ADVERTISEMENT

ನೀರ ನಡಿಗೆಯ ಮೊಣಕಾಲು ಹಕ್ಕಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST
ನೀರ ನಡಿಗೆಯ ಮೊಣಕಾಲು ಹಕ್ಕಿ
ನೀರ ನಡಿಗೆಯ ಮೊಣಕಾಲು ಹಕ್ಕಿ   

ಬಳ್ಳಾರಿಯಿಂದ 20 ಕಿ.ಮೀ. ದೂರದಲ್ಲಿರುವ ಮೊಕಾ ಹತ್ತಿರದಲ್ಲಿರುವ ನಾಲೆಯ ನೀರಿನ ಆಸರೆ ಬಯಸಿ ಹಕ್ಕಿಗಳು ವಲಸೆ ಬರುತ್ತವೆ. ಅವುಗಳ ಅಧ್ಯಯನ-ವೀಕ್ಷಣೆಗೆಂದು ಗೆಳೆಯರೊಂದಿಗೆ ಈಚೆಗೆ ಅಲ್ಲಿಗೆ ಹೋದಾಗ, ಹಕ್ಕಿಯೊಂದು ನೀರಿನಲ್ಲಿ ತೇಲಿ ಬರುತ್ತಿರುವುದು ಕಂಡು ಬಂತು.

ನಮ್ಮ ಕ್ಯಾಮರಾದ ಕವಾಟದ (ಶೆಟರ್) ಜೋರು ಸದ್ದಿಗೆ ಹಕ್ಕಿ ಹಾರಿಹೋಗಬಹುದೆಂದು ಎಣಿಸಿದ್ದ ನಮಗೆ ಅಚ್ಚರಿ ಕಾದಿತ್ತು. ಆ ಹಕ್ಕಿ ನೀರು ಬಿಟ್ಟು ಮೇಲೆ ಹಾರಲೇ ಇಲ್ಲ.

ಹರಿವ ನೀರಿನಲ್ಲಿ ಪಕ್ಷಿ ನಿಧಾನ ಸಾಗುತ್ತಲೇ ಇತ್ತು. ನಾವೂ ಕೂಡಾ ನಾಲೆ ದಡದ ಮೇಲೆ ನಡೆದುಕೊಂಡು ಹೋಗಿ ಪೋಟೋಗ್ರಫಿ ಮಾಡುತ್ತಾ ಸಾಗಿದೆವು. ನಾನು ಹಕ್ಕಿಯ ಬಣ್ಣ ಪುಕ್ಕ ಕೊಕ್ಕು ಇತರೆ ವಿಷಯಗಳನ್ನು ನನ್ನ ಪಕ್ಷಿ ವೀಕ್ಷಣಾ ಡೈರಿಯಲ್ಲಿ ದಾಖಲಿಸಿಕೊಂಡೆ. `ಇದಕ್ಕೆ ಏನೋ ಆಗಿರಬೇಕು. ಇಲ್ಲವೇ ನಾಲೆಯ ದಡದಲ್ಲಿರುವ ಜಲಕೀಟವನ್ನು ಭಕ್ಷಿಸಲು ಹೋಗಿ ನೀರಿಗೆ ಜಾರಿರಬೇಕು~ ಎಂದುಕೊಂಡೆ.

ಗೆಳೆಯ ಕಾಶೀನಾಥ ಅವರು ಅಲ್ಲೇ ಇದ್ದ ಉದ್ದನೆಯ ಕೊಲಿನ ಸಹಾಯದಿಂದ ಪಕ್ಷಿಯನ್ನು ದಡದತ್ತ ಎಳೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹಾಗೇ ನಾವು ಸುಮಾರು ಒಂದು ಕಿ.ಮೀ. ಸಾಗಿರಬೇಕು, ಒಂದು ಕಡೆ ನಾಲೆಗೆ ತಿರುವು ಇದ್ದು ನಿಧಾನವಾಗಿ ತೇಲುತ್ತಾ ಸಾಗುತ್ತಿದ್ದ ಹಕ್ಕಿಗೆ ನೇರವಾಗಿ ಜೊಂಡಿನಿಂದ ಕೂಡಿದ ದಂಡೆ ಸಿಕ್ಕಾಗ `ಬದುಕಿದೆ ಬಡ ಜೀವಿ~ ಎಂಬಂತೆ ಪುರ‌್ರನೇ ಹಾರಿ ಹೋಯಿತು.

ಈ ದೃಶ್ಯ ಕ್ಷಣಾರ್ಧದಲ್ಲಿ ನಡೆದಿದ್ದರಿಂದ ಪೋಟೋ ಕ್ಲಿಕ್ಕಿಸಲು ಸಾಧ್ಯವಾಗಲೇ ಇಲ್ಲ. ಆದರೆ ಹಕ್ಕಿ ಬದುಕಿ ಉಳಿದಿದ್ದಕ್ಕೆ ಸಂತೋಷವಾಗಿತು. ದೂರದ ದೇಶದಿಂದ ವಲಸೆ ಬಂದು ಕಷ್ಟ ಅನುಭವಿಸುವುದು ಪಕ್ಷಿಗಳಲ್ಲಿ  ಸರ್ವೇ ಸಾಮಾನ್ಯ. ಪಕ್ಷಿಗಳ ಅಧ್ಯಯನ ಹಾಗೂ ಛಾಯಾಗ್ರಹಣ ಮಾಡುವವರಿಗೆ ಇಂತಹ ದೃಶ್ಯಗಳು ಕಂಡು ಬರುತ್ತಲೇ ಇರುತ್ತವೆ.
 
ಆ ಹಕ್ಕಿಗಳ ಮನಸ್ಸು ನಮ್ಮದಾಗಿರಬೇಕು ಅಷ್ಟೆ. ಅಂದಹಾಗೆ, ನಮ್ಮ ಕುತೂಹಲಕ್ಕೆ ಕಾರಣವಾದ ಆ ಪಕ್ಷಿಯ ಹೆಸರು ಕೆಂಪು ಚುಕ್ಕೆ ಮೊಣಕಾಲು ಹಕ್ಕಿ. ಅದೊಂದು ಅತಿ ವಿರಳವಾದ ವಿರಳ ವಲಸೆಗಾರ ಪಕ್ಷಿ. ನೀರಿನ ಆಸರೆ ಅವಲಂಬಿಸಿ ವಲಸೆ ಬರುವ ಈ ಅಲೆಮಾರಿ ಕಾಣಸಿಗುವುದೇ ಅಪರೂಪ. 12 ವರ್ಷಗಳ ಹಿಂದೆ ಹಾವೇರಿ ಜಿಲ್ಲೆ ನರೇಗಲ್ ಕೆರೆಯಲ್ಲಿ ಈ ಪಕ್ಷಿಯನ್ನು ವೀಕ್ಷಿಸಿ ದಾಖಲಿಸಿದ್ದೆ.

ಕೆಂಪು ಚುಕ್ಕೆ ಮೊಣಕಾಲು ಹಕ್ಕಿಗೆ ಇಂಗ್ಲಿಷ್‌ನಲ್ಲಿ Spotted Red Shank ಎನ್ನುವ ಹೆಸರು. ಪಕ್ಷಿಶಾಸ್ತ್ರದಲ್ಲಿ Tringa erythropus ಹೆಸರು. Ciconiformes ವರ್ಗದ Scolopacidae  ಕುಟುಂಬಕ್ಕೆ ಇದನ್ನು ಸೇರಿಸಲಾಗಿದೆ. ಇದೇ ಕುಟುಂಬಕ್ಕೆ ಸೇರಿದ ನೋಡಲು ಇದರಂತೆ ಇರುವ ಇನ್ನೊಂದು ಪಕ್ಷಿ ಎಂದರೆ ಸಾಮಾನ್ಯ ಕೆಂಪು ಮೊಣಕಾಲು ಹಕ್ಕಿ.

ಚಳಿಗಾಲದ ಅತಿಥಿಗಳಾಗಿ ಭಾರತಕ್ಕೆ ವಲಸೆ ಬರುವ ಇವು ನೀರು ನಡಿಗೆ (Waders)  ಪಕ್ಷಿಗಳಾಗಿದ್ದು ಅಪರೂಪಕ್ಕೆ ಕಾಣ ಸಿಗುತ್ತವೆ. ನೀರಂಚಿನಲ್ಲಿ ಓಡೋಡಿ ಕೀಟ ಹೆಕ್ಕುತ್ತವೆ. ಮೇಲ್ನೋಟಕ್ಕೆ ಸಾಮಾನ್ಯ ಮರಳು ಪೀಪಿ  (Commom Sandpiper) ಪಕ್ಷಿಗಳಂತೆ ಕಾಣಿಸಿದರೂ, ಕೊಕ್ಕು ಹಾಗೂ ಕಾಲು ಕೆಂಪು ಬಣ್ಣದಿಂದ ಕೂಡಿದ್ದು, ಉದ್ದನೆಯ ಕೆಂಪಾದ ಕಾಲು ಹೊಂದಿವೆ.

ನಗ್ನ ತೆಳುವಾದ ಉದ್ದನೆಯ ಕೆಂಪು ಕಾಲು, ತೆಳುವಾಗಿ ಉದ್ದವಾದ ಜಲ ಕೀಟಗಳನ್ನು ಭಕ್ಷಿಸಲು ಅನುಕೂಲಕರ. ಕೆಂಪನೆ ಕೊಕ್ಕು, ತುದಿಯಲ್ಲಿ ಕಪ್ಪು ಬಣ್ಣದಿಂದ ಆವೃತವಾಗಿ ಬೂದು ಚಾಕೊಲೇಟ್ ಬಣ್ಣದ ಮೈ ಬಣ್ಣ, ಬಾಲದ ತುದಿಯಲ್ಲಿ ಚುಕ್ಕೆಗಳನ್ನು ಈ ಹಕ್ಕಿ ಹೊಂದಿರುತ್ತದೆ. ಕುತ್ತಿಗೆ ಹತ್ತಿರ ಬಿಳುಪಿನ ಬಣ್ಣದಿಂದ ಮಿಶ್ರಿತವಾಗಿದೆ.
 
ಕೆರೆ, ನಾಲೆ, ಜೌಗು ಪ್ರದೇಶ, ನದಿ ತೀರಗಳಲ್ಲಿ ಕಂಡುಬರುವ ಇವು ಅಲ್ಲಿನ ಜಲ ಸಸ್ಯ ಹಾಗೂ ಸಣ್ಣ ಕೀಟಗಳನ್ನು ಹೆಕ್ಕಿ ಭಕ್ಷಿಸುತ್ತವೆ. ಇವು ನೀರು ನಡಿಗೆ ಪಕ್ಷಿಗಳಾಗಿದ್ದರೂ ಬಾತುಗಳಂತೆ ನೀರಿಗಿಳಿದು ಈಜುತ್ತಾ, ಜಲ ಕೀಟಗಳನ್ನು ಭಕ್ಷಿಸುತ್ತಾ, ನೀರಿನಲ್ಲಿ ಆನಂದವಾಗಿ ವಿಹರಿಸುವುದು ಕಂಡು ಬಂದಿದೆ.
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.