ADVERTISEMENT

ನವಿಲು ನಲಿವ ತಾಣ ಕೆಂಬೂತದ ಕಾಂಚಾಣ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಗದಗ ಜಿಲ್ಲೆಯ ಒಂದೂರು, ಹೆಸರು ನೀರಲಗಿ. ಅಲ್ಲಿನ ಮನೆಗಳ ಗೋಡೆಗಳ ಮೇಲೆ ನವಿಲುಗಳು ನರ್ತಿಸುತ್ತವೆ. ಇವು ದೇವನೂರ ಮಹಾದೇವರ `ಒಡಲಾಳ~ ನೀಳ್ಗತೆಯಲ್ಲಿನ ಯಾರ ಜಪ್ತಿಗೂ ಸಿಗದ ನವಿಲುಗಳಲ್ಲ! ಈ ಸಹಸ್ರಗಣ್ಣಿನ ಹಕ್ಕಿಗಳು, ವಿಜಯ್ ಕಿರೇಸೂರ ಎನ್ನುವ ಶಿಕ್ಷಕರೊಬ್ಬರ ಸೃಜನಶೀಲತೆಯ ಮೂಸೆಯಲ್ಲಿ ಅರಳಿರುವ ನವಿಲುಗಳು.

ನೀರಲಗಿಯಲ್ಲಿ ಮನೆಗಳ ಗೋಡೆಗಳ ಮೇಲೆ ನವಿಲುಗಳು ಮೈದಾಳುವುದು ಪ್ರತಿ ಕ್ಯಾಲೆಂಡರ್ ವರ್ಷದ ಶುರುವಿನೊಂದಿಗೆ. ಹೊಸ ವರ್ಷ ಬಂದರೆ ಇಲ್ಲಿಯ ಜನರಿಗೆ ಹಬ್ಬದ ಸಡಗರ. ಹಳ್ಳಿಯ ಬದುಕು ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ಕ್ಷಣಗಳನ್ನು ಬರಮಾಡಿಕೊಳ್ಳುವ ಸೊಗಸೇ ಬೇರೆ.

ಪ್ರತಿ ಮನೆಯ ಗೋಡೆಗಳು ಹಸೆಚಿತ್ರಗಳಿಂದ ಕಂಗೊಳಿಸುತ್ತವೆ. ಬಾಗಿಲು ಕಿಟಕಿಗಳು ಗ್ರಾಮೀಣ ಬದುಕಿನ ಭಿನ್ನ ಭಿನ್ನ ಕಾಯಕದ ಬಣ್ಣದ ಚಿತ್ರಗಳನ್ನು ಮೈದುಂಬಿಕೊಳ್ಳುತ್ತವೆ. ವರ್ಷ ಪೂರ್ತಿ ಭಾರ ಹೊತ್ತು ದಣಿದಿರುವ ಚಕ್ಕಡಿಗಳು ಮೈ ತೊಳೆದುಕೊಂಡು ಸುಂದರ ಕಲಾಕೃತಿಗಳಾಗಿ ಅಲಂಕಾರಗೊಳ್ಳುತ್ತವೆ.
 

ಎತ್ತುಗಳು ಮೈಗೆಲ್ಲ ಬಣ್ಣ ಬಣ್ಣದ ಜೂಲ ಹಾಕಿಕೊಂಡು, ಕೋಡುಗಳಿಗೆ ಕೋಡೆಣಸು, ಗೊಂಡೆ ಕಟ್ಟಿಕೊಂಡು, ಮಣಿಗಳ ಹಣೆಪಟ್ಟಿ, ಕೊರಳಿಗೆ ಕೊಳ್ಳಂಗಡದ ಗಂಟೆ ಹಾಕಿಸಿಕೊಂಡು ಚೆಲುವಾಗುತ್ತವೆ. ಹೊಸ ವರ್ಷದ ಮೊದಲ ದಿನ ಈ ಗ್ರಾಮದ ಜನ ಹೊಲದ ಕೆಲಸಕ್ಕೆ ಬಿಡುವು ಮಾಡಿಕೊಂಡು ಹಬ್ಬದೂಟದ ಕಜ್ಜಾಯವನ್ನು ಪ್ರತಿ ಮನೆಯಿಂದ ಎತ್ತಿಕೊಂಡು ಒಂದೆಡೆ ಸೇರುತ್ತಾರೆ, ಊರಿಗೆ ಬಂದ ಅತಿಥಿಗಳಿಗೆ ಉಣಬಡಿಸಿ ತಾವೂ ಹಬ್ಬದೂಟ ಮಾಡುತ್ತಾರೆ. ಈ ಎಲ್ಲ ಸಂಭ್ರಮದ ಹಿಂದಿರುವುದು ಇದೇ ಊರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವಿಜಯ್ ಕಿರೇಸೂರ ಎಂಬ ಯುವ ಕಲಾವಿದನ ಶ್ರಮ, ಪ್ರತಿಭೆ ಮತ್ತು ಕನಸು.

ಹೊಸ ವರ್ಷ ಮುಗಿದ ನಂತರವೂ ನೀರಲಗಿಯನ್ನು ನೆನಪಿಸಿಕೊಳ್ಳಲಿಕ್ಕೆ ಕಾರಣವಿದೆ. ಈ ಹಳ್ಳಿ ನಮ್ಮ ಗ್ರಾಮಗಳಿನ್ನೂ ಉಳಿಸಿಕೊಂಡಿರಬಹುದಾದ ಜವಾರಿತನದ ಸಾಕ್ಷಿಯಂತಿದೆ. ಜೀವದಾಯಿನಿ ಮಳೆಯನ್ನು ಕರೆತರುವ ಗುಳ್ಳವ್ವ, ಗುರ್ಜಿಯರನ್ನು ಇಲ್ಲಿ ಆರಾಧಿಸುತ್ತಾರೆ.

ಎಳ್ಳಮವಾಸ್ಯೆ, ಸೀಗೆ ಹುಣ್ಣಿಮೆಗಳು ನೀರಲಗಿಯಲ್ಲಿ ಪ್ರತಿ ವರ್ಷವೂ ನಿತ್ಯ ನೂತನ. `ರೊಟ್ಟಿ ಪಂಚಮಿ~ ದಿನ ಈ ಊರಲ್ಲಿ ಪ್ರತಿ ಮನೆ ಮನೆಗೂ ಹೋಗಿ ಅವರ ರೊಟ್ಟಿ ಇವರಿಗೆ ಕೊಟ್ಟು, ಅವರ ರೊಟ್ಟಿ ಪಡೆದು ತಿಂದು ಸಂಭ್ರಮಿಸುತ್ತಾರೆ. ಒಂದೊಂದು ಮನೆಯ ರುಚಿಯೂ ಭಿನ್ನ. ಎಲ್ಲ ಕಲ್ಮಶಗಳನ್ನು ತೊಳೆದುಕೊಂಡು ಮೆರೆಯುವ ಸೋದರ ಭಾವ ರೊಟ್ಟಿ ರುಚಿಯನ್ನು ಹೆಚ್ಚಿಸುತ್ತದೆ.

ಎಲ್ಲ ಕಾಲದ ಎಲ್ಲ ಪಿಡುಗುಗಳಿಗೂ ಕಲೆ ದಿವ್ಯ ಔಷಧಿ ಎನ್ನುವುದನ್ನು ಮತ್ತೆ ಸಾಬೀತುಪಡಿಸುವಂತೆ, ಆ ಕಲೆ ನಮ್ಮ ಹಳ್ಳಿಗಳ ರಕ್ತದಲ್ಲಿಯೇ ಇದೆ ಎಂದು ತೋರುವಂತೆ, ನೀರಲಗಿ ಕಾಣಿಸುತ್ತದೆ. ಆದರೆ ಹೊಟ್ಟೆ ಹೊರೆಯುವಿಕೆಯೇ ಪ್ರಧಾನವಾಗಿಬಿಟ್ಟಿರುವ ಇಂದಿನ ದಿನಗಳಲ್ಲಿ ನಮ್ಮ ಹಳ್ಳಿಗಾಡ ಸಂಸ್ಕೃತಿಯ ತಾಯಿಬೇರಿಗೆ ಉದಾರೀಕರಣದ ಸೋಂಕು ತಗುಲಿದೆ.

ಜಾಗತೀಕರಣ ಎನ್ನುವ ಮಾಯಕದ ಜಾಲ ನಮ್ಮ ಹಳ್ಳಿಗಳನ್ನು ವಿನಾಶದತ್ತ ತಳ್ಳಿ ತನ್ನ ಭೋಗ ಪ್ರಧಾನತೆಯನ್ನು ಮೆರೆಯುತ್ತಿದೆ. ಇಂಥ ಸಂದರ್ಭದಲ್ಲಿ, ನಮ್ಮ ಸಾಂಸ್ಕೃತಿಕ ಉಳಿವಿನ ದಾರಿಗಳನ್ನು ನಾವೇ ಕಂಡುಕೊಳ್ಳಬೇಕಿದೆ. ಅಂಥದೊಂದು ದಾರಿಯ ಬೆಳಕಾಗಿ ವಿಜಯ್‌ರಂಥ ಮಹತ್ವಾಕಾಂಕ್ಷೆಯ ತರುಣರು ಹಳ್ಳಿಗಳ ದೇಸೀಯತೆಯನ್ನು ಮರುಪೂರಣ ಮಾಡುತ್ತಿದ್ದಾರೆ. ಆ ಮೂಲಕ ಕಳೆದುಹೋಗಬಹುದಾದ ಹಳ್ಳಿಗಳಿಗೆ ಸಾಂಸ್ಕೃತಿಕ ಜೀವ ತುಂಬಿ ಪೊರೆಯುತ್ತಿದ್ದಾರೆ.

ಕೆಂಪಾದವೋ ಎಲ್ಲ..

ADVERTISEMENT

ನಮ್ಮ ಕಡೆಯ ಕೆಲವು ಊರುಗಳು ಬಯಲ ಸುಂದರಿಯರಂತೆ. ಇಳಕಲ್ ಸೀರೆಯಲ್ಲಿ ಕಂಗೊಳಿಸುವ ತುಂಬು ಚೆಲುವೆಯಂತೆ ನಮ್ಮ ಊರುಗಳು. ಅಗಸಿಕಟ್ಟೆ, ಚಾವಡಿ, ಗುಡಿಗಳೇ ಇಲ್ಲಿನ ಆಗುಹೋಗುಗಳನ್ನು ನಿರ್ಧರಿಸುತ್ತವೆ. ಸುಣ್ಣ, ಕೆಮ್ಮಣ್ಣು, ಸಗಣಿಗಳೇ ನಮ್ಮ ಹಳ್ಳಿಗಳ ಸೌಂದರ್ಯ ಸಾಧನಗಳು. ಸುಣ್ಣ, ಕೆಮ್ಮಣ್ಣಿನಿಂದ ಅಲಂಕೃತಗೊಂಡ ಮನೆಗಳ ಸೌಂದರ್ಯ ಹೇಳಲಸದಳ. ಮನೆಯ ಅಂಗಳವನ್ನು ಸಗಣಿಯಿಂದ ಬಳಿದು, ಮನೆಯೇ ಆಗಲಿ ಗುಡಿಸಲೇ ಆಗಲಿ ಕೆಮ್ಮಣ್ಣು ಸುಣ್ಣದಿಂದ ಗೆರೆಯೆಳೆಯುತ್ತಾ ಹೋದರೆ ಸಾಕು ಊರು ಬೆಳಗುತ್ತದೆ. ಜನಮಾತ್ರ ನಗುವುದಿಲ್ಲ, ಮನೆಗಳೇ ನಗುತುಂಬಿಕೊಂಡಿರುತ್ತವೆ.

ಹಳ್ಳಿಗಳ ಕುರಿತಾದ ನಮ್ಮೆಲ್ಲ ಪರಿಕಲ್ಪನೆಯನ್ನು ಸುಳ್ಳು ಮಾಡುವಂತಿದೆ ಬೆಳಗಾವಿ ಜಿಲ್ಲೆಯ ಉಗುರುಕೋಡ ಗ್ರಾಮದ ಇಂದಿನ ಸ್ಥಿತಿ. ಊರಿಗೆ ಊರೇ ಕೆಂಪು ಬಣ್ಣ ಬಳಿದುಕೊಂಡಿದೆ. ಮನೆಗೆ ಕೆಂಪು, ಊರಿನ ಹೆಸರನ್ನು ಸೂಚಿಸುವ ನಾಮಫಲಕಕ್ಕೂ ಕೆಂಪು! ಏನಿದು ರಂಗು? ಕೆಂಪುಮಳೆಯೊಂದು ಉಗುರುಕೋಡವನ್ನು ಮೀಯಿಸಿತಾ?

ಉಹುಂ, ಉಗುರುಕೋಡವನ್ನು ಮೀಯಿಸಿರುವುದು ಮಳೆಯಲ್ಲ, ಜಾಹೀರಾತಿನ ಕೆಂಪುಹೊಳೆ. ಮೊಬೈಲ್ ದೂರವಾಣಿ ಕಂಪನಿಯೊಂದರ ಜಾಹೀರಾತಿನ ಬಣ್ಣ ಊರಿಗೆ ಊರನ್ನೇ ಆಕ್ರಮಿಸಿಕೊಂಡಿದೆ. ಯಾರೋ ಬಿಟ್ಟ ಬಾಣಕ್ಕೆ ಮೈಯೆಲ್ಲ ಕೆಂಪು ಹನಿ ತೊಟ್ಟಿಕ್ಕಿಸುತ್ತಿರುವಂತೆ ಹಳ್ಳಿ ಭಾಸವಾಗುತ್ತದೆ.

ಧಾರವಾಡದಿಂದ ಬೆಳಗಾವಿಯ ಕಡೆಗೆ ಹೆಬ್ಬಾವಿನಂತೆ ಮಲಗಿರುವ ಹೆದ್ದಾರಿ ಬದಿಯ ಕೆಲವು ಶಾಲೆಗಳನ್ನೂ ಈ ಕೆಂಪು ಬಣ್ಣ ಬಿಟ್ಟಿಲ್ಲ. ನಮ್ಮ ದೇವರುಗಳು ಪಾಠ ಕಲಿಯುವ ಈ ಪವಿತ್ರ ಸ್ಥಳಗಳು ಇಂದು ತಲುಪಿರುವ ಅವಸ್ಥೆ ವಿಷಾದ ಹುಟ್ಟಿಸುವಂತಿದೆ. ಶಾಲೆಗಳಿಗೆ ಅದರದೇ ಆದ ಒಂದು ನೀತಿ ಸಂಹಿತೆ ಇದೆ. ಇಲ್ಲಿ ನಮ್ಮ ದೇಶದ ಕನಸುಗಳು ಹುಟ್ಟುತ್ತವೆ.

ಆದರೆ ಈ ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳದ ವ್ಯಾಪಾರಿ ಕಂಪನಿ ತನ್ನ ಜಾಹೀರಾತಿನ ಮೂಲಕ ಶಾಲೆಯನ್ನು ಆವರಿಸಿಕೊಂಡಿದೆ. ಇದು ಉಗುರುಕೋಡದ ಸ್ಥಿತಿ ಮಾತ್ರವಲ್ಲ, ಹೆದ್ದಾರಿಗಳ ಇಕ್ಕೆಲಗಳಲ್ಲಿನ ಅನೇಕ ಹಳ್ಳಿಗಳ ಸ್ಥಿತಿ ಹೀಗೆಯೇ ಇದೆ.


ಏನು ಮರ್ಮವೋ!

ಹಳ್ಳಿಯ ಜನರಿಗೆ ಜಾಹೀರಾತಿನ ಮರ್ಮಗಳು ತಿಳಿದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಇವರಿಗೆ ಬಾಯಿಯೇ ಇಲ್ಲ. `ನಿಮ್ಮ ಮನೆಗಳಿಗೆ ಈ ಕೆಂಪು ಬಣ್ಣ ಯಾಕಾಗಿ?~ ಎಂದು ಕೇಳಿದರೆ ಬಂದ ಉತ್ತರಗಳು ಸೋಜಿಗ ಹುಟ್ಟಿಸುವಂತಿದ್ದವು. ತಮ್ಮ ಮನೆಗಳಿಗೆ ಬಳಿದಿರುವ ಈ ಬಣ್ಣ ಅವರ ಆಯ್ಕೆ ಆಗಿರಲಿಲ್ಲ. ಅಲ್ಲದೆ, ಹೀಗೆ ಬಣ್ಣವೊಂದಕ್ಕೆ ಒಡ್ಡಿಕೊಂಡಿದ್ದಕ್ಕೆ ಪ್ರತಿಯಾಗಿ ಒಂದು ಮೊಬೈಲ್ ಸಿಮ್‌ಕಾರ್ಡ್ ಹೊರತಾಗಿ ಅವರಿಗೆ ಏನೂ ಸಿಕ್ಕಿಲ್ಲ. ಜನಪ್ರತಿನಿಧಿಗಳು ಕೂಡ ಬಣ್ಣ ಬಳಿದುಕೊಂಡಿರುವಾಗ ಯಾರನ್ನು ದೂರುವುದು?
ಉಗುರುಕೋಡದಲ್ಲಿನ ನೂರಾರು ಮನೆಗಳು ತಮ್ಮ ಸಹಜ ಸೌಂದರ್ಯ ಕಳೆದುಕೊಂಡಿವೆ. ಮನೆಯ ಮುಂದಿನ ರಂಗೋಲಿಗಳನ್ನು ಯಾರು ಕದ್ದರೋ ತಿಳಿಯದು. 

ಮನೆಯ ಗೋಡೆಗಳಿಗೆ ಸುಣ್ಣ ಬಳಿಯುವಂತಿಲ್ಲ, ಸಗಣಿ ಸಾರಿಸುವಂತಿಲ್ಲ, ಕೆಮ್ಮಣ್ಣು ಅಲಂಕರಿಸುವಂತಿಲ್ಲ. ಎಲ್ಲವನ್ನೂ ಯಾರದೋ ಮರ್ಜಿಗಾಗಿ ಬಿಟ್ಟುಬಿಡಲಾಗಿದೆ. ವಿಚಿತ್ರವೆಂದರೆ, ಈ ಹಳ್ಳಿಯ ಹೆಸರು ಈಗ ಆಸುಪಾಸಿನ ಊರಿನವರಿಗೆ ಮರೆತುಹೋಗಿದೆ. ಗೊತ್ತಿರುವುದೊಂದೇ- ಕಂಪನಿಯ ಹೆಸರು!

ಜಾಹೀರಾತಿಗಾಗಿ ಮನುಷ್ಯರನ್ನು ಕೊಂಡುಕೊಳ್ಳುತ್ತಿದ್ದ ಕಂಪನಿಗಳು ಈಗ ಊರನ್ನೇ ಆವರಿಸಿಕೊಳ್ಳುತ್ತಿರುವುದು ಈ ಹೊತ್ತಿನ ವಿದ್ಯಮಾನ. ಈ ಊರಿನ ಚಿತ್ರ ನಮ್ಮ ಹಳ್ಳಿಗಳು ತಲುಪಿರುವ ದುರಂತ ಅಂತ್ಯವನ್ನು ಸೂಚಿಸುತ್ತಿದೆ. ಇಡೀ ಒಂದು ಊರೇ ಜಾಹೀರಾತಾಗಿ ಬದಲಾಗುವುದು ಎಂದರೆ...

ಒಂದು ಹಳ್ಳಿಯ ಜೀವಂತಿಕೆ ಅದರ ಭೌತಿಕ ಇರುವಿಕೆಯಲ್ಲಷ್ಟೇ ಇರುವುದಿಲ್ಲ, ಅದು ಅದರ ಸಾಂಸ್ಕೃತಿಕ ಉಳಿವಿನಲ್ಲಿದೆ. ಆದರೆ ಜಾಗತೀಕರಣದ ಭೀಕರ ದಾಳಿಗೆ ಈ ಸಾಂಸ್ಕೃತಿಕ ಅನನ್ಯತೆಯೇ ನಾಶವಾದ ಮೇಲೆ ಹಳ್ಳಿಯ ಉಳಿವೆಲ್ಲಿದೆ?

ಒಂದು ಊರು ಬರಗಾಲಕ್ಕೋ, ನೆರೆಗೋ ತತ್ತರಿಸಿದಾಗಲೂ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತದೆ. ಎಲ್ಲವನ್ನೂ ಅರಗಿಸಿಕೊಂಡು ಏನು ನಡೆದೇ ಇಲ್ಲವೆಂಬಂತೆ ಮುಂದಡಿಯಿಡುತ್ತವೆ. ಚಿಕೂನ್ ಗುನ್ಯಾ, ಮಲೇರಿಯಾ, ಕಾಲರಾಗಳೆಲ್ಲ ಹಳ್ಳಿಗರ ಚೈತನ್ಯದ ಮುಂದೆ ಮಂಕಾಗುತ್ತವೆ. ಆದರೆ, ಗ್ರಾಮಗಳ ಆತಂಕಗಳು ಇಂದು ಬದಲಾಗಿವೆ, ಸಂಕೀರ್ಣಗೊಂಡಿವೆ. ಒಂದು ಇಡಿಯಾದ ಹಳ್ಳಿಯ ಆತಂಕಗಳು ಬೇರೆ, ಈ ಹಳ್ಳಿಯಲ್ಲಿ ಬದುಕುತ್ತಿರುವ ಬೇರೆ ಬೇರೆ ಸಮುದಾಯಗಳ ಆತಂಕಗಳು ಬೇರೆ. ಇಲ್ಲಿನ ಜೀವ ಸಂಪತ್ತು ಎದುರಿಸುತ್ತಿರುವ ತಲ್ಲಣಗಳು ಬೇರೆ, ಭೂಮಿ ತನ್ನ ಗುಣವನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಪರದಾಟ ಬೇರೆ.

ನಮಗೆಲ್ಲ ಅವ್ವನ ಜೊತೆ ಈ ಹಳ್ಳಿಗಳೂ ಹುಟ್ಟು ನೀಡಿದವು. ಅವ್ವಂದಿರಿಗೆಲ್ಲ ಅವ್ವ ಈ ಊರು ಎಂಬ ಅವ್ವ. ಊರಿನಲ್ಲಿ ನಮ್ಮ ನಮ್ಮ ಕರುಳಬಳ್ಳಿಗಳ ಜೊತೆಗೇ ಎಲ್ಲರೂ ಜೀವಬಂಧುಗಳೇ.
 
ಯಾವ ಬಂಧುವಿಗೂ ಕಡಿಮೆಯಲ್ಲದ ಎತ್ತುಗಳು, ಯಾವ ಸ್ನೇಹಿತನಿಗೂ ಕಡಿಮೆಯಲ್ಲದ ಕರುಗಳು, ಆಡು, ಕುರಿ, ನಮ್ಮನ್ನು ಅಂಬಾರಿಯಂತೆ ಹೊತ್ತೊಯ್ಯುತ್ತಿದ್ದ ಎಮ್ಮೆಗಳು, ಮುತ್ತುರತ್ನದಂಥ ಜೀರಂಗಿಗಳು, ಚೇಳುಗಳನ್ನು ಮನೆಯೊಳಗೆ ಬರಗೊಡದೆ ತಿಂದು ತೇಗಿ ಬಿಡುತ್ತಿದ್ದ ಕೋಳಿಗಳು, ಮೈಮೇಲೆ ಹರಿದಾಡುವ ಅವುಗಳ ಮರಿಗಳು, ಊರಿನ ಅಗಸಿ ಕಟ್ಟೆ, ಆ ಕಟ್ಟೆಯ ಮೇಲಿನ ಬೇವಿನ ಮರ, ಎಲ್ಲವೂ ನೆನಪಿನ ಸಿಹಿಜೇನು.

ಹಳ್ಳಿ ಎನ್ನುವ ಜೇನ ಒರತೆ ಈಗ ಬತ್ತುತ್ತಿದೆಯೇ ಎನ್ನುವ ಸಂದೇಹ ಮೂಡುತ್ತಿದೆ. ಅದಕ್ಕೆ ಪೂರಕವಾಗಿದೆ ಉಗುರುಕೋಡ. ಆದರೆ, ನೀರಲಗಿಯಂಥ ಹಳ್ಳಿಗಳು ಈಗಲೂ ಆಶಾಭಾವ ಉಳಿಸುತ್ತವೆ. ಇಂಥ ನೀರಲಗಿಗಳು ಹೆಚ್ಚಾಗಬೇಕು, ಅದಕ್ಕೆ ವಿಜಯ್ ಅವರಂಥ ತರುಣರ ಸಂಖ್ಯೆ ವೃದ್ಧಿಸಬೇಕು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.