ADVERTISEMENT

ಮದ್ದು... ಎಡವಿದರೆ ಅಡಗೀತು ಸದ್ದು!

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಕ್ರೀಡೆಯ ಸ್ವಾಭಾವಿಕ ಮೌಲ್ಯಗಳ ರಕ್ಷಣೆಯ ದೃಷ್ಟಿಯಿಂದ ಉದ್ದೀಪನ ಮದ್ದು ಸೇವನೆ ವಿರೋಧಿ ಕ್ರಮಗಳು ಅತ್ಯಗತ್ಯವಾಗಿವೆ. `ಕ್ರೀಡಾ ಸ್ಫೂರ್ತಿ~ಯಲ್ಲೇ ಆ ಸ್ವಾಭಾವಿಕ ಮೌಲ್ಯಗಳು ಅಡಗಿದ್ದು, ಅವುಗಳನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಿಲ್ಲ.
 
ದೇಹ ಮತ್ತು ಮನಸ್ಸಿನ ಲವಲವಿಕೆ ಹಾಗೂ ಎದ್ದು ಕಾಣುವ ಮಾನವೀಯತೆ ಈ ಮೌಲ್ಯಗಳ ಪ್ರಧಾನ ಲಕ್ಷಣಗಳಾಗಿವೆ. ಆದರೆ, ಉದ್ದೀಪನ ಮದ್ದು ಸೇವನೆ ಈ ಕ್ರೀಡಾ ಸ್ಫೂರ್ತಿಗೆ ಸಂಪೂರ್ಣ ವಿರೋಧಿಯಾಗಿದೆ.

ನೀತಿಯುಕ್ತ ನಡೆ, ಕ್ರಮಬದ್ಧವಾದ ಆಟ, ಪ್ರಾಮಾಣಿಕ ಮನೋಭಾವ, ಒಳ್ಳೆಯ ದೈಹಿಕ-ಮಾನಸಿಕ ಆರೋಗ್ಯ, ಶ್ರೇಷ್ಠವಾದುದನ್ನೇ ಸಾಧಿಸುವ ತುಡಿತ, ಸನ್ನಡತೆ, ಶಿಕ್ಷಣದ ಹಿನ್ನೆಲೆ, ತಮಾಷೆ ಗುಣ, ತಂಡಬಲ, ಸಮರ್ಪಣಾಭಾವ, ಧೈರ್ಯ, ನಿಯಮಾವಳಿ ಪಾಲನೆ, ಸ್ವಂತ ಬಲದ ಮೇಲೆ ನಂಬಿಕೆ ಹಾಗೂ ಎದುರಾಗಳಿಗಳ ಬಗೆಗೆ ಗೌರವ ಇಂತಹ ಎಲ್ಲ ಗುಣವಿಶೇಷಣಗಳ ಒಟ್ಟು ಫಲಿತವೇ ಕ್ರೀಡಾ ಸ್ಫೂರ್ತಿ.

ಉದ್ದೀಪನ ಮದ್ದು ಸೇವನೆ ವಿರುದ್ಧ ಹಲವು ಸಂಸ್ಥೆಗಳು ಕ್ರಿಯಾಶೀಲವಾಗಿವೆ. ವಿಶ್ವ ಉದ್ದೀಪನ ಮದ್ದು ಸೇವನೆ ವಿರೋಧಿ ಏಜನ್ಸಿ (ವಾಡಾ), ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ವಿರೋಧಿ ಏಜನ್ಸಿ (ನಾಡಾ) ಅವುಗಳಲ್ಲಿ ಮುಖ್ಯವಾದವು.
 
ಅಂತರರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟ (ಫಿಫಾ), ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಗಳ ಒಕ್ಕೂಟ (ಫಿಬಾ), ಸೈಕ್ಲಿಂಗ್ ಒಕ್ಕೂಟ (ಯುಸಿಐ), ಅಂತರರಾಷ್ಟ್ರೀಯ ಅಥ್ಲಿಟಿಕ್ಸ್ ಸಂಸ್ಥೆಗಳ ಒಕ್ಕೂಟ (ಐಎಎಎಫ್) ಸೇರಿದಂತೆ ಹಲವು ಕ್ರೀಡಾ ಒಕ್ಕೂಟಗಳು, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೇರಿದಂತೆ ಹಲವು ಕ್ರೀಡಾ ಸಂಘಟನೆಗಳು ಉದ್ದೀಪನ ಮದ್ದು ಸೇವನೆ ವಿರುದ್ಧ ಕೆಲಸ ಮಾಡುತ್ತಿವೆ.

ಅಥ್ಲೀಟ್‌ಗಳು ಸೇವಿಸುವ ಮದ್ದನ್ನು ಗುರುತಿಸಿ, ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಲು ಕೋಚ್‌ಗಳನ್ನು ಸನ್ನದ್ಧಗೊಳಿಸುವ ಅಗತ್ಯವಿದೆ. ಇದಕ್ಕೊಂದು ಕ್ರಿಯಾ ಯೋಜನೆ ಬೇಕಾಗಿದೆ.
 
ಪ್ರೌಢಶಾಲಾ ಹಂತದಿಂದಲೇ ಈ ಕ್ರಿಯಾ ಯೋಜನೆ ಜಾರಿಗೆ ಬರಬೇಕಿದೆ. ಏಕೆಂದರೆ, ಪಶ್ಚಿಮ ಬಂಗಾಲದಲ್ಲಿ ಈಚೆಗೆ 10-12 ಜನ ಶಾಲಾ ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಉದಾಹರಣೆ ಕಣ್ಣ ಮುಂದೆಯೇ ಇದೆ.

ಉದ್ದೀಪನ ಮದ್ದು ಸೇವನೆ ವಿರುದ್ಧದ ಕಾರ್ಯಾಚರಣೆ ಶಾಲಾ ನಿಯಮಾವಳಿ ಭಾಗವಾಗಬೇಕು. ಮದ್ದುಗಳ ಬಗೆಗೆ ವೈಜ್ಞಾನಿಕ ಮಾಹಿತಿ ಹಾಗೂ ಅದರ ಅಡ್ಡ ಪರಿಣಾಮದ ವಿಷಯವಾಗಿ ಶಾಲಾ ಹಂತದಲ್ಲೇ ಅಥ್ಲೀಟ್‌ಗಳಿಗೆ ಮಾಹಿತಿ ಸಿಗಬೇಕು.

ಅಥ್ಲೀಟ್‌ಗಳಿಗೆ ನಿಯಮಿತವಾಗಿ ಮಾರ್ಗದರ್ಶನ ಶಿಬಿರಗಳನ್ನು ಏರ್ಪಡಿಸಬೇಕು. ಗೋಡೆಯ ಆಚೆ ಸಿಗುವ ತರಬೇತಿಯಷ್ಟೇ, ಗೋಡೆಗಳ ಮಧ್ಯೆ ಸಿಗುವ ಪಾಠವೂ ಅಷ್ಟೇ ಮುಖ್ಯವಾಗಿದೆ.

ಕ್ರೀಡಾಪಟುವೊಬ್ಬನ ನಿತ್ಯದ ದೈಹಿಕ ಬೆಳವಣಿಗೆ ಮೇಲೆ ಕೋಚ್ ಪ್ರಭಾವ ಇದ್ದೇ ಇರುತ್ತದೆ. ಆದ್ದರಿಂದ ಉದ್ದೀಪನ ಮದ್ದಿನ ಪ್ರತಿಕೂಲ ಪರಿಣಾಮ, ಸುವ್ಯವಸ್ಥಿತ ತರಬೇತಿ ಮತ್ತು ಪೌಷ್ಟಿಕ ಆಹಾರ ಸೇವನೆ ಮಹತ್ವವನ್ನು ಕ್ರೀಡಾಪಟುಗಳಿಗೆ ಮನದಟ್ಟು ಮಾಡಿಕೊಡಲು ಆತನೇ ಸೂಕ್ತ ವ್ಯಕ್ತಿಯಾಗಿದ್ದಾನೆ.

