ADVERTISEMENT

ತರುಲತೆಗಳ ನದನದಿಗಳ ರಸಿಕರ ಸೆಳೆಯುವ ಕರುನಾಡು

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 7:10 IST
Last Updated 3 ಜನವರಿ 2011, 7:10 IST

ಸರಳವಾಗಿರುವುದು, ಸಂಪನ್ಮೂಲಗಳ ಸಮಾನ ಹಂಚಿಕೆ, ದೀನರ ನೋವಿಗೆ ಮಿಡಿಯುವುದು, ಆಸೆಬುರುಕರಂತೆ ಪ್ರಕೃತಿಯನ್ನು ದೋಚದಿರುವುದು- ಮಹಾತ್ಮ ತೋರಿದ ದಾರಿ ಇದಲ್ಲವೇ. ಈ ಹಾದಿಯಲ್ಲಿ ಹೆಜ್ಜೆಯಿಡುತ್ತಿರುವ ಹೆಮ್ಮೆ ನಮ್ಮದು. ಏನಿದು ಅಸಂಬದ್ಧ ಮಾತು ಎಂದಿರಾ? 2010ರ ಕಣ್ಣ ಕಪ್ಪು ತೊಳೆದುಕೊಂಡು 2011ರ ಕನಸುಗಳ ಮುಂಜಾವಿನ ಇಬ್ಬನಿಗೆ ಒಪ್ಪಿಸಿಕೊಳ್ಳಿ. ಅಲ್ಲಿ ಮಸುಕಾಗಿ ಕಾಣುತ್ತಿದೆ ನೋಡಿ- ಕಿಂದರಜೋಗಿ ತೋರಿಸಿದ ತರುಲತೆಗಳ ನದನದಿಗಳ ರಸಿಕರ ಕಂಗಳ ಸೆಳೆಯುವ ಕರುನಾಡು.
ನಮಸ್ತೆ ಯಡ್ಯೂರ್‌ಜಿ. ಹೊಸ ವರ್ಷದ ಶುಭಕಾಮನೆಗಳು ನಿಮಗೆ. ಭೂದಾನ ಆಂದೋಲನಕ್ಕೆ ಮರುಜೀವ ತುಂಬುತ್ತಿರುವ ನಿಮ್ಮೊಳಗೊಬ್ಬ ಆಚಾರ್ಯ ವಿನೋಬಾ ಭಾವೆ ಇಣುಕುತ್ತಿರುವಂತೆ ಕಾಣುತ್ತಿದೆ. ಪುನರ್ಜನ್ಮದ ಕಥನಗಳ ಕಾಲ ಇದಲ್ಲವೇ? ಹಾಂ, ಉಳ್ಳವರಿಂದ ಭೂಮಿದಾನ ಪಡೆದು ಇಲ್ಲದವರಿಗೆ ಹಂಚಲು ಹೊರಟಿರುವ ನಿಮ್ಮ ಜೋಳಿಗೆ ದೊಡ್ಡದಿದೆ ತಾನೆ? ಆ ಜೋಳಿಗೆಯಲ್ಲಿನ ಮೊದಲ ತುಣುಕು ನಿಮ್ಮ ಸ್ವಂತದ್ದು ಎನ್ನುವುದು ನಮಗೇನು ತಿಳಿಯದೆ? ಬಲಗೈಯಲ್ಲಿ ನೀಡಿದ್ದು ಎಡಗೈಗೆ ಗೊತ್ತಾಗಬಾರದೆಂಬ ದೊಡ್ಡತನ ನಿಮ್ಮದಾದರೂ, ಉದಾರತೆಯ ಅರ್ಥ ಮಾಡಿಕೊಳ್ಳದಷ್ಟು ಕಿರಿಹೃದಯ ಕನ್ನಡಿಗರದಲ್ಲವಲ್ಲ!

ಏನು ಮೋಡಿ ಮಾಡಿದ್ದೀರಿ ನೀವು. ಹೊಸ ಇತಿಹಾಸ ಸೃಷ್ಟಿಸಲು ಹೊರಟ ನಿಮ್ಮ ಹಿಂದೆ ಎಷ್ಟೊಂದು ಸಾಲು. ಪಕ್ಷ ರಾಜಕಾರಣದ ಹಂಗು ಮೀರಿ ರಾಜಕಾರಣಿಗಳೆಲ್ಲ ನಿಮ್ಮೊಂದಿಗೆ ಕೈಜೋಡಿಸಿದ್ದಾರೆ. ಜೋಳಿಗೆಯಲ್ಲಿ ಎದ್ದುಕಾಣುತ್ತಿರುವ ದೊಡ್ಡ ತುಣುಕು ಯಾವುದದು? ಗೌಡರ ಕುಟುಂಬದಿಂದ ದಾನವಾಗಿ ಪಡೆದದ್ದೇ? ಹೌದು, ಹೇಳಿಕೇಳಿ ಹೆಸರಿನ ಜೊತೆಗೇ ಮಣ್ಣು ಅಂಟಿಸಿಕೊಂಡವರು ಗೌಡರು. ಅವರಿಗೇಕೆ ಬೇಕು ಈ ಲೌಕಿಕದ ಮಣ್ಣು!

ನಿಜವಾದ ಅಚ್ಚರಿ ಈ ವ್ಯಾಪಾರಿ ಕಂಪನಿಗಳದ್ದು. ಐಟಿ ಕಂಪನಿಗಳು ಹೆಚ್ಚುವರಿ ಭೂಮಿಯನ್ನು ವಾಪಸ್ ಮಾಡುವುದೆಂದರೇನು? ಮಠಮಂದಿರಗಳೂ ನಿಮ್ಮ ಭೂದಾನ ಚಳವಳಿಯ ಜೋಳಿಗೆ ತುಂಬುವುದೆಂದರೇನು? ಹೆದ್ದಾರಿಗಳ ಹೆಸರಲ್ಲಿ ಕಂಪನಿಗಳ ಖಾತೆ ಸೇರಿದ ನೆಲ ವಾಪಸ್ಸಾಗುವುದೆಂದರೇನು? ಕನ್ನಡಿಗರ ಭಾಗ್ಯ ದೊಡ್ಡದು ಮುಖ್ಯಮಂತ್ರಿಗಳೇ.

ಅಂದಹಾಗೆ, ಭೂದಾನ ಆಂದೋಲನದ ಅಧ್ವರ್ಯುವಿನ ಪೋಷಾಕಿನಲ್ಲಿರುವ ನಿಮ್ಮ ಬೆನ್ನಹಿಂದೆ ದಂಡನಾಯಕನಂತೆ ನಿಂತಿದ್ದಾರಲ್ಲ, ಯಾರವರು? ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂತೆ ಕಾಣುತ್ತಿದ್ದಾರಲ್ಲ- ನಿಮ್ಮ ಮುಂದೆ ಸರ್ಕಾರ್ ಅವರದ್ದೆಂಥ ಯಕ್ಷಿಣಿ?

ಓವರ್ ಟು ಬಳ್ಳಾರಿ.
ಒಣಹಣ್ಣುಗಳ ಕೇಕಿನ ತುಣುಕುಗಳಂತೆ ನಂದನದ ಮರಿಯೊಂದು ಇಲ್ಲಿ ಬಿದ್ದಿದೆಯಲ್ಲ! ಭಳಾರೆ ವಿಚಿತ್ರಂ.
ಎಲ್ಲಿ ಹೋದವು ಗುಂಡಿ ಗುಂಡಾರಗಳು. ಎಲ್ಲಿ ಬುಲ್ಡೋಜರು- ಕ್ರೇನುಗಳು. ಈಗ ಬರಿ ಕಾನುಗಳು. ಕಣ್ಣೋಟ ಹರಿದಲ್ಲೆಲ್ಲ ಹಸಿರ ಹಾಸುಗಳು. ಭಪ್ಪರೆ ರೆಡ್ಡಿ ಸೋದರರೇ... ಮಾಯಾಲೋಕ ಸೃಷ್ಟಿಸಿದ್ದೀರಿ ನೀವು.

ಲೋಕಸೇವೆ ಹೊಸತೇನಲ್ಲ ನಿಮಗೆ. ಭೂತಾಯಿಯ ಆರಾಧಿಸಿ, ಅದಿರು ವರವಾಗಿ ಪಡೆದು ನಾಡಿನ ನಕಾಶೆಯನ್ನೇ ಬದಲಿಸಿದ್ದಿರಿ. ಗಣಿಗಾರಿಕೆಯಲ್ಲಿ ದೇವರನ್ನು ಕಂಡಿರಿ. ಕಾಯಕವೇ ಕೈಲಾಸ ಮಾತಿಗೆ ಹೊಸ ಅರ್ಥ ತಂದಿರಿ. ಇಂತಿಪ್ಪ ನೀವು, ಲೌಕಿಕದ ಲೋಕೋದ್ಧಾರದ ದಾರಿಯ ಬಿಟ್ಟು, ಒಮ್ಮಿಂದೊಮ್ಮೆಗೆ ಅಲೌಕಿಕದ ನಂದನದಲ್ಲಿ ವಿಹರಿಸುತ್ತಿದ್ದೀರಿ. ಪುರುರಾಜನಿಗೆ, ಅರೆಕ್ಷಣದಲ್ಲಿ ಇಹಪರಗಳ ಕಾಣಿಸಿದ ನೀಲಾಂಜನೆಯಂತೆ ನಿಮ್ಮ ಪಾಲಿಗೆ ಯಾರು ಗುರು? ದೆಹಲಿಯ ಅಮ್ಮ ಹೇಳಿದಳೇ...

ಗಣಿಗುಂಡಿಗಳಲ್ಲೆಗ ಸಸ್ಯಶಾಮಲೆ. ದೂಳು ನೆಲದಲ್ಲಿ ಹಸಿರ ಚಿತ್ತಾರ. ಬಳ್ಳಾರಿ ನೆಲದಲ್ಲಿ ನಿತ್ಯ ವನಮಹೋತ್ಸವ. ಬಳ್ಳಾರಿಯೆಂಬುದು ಗೊಂಡಾರಣ್ಯವಾಗಿ, ನಾಡಿನ ಪಾಲಿಗೆ ಆರೋಗ್ಯಕರ ಶ್ವಾಸಕೋಶವಾಗುವ ದಿನ ದೂರವೇನೂ ಇಲ್ಲ.

ರೆಡ್ಡಿಗಳೇ, ಎಂಥ ಸಾಹಸ ನಿಮ್ಮದು. ಅಭಿನಂದನೆಗಳು ನಿಮಗೆ. ಹೊಸ ವರ್ಷದ ಶುಭಾಶಯ. ಹಸಿರಾಗಲಿ ಬಳ್ಳಾರಿ, ಉಸಿರಾಗಲಿ ಕರ್ನಾಟಕ.

ಏನಿದು, ಉತ್ತರ ಕರ್ನಾಟಕದಲ್ಲಿ ವಿಚಿತ್ರ ಕಲರವ. ಜೀನ್ಸ್ ತೊಟ್ಟ ಕಂಪ್ಯೂಟರ್ ಜಾಣಜಾಣೆಯರು. ಹಾಂ, ಇವರೆಲ್ಲ ಇಲ್ಲಿ ಬಂದಿರುವುದು ಪ್ರವಾಹ ಸಂತ್ರಸ್ತರ ನೆರವಿಗೆಂದಾ? ಎಲ್ಲಿಯ ಸಾಫ್ಟ್‌ವೇರ್ ದೊರೆ, ಇದೆಲ್ಲಿಯ ನೆರೆ! ‘ಮನುಷ್ಯಜಾತಿ ತಾನೊಂದೆವಲಂ’ ಎನ್ನುವ ಪಂಪನ ಮಾತು ಐಟಿ ಮಂದಿಯ ಕಿವಿಗೂ ಬಿತ್ತೇ?

ರಿಯಲ್ ಎಸ್ಟೇಟ್ ಸರ್ಕಾರಗಳ ದಿನಗಳಲ್ಲಿ ಭೂದಾನ ಆಂದೋಲನ ಮರುಜೀವ ಪಡೆದಿರುವಾಗ, ಬಳ್ಳಾರಿಯಲ್ಲಿ ವನದೇವಿ ವಾಕಿಂಗ್ ಮಾಡುತ್ತಿರುವಾಗ, ನಾಡವರ ನೋವಿಗೆ ಮಿಡಿಯುವ ಬುದ್ಧಿ ಸಾಫ್ಟ್‌ವೇರಿಗಳಿಗೆ ಬಂದಲ್ಲಿ ಅಚ್ಚರಿಯೇನು? ಉಳಿಸಿದ್ದರಲ್ಲೊಂದು ಪಾಲು, ಹೂಡಿದ್ದರಲ್ಲಿ ಇನ್ನೊಂದು ಪಾಲು- ಹೀಗೆ ಎಷ್ಟೊಂದು ಪಾಲು ಗುಡ್ಡೆ ಹಾಕಿಕೊಂಡ ಐ.ಟಿ. ಮಂದಿ ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸುತ್ತಿರುವುದ ನೋಡಿದರೆ, ಧರ್ಮ ಮತ್ತೆ ನಾಲ್ಕು ಕಾಲಿನಲ್ಲಿ ನಡೆಯಲು ಶುರುಮಾಡಿರಬೇಕು.

ನೆರೆಪಾಲಾದ ನೆಲದಲ್ಲಿ ಮನೆಗಳು ಮೂಡುತ್ತಿವೆ. ಭರವಸೆ ಕಳಕೊಂಡ ಬದುಕುಗಳಲ್ಲಿ ಕನಸುಗಳು ಚಿಗುರುತ್ತಿವೆ. ನೆರವಿಗೆ ಎಷ್ಟೊಂದು ಕೈಗಳು! ಕೈಯಲ್ಲಿ ಮಾಂಗಲ್ಯ ಹಿಡಿದು ಸಂಸ್ಕೃತಿ ಬೋಧಿಸುತ್ತಿದ್ದ ಯೋಧರು ಹಾರೆ ಗುದ್ದಲಿ ಹಿಡಿದು ಬದುಕು ಕಟ್ಟುವಲ್ಲಿ ಬೆವರು ಸುರಿಸುತ್ತಿದ್ದಾರೆ.

ಸಿರಿಗನ್ನಡಂ ಗೆಲ್ಗೆ ಬಾಳ್ಗೆ.
ಆ ಊರು ಈ ಊರು, ಈಗ ಬೆಂಗಳೂರು. ವಿಧಿ ವಿಪರೀತವೇ- ಇದೇನಾ ಸಿಲಿಕಾನ್ ವ್ಯಾಲಿಯೆಂದೆನಿಸಿಕೊಂಡ ರಾಜಧಾನಿ. ಇದು ಬೆಂಗಳೂರೇನಾ? ಇಲ್ಲ, ದಾರಿ ತಪ್ಪಿ ಬಂದೆವಾ? ಮೋಟಾರು-ಕಾರುಗಳೆಲ್ಲ ಎಲ್ಲಿ ಮಾಯವಾದವು?

ರಸ್ತೆಗಳ ತುಂಬ ಸೈಕಲ್ಲು. ನಗರಸಾರಿಗೆ ಬಸ್ಸುಗಳಲ್ಲಿ ಕಾರಿನ ಮಂದಿಯ ಸ್ಮೈಲು. ಏನಾಯಿತು ಈ ಊರಿಗೆ?
ಗಾಂಧಿಯನ್ನು ರಸ್ತೆ ಹೆಸರಾಗಿಸಿ ಹಗುರಾಗಿದ್ದವರು ನಾವು; ಒಮ್ಮೆಗೇ ಮಹಾತ್ಮ ಹೇಳಿಕೊಟ್ಟ ಸರಳತೆಗೆ ಮನಸ್ಸು ಮಾಡಿದ್ದು ಹೇಗೆ?

ಅತ್ತ ನೋಡಿ- ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಳು ಮರಿ ಹಾಕಿದಂತಿವೆ. ಅರಮನೆ ಮೈದಾನದಲ್ಲಿ ಚಿಗುರುತ್ತಿದೆ ದೇವರಕಾಡು. ರೇಸ್‌ಕೋರ್ಸ್ ಬಯಲೀಗ ಸಸ್ಯೋದ್ಯಾನ. ಉದ್ಯಾನ ನಗರಿ ದೂಳು ಕೊಡವಿಕೊಂಡಂತಿದೆ.
2011 ಬರಿಗೈಲಿ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.