ADVERTISEMENT

ಮಳೆ ಮಾರುವ ಹುಡುಗ

ಕಥೆ

ಕರ್ಕಿ ಕೃಷ್ಣಮೂರ್ತಿ
Published 17 ಮೇ 2014, 19:30 IST
Last Updated 17 ಮೇ 2014, 19:30 IST

2018ನೇ ಇಸ್ವಿ, ಬೆಂಗಳೂರು: ಇಂದಿಗೆ ಸುಮಾರು ಹದಿಮೂರು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ರಾಯಲ್ ಎಸ್ಟೇಟಿನಲ್ಲಿ ಸೈಟು ಖರೀದಿಸಿದ್ದು ತನ್ನ ಅತ್ಯುತ್ತಮ ನಿರ್ಧಾರಗಳಲ್ಲೊಂದು ಎಂದುಕೊಂಡ ನಿಶಾಂತ. ಆತನದು ಪಕ್ಕಾ ವ್ಯವಹಾರ. ಅಂದು ಆ ಬರಡು ನೆಲದಲ್ಲಿ ಜಾಗ ಕೊಳ್ಳಲು ಎಲ್ಲರೂ ಹಿಂದೇಟು ಹಾಕುತ್ತಿದ್ದರೂ ಮುಂದೆ ಅಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವುದು ನಿಶಾಂತನಿಗೆ ಖಾತರಿಯಿತ್ತು.

Bangalore city will shift towards the new airport ಎಂದು ಆತ ನಿಖರವಾಗಿ ಹೇಳುತ್ತಿದ್ದ. ಆ ಎಲ್ಲ ದೂರಾಲೋಚನೆಗಳೇ ಇಂದು ಆತನನ್ನು ಬೆಂಗಳೂರು ಉತ್ತರದ ಅತಿ ಪ್ರತಿಷ್ಟಿತ ಬಡಾವಣೆಯ ಬಂಗಲೆಯಲ್ಲಿ ವಾಸಿಸುವ ಹಂತಕ್ಕೆ ತಲುಪಿಸಿರುವುದು.

ನಿಶಾಂತ ಹೊಸ ಕಂಪನಿಯೊಂದನ್ನು ಸೇರಿದ ಮೇಲಂತೂ, ವಿಮಾನ ನಿಲ್ದಾಣದ ಪಕ್ಕದಲ್ಲೇ ಮನೆ ಮಾಡಿದ್ದು ಬಹಳೇ ಪ್ರಯೋಜನಕಾರಿಯಾಯಿತು. ಆತ ಈಗ ಬಹುರಾಷ್ಟ್ರೀಯ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥನಾಗಿದ್ದ. ಪ್ರತಿ ವಾರ ದೆಹಲಿಗೋ ಮುಂಬಯಿಗೋ ವಿದೇಶಕ್ಕೋ ಹಾರಾಟ ಆತನಿಗೆ ಅನಿವಾರ್ಯವಾಗಿತ್ತು. ನಿಶಾಂತನ ಹೆಂಡತಿ ಮೈತ್ರಿ ಸುಮಾರು ಹದಿನೈದು ವರ್ಷ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ದುಡಿದು ಸದ್ಯ ಕೆಲಸ ತೊರೆದಿದ್ದಳು. ಏರ್‌ಪೋರ್ಟ್ ಪಕ್ಕದ ಹೊಸ ಮನೆಗೆ ಬಂದಮೇಲೆ ಆಕೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು.

ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವ ದೇವನಹಳ್ಳಿ ಎಂಬ ಹಳ್ಳಿ ಈಗ ಬೆಂಗಳೂರಿನ ಅತಿದೊಡ್ದ ಕೊಳೆಗೇರಿ ಎಂಬ ಹೆಸರು ಪಡೆದಿತ್ತು. ವಿಮಾನ ನಿಲ್ದಾಣದ ಸುತ್ತ ನಗರ ಬೆಳೆದುಕೊಂಡಂತೆ ಅದಕ್ಕಂಟಿಕೊಂಡೇ ಈ ಕೊಳೆಗೇರಿಯೂ ಅದೇ ಪರಿಯಲ್ಲಿ ಹರಡಿಕೊಂಡಿತ್ತು. ಯಾವುದೋ ಒಂದು ಎನ್.ಜಿ.ಓ ಜೊತೆ ಕೈಜೋಡಿಸಿದ್ದ ಮೈತ್ರಿಗೆ ದೇವನಹಳ್ಳಿಯ ಕೊಳೆಗೇರಿ ಮುಖ್ಯ ಕಾರ್ಯಸ್ಥಾನವಾಗಿತ್ತು. ಆಕೆ ಮನೆಗೆ ಬರುವುದು ಹೋಗುವುದು ಯಾವುದಕ್ಕೂ ಒಂದು ವೇಳೆಯೆಂಬುದಿರಲಿಲ್ಲ. ಅದರ ಬಗ್ಗೆ ನಿಶಾಂತ ಚಕಾರವೆತ್ತುತ್ತಿರಲಿಲ್ಲ. ಆಕೆ ತನ್ನ ಪಾಡಿಗೆ ತಾನು ಬಿಡುವಿಲ್ಲದೇ ಸದಾ ಕಾರ್ಯನಿರತಳಾಗಿರುವುದು ಈತನಿಗೂ ಬೇಕಾಗಿತ್ತಾದ್ದರಿಂದ ಹೆಂಡತಿಯ ದಿನಚರಿಯ ಬಗ್ಗೆ ನಿಶಾಂತ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆತನ ಮಗ ಅನೀಷ್ ದೇಶದ ಅತ್ಯುತ್ತಮ ರೆಸಿಡೆನ್ಷಿಯಲ್ ಶಾಲೆ ಎಂದು ಹೆಸರಾದ ಮಸ್ಸೂರಿಯಲ್ಲಿಯ ವುಡ್‌ಸ್ಟಾಕ್ ಸ್ಕೂಲಿನಲ್ಲಿ ಓದುತ್ತಿದ್ದ.

ಎಲ್ಲವೂ ಸರಿಯಾಗಿಯೇ ಇತ್ತು. ಸಮಸ್ಯೆ ಇದ್ದದ್ದು ಮಾತ್ರ ಕುಡಿಯುವ ನೀರಿನದು. ಇಡೀ ಬೆಂಗಳೂರು ನೀರಿಗಾಗಿ ಹಪಹಪಿಸುತ್ತಿತ್ತು. ಈ ಬೃಹತ್ ನಗರದ ಬಾಯಾರಿಕೆ ತಣಿಸಲು ಸರ್ಕಾರ ಪಡುವ ಸಾಹಸಗಳೆಲ್ಲ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದ್ದವು. ಅದರಲ್ಲೂ ಬೆಂಗಳೂರು ಉತ್ತರಭಾಗದಲ್ಲಿ ಅಂತರ್ಜಲ ಅಪೂಟೂ ಇರಲಿಲ್ಲ. ಬೆಂಗಳೂರು ದಕ್ಷಿಣದಲ್ಲಿ ತುಸು ನೀರು ಸಿಗುತ್ತಿತ್ತಾದ್ದರಿಂದ, ಅಲ್ಲಿಂದ ಟ್ಯಾಂಕರುಗಳಲ್ಲಿ ಉತ್ತರ ಭಾಗಕ್ಕೆ ನೀರು ಸರಬರಾಜಾಗುತ್ತಿತ್ತು. ಟ್ಯಾಂಕರ್ ನೀರೊಂದಕ್ಕೆ ಐದಾರು ಸಾವಿರದಂತೆ ಬಾಯಿಗೆ ಬಂದ ಬೆಲೆ ಹೇಳುತ್ತಿದ್ದರು. ಇನ್ನು ಅಲ್ಲೂ ನೀರಿಲ್ಲ, ಇನ್ನೆರಡೇ ವರ್ಷದಲ್ಲಿ ಬೆಂಗಳೂರು ಬರಬಡಿದ ನಗರವಾಗುತ್ತದೆ.

ಜನರೆಲ್ಲ ಒಬ್ಬೊಬ್ಬರೇ ಗುಳೆ ಎದ್ದು ಹೋಗುತ್ತಾರೆ. ಇಲ್ಲಿಯ ಈ ಹಾರಾಟ, ಥಳಕು, ಬಳಕುