ADVERTISEMENT

ಜಗದ ಪ್ರೇಮಿಗಳೇ ಒಂದಾಗಿ...

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಜೀವನ ಒಮ್ಮಮ್ಮೆ ಕತೆಗಿಂತಲೂ ರೋಚಕವಾಗಿರುತ್ತದೆ. ಹಿಂದೊಮ್ಮೆ ಯುವಕನೊಬ್ಬ ನದಿ ತೀರದಲ್ಲಿ ಬೇಟೆಯಾಡುತ್ತಿದ್ದ. ನದಿಯ ಆಚೆ ದಡದಲ್ಲಿ ಅವನು ಚೆಲುವೆಯೊಬ್ಬಳನ್ನು ಕಂಡ. ಅವಳ ಚೆಲುವಿಗೆ ಮಾರುಹೋದ.
 
ನೀರಿಗಾಗಿ ಬಂದ ನಾರಿ ಮರಳಿ ಮನೆ ಸೇರಿದಳು. ಆದರೆ ಆ ಬಾಲೆ ಅವನ ಹೃದಯವನ್ನು ಕದ್ದೊಯ್ದಿದ್ದಳು. ಅವನು ಮರುದಿನ ಅದೇ ಸ್ಥಳಕ್ಕೆ ಬಂದ. ಚೆಲುವೆಯನ್ನು ನೋಡಿ ಹಿರಿ ಹಿರಿ ಹಿಗ್ಗಿದ. ಚೆಲುವೆ ಸಹ ಅವನನ್ನು ನೋಡಿ ದಂಗು ಬಡಿದು ನಿಂತಳು. ಅವರಿಬ್ಬರ ನಡುವೆ ನದಿಯೊಂದು ಅಡ್ಡಿಯಾಗಬೇಕೆ?
ಯುವಕ ನದಿಯ ಆಳ ಅಗಲದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ನೀರಿಗೆ ಜಿಗಿದವನೇ ಆಚೆ ದಡ ಸೇರಿ ಆ ಯುವತಿಯೆದುರು ಪ್ರತ್ಯಕ್ಷನಾದ. ತನ್ನೆದುರು ನಿಂತ ತರುಣ, ಗೊಲಕೊಂಡಾದ ಕುತುಬಶಾಹಿ ಅರಸು ಮನೆತನದ ರಾಜಕುಮಾರ ಮೊಹಮ್ಮದ್ ಕುಲಿ ಕುತುಬಶಾಹ್ ಎನ್ನುವುದು ಗೊತ್ತಾಗುತ್ತಲೇ ಯುವತಿ ಭಯಭೀತಳಾದಳು.
 

ಕನಸು ಕನಸಾಗಿದ್ದರೇ ಚೆನ್ನಾಗಿತ್ತೆಂದು ಆಕೆ ಯೋಚಿಸಿದಳು. ಚಂಚಲ್ ಗ್ರಾಮದ ಬಾಲೆ ಭಾಗಮತಿಗೆ ರಾಜಕುಮಾರ ಧೈರ‌್ಯ ತುಂಬಿದ. ನಿತ್ಯವೂ ಕುತುಬಶಾಹ್ ನದಿ ದಾಟಿ ತನ್ನ ಮನದನ್ನೆಯನ್ನು ಕಾಣಲು ಹೋಗತೊಡಗಿದ.

ಒಂದು ದಿನ ನದಿಯಲ್ಲಿ ಮಹಾಪೂರ. ರಾಜಕುಮಾರ ಜೀವದ ಹಂಗುದೊರೆದು ನದಿಗೆ ಜಿಗಿದೇ ಬಿಟ್ಟ. ಆಚೆ ದಡದಲ್ಲಿ ತನ್ನ ಪ್ರಿಯತಮ ತನಗಾಗಿ ಹೀಗೆ ಪ್ರಾಣ ಪಣಕ್ಕಿಟ್ಟು ತನ್ನ ಬಳಿ ಬಂದು ನಿಂತಾಗ ಆಕೆ ತನ್ನನ್ನು ಅವನಿಗೆ ಸಮರ್ಪಿಸಿಕೊಂಡಳು.

ರಾಜಕುಮಾರನ ಹುಚ್ಚು ಸಾಹಸದ ಕುರಿತು ನಿಜಾಮನಿಗೆ ಮಾಹಿತಿ ಸಿಕ್ಕಿತು. ನಿಜಾಮ, ತಕ್ಷಣ ಸೇತುವೆ ನಿರ್ಮಾಣಕ್ಕೆ ಆದೇಶಿಸಿಬಿಟ್ಟ. ಕಾಮಗಾರಿ ಹಗಲಿರುಳೆನ್ನದೆ ನಡೆಯಿತು. ಕುತುಬಶಾಹ್ ತನ್ನ ಪ್ರಿಯತಮೆಯನ್ನು ಮದುವೆಯಾಗಲು ಚಡಪಡಿಸಿದ.

ಆದರೆ, ಅವನ ಮನೆಯಲ್ಲಿ ಅದಕ್ಕೆ ಅಡ್ಡಿಯಾದರು. ತಂದೆ ಇಬ್ರಾಹಿಂ ಕುತುಬಶಾಹ್ ನಿಧನಾನಂತರ ಮೊಹಮ್ಮದ್ ಕುಲಿ ಕುತುಬಶಾಹ್ 1589ರಲ್ಲಿ ನಿಜಾಮನಾಗಿ ಅಧಿಕಾರ ವಹಿಸಿಕೊಂಡ. ಆಗ, ಹನ್ನೊಂದು ವರ್ಷ ಕಾಲ ತನ್ನ ಹೃದಯದಲ್ಲಿ ನೆಲೆ ನಿಂತ ಭಾಗಮತಿಯನ್ನು ಮದುವೆಯಾದ.

ಕುತುಬಶಾಹ್ ಭಾಗಮತಿಯ ಹೆಸರಿನಲ್ಲಿ ಒಂದು ಅಭೂತಪೂರ್ವ ನಗರ ನಿರ್ಮಿಸಲು ತೀರ್ಮಾನಿಸಿದ. ಭಾಗಮತಿಯ ಚಂಚಲ್ ಗ್ರಾಮವನ್ನೇ ಅದಕ್ಕಾಗಿ ಆಯ್ಕೆ ಮಾಡಿಕೊಂಡ.
 
ಅದನ್ನು ಭಾಗ್ಯನಗರವೆಂದು ಕರೆದ. ಭಾಗಮತಿಯನ್ನು ಮದುವೆಯಾದ ಮೇಲೆ ಅವಳಿಗೆ ಹೈದರ್ ಮಹಲ್ ಎನ್ನುವ ಹೆಸರು ಬಂತು. ಮುಂದೆ, ಭಾಗ್ಯನಗರ ಸಹ ಬದಲಾಗಿ ಹೈದರಾಬಾದ್ ಆಯಿತು. ಈ ಹೈದರಾಬಾದ್‌ನಲ್ಲಿ ಕುತುಬಶಾಹ್ ಭಾಗಮತಿ ಜೊತೆಗೂಡಿ ಚಾರ್‌ಮಿನಾರ್ ನಿರ್ಮಾಣಕ್ಕೆ ಅಡಿಗಲ್ಲನ್ನಿಟ್ಟ.

ಕುತುಬಶಾಹ್ ಅರೆಬಿಕ್ ಹಾಗೂ ಪರ್ಶಿಯನ್ ಭಾಷೆಯ ವಿದ್ವಾಂಸನಾಗಿದ್ದ. ಆತನೊಬ್ಬ ಶ್ರೇಷ್ಠ ಕವಿಯೂ ಆಗಿದ್ದ. ಉರ್ದುವಿನಲ್ಲಿ ಆತನ ಕಾವ್ಯಕೃಷಿ ಗಮನಾರ್ಹವಾದದ್ದು. ಅವನ ಸಮಗ್ರ ಕಾವ್ಯ `ಕುಲ್ಲಿಯಾತೆ ಕುಲಿ ಕುತುಬಶಾಹ್~ ಉರ್ದು ಕಾವ್ಯಕ್ಕೆ ಹೊಸ ಸಂವೇದನೆ ನೀಡಿತು. ಅದರಿಂದಾಗಿಯೇ ಉರ್ದುವಿಗೆ ಸಾಹಿತ್ಯಕ ಭಾಷೆಯ ಸ್ಥಾನಮಾನ ಬಂದಿತು.

ಮೇಲಿನದು ಹೈದರಾಬಾದ್ ನಗರದ ಕತೆ. ಸುಮಾರು ಮುನ್ನೂರು ವರ್ಷಗಳ ನಂತರ ಇದೇ ಹೈದರಾಬಾದ್‌ನಲ್ಲಿ ಇನ್ನೊಬ್ಬ ಉರ್ದು ಕವಿ ಹುಟ್ಟಿ ಬೆಳೆದ. ಹೈದರಾಬಾದ್ ಅನ್ನು ಬಹುವಾಗಿ ಪ್ರೀತಿಸಿದ. ಆದರೆ ಅವನ ಕಾಲದ ನವಾಬ ಮೀರ್ ಕಾಸಿಂ ಅಲಿ ಖಾನ್ ಅವನನ್ನು ಕೊಲೆ ಮಾಡಲು ಆದೇಶಿಸಿದ.

ಕಾರಣವಿಷ್ಟೇ, ಅವನು ಪ್ರೀತಿಸಿದ್ದು ಚಾರ್‌ಮಿನಾರ್ ಸೇರಿದಂತೆ ಅನೇಕ ಸ್ಮಾರಕಗಳಿಗೆ ಹಾಗೂ ಆಧುನಿಕ ಆಳರಸರ ಭವ್ಯಬಂಗಲೆಗಳಿಗೆ ಹೆಸರಾದ ಹೈದರಾಬಾದನ್ನಲ್ಲ; ನಗರದಲ್ಲಿ ವಾಸವಾದ ಮನುಷ್ಯರನ್ನು ಅವನು ಪ್ರೀತಿಸಿದ್ದ, ಜನಸಾಮಾನ್ಯರನ್ನು ಪ್ರೀತಿಸಿದ್ದ. ಸಮಾನತೆಯನ್ನಾಧರಿಸಿದ ಸಮಾಜದ ಕನಸನ್ನು ಸಾಕಾರಗೊಳಿಸಲು ಆತ ತನ್ನ ಕೊನೆಯುಸಿರಿನವರೆಗೆ ಶ್ರಮಿಸಿದ್ದ.

ಹಳ್ಳಿಯೊಂದರಲ್ಲಿ ಹುಟ್ಟಿದ ಕವಿ ವಿದ್ಯಾಭ್ಯಾಸಕ್ಕೆಂದು ಹೈದರಾಬಾದಿಗೆ ಬಂದು ಎಂ.ಎ. ಮುಗಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ. ಬ್ರಿಟಿಷರು ಭಾರತ ಬಿಟ್ಟು ತೊಲಗಿದ ಮೇಲೆ ಹೈದರಾಬಾದಿನಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿ ಬೆಳೆಸಿದ. ಹೈದರಾಬಾದ್ ಅನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಕಟಿಬದ್ಧನಾದ.
 
ತೆಲಂಗಾಣ ರೈತ ಹೋರಾಟದ ಮುಂಚೂಣಿ ನಾಯಕನಾದ. `ಹೈದರಾಬಾದ್ ಹೌಸಿಂಗ್ ಸೊಸೈಟಿ~ ಅಧ್ಯಕ್ಷನಾಗಿ ಐದು ವರ್ಷ ಕೆಲಸ ನಿರ್ವಹಿಸಿದ. ಆದರೂ, ಕೊನೆವರೆಗೂ ಆತ ತನ್ನ ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳಲಿಲ್ಲ. ಬದಲಿಗೆ, ಹೈದರಾಬಾದಿನ ಜನಸಾಮಾನ್ಯರ ಹೃದಯದಲ್ಲಿ ಮನೆ ಮಾಡಿಕೊಂಡ. `ಶಾಯರೆ ಇನ್‌ಕ್ವಿಲಾಬ್~(ಕ್ರಾಂತಿ ಕವಿ) ಎಂದೇ ಪ್ರಸಿದ್ಧನಾದ. ಅವನ ಹೆಸರು ಮಖ್ದೂಂ ಮೊಹಿಯೂದ್ದೀನ್.

ಮಖ್ದೂಂ ಅವರ `ಸುರ್ಖ್ ಸವೇರಾ~ (ಕೆಂಪು ಮುಂಜಾವು) ಕವನ ಸಂಕಲನ ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಕೆಂಪು ಮುಂಜಾವಿನ ಪ್ರೇಮಿಗಳು `ಸುರ್ಖ್ ಸವೇರಾ~ ಅನ್ನು ರಿಹಾಲ್ (ಕುರ್‌ಆನ್ ಇರಿಸುವ ಆಸನ) ಮೇಲಿರಿಸಿ ಕುರ್‌ಆನ್ ಓದುವಂತೆಯೇ ತನ್ಮಯರಾಗಿ ಓದುತ್ತಿದ್ದರು. ಜೈಲಿನಲ್ಲಿದ್ದಾಗ ಕವಿ ಕೇಳಿದ್ದು ತನ್ನ ಕ್ರಾಂತಿ ಗೀತೆಯನ್ನಲ್ಲ. `ಏಕ್ ಚಮೇಲಿ ಕೆ ಮಂಡವೆ ತಲೆ...~ ಎನ್ನುವ ಪ್ರೇಮ ಕವನ.ಆ ಕವನವನ್ನು ಗುನುಗುನಿಸುತ್ತಿದ್ದ ಯುವಕನ ಕತೆ ಕೇಳಿ ಮಖ್ದೂಂ ಮನಸ್ಸಿಗೆ ತುಂಬ ನೋವಾಯಿತಂತೆ.

ಕ್ರಾಂತಿಕಾರಿ ಗಂಟು ಮೋರೆಯವನೂ ಹೃದಯಹೀನನೂ ಆಗಿರಬೇಕೆಂದೇನಿಲ್ಲ. ತಮ್ಮದೇ ಕವನದ ಒಂದೊಂದು ಸಾಲೂ ಮಖ್ದೂಂ ಅವರನ್ನು ಚುಚ್ಚಿ ಗಾಯಗೊಳಿಸಿರಬೇಕು.

ಏಕ್ ಚಮೇಲಿ ಕೇ ಮಂಡವೆ ತಲೆ
ಮೈಕದೇಸೆ ಜರಾ ದೂರ್
ಉಸ್ ಮೋಡ್ ಪರ್
ದೋ ಬದನ್ ಪ್ಯಾರ್ ಕೀ
ಆಗ್‌ಮೇಂ ಜಲ್ ಗಯೇ
(ಅಗೋ ಆ ಮಲ್ಲಿಗೆ ಮಂಟಪದಡಿ
ಮಧುಶಾಲೆಯಿಂದ ಸ್ವಲ್ಪ ದೂರ
ಆ ತಿರುವಿನಲ್ಲಿ ಎರಡು ಜೀವ
ಪ್ರೇಮದ ಬೆಂಕಿಯಲ್ಲಿ
ಬೆಂದು ಹೋದವು)

ಕ್ರಾಂತಿ ಕವಿ ಮಖ್ದೂಂ ಮಹಾ ತುಂಟ ಕೂಡ ಆಗಿದ್ದರು. ಕವಿಯ ಅಭಿಮಾನಿಯಾಗಿದ್ದ ಯುವಕ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಅವಳ ಮನೆಯವರು ಅವನನ್ನು ಜೈಲಿಗೆ ಕಳಿಸಿದ್ದರಂತೆ.
 
ಪ್ರೇಮದ ಕಥೆ ತಿಳಿದ ಮಖ್ದೂಂ, “ಈವರೆಗೆ ನಾನು `ಲೋಕದ ಕಾರ್ಮಿಕರೇ ಒಂದಾಗಿರಿ~ ಎನ್ನುವ ಘೋಷಣೆ ಕೂಗುತ್ತಾ ಬಂದವನು. `ಜಗದ ಪ್ರೇಮಿಗಳೇ ಒಂದಾಗಿರಿ~ ಎಂದು ಇನ್ನು ಮುಂದೆ ಘೋಷಣೆ ಕೂಗುವೆ” ಎಂದಿದ್ದರಂತೆ.

ಕವಿಯ ಕಣ್ಣು ತೆರೆಸಿದ ಆ ಯುವಕನ ಹೆಸರು ಆಮಿರ್. ಮುಂದೆ ಆತ ತೆಲಂಗಾಣ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.