ಉದ್ದೀಪನ ಮದ್ದು ಸೇವನೆ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಶಾಲೆಗಳಿಗಾಗಿಯೇ ನಿಯಮಾವಳಿ ರೂಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂದರೆ ಶಾಲೆಯಲ್ಲಿ ಉದ್ದೀಪನ ಮದ್ದು, ಆಲ್ಕೋಹಾಲ್ ಮತ್ತು ತಂಬಾಕು ಸೇವನೆ ವಿರುದ್ಧ ಕಟ್ಟಳೆಗಳನ್ನು ರೂಪಿಸಲಾಗಿದೆಯೋ ಹೇಗೆ ಎನ್ನುವುದನ್ನು ಪರಿಶೀಲಿಸಬೇಕಿದೆ. ಈ ಪರಿಶೀಲನೆಗೆ ಒಂದು ತಂಡದ ಅಗತ್ಯವಿದೆ.
 
ಆ ತಂಡದಲ್ಲಿ ಶಾಲಾ ಆಡಳಿತಗಾರರು (ಅದರಲ್ಲಿ ಕೋಚ್‌ಗಳು, ಕ್ರೀಡಾ ಅಧಿಕಾರಿಗಳು ಇರಬೇಕು), ಪಾಲಕರು, ಶಾಲಾ ವೈದ್ಯಕೀಯ ವಿಭಾಗದ ಪ್ರತಿನಿಧಿಗಳು, ಅಥ್ಲೀಟ್‌ಗಳು ಹಾಗೂ ವಿದ್ಯಾರ್ಥಿಗಳು ಇರಬೇಕು. ಈ ತಂಡವೇ ಶಾಲೆಗೆ ಅಗತ್ಯವಾದಂತಹ ಕಟ್ಟಳೆಗಳನ್ನು ರೂಪಿಸಬೇಕು.

ಕೋಚ್‌ಗಳ ಬೆಂಬಲವೇ ಇಲ್ಲಿ ಅಗತ್ಯವಾಗಿ ಬೇಕಿರುವುದು. ವ್ಯಾಪ್ತಿಯಲ್ಲಿ ದೊಡ್ಡದಾದ ಜಿಲ್ಲೆಗಳಲ್ಲಿ ರೂಪಿಸುವ ಕಟ್ಟಳೆಗಳು ಒಂದೊಂದು ಶಾಲೆಗೆ ಒಂದೊಂದು ರೀತಿಯಲ್ಲಿ ಅನ್ವಯವಾಗುವ ಸಾಧ್ಯತೆ ಇದೆ. ಇದರಿಂದ ಮೂಲ ಉದ್ದೇಶವೇ ಈಡೇರದಂತಹ ಸನ್ನಿವೇಶ ಸೃಷ್ಟಿಯಾಗುವ ಅಪಾಯವಿದೆ. ಆದ್ದರಿಂದ ತಾರ್ಕಿಕ ಹಾಗೂ ನ್ಯಾಯಸಮ್ಮತ ನಿಯಮಾವಳಿ ರೂಪಿಸುವ ಅಗತ್ಯವಿದೆ.

ಅನಾಬೊಲಿಕ್ ಔಷಧಿಗಳು ನವಚೈತನ್ಯ ನೀಡುವಂತಹ ಮದ್ದುಗಳಲ್ಲ. ಅಥ್ಲೀಟ್‌ಗಳ ಪ್ರದರ್ಶನ ಮಟ್ಟವನ್ನು ಏಕಾಏಕಿ ಹೆಚ್ಚಿಸುವ ಉದ್ದೇಶದಿಂದ ಅವುಗಳನ್ನು ಬಳಸಲಾಗುತ್ತದೆ. ನವಚೈತನ್ಯ ಒದಗಿಸುವಂತಹ ಔಷಧಿಗಳಿಗೂ ಅನಾಬೊಲಿಕ್ ಮದ್ದುಗಳಿಗೂ ಇರುವ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಬೇಕು. ಅದರ ತಿಳಿವಳಿಕೆಯನ್ನು ಅಥ್ಲೀಟ್‌ಗಳಿಗೆ ಕೊಡಬೇಕು.

ನಿಯಮದ ಜಾರಿ ಮತ್ತು ತಿಳಿವಳಿಕೆ
ಆಡಳಿತ ಮಂಡಳಿ ಅನುಮೋದನೆಯೊಂದಿಗೆ ನಿಯಮವನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಶಾಲೆಯ ಅಗತ್ಯಕ್ಕೆ ಅನುಗುಣವಾಗಿ ರೂಪಿಸಿದ ಉದ್ದೀಪನ ಮದ್ದು ಸೇವನೆ ವಿರೋಧಿ ಕಾನೂನಿನ ಕುರಿತು ಕ್ರೀಡಾಪಟುಗಳಿಗೆ ಅಗತ್ಯ ಮಾಹಿತಿ ನೀಡಬೇಕು. ನಿಯಮಾವಳಿ ಉಲ್ಲಂಘಿಸಿದರೆ ಎದುರಿಸಬೇಕಾದ ಶಿಕ್ಷೆ ಕುರಿತಂತೆ ಅವರನ್ನು ಜಾಗೃತರನ್ನಾಗಿ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಮೂರು ಹಂತದಲ್ಲಿ ಕ್ರಮ ಕೈಗೊಳ್ಳಬಹುದು.

ಮೊದಲ ಸಲ ತಪ್ಪು ಮಾಡಿದವರನ್ನು ಪರಿಪೂರ್ಣವಾದ ಕೌನ್ಸೆಲಿಂಗ್ ಪ್ರಕ್ರಿಯೆಗೆ ಒಳಪಡಿಸಬೇಕು. ಎರಡನೇ ಬಾರಿ ಆ ತಪ್ಪು ಪುನರಾವರ್ತನೆಯಾದರೆ ನಿಗದಿತ ಅವಧಿಗೆ ಪಠ್ಯೇತರ ಚಟುವಟಿಕೆ ಮೇಲೆ ನಿಷೇಧ ಹೇರಬೇಕು. ಮೂರನೇ ಸಲವೂ ಅದೇ ತಪ್ಪು ಮುಂದುವರಿದರೆ ಪಠ್ಯೇತರ ಚಟುವಟಿಕೆಗಳಿಂದ ಅಂತಹ ವಿದ್ಯಾರ್ಥಿಯನ್ನು ಶಾಶ್ವತವಾಗಿ ನಿರ್ಬಂಧಿಸಬೇಕು.

ಅಥ್ಲೀಟ್‌ಗಳಿಗೆ ನಿಯಮಾವಳಿ ವಿಷಯವಾಗಿ ಮಾಹಿತಿ ಕೊಡಬೇಕು. ವ್ಯಕ್ತಿಗತವಾಗಿ ತೂಕ, ಬಲ, ಅಳತೆ ಮೊದಲಾದ ವಿವರಗಳ ದಾಖಲೆ ಸಿದ್ಧಪಡಿಸಬೇಕು. ವರ್ತನೆಯಲ್ಲಿ ಆಗುವ ಬದಲಾವಣೆ, ತೂಕ, ಬಲದಲ್ಲಿ ಉಂಟಾದ ವ್ಯತ್ಯಾಸ ಮೊದಲಾದವನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಮಾಹಿತಿಯನ್ನೂ ಇಟ್ಟಿರಬೇಕು.
 
ಶಿಕ್ಷಕರ ಜೊತೆ ಸಂವಾದ ನಡೆಸುವುದು ಹಾಗೂ ಗಾಳಿಸುದ್ದಿಗಳ ಹಿನ್ನೆಲೆ ಕೆದಕುವಂತಹ `ಫಾಲೋ ಅಪ್~ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಇದರಿಂದ ಅನುಕೂಲವಾಗುತ್ತದೆ.

ಅಥ್ಲೀಟ್‌ಗಳ ಸನ್ನಡತೆ ವಿಷಯವಾಗಿ ಇರುವ ಕಳಕಳಿಯನ್ನು ಮತ್ತೆ ಮತ್ತೆ ವ್ಯಕ್ತಪಡಿಸಬೇಕು. ದಾಖಲಿಸಿಕೊಂಡ ಮಾಹಿತಿ ಹಾಗೂ ಅವಲೋಕನದ ವಿವರಗಳನ್ನು ಚರ್ಚಿಸಬೇಕು. ಸ್ಟೆರಾಯ್ಡ ಬಳಕೆಯನ್ನು ಪತ್ತೆ ಹಚ್ಚಲು ನಮ್ಮದೇ ಆದ ಮಾರ್ಗ ಕಂಡುಕೊಳ್ಳಬೇಕು. ಅಥ್ಲೀಟ್‌ನ ವರ್ತನೆ, ದೇಹಭಾಷೆ ಹಾಗೂ ದೃಷ್ಟಿ ಪರೀಕ್ಷೆ ಈ ಹಿನ್ನೆಲೆಯಲ್ಲಿ ಅಗತ್ಯವಾಗಿವೆ.

ನಿಯಮಾವಳಿ ಅರ್ಥವಾಗಿದೆಯೇ, ಯಾವ ಕಾರಣದಿಂದ ಈ ನಿಯಮಾವಳಿ ರೂಪಿಸಲಾಗಿದೆ ಗೊತ್ತಿದೆಯೇ, ಔಷಧಿ ಉಪಯೋಗದ ಜ್ಞಾನ ಇದೆಯೇ, ಯಾವುದಾದರೂ ಔಷಧಿ ಬಳಕೆ ಮಾಡಲಾಗುತ್ತಿದೆಯೇ ಇವೇ ಮೊದಲಾದ ಪ್ರಶ್ನೆಗಳಿಗೆ ಅಥ್ಲೀಟ್‌ನಿಂದ ಉತ್ತರ ಪಡೆದು, ಆತನಿಗೆ ಕೌನ್ಸೆಲಿಂಗ್ ಅಗತ್ಯವಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಬೇಕು.

ಮೈದಾನದ ಎಲ್ಲ ನಿಯಮಾವಳಿಯನ್ನೂ ಕೋಚ್ ಮುಂಚಿತವಾಗಿ ಅಥ್ಲೀಟ್‌ಗಳಿಗೆ ತಿಳಿಸಿರಬೇಕು. ವೈದ್ಯಕೀಯ ಆರೈಕೆಯ ಮೇಲೆ ಅಥ್ಲೀಟ್ ಇದ್ದರೆ, ಸರಿಯಾದ ಉಸ್ತುವಾರಿ ಇದೆಯೋ, ಇಲ್ಲವೋ, ಪ್ರದರ್ಶನ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಔಷಧಿ ಸೇವಿಸಲಾಗುತ್ತಿದೆಯೇ ಹೇಗೋ ಎಂಬುದನ್ನೂ ಗಮನಿಸಬೇಕು. ಕಾಳಸಂತೆಯಲ್ಲಿ ದೊರೆಯುವ ಔಷಧಿಗಳ ಅಪಾಯದ ಬಗೆಗೆ ಸರಿಯಾದ ತಿಳಿವಳಿಕೆ ನೀಡಬೇಕು.

ಮೈದಾನದಲ್ಲಿ ಬೆವರು ಹರಿಸದೆ ಯಶಸ್ಸು ಸಿಗದು ಎಂಬುದನ್ನು ಅವರಿಗೆ ಮನದಟ್ಟು ಮಾಡಬೇಕು. ಅಥ್ಲೀಟ್‌ಗಳ ಸಾಮರ್ಥ್ಯಕ್ಕೆ ತಕ್ಕಂತೆ ಗುರಿಗಳನ್ನು ನಿಗದಿ ಮಾಡಬೇಕು. ಔಷಧಿಯಿಂದ ಅಂತಹ ಅಥ್ಲೀಟ್‌ಗಳನ್ನು ದೂರ ಇಡಬೇಕು. ಸರಿಯಾದ ತರಬೇತಿ ಕ್ರಮಗಳನ್ನು ಅವರಿಗೆ ಕಲಿಸಿಕೊಡಬೇಕು.

ಪ್ರತಿಭೆಯನ್ನು ಒರೆಗೆ ಹಚ್ಚಲು ಅಥ್ಲೀಟ್‌ಗಳೂ ಸಿದ್ಧರಿರಬೇಕು. ಸ್ವಂತ ಬಲದ ಮೇಲೆ ನಂಬಿಕೆ ಹೊಂದಬೇಕು. ಮದ್ದಿನಿಂದ ದೂರ ಇದ್ದು ಸ್ಪರ್ಧೆಗೆ ಅಣಿಯಾಗುವುದೇ ನೈಜ ಕ್ರೀಡಾಪಟುವಿನ ಆದ್ಯ ಕರ್ತವ್ಯ ಎಂಬುದನ್ನು ಸದಾ ನೆನಪಿಡಬೇಕು.

- ಲೇಖಕರು ಕ್ರೀಡಾತಜ್ಞ, ವೈದ್ಯ 
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.