ADVERTISEMENT

ಪಟ ಪಟ...

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST
ಪಟ ಪಟ...
ಪಟ ಪಟ...   

ಕಳೆದ ತಿಂಗಳು ಸಂಕ್ರಾಂತಿ ಆದಮೇಲೆ ಗಾಳಿ ಒಂದು ಹದದಲ್ಲಿ ಬೀಸಿತು. ಆಗ ಗಾಳಿಪಟ ಹಾರಿಸಿ ಖುಷಿಪಟ್ಟವರು ಹಲವರು. ಈಗ ಮನುಷ್ಯನನ್ನೇ ಹಾರಿಸುತ್ತಾ ಸಾಗುವ ಗಾಳಿಪಟ ಗಮನ ಸೆಳೆಯುತ್ತಿದೆ.

ಈ ಸಾಹಸ ಚಟುವಟಿಕೆಯನ್ನು `ಕೈಟ್ ಜಂಪಿಂಗ್~ ಎನ್ನುತ್ತಾರೆ. ಸರ್ಫಿಂಗ್, ಕೈಟ್ ಸ್ಕೇಟಿಂಗ್, ಸ್ಕೈಟ್ ಬೋರ್ಡಿಂಗ್ ಮೊದಲಾದ ಸಾಹಸ ಕ್ರೀಡೆಗಳ ಯಾದಿಗೆ ಈಗ `ಕೈಟ್ ಜಂಪಿಂಗ್~ ಸೇರ್ಪಡೆಯಾಗಿದೆ. ಈ ಸಾಹಸ ಕ್ರೀಡೆಗಳಿಗೆ ಬಳಸುವ ಗಾಳಿಪಟಗಳನ್ನು `ಪವರ್ ಕೈಟ್~ ಅಥವಾ `ಅತಿ ಹೆಚ್ಚು ಸಾಮರ್ಥ್ಯದ ಗಾಳಿಪಟ~ ಎನ್ನುತ್ತಾರೆ.

ಹಿಡಿದ ಮನುಷ್ಯರನ್ನು ಸಾಕಷ್ಟು ದೂರ ಹಾರಿಸುವಷ್ಟು ವಿಶಾಲವಾಗಿ ಈ ಪಟಗಳಿರುತ್ತವೆ. ಗಾಳಿಯ ವೇಗಕ್ಕೆ ಅನುಗುಣವಾಗಿ ಹೆಚ್ಚು ಎತ್ತರಕ್ಕೂ ದೂರಕ್ಕೂ ಅವು ಕೊಂಡೊಯ್ಯಬಲ್ಲವು. ಪವರ್ ಕೈಟ್‌ಗಳಲ್ಲಿ ಇರುವ ಸಣ್ಣ ತಂತಿಯ ಎಳೆಗಳನ್ನೋ ಅಥವಾ ಅದಕ್ಕೆ ಅಳವಡಿಸಿದ ದೊಡ್ಡ ಸರಳನ್ನೋ ಹಿಡಿದು ಕೈಟರ್‌ಗಳು ಸಾಹಸ ಪ್ರದರ್ಶನ ಮಾಡುತ್ತಾರೆ. ನೀರು, ಹಿಮದ ಮೇಲೆ ಸ್ಕಿಮ್ ಮಾಡಲು ಕೂಡ ಪವರ್ ಕೈಟ್‌ಗಳನ್ನು ಬಳಸುವುದುಂಟು.

ಕೈಟ್ ಜಂಪಿಂಗ್ ಸಾಹಸ ಕ್ರೀಡೆಗಳಲ್ಲೇ ಅತಿ ಹೆಚ್ಚು ಅಪಾಯಕಾರಿ. ಈ ಸಾಹಸ ಮಾಡಲು ವಿಶಾಲವಾದ, ಮೃದು ನೆಲದ ಬಯಲಿನ ಅಗತ್ಯವಿದೆ. ವಾಹನಗಳ ಸಂಚಾರ ಇರಕೂಡದು. ನಿರ್ಜನ ಪ್ರದೇಶವಾಗಿರಬೇಕು. ಜಂಪ್ ಮಾಡಿದ ಕೆಲವರಿಗೆ ಕುತ್ತಿಗೆ ಹಾಗೂ ತಲೆಯ ಮೂಳೆಗಳಲ್ಲಿ ಬಿರುಕಾಗಿರುವ ಉದಾಹರಣೆಗಳೂ ಇವೆ.

ಕೈಟ್ ಸರ್ಫರ್‌ಗಳು ನೀರಿನ ಅಲೆ ಮೇಲೆ ಸಾಗಲು ಅನುವಾಗುವ ವಿಶೇಷ ಸರ್ಫ್‌ಬೋರ್ಡ್‌ಗಳಿರುತ್ತವೆ. ಗಾಳಿಯಿಂದ ಪಟವು ನುಗ್ಗತೊಡಗಿದ್ದೇ ಸರ್ಫರ್ ಅಲೆಗಳ ಮೇಲೆ ವೇಗವಾಗಿ ಚಲಿಸಬೇಕು. ಪರಿಣತ ಸರ್ಫರ್‌ಗಳು ನೀರಿನ ಅಲೆ ಮೇಲೆ ಆರು ಮೀಟರ್‌ನಷ್ಟು ಎತ್ತರಕ್ಕೆ ಎಗರುವುದು, ಇಷ್ಟ ಬಂದಂತೆ ತಿರುಗುವುದು, ಹಿಂದಕ್ಕೆ ಪಲ್ಟಿ ಹೊಡೆಯುವುದು ಮೊದಲಾದ ವಿಶೇಷ ಸಾಹಸ ಪ್ರದರ್ಶಿಸಬಲ್ಲರು. ಆಯತಪ್ಪಿದರೆ ಕಡಲಿನ ಅಲೆಗಳಲ್ಲಿ ದೂರಕ್ಕೆ ಹೋಗಿ ಮುಳುಗುವ ಅಪಾಯವೂ ಇರುತ್ತದೆ.

ಕೈಟ್ ಸಾಹಸ ಅಗ್ಗದ ವಿಷಯವಲ್ಲ. ಭೂಮಿ ಮೇಲೆ ಸಾಹಸ ಪ್ರದರ್ಶಿಸಲು ಬಳಸುವ ಪಟಗಳಿಗಿಂತ ಕಡಲ ಅಲೆಗಳ ಮೇಲೆ ಸಾಹಸ ಪ್ರದರ್ಶಿಸಲು ಬಳಸುವ ಪಟಗಳು ದುಬಾರಿ. ಭೂಮಿ ಪಟಕ್ಕೆ 4600 ರೂಪಾಯಿಯಿಂದ 23 ಸಾವಿರ ರೂಪಾಯಿ ಆಗುತ್ತದೆ. ಕಡಲ ಸಾಹಸಕ್ಕೆ ಬಳಸುವ ಬೃಹತ್ ಪಟಗಳು 39 ಸಾವಿರದಿಂದ 80 ಸಾವಿರ ಬೆಲೆಯಷ್ಟಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.