ADVERTISEMENT

ತಂಬಾಕು ಪರಿಸರಕ್ಕೆ ಇರಿತ

ರವೀಂದ್ರ ಭಟ್ಟ
Published 4 ಜೂನ್ 2011, 19:30 IST
Last Updated 4 ಜೂನ್ 2011, 19:30 IST
ತಂಬಾಕು ಪರಿಸರಕ್ಕೆ ಇರಿತ
ತಂಬಾಕು ಪರಿಸರಕ್ಕೆ ಇರಿತ   

ಸಿಗರೇಟು ಪ್ಯಾಕಿನ ಮೇಲೆ ಇರುತ್ತಿದ್ದ `ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ~ ಎಂಬ ಶಾಸನ ವಿಧಿಸಿದ ಎಚ್ಚರಿಕೆಯ ಪ್ರಕಟಣೆ ಈಗ ಬದಲಾಗಿದೆ. `ತಂಬಾಕು ಸಾಯಿಸುತ್ತದೆ~ (ಟೊಬ್ಯಾಕೊ ಕಿಲ್ಸ್) ಎನ್ನುವುದು ಈಗಿನ ಬರಹ.

ಅದರ ಪಕ್ಕದಲ್ಲಿಯೇ `ಟೊಬ್ಯಾಕೊ ಕಾಸಸ್ ಕ್ಯಾನ್ಸರ್~ ಎನ್ನುವ ಮಾತೂ ಇರುತ್ತದೆ. ಸಿಗರೇಟ್ ಮತ್ತು ಬೀಡಿ ಪೊಟ್ಟಣಗಳ ಮೇಲಷ್ಟೇ ಅಲ್ಲ- ಎಲ್ಲ ತಂಬಾಕು ಉತ್ಪನ್ನಗಳ ಮೇಲೂ ಇದೇ ರೀತಿಯ `ಎಚ್ಚರಿಕೆ ಬರಹ~ಗಳು ಇರುತ್ತವೆ. ಆದರೂ ನಮ್ಮಲ್ಲಿ ತಂಬಾಕು ಬಳಕೆಯ ಪ್ರಮಾಣವೇನೂ ಕಡಿಮೆಯಾಗಿಲ್ಲ.

ಅಂದಹಾಗೆ, ಈ ತಂಬಾಕು ಎಂಬೋ ಹೊಗೆಸೊಪ್ಪು ಮನುಷ್ಯನಲ್ಲಿ ಮಾತ್ರ ಕ್ಯಾನ್ಸರ್ ತರುವುದಿಲ್ಲ. ತಂಬಾಕು ಪರಿಸರವನ್ನೂ ಕೊಲೆ ಮಾಡುತ್ತದೆ. ಪರಿಸರಕ್ಕೂ ಅದೂ ಕ್ಯಾನ್ಸರ್ ರೋಗ ಉಂಟುಮಾಡುತ್ತದೆ.

ರಾಜ್ಯದಲ್ಲಿನ ಅತ್ಯಂತ ಶ್ರೇಷ್ಠ ತಂಬಾಕು ಬೆಳೆಯುವ ಪ್ರದೇಶವಾದ ಮೈಸೂರು ಜಿಲ್ಲೆಯ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕಂಪ್ಲಾಪುರ ಹಾಗೂ ಹಾಸನ ಜಿಲ್ಲೆಯ ರಾಮನಾಥಪುರ ಮುಂತಾದೆಡೆ ಒಮ್ಮೆ ಸುಮ್ಮನೆ ತಿರುಗಾಡಿ ಬಂದರೆ ಸಾಕು, ತಂಬಾಕು ಪರಿಸರಕ್ಕೆ ಕ್ಯಾನ್ಸರ್ ತರುವುದು ಹೇಗೆ ಎನ್ನುವುದು ಗೊತ್ತಾಗುತ್ತದೆ.

ವಾಣಿಜ್ಯ ಬೆಳೆಯಾಗಿರುವ ತಂಬಾಕನ್ನೇ ನಂಬಿಕೊಂಡು ಮೇಲಿನ ಪ್ರದೇಶಗಳ ಶೇ.80ಕ್ಕೂ ಹೆಚ್ಚು ರೈತರು ಬದುಕುತ್ತಿದ್ದಾರೆ. ಅವರಿಗೆ ನಾಳಿನ ಚಿಂತೆ ಇಲ್ಲ. `ನೆರಳಿಗೆ ಬೇಕು~ ಎಂದರೂ ಒಂದು ಮರವನ್ನೂ ಅವರು ತಮ್ಮ ಹೊಲದಲ್ಲಿ ಬಿಟ್ಟಿಲ್ಲ.
 
ಅದು ಹೊಂಗೆ ಇರಲಿ, ಹುಣಸೆ  ಇರಲಿ, ಗೊಬ್ಬಳಿ, ಬೇವು, ಹಲಸು- ಹೀಗೆ ಯಾವುದೇ ಮರ ಇರಲಿ. ಎಲ್ಲ ಮರಗಳನ್ನೂ ಕಡಿದು ತಂಬಾಕು ಹದ ಮಾಡಿಕೊಂಡು ಮಾರಾಟ ಮಾಡಿ ಬಂದ ಹಣದಲ್ಲಿ ತಮ್ಮ ತುತ್ತಿನ ಚೀಲವನ್ನು ತುಂಬಿಕೊಂಡಿದ್ದಾರೆ.
 
ಹಸಿವು ನೀಗಿಸಿಕೊಳ್ಳುವ ಭರದಲ್ಲಿ ಅವರು ಪರಿಸರವನ್ನು ಬರಬಾದ್ ಮಾಡಿದ್ದಾರೆ.ತಮ್ಮ ಜಮೀನುಗಳನ್ನು ಬಟಾಬಯಲು ಮಾಡಿದ್ದಾರೆ. ಈಗ ಆ ಭೂಮಿಯಲ್ಲಿ ಹಾವುಗಳೂ ಇಲ್ಲ. ಹುಳುಗಳೂ ಇಲ್ಲ. ಹಕ್ಕಿಗಳು ಕುಳಿತುಕೊಳ್ಳಲೂ ಒಂದು ತಾವಿಲ್ಲ. ಸುತ್ತ ಇರುವ ಕಾಡನ್ನು ಕಡಿದು ಮರುಭೂಮಿ ಮಾಡಲು ಹೊರಟಿದ್ದಾರೆ.

ವಾಣಿಜ್ಯ ಬೆಳೆಯಾಗಿರುವ ತಂಬಾಕು ಅದನ್ನು ಬೆಳೆಯುವ ರೈತರಿಗೆ ಐಷಾರಾಮಿ ಬದುಕನ್ನು ನೀಡಿದೆ. ಆದರೆ ಇದೇ ತಂಬಾಕು ಅವರ ಮುಂದಿನ ಪೀಳಿಗೆಯ ಬದುಕುವ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಒಂದು ಕೆ.ಜಿ. ತಂಬಾಕನ್ನು ಹದಗೊಳಿಸಲು 4.5 ಕೆ.ಜಿ. ಉರುವಲು ಬೇಕು ಎಂದು ತಂಬಾಕು ಸಂಸ್ಥೆಗಳೇ ಹೇಳುತ್ತವೆ.
 
ಆದರೆ ರೈತರನ್ನು ಕೇಳಿದರೆ, ಒಂದು ಕೆ.ಜಿ. ತಂಬಾಕು ಹದಗೊಳಿಸಲು 7ರಿಂದ 9 ಕೆ.ಜಿ. ಉರುವಲು ಬೇಕು ಎನ್ನುತ್ತಾರೆ. (ತಂಬಾಕು ಹದಗೊಳಿಸಲು 170 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಬೇಕು. ಹಾಗಾಗಿ, ರೈತರು ಹೇಳುವ ಮಾತೇ ನಿಜ).
 
2010-2011ನೇ ಸಾಲಿನಲ್ಲಿ ಮೈಸೂರು ಉಪವಿಭಾಗದಲ್ಲಿ ಒಟ್ಟಾರೆ 127.85 ದಶಲಕ್ಷ ಕೆ.ಜಿ. ತಂಬಾಕು ಬೆಳೆಯಲಾಗಿದೆ. ಇಷ್ಟನ್ನು ಹದಗೊಳಿಸಲು ಎಷ್ಟು ಉರುವಲು ಬೇಕು?

ತಂಬಾಕು ಹದಗೊಳಿಸುವ ಬ್ಯಾರನ್‌ಗಳ ಲೆಕ್ಕ ಹಾಕಿದರೆ ತಲೆ ತಿರುಗುತ್ತದೆ. ಸಿಂಗಲ್ ಬ್ಯಾರನ್‌ಗೆ ವರ್ಷಕ್ಕೆ 8 ಟನ್ ಉರುವಲು ಬೇಕು. ಮೈಸೂರು ಜಿಲ್ಲೆಯಲ್ಲಿ 57,364 ಬ್ಯಾರನ್‌ಗಳಿವೆ.
 
ಇದರಲ್ಲಿ ಸಿಂಗಲ್ ಮತ್ತು ಡಬಲ್ ಬ್ಯಾರನ್‌ಗಳು ಸೇರಿವೆ. ಕೇವಲ ಸಿಂಗಲ್ ಬ್ಯಾರನ್‌ಗಳೇ ಆಗಿದ್ದರೂ ವರ್ಷಕ್ಕೆ ನಾಲ್ಕು ಲಕ್ಷ ಐವತ್ತೆಂಟು ಸಾವಿರದ ಒಂಬೈನೂರ ಹನ್ನೆರಡು ಟನ್ ಉರುವಲು ಬೇಕು.
 
ಈ ಉರುವಲು ಹೊರ ಸೂಸುವ ಇಂಗಾಲದ ಪ್ರಮಾಣ ಎಷ್ಟು ಗೊತ್ತೆ? ಐದು ಟನ್ ಉರುವಲು ಉರಿದರೆ ಒಂದು ಟನ್ ಇಂಗಾಲ ಉತ್ಪತ್ತಿಯಾಗುತ್ತದೆ. ಸುಮಾರು 4.59 ಲಕ್ಷ ಟನ್ ಉರುವಲು ಉರಿದರೆ? ಇದು ಕಂಗಾಲುಗೊಳಿಸುವ ಲೆಕ್ಕಾಚಾರ.

ಅಂದಹಾಗೆ, ಇಷ್ಟೆಲ್ಲ ತಂಬಾಕು ಹದಗೊಳಿಸಲು ಇಷ್ಟೊಂದು ದೊಡ್ಡ ಪ್ರಮಾಣದ ಉರುವಲು ಎಲ್ಲಿಂದ ಬರುತ್ತದೆ ಎಂದು ಹುಡುಕುತ್ತಾ ಹೊರಟರೆ ನೀವು ನಾಗರಹೊಳೆ ಕಾಡಿನಲ್ಲಿ, ಬಂಡೀಪುರ ಅಭಯಾರಣ್ಯದಲ್ಲಿ ನಿಲ್ಲುತ್ತೀರಿ.

ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲ್ಲೂಕುಗಳಿಗೆ ಹೊಂದಿಕೊಂಡೇ ಇರುವ ಈ ಅಭಯಾರಣ್ಯಗಳು ಇಲ್ಲಿನ ತಂಬಾಕು ಬೆಳೆಗಾರರಿಗೆ ಉರುವಲು ಪೂರೈಸುವ ಕಲ್ಪವೃಕ್ಷಗಳು! ಕಾಡಂಚಿನ ಬಳಿಯ ಗ್ರಾಮದವರಂತೂ ಕಾಡನ್ನೇ ಕಡಿದು ತಂಬಾಕು ಹದ ಮಾಡಿಕೊಂಡಿದ್ದಾರೆ.

ತಂಬಾಕು ಹದಗೊಳಿಸಲು ಪ್ರಮುಖವಾಗಿ ಕಟ್ಟಿಗೆಯನ್ನು ಬಳಸಲಾಗುತ್ತದೆ. ಗೇರು ಸಿಪ್ಪೆ, ಕಾಫಿ ಸಿಪ್ಪೆಗಳೂ ಬಳಕೆಯಾಗುವುದಾದರೂ, ಕಟ್ಟಿಗೆಯ ಪಾಲೇ ಜಾಸ್ತಿ.

ಜೂನ್ ತಿಂಗಳ ಆರಂಭದಲ್ಲಿ ಹುಣಸೂರು ಹೆಬ್ಬಾಗಿಲಿನಲ್ಲಿ ಉರುವಲು ಹೊತ್ತ ನೂರಾರು ಲಾರಿಗಳು ನಿಂತಿರುತ್ತವೆ. ಎಚ್.ಡಿ.ಕೋಟೆ, ಪಿರಿಯಾಪಟ್ಟಣಗಳಲ್ಲಿಯೂ ಇದೇ ಹಸಿರುಮೇಧದ ನೋಟ. ದೂರದ ಶಿವಮೊಗ್ಗ, ಕೋಲಾರ, ಕೆ.ಆರ್.ಪೇಟೆ, ಮಡಿಕೇರಿ, ಚಾಮರಾಜನಗರ, ಮೈಸೂರುಗಳಿಂದ ಉರುವಲು ಬರುತ್ತದೆ.

ಸಾಮಾನ್ಯವಾಗಿ ಜುಲೈ ತಿಂಗಳ ಅಂತ್ಯದಲ್ಲಿ ತಂಬಾಕು ಹದಗೊಳಿಸುವ ಕಾರ್ಯ ಆರಂಭವಾಗುತ್ತದೆ. ಸೆಪ್ಟೆಂಬರ್ ಮೊದಲ ವಾರದವರೆಗೂ ನಡೆಯುತ್ತದೆ. ಪ್ರತಿ ವರ್ಷ ಸಾವಿರ ಸಾವಿರ ಟನ್ ಕಟ್ಟಿಗೆ ತಂಬಾಕು ಹದಗೊಳ್ಳಲು ಸುಟ್ಟು ಭಸ್ಮವಾಗುತ್ತದೆ.
 
ಈ ಸಂದರ್ಭದಲ್ಲಿ ಮೈಸೂರು-ಹುಣಸೂರು, ಮೈಸೂರು-ಎಚ್.ಡಿ.ಕೋಟೆ ಮುಂತಾದ ರಸ್ತೆಗಳ ಅಕ್ಕಪಕ್ಕದಲ್ಲಿ ಯಾವುದೇ ಮರ ಉರುಳಿ ಬಿದ್ದರೂ, ರೈತರಿಗೆ ಉರುವಲನ್ನು ಸರಬರಾಜು ಮಾಡುವ ಏಜಂಟರು ಆ ಮರವನ್ನು ಗಬಕ್ಕನೆ ಸ್ವಾಧೀನಪಡಿಸಿಕೊಳ್ಳುತ್ತಾರೆ. ಮೈಸೂರು ನಗರದಲ್ಲಿ ಬೀಳುವ ಮರಗಳಿಗೂ ಇವರು ಕಣ್ಣುಹಾಕುತ್ತಾರೆ.

ಕಳೆದ ಹತ್ತಾರು ವರ್ಷಗಳಿಂದ ಮೈಸೂರಿನಲ್ಲಿ ಬಡಾವಣೆಗಳನ್ನು ನಿರ್ಮಿಸುವ ಭರಾಟೆ ಹೆಚ್ಚಾಗಿದೆ. ಹೀಗೆ ಬಡಾವಣೆ ನಿರ್ಮಿಸಲು ಮುಂದಾಗುವ ವ್ಯಕ್ತಿಗಳಿಗೆ ಅವರ ಜಮೀನಿನಲ್ಲಿರುವ ಮರ ಅಡ್ಡಿಯಾಗುತ್ತದೆ. ಬಡಾವಣೆ ನಿರ್ಮಾಣದ ಸುಳಿವು ಸಿಕ್ಕ ಕೂಡಲೇ ಅಲ್ಲಿ ಉರುವಲು ಸರಬರಾಜು ಮಾಡುವ ಏಜಂಟರು ಹಾಜರಾಗಿ ಮರಗಳನ್ನು ಖರೀದಿಸಿ ಬಿಡುತ್ತಾರೆ. ತಕ್ಷಣವೇ ಕತ್ತರಿಸಿಕೊಂಡೂ ಹೋಗುತ್ತಾರೆ.

ದೊಡ್ಡ ದೊಡ್ಡ ಏಜಂಟರು ಮರಗಳನ್ನು ಕತ್ತರಿಸಿಕೊಂಡು ಹೋದರೆ, ಸಣ್ಣ ಏಜಂಟರು ಮರದ ಬೇರನ್ನೂ ಬಿಡುವುದಿಲ್ಲ. ಹಿಟಾಚಿ ಯಂತ್ರಗಳನ್ನು ತಂದು ಅಗೆದೂ ಅಗೆದು ಬೇರನ್ನೂ ಕಿತ್ತುಕೊಂಡು ಹೋಗಿ ಹೊಗೆಸೊಪ್ಪು ಬೆಳೆಗಾರರಿಗೆ ಮಾರುತ್ತಾರೆ.

ತಂಬಾಕು ಕೇವಲ ಅರಣ್ಯ ನಾಶಕ್ಕೆ ಮಾತ್ರ ಕಾರಣವಾಗುವುದಿಲ್ಲ. ತಂಬಾಕು ಬೆಳೆಗಾರರು ತಮ್ಮ ಜಮೀನಿನಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳುತ್ತಾರೆ.

ಇದರಿಂದ ಭೂಮಿಯಲ್ಲಿನ ಅಂತರ್ಜಲ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ತಂಬಾಕಿಗೆ ಬಳಸುವ ರಾಸಾಯನಿಕಗಳೂ ಭೂಮಿಯನ್ನು ಬಂಜರು ಮಾಡುತ್ತವೆ.

ಕಳೆದ ವರ್ಷ ಒಂದು ಕೆಜಿ ತಂಬಾಕಿಗೆ ಸರಾಸರಿ 110 ರೂಪಾಯಿ ಬೆಲೆ ಸಿಕ್ಕಿತ್ತು. ಈ ಬಾರಿ 92 ರೂಪಾಯಿ ಸಿಕ್ಕಿದೆ. ಇಷ್ಟೊಂದು ಹಣ ಸಿಕ್ಕಿರುವುದರಿಂದ ರೈತರು ಸಂತೋಷವಾಗಿದ್ದಾರೆ. ಆದರೆ ಈಗಿನ ರೈತರು ಸಂತೋಷವಾಗಿದ್ದರೆ ಸಾಕೆ? ಮುಂದಿನ ಜನಾಂಗಕ್ಕೂ ಸಂತೋಷವನ್ನು ಬಿಟ್ಟು ಹೋಗಬೇಕಲ್ಲವೆ?

1960ರ ದಶಕದಲ್ಲಿ ಮೈಸೂರು ಜಿಲ್ಲೆಯಲ್ಲಿ ತಂಬಾಕು ಬೆಳೆ ಆರಂಭವಾಯಿತು.ಅಲ್ಲಿಂದ ಇಲ್ಲಿಯವರೆಗೆ ತಂಬಾಕು ಬೆಳೆ ಎಷ್ಟು ಎಕರೆ ಅರಣ್ಯವನ್ನು ನಾಶ ಮಾಡಿದೆ ಎನ್ನುವುದರ ಬಗ್ಗೆ ಸಮೀಕ್ಷೆ ನಡೆಸಬೇಕಾಗಿದೆ.

2020ರ ವೇಳೆಗೆ ತಂಬಾಕು ಬೆಳೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮಾತುಗಳೂ ಈಗ ಕೇಳಿಬರುತ್ತಿವೆ. ತಂಬಾಕು ಬೆಳೆಯನ್ನು ನಾವು ನಿಷೇಧಿಸದೇ ಹೋದರೆ ತಂಬಾಕೇ ನಮ್ಮ ಬದುಕನ್ನು ನಿಷೇಧಿಸಿ ಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.