ADVERTISEMENT

ಮಂಗಳಾಂಗಿಯೆ ಬಾರೆ ಎಂದು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2010, 18:30 IST
Last Updated 22 ಅಕ್ಟೋಬರ್ 2010, 18:30 IST


(ಕಳೆದ ಅಂಕಣ ಬರಹದ ಉತ್ತರಾರ್ಧ)
ಒಮ್ಮೆ ಅದರ ಕರು ಹುಟ್ಟಿದೊಡನೆ ತೀರಿಕೊಂಡಿತು. ಸತ್ತ ಯಾವುದನ್ನೂ ನೋಡಲಾರೆವು ಸರಿಯೆ, ಅದರಲ್ಲಿಯು ಎಳೆಯ ಕರುವಿನ ನಿಶ್ಚಲ ದೇಹ ನೋಡುವುದೆಂದರೆ ಅದು ದಾರುಣ. ಕಣ್ಣು ಮುಚ್ಚಿದರೂ ಅದದೇ ಬಂದು ಕನಸೂ ಕಲಕುವುದು. ಕರುತೀರಿದ ದನ ಹಾಲು ಕೊಡದು. ಅದೊಂದು ದೊಡ್ಡ ಸಮಸ್ಯೆ ಗೊತ್ತಷ್ಟೆ? ಕೆಚ್ಚಲು ಹಾಲು ತುಂಬಿ ಭಾರವಾಗಿ ಕೂಗುತ್ತಿರುವುದು. ನಮಗೆ ಸಣ್ಣವರಿಗೆ ಅದು ಕರುವಿಗಾಗಿ ಅಳುವ ಹಾಗೆಯೇ ಕೇಳುವುದು. ದೊಡ್ಡವರಿಗೋ ಕೆಚ್ಚಲು ಭಾರವಾಗಿದೆ, ನೋಯುತ್ತಿದೆ, ಬೀಗುತ್ತದೆ, ಬಾವು ಆದೀತು, ಹಾಲು ಕರೆಯುವ ಬಗೆ ಹೇಗೆ, ಚಿಂತೆ. ಸ್ವಲ್ಪ ದಿನ ಕಳೆದ ಮೇಲೆ ಅದಕ್ಕೆ ಅಭ್ಯಾಸ ಆಗುತ್ತದೆ ಸರಿ, ಆದರೆ ಮೊದಮೊದಲು? ಅದಕ್ಕಾಗಿ ನಾನಾ ಉಪಾಯ ಕಂಡು ಹಿಡಿದಿದ್ದರು.

ಅದರಲ್ಲೊಂದು- ದನದೆದುರಿನ ಅಕ್ಕಚ್ಚುಬಾನಿಯ ದಂಡೆ ಮೇಲೆ ಒಂದು ಸಣ್ಣಗೆರೆಸಿ ಇಟ್ಟು ಅದಕ್ಕೆ ಬೆಲ್ಲ ಸವರುತ್ತಿರುವುದು, ಬೆಲ್ಲ ನೆಕ್ಕುತ್ತ ಮೈ ಮರೆತ ದನ ಹಾಲು ಇಳಿಸುತ್ತದೆ. ನಡುನಡುವೆ ಕರುವಿನ ನೆನಪಾಗಿ ಕಾಲೆತ್ತಿ ಒದೆದರೂ ಒದೆಯಿತೆ. ಕರೆವವರು ಅದಕ್ಕೆಲ್ಲ ತಯಾರಾಗಿಯೇ ಬರುವರು. ನಮ್ಮಲ್ಲಿ ಹೀಗೆ ಕರು ಸತ್ತ ದನಗಳ ಹಾಲು ಕರೆವಾಗ ಬೆಲ್ಲ ಹಚ್ಚುವ ಕೆಲಸ ನಮ್ಮ ಲಲಿತಕ್ಕನದು. ಆಕೆ ಮದುವೆಯಾಗಿ ಹೋಗುವವರೆಗೂ ನಡೆಸಿದ ಕೈಂಕರ್ಯಗಳಲ್ಲಿ ಅದೂ ಒಂದು.

