್ನು ಸುಲಭವಾಗಿ ಗುರುತಿಸುತ್ತಿದ್ದರು. ನಡಿಗೆಯ 143ನೇ ದಿನ `ಥಂಡರ್ ಬೇ~ ಸಮೀಪಿಸುತ್ತಿದ್ದಂತೆ ಕ್ಯಾನ್ಸರ್ ಆತನ ಶ್ವಾಸಕೋಶಕ್ಕೂ ಹರಡಿತು.
 
ತೀವ್ರ ಬೇನೆಯಿಂದ ಬಳಲುತ್ತಿದ್ದ ಆತನನ್ನು ವೈದ್ಯರು ಆಸ್ಪತ್ರೆಗೆ ಸೇರಿಸಿದರು. ಮಾರನೇ ದಿನ ಟೆರ‌್ರಿ ದುಃಖಪೂರಿತ ಸುದ್ದಿಗೋಷ್ಠಿಯೊಂದನ್ನು ನಡೆಸಿದ. ವೈದ್ಯರ ಬಲವಂತಕ್ಕೆ ಕಿವಿಗೊಟ್ಟು ತನ್ನ ಮ್ಯಾರಥಾನ್‌ಅನ್ನು ಅರ್ಧಕ್ಕೆ ಕೈ ಬಿಟ್ಟಿರುವುದಾಗಿ ತಿಳಿಸಿದ.

ಶ್ವಾಸಕೋಶ ತಲುಪಿದ್ದ ಕ್ಯಾನ್ಸರ್ ಈತನ ಹೃದಯಕ್ಕೂ ಹರಡಿ ಒಂಬತ್ತು ದಿನ ನರಕ ಯಾತನೆ ಅನುಭವಿಸಿ 1981ರಲ್ಲಿ ಟೆರ‌್ರಿ ಸಾವಿಗೀಡಾದ. ಈ ಸಾಧನಾ ಪುರಷನ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದ ಕೆನಡಾ ಸರ್ಕಾರ ರಾಷ್ಟ್ರ ಧ್ವಜವನ್ನು ಅರ್ಧಕ್ಕಿಳಿಸಿ ಗೌರವ ಸಲ್ಲಿಸಿತು.
 
ಅಂದಿನ ಕೆಲವೇ ಮಾಧ್ಯಮಗಳು ಈತ ನಡೆದು ಸಾಗುವ ದಾರಿಯಲ್ಲಿ ವೀಡಿಯೋ ಚಿತ್ರಣಮಾಡಿದ್ದವು ಹಾಗಾಗಿಯೇ ಈತ ಕ್ರಮಿಸಿದ ಕೆಲವು ದೃಶ್ಯಗಳು ಇಂದಿಗೂ ಅಂತರ್ಜಾಲದಲ್ಲಿ ಲಭ್ಯ.

ಟೆರ‌್ರಿ 1977ರಲ್ಲಿ ರಿಕ್ ಹಸನ್ ಎಂಬಾತನಿಂದ ಪ್ರೇರೇಪಿತನಾಗಿ ವೀಲ್ ಚೇರ್‌ನಲ್ಲೇ ಆಡುವ ಮೂಲಕ ರಾಷ್ಟ್ರ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದ. ಕೆನಡಾ ಸ್ಪೋರ್ಟ್ಸ್ ಹಾಲ್ ಆಫ್ ಫೇಮ್ ನೀಡುವ ಪ್ರತಿಷ್ಠಿತ ಲಾ ಮಾರ್ಶ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಟೆರ‌್ರಿಗೆ ಲಭಿಸಿದವು.

ಕೆನಡಾದ `ಟೆರ‌್ರಿ ಫಾಕ್ಸ್ ರನ್~ ಸಂಸ್ಥೆ ಆಗಾಗ್ಗೆ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸುತ್ತದೆ. ಸ್ಪರ್ಧೆ ಸಮಯದಲ್ಲಿ ಸಹೃದಯರಿಂದ ಹಣ ಸಂಗ್ರಹಿಸುತ್ತದೆ.

`ಮ್ಯಾರಥಾನ್ ಆಫ್ ಹೋಪ್~ ಹೆಸರಿನಡಿ 80ರ ದಶಕದಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಟೆರ‌್ರಿ ಹೆಸರಲ್ಲಿ 500 ಮಿಲಿಯನ್ ಡಾಲರ್ ಸಂಗ್ರಹವಾಗಿತ್ತು. ಅಂಚೆ ಚೀಟಿಯ ಮೇಲಿನ ಚಿತ್ರವಾಗಿ, ನಾಣ್ಯಗಳ ಮೇಲಿನ ಲಾಂಛನವಾಗಿ, ಟಿ-ಶರ್ಟ್ ಮೇಲಿನ ಪ್ರಭಾವಯುತ ವ್ಯಕ್ತಿ ಚಿತ್ರ- ಸಂದೇಶವಾಗಿ ಆತ ಇನ್ನೂ ಬದುಕಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT