ADVERTISEMENT

ಬನ್‌ಝಾಕ್ರಿ ಜಲಧಾರೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 19:30 IST
Last Updated 19 ಫೆಬ್ರುವರಿ 2011, 19:30 IST
ಬನ್‌ಝಾಕ್ರಿ ಜಲಧಾರೆ
ಬನ್‌ಝಾಕ್ರಿ ಜಲಧಾರೆ   

ಒತ್ತೊತ್ತು ಹಸಿರು ಪೊದೆ; ನಡುವೆ ಬೆಳ್ಳನೆ ಹರಿವ ನೀರಿನ ಬಳುಕು; ಅದನ್ನು ನೋಡುತ್ತಿದ್ದರೆ ಕಣ್ಣಿಗೆ ಹಿತ- ಮನಸ್ಸಿಗೂ ಮುದ. ಅದು ಬನ್‌ಝಾಕ್ರಿ ಜಲಪಾತ. ಇರುವುದು ಸಿಕ್ಕಿಂ ರಾಜ್ಯದಲ್ಲಿ.

ಭಾರತದ ಈಶಾನ್ಯ ಭಾಗದಲ್ಲಿ ಇರುವ ಸಿಕ್ಕಿಂ ರಾಜ್ಯ ಹಸಿರಿನಿಂದ ಭರ್ತಿಯಾದ ಪ್ರದೇಶ. ಈ ಹಸಿರ ಪ್ರದೇಶದಲ್ಲಿ ಪ್ರವಾಸಿಗರು ನೋಡಿ ಮೈಮರೆಯಲು ಸಾಕಷ್ಟು ಜಾಗಗಳಿವೆ. ಅಂಥ ಜಾಗಗಳಲ್ಲಿ ಬನ್‌ಝಾಕ್ರಿ ಜಲಪಾತವೂ ಒಂದು.

ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ನಾಲ್ಕು ಕಿ.ಮೀ. ದೂರದಲ್ಲಿ ಇರುವ ರಂಕಾ ಪ್ರದೇಶದಲ್ಲಿ ಈ ಜಲಪಾತವಿದೆ. ಇಲ್ಲಿ 2006ರಲ್ಲಿ ಮೈಕ್ರೋ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಆರಂಭವಾಗಿದ್ದು, ವಿದ್ಯುಚ್ಛಕ್ತಿ ಉತ್ಪಾದನೆ ನಡೆಯುತ್ತಿದೆ.

ದಟ್ಟ ಕಾಡಿನ ನಡುವೆ ಜಲಪಾತವನ್ನು ಒಳಗೊಂಡ ಎರಡು ಎಕರೆ ಜಾಗದಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಸಿಕ್ಕಿಂ ಆದಿವಾಸಿಗಳಾದ ಝಾಕ್ರಿಗಳ ಸಂಸ್ಕೃತಿಗೆ ಕನ್ನಡಿ ಹಿಡಿಯುವ ವಸ್ತು ಸಂಗ್ರಹಾಲಯ ಮತ್ತು ಆ ಜನರ ಪ್ರತಿಕೃತಿಗಳೂ ಇವೆ.

ವಿಶಿಷ್ಟ ಜಾತಿಯ, ವಿವಿಧ ಆಕಾರದ ಹೂವುಗಳು ಕೂಡ ಉದ್ಯಾನವನದ ಆಕರ್ಷಣೆಗಳಲ್ಲಿ ಒಂದು. ಡ್ರ್ಯಾಗನ್ ಪ್ರತಿಕೃತಿ ಇರುವ ಕೊಳ ಮಕ್ಕಳಿಗೆ ಇಷ್ಟವಾದರೆ, ಮೀನಿಗೆ ಗಾಳ ಹಾಕುವ ತಾಣಗಳು ಎಲ್ಲ ವರ್ಗದವರನ್ನೂ ಸೆಳೆಯುತ್ತವೆ.

ಸಮುದ್ರ ತೀರದಿಂದ 7000 ಅಡಿ ಎತ್ತರದಲ್ಲಿ ಇರುವ ಈ ಜಾಗದಲ್ಲಿ ವರ್ಷದ ಎಂಟು ತಿಂಗಳು ಮಳೆ ಮಳೆ. ಅದರ ಪರಿಣಾಮದಿಂದಲೇ ಹಸಿರಿಲ್ಲಿ ಮೈಮುರಿದುಕೊಂಡು ಬಿದ್ದಿದೆ.

ಪ್ರವಾಸಿಗರಿಗಾಗಿ ಇಲ್ಲಿ ಆಧುನಿಕ ಶೈಲಿಯ ಕೆಫೆಟೇರಿಯಾ ಇದೆ. ಕಾಫಿ ಹೀರುತ್ತಾ ಪ್ರಕೃತಿಯ ಸಹಜ ಸೌಂದರ್ಯ ಸವಿಯುವುದು ಅವಿಸ್ಮರಣೀಯ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.