ಹೀಗಿರುತ್ತ ಕಾಶಿ ದನ ಮುದಿಯಾಯಿತು, ‘ಬತ್ತುಗಂದಿ’ಯಾಯಿತು. ಅದನ್ನು ಕೊಡುವುದು ಅಂತಾಯಿತು. ಕೂಡದು, ಎಲ್ಲ ಬಿಟ್ಟು ಕಾಶಿಯನ್ನು ಕೊಡುವುದೆ? ಉಹುಂ ಉಹುಂ. ಆದರೆ ಇಟ್ಟುಕೊಂಡು ಏನು ಮಾಡುವುದು? ಹಟ್ಟಿಯೊಳಗೆ ಆಗಲೇ ಕಾಲು ಹಾಕಲು ಜಾಗವಿಲ್ಲ. ಕೊಡದೆ ನಿವೃತ್ತಿಯಿಲ್ಲ. ನಾಕು ಜನರಿಗೆ ಈ ವಿಷಯ ಮಾತಿನಂಶ ತಿಳಿದು, ಒಬ್ಬಾತ ಬಂದೂ ಬಂದ. ಬಂದವ ಜಗಲಿ ಮೇಲೆ ಕುಳಿತು ಎಲೆ ಅಡಿಕೆ ಜಗಿಯುತ್ತ ಅದೂ ಇದೂ ಸುಖದುಃಖ ಮಾತಾಡುತ್ತ ತಾನು ತಂದ ಹಗ್ಗದ ತುದಿಯಲ್ಲಿ ಒಂದು ಉರುಲು ಮಾಡಿದ. ಒಳಗಿಂದ ಬಂದ ಕಾಫಿ ಕುಡಿದ. ಮೆಲ್ಲನೆದ್ದು ಬೆನ್ನ ಹಿಂದೆ ಕೈ ಕಟ್ಟಿ ಸೀದ ಹಟ್ಟಿ ಬದಿಗೆ ಹೋಗಿ ದನ ನೋಡಿದ. ಈಗಲೂ ಒಂದು ಸೊಲಿಗೆ ಹಾಲು ಕೊಡುತ್ತಿದೆ, ಆದರೇನು, ಹಟ್ಟಿಯಲ್ಲಿ ಜಾಗವಿಲ್ಲ, ಇತ್ಯಾದಿಯೆಲ್ಲ ಮಾತುಕತೆಯಾಗಿ ಆತನಿಗದನ್ನು ಕೊಡುವುದೆಂದಾಯಿತು.

ಬಾಡಿದ ಮುಖದಿಂದ ಮಿಣ್ಕ ಹಟ್ಟಿಯಿಂದ ಕಾಶಿಯನ್ನು ಹೊರ ಬಿಟ್ಟಳು. ಬಿಟ್ಟರೆ ಅದು ಹೊರಡಬೇಕೆ? ಒಂದು ಹೆಜ್ಜೆ ಮುಂದಿಡದೆ ಅಲ್ಲಾಡದೆ ನಿಂತೇಬಿಟ್ಟಿತು. ‘ದ್ಯೆನ ಅಂತ್ರಿ, ಅದ್ಕೆಲ್ಲ ಗುತ್ತಾತ್ತ್ ಕಂಡ್ರಿಯ?’ ಎನ್ನುತ್ತ ದುಃಖ ಸೇಂಕುತ್ತ ಹಿಂದಿನಿಂದ ನೂಕಿ ಹೊರಮಾಡಿದಳು ಮಿಣ್ಕ. ಬಂದಾತ ಅದರ ದಾಂಬು ಕಳಚಿ ಕೊಟ್ಟು ಕತ್ತಿಗೆ ಉದ್ದ ಹಗ್ಗದ ಉರುಲು ತೂರಿಸಿ ತುದಿಯನ್ನು ಕೈಗೆತ್ತಿಕೊಂಡ. ಅಮ್ಮ ಕೊನೆಯದಾಗಿ ಎಂಬಂತೆ ಸ್ವಲ್ಪ ಹುಲ್ಲನ್ನು ಅದರ ಬಾಯಿಗಿಟ್ಟು ಗಂಗೆದೊಗಲನ್ನು ನೀವುತ್ತ ದುಃಖಕಟ್ಟಿದ ದನಿಯಲ್ಲಿ, ‘ಹೋತ್ಯ ಕಾಶೀ... ನನ್ನನ್ನ್ ಬಿಟ್ಟೂ’ ಅಂತ ಪದೇ ಪದೇ ಹೇಳುತ್ತ ಅದನ್ನು ಬೀಳ್ಕೊಟ್ಟಳು. ನಾವೂ ಅಳುತಳುತ್ತ ಹಾಗೆಯೇ ಕೇಳುತ್ತ ಇಕ ಇಕ ಅಂತ ಹುಲ್ಲಿನೆಳೆಯನ್ನು ಬಾಯಿಗಿಡುತ್ತ ಅದರ ಜೊತೆಗೇ ನಡೆದೆವು.  ಹೊಸಬನೊಡನೆ ಹೆಜ್ಜೆಯಿಡಲೊಪ್ಪದೆ ಹಾಗೂ ಹೀಗೂ ಗೇಟಿನವರೆಗೆ ಹೋಗಿ ಅಲ್ಲಿಂದ ಸುತರಾಂ ಹೊರ ಹೊರಡಲೊಪ್ಪದೆ ನಿಂತಲ್ಲೇ ನಿಂತ ಅದನ್ನು ಕರಕೊಂಡು ಹೋಗುವ ಆ ಆತ ಹಗ್ಗ ಹಿಡಿದು ಬಲವಂತ ಜಗ್ಗಿದ. ಜೋರಾಗೊಮ್ಮೆ ಎಳೆದ. ಅಮ್ಮ ಛಿಲ್ಲ ನಡುಗಿ ‘ಇಗ, ಇವ್ನೆ, ಹಾಂಗೆಲ್ಲ ಎಳೀಗಿಳೀ ಬೇಡ. ಬರಿ ಸಾಧು ಅದು, ಪಶು... ಮತ್ತ್ ಪೆಟ್ಟ್ ಗಿಟ್ಟ್ ಕೊಟ್ರೆ ಕಾಣ್‌ಮತ್ತೆ, ಜಾಗ್ರತೆ! ನಿಂಗ್ ಯೆಲ್ಲಿಲ್ಲದ್ದ್ ಪಾಪ ಬಕ್ಕ್’ ಎನ್ನುತ್ತ ತೇವಗಣ್ಣಲ್ಲಿ ಅದರ ಬಳಿ ಬಂದಳು. ‘ಕಾಶೀ, ಈ ಜನ್ಮದ ಋಣ ಹರೀತ್. ಹೋಗ್, ಅವಂಗ್ ಕಷ್ಟ ಕೊಡ್ಬೇಡ’ ಎಂದು ಮೈ ನೀವಿದಳು. ಅರ್ಥವಾಯಿತೆಂಬಂತೆ ಅದು ಆರ್ತವಾಗಿ ಅಂಬಾ ಎಂದು ಕೂಗುತ್ತಾ ಕೂಗುತ್ತಾ ಹಿಂತಿರುಗಿ ತಿರುಗಿ ಅಮ್ಮನತ್ತ ನೋಡುತ್ತಾ ನಿಧಾನ ನಡೆದು ಹೊರಗೆ ಹೋಯಿತು. ಗೇಟು ಮುಚ್ಚಿಕೊಂಡಿತು. ಈಚೆ ಬರುವಾಗ ಕೆಲಸದ ಮಿಣ್ಕನಾದಿಯಾಗಿ, ಅಪ್ಪಯ್ಯನ ಆಫೀಸಿನ ಗುಮಾಸ್ತರಾದಿಯಾಗಿ ಮನೆ ಒಳ ಹೊರಗಿನ ಎಲ್ಲರ ಕಣ್ಣಲ್ಲೂ ನೀರು. ಅಮ್ಮನಿಗಂತೂ ಮಾತೇ ಕಟ್ಟಿ ಹೋಗಿತ್ತು.

ಹಟ್ಟಿ ಬಿಟ್ಟು ಹೊರಡಲೊಪ್ಪದ ಅದನ್ನು ಹೊರಗೆ ನೂಕಬೇಕಾಗಿ ಬಂದದ್ದನ್ನು ನೆನೆವಾಗೆಲ್ಲ ಕೊಳಿಕೆಯಾಗಿ ‘ದನಗಳಿಗೆ ಏಕೆ ಬಾಯಿ ಬಾರದಾಯಿತು?’ ಎಂಬ ಆಗಿನ ಕನ್ನಡ ಪ್ರಾಥಮಿಕ ಪಾಠದಲ್ಲಿದ್ದ ಕತೆಯನ್ನು ಯಾರಾದರೂ ನೆನೆದೇ ನೆನೆಯುತಿದ್ದರು. ದನಗಳಿಗಿದ್ದ ಮುಂದಾಗುವುದನ್ನು ತಿಳಿವ ಜ್ಞಾನದ ಕುರಿತ ಕತೆ ಅದು. ಒಂದು ಮನೆಯಲ್ಲಿ ಯಜಮಾನನಿಗೆ ಆ ರಾತ್ರಿ ಸಾವು ಬರುತ್ತಿದೆ ಎಂದು ಹಟ್ಟಿಯಲ್ಲಿನ ದನಕ್ಕೆ ತಿಳಿಯಿತಂತೆ. ಅಂದು ಸಂಜೆ ಯಜಮಾನಿ ಹಾಲು ಕರೆಯಲು ಬಂದಾಗ ದನ ಅದನ್ನು ಅವಳಿಗೆ ತಿಳಿಸಿತಂತೆ. ಸಾವು ತಪ್ಪಿಸುವ ಉಪಾಯವಾಗಿ ‘ಹೊಸಿಲಿನ ಹೊರಗೆ ತಂಬಿಗೆ ನೀರಿಟ್ಟು ಒಂದು ಲೋಟ ಹಾಲಿಡು. ಯಮಧರ್ಮ ಬಂದವನು ಕಾಲು ತೊಳೆದು ಹಾಲು ಕುಡಿಯುವ. ಹಾಲು ಕುಡಿದ ಮನೆಯಲ್ಲಿ ಜೀವ ತೆಗೆಯುವುದೆ ಎಂದು ಹಾಗೆಯೇ ವಾಪಾಸು ಹೋಗುವ’ ಎಂದಿತಂತೆ. ಯಜಮಾನಿ ಹಾಗೆಯೇ ಮಾಡಿದಳು. ಯಮಧರ್ಮ ಬಂದ, ಕಾಲು ತೊಳೆದ, ಹಾಲು ಕುಡಿದ, ಹಾಲು ಕುಡಿದ ಮನೆಯಲ್ಲಿ ಜೀವ ತೆಗೆಯುವುದೆ ಎಂದು ಹೊರಟು ಹೋದ. (ಆಗೆಲ್ಲ ಸಂಜೆಯಾದೊಡನೆ ಹೊರಬಾಗಿಲಲ್ಲಿ ನೀರು ತುಂಬಿದ ತಂಬಿಗೆ ಇಡುವ ಸಂಪ್ರದಾಯ ಬಂದದ್ದು ಹೀಗೆ ಎಂದು ಕತೆ ಮುಗಿಯುವುದು.‘ಆದರೆ ಸಾಯುವವರು ಸಾಯುತ್ತಲೇ ಇದ್ದರಲ್ಲ?’- ಹುಶ್. ಕತೆ ಕೇಳುವಾಗ ಮಾತಾಡಬಾರದು).

ಆದರೆ ಈ ಉಪಾಯವನ್ನು ಯಜಮಾನಿಗೆ ಹೇಳಿಕೊಟ್ಟವರು ಯಾರು? ಅಂತ ಯಮಧರ್ಮ ಶೋಧಿಸುವಾಗ ಹಟ್ಟಿಯಲ್ಲಿನ ದನ ಅಂತ ಗೊತ್ತಾಯಿತು. ‘ದನಗಳಿಗೆ ಬಾಯಿ ಬಾರದೆ ಹೋಗಲಿ’ ಎಂದು ಶಾಪಕೊಟ್ಟ. ಅಂದಿನಿಂದ ಭವಿಷ್ಯದ ಆಗುಹೋಗೆಲ್ಲ ತಿಳಿದರೂ ಏನೂ ಹೇಳಲಾರದೆ ಅವು ಮೂಕವಾದುವು. ಹಾಗಾದರೆ ಉಳಿದ ಪ್ರಾಣಿ ಪಕ್ಷಿಗಳು? ಅವೂ ಮೂಕವೇ ಅಲ್ಲವೆ? ಅಂದು ಕತೆ ಕೇಳುವ ಭರದಲ್ಲಿ ಈ ಪ್ರಶ್ನೆ ಹೊಳೆಯಲೂ ಇಲ್ಲ. ಹೊಳೆದರೂ ‘ಪ್ರಶ್ನೆ ಕೇಳಿ ಕತೆ ಕೆಡಿಸುವರೆ ಯಾರಾದರೂ?’.

ಇರಲಿ.
ಸಿಂಧಿ ದನ, ಜರ್ಸಿದನ ಅಂತೆಲ್ಲ ತೆಳುವಾಗಿ ಕೇಳಿ ಬರುತಿದ್ದ ಕಾಲವದು. ಕೇಳು ಕೇಳುತಿದ್ದಂತೆ ಅವು ಕಾಮನ್ ಆಗಿ ಆಯಿತು. ಕಾಮತರ ಮನೆಯ ಹಟ್ಟಿಯಲ್ಲಿ ನೋಡಿದ್ದೀರ? ಇಂಥಿಂಥಾ ಎತ್ತರದ ಸಿಂಧಿ ದನ. ಹೊಳ್ಳರಮನೆ ಹಟ್ಟಿಯ ಜರ್ಸಿಯೋ! ಚೊಂಬಲ್ಲ! ವೋಯ್, ಹಾಲು ಕರೆಯಲು ಬಾಲ್ದಿಯೇ ಬೇಕಂತೆ. ದಿನಕ್ಕೆ ಒಂದಲ್ಲ, ಎರಡಲ್ಲ, ನಾಕು ಬಾರಿ ಕರೆವರಂತೆ ಎಂದು ಮುಂತಾದ ಉದ್ಗಾರಗಳೊಂದಿಗೆ ಚರಿತ್ರೆ ನಿರ್ಮಿಸುತ್ತ ಊರುದನಗಳ ಜಾಗದಲ್ಲಿ ಬೃಹತ್ ದನಗಳು ಬಂದು ನಿಂತವು. ಅದೂ ಕಳೆಯಿತು; ಅನತಿ ಕಾಲದಲ್ಲಿಯೇ ಮನೆಮನೆಗಳಲ್ಲಿನ ಕೊಟ್ಟಿಗೆಗಳು ಮಾಯವಾದವು. ಹಾಲಿನ ವಹಿವಾಟು ಬೇರೆಯೇ ರೂಪ ಪಡೆಯಿತು. ಇದನ್ನು ಕ್ಷೀರಕ್ರಾಂತಿ ಎನ್ನೋಣವೆ. ಜೊತೆಗೆ ಆ ಗೋಪಾಲಕನ ಮಕ್ಕಳು ವಿದ್ಯೆ ಪಡೆದು ಬ್ಯಾಂಕು ಮತ್ತಿತರ ಕಡೆ ಉದ್ಯೋಗಕ್ಕೆ ಸೇರಿಕೊಂಡದ್ದು? ಎಲ್ಲಾದರೊಮ್ಮೆ ಸಿಕ್ಕಾಗ ನಿಲ್ಲುವೆವು, ನಕ್ಕು ಎರಡು ಮಾತಿನ ವಿನಿಮಯ ಮಾಡಿಕೊಳ್ಳುವೆವು. ಆಗ ಆ ‘ಒಂದಾನೊಂದು ಕಾಲ’ದ ಒಂದಾದರೂ ನೆನಪು ಬಂದೇ ಬರುವುದು. ಒಂದು ದೃಷ್ಟಿಯಿಂದ ಈ ಕಾಲ ಸಾವಿರಪಾಲಿಗೆ ಬೇಕು ಎನ್ನುವಲ್ಲಿಗೆ ಮುಗಿಸಿ ಇಬ್ಬರೂ ಮುಂದರಿಯುವೆವು.

ಮನೆಯಲ್ಲಿ ಜನ ಹಟ್ಟಿಯಲ್ಲಿ ದನ ತುಂಬಿಕೊಂಡಿರುವ ಘಟ್ಟದ ಸಂಗತಿಗಳು ಇವೆಲ್ಲ. ಆ ನುಸಿಕಚ್ಚುವ, ಹಾಲು ಕರೆವ ಒದೆಸಿಕೊಳುವ, ಜಾನುವಾರುಗಳ ಕಾಯಿಲೆಕಸಾಲೆ ಭೂತ ದೈವಗಳ ಕಾಟ ಇತ್ಯಾದಿಯೊಡನೆ ಹೆಣಗಾಡುವ, ಎಲ್ಲಿಗೆ ಹೋದರೂ ಸಂಜೆಯೊಳಗೆ ‘ಹಾಲು ಕರೆಯಲಿಕ್ಕಿದೆ’ ಎಂದು ಮನೆಗೋಡಿ ಬರುವ ಧಾವಂತ ಚಡಪಡಿಕೆ ಒಂದೆಡೆ; ಕ್ರಮೇಣ ಹಟ್ಟಿ ಮಾಯವಾಯಿತು ಎಂಬ ಹಳಹಳಿಕೆ ಒಂದೆಡೆ,  ಕುಟುಂಬಗಳು ಸಣ್ಣದಾದ ಹಾಗೆ ಹೇಗೆ ಎಲ್ಲವೂ ಚದುರಿಯೋ ಕಣ್ಮರೆಯಾಗಿಯೋ ಹೊಸ ಬದಲಾವಣೆಗೆ ತಂತಾನೇ ಎಡೆ ಆಗಿ ಬಿಡುತ್ತದೆ!

ಈಗಲೂ ಗಿಡ್ಡ ಕೈಲಿ ದನಗಳನ್ನು ಕಂಡಾಗೆಲ್ಲ ಕಾಶಿಯ ನೆನಪಾಗುತ್ತದೆ. ಮೆಲ್ಲ ಮೆಲುಕುತ್ತ ಕಾರು ಮೋಟರು ಅತಿಯಾಗಿ ಓಡದ ರಸ್ತೆಯ ಮೇಲೆ ಭಯವಿಲ್ಲದೆ ಶಿಸ್ತಿನಿಂದ ಸಾವಧಾನದಿಂದ ಮೇಯಲು ಹೊರಡುತಿದ್ದ ಆ ಪುಟ್ಟ ಗುರುಗುಟಿ ಊರುಜಾನುವಾರುಗಳ ಮೆರವಣಿಗೆ ನೆನಪಾಗುತ್ತದೆ.ಈಗ ಸುಲಭಕ್ಕೆ ಕಾಣಸಿಗದ ಅವುಗಳನ್ನು ಎಲ್ಲೋ ಒಂದೊಂದು ಕಂಡದ್ದೇ ‘ಚಿನ್ನ ಕಂಡ’ಂತಾಗುತ್ತದೆ. ತಳಮಳದಲ್ಲಿ ಕಣ್ಣು ತೇವಕಟ್ಟುತ್ತದೆ.   

ಕಾಶಿ ದನವೆಂದರೆ ‘ಜೀವ’ ಎಂಬಷ್ಟು ಪ್ರೀತಿಯಿದ್ದರೂ ಅದನ್ನು ಕೊನೆವರೆಗೂ ಹಟ್ಟಿಯಲ್ಲೇ ಉಳಿಸಿಕೊಳ್ಳಲಾರರೇಕೆ? ಕೊಟ್ಟರೇಕೆ? ಆಗೆಲ್ಲ ಅರ್ಥವೇ ಆಗಿರಲಿಲ್ಲ. ಬತ್ತುಗಂದಿ ದನವನ್ನು ಕೃಷಿಕರು ಗೊಬ್ಬರಕ್ಕಾಗಿಯಾದರೂ ಇಟ್ಟುಕೊಂಡಾರು. ಉಳಿದವರು, ಅದೂ ಪೇಟೆಯಲ್ಲಿ, ಇಟ್ಟುಕೊಳ್ಳುವಂತಿಲ್ಲ. ದನಸಾಕಣೆ ಕಷ್ಟದ್ದು. ಇದೆಲ್ಲ ನೇರ ಇಕನಾಮಿಕ್ಸಿಗೇ ಸಂಬಂಧ ಪಟ್ಟದ್ದು ಅಂತೆಲ್ಲ ಅರಿವಾಗುತ್ತಿರುವುದೇ ಈಗ.ಅರಿವಾದೊಡನೆ ನೋವು ಮರೆಯಾಗದಷ್ಟೆ? ಅರಿವು ನೋವು ಎರಡೂ ಬೇರೆಬೇರೆಯೇ. ಎಷ್ಟೋ ಸಲ ಅರಿವೆಂಬುದೇ ನೋವೂ ಆಗಿಬಿಡುತ್ತದೆ. ವ್ಯಾಕುಲವಾಗಿ ಹೊಟ್ಟೆಯಲ್ಲಿ ನೆಟ್ಟುಬಿಡುತ್ತದೆ.

ಕಾಶಿದನದ- ಅಡ್ಡವಾಗಿ ಗಿಡ್ಡವಾಗಿ ಹರವಾದ ಬೆನ್ನು ಅಷ್ಟಗಲ ಕುಂಡೆಯ ಕೃಶಬಾಲವನ್ನೆ ಏನು ಮಾರುದ್ದ ಜಡೆಯೋ ಎಂಬಂತೆ ಬೀಸುತ್ತ ತಿರುಗುತ್ತಿದ್ದ ಅಪ್ಪಟ ಊರ ಕೈಲಿದನದ- ಕತೆ ಕಡೆಗೂ ಏನಾಯಿತೊ. ಸಾಕಲಾಗದ ಮೇಲೆ ಅದನ್ನೆಲ್ಲ ಎಣಿಸಲೇ ಹೋಗಬಾರದು ಎಂದು ಅಮ್ಮ ಸಂಕಟ ಒತ್ತಿಟ್ಟಂತೆ, ತನಗೇ ಎಂಬಂತೆಯೂ, ಹೇಳುತ್ತಿದ್ದಳು. ಕೊನೆಯವರೆಗೂ ಆಕೆ ಕಾಶಿಯನ್ನು ನೆನೆಯುವ ಪರಿಯೇ ಹೀಗಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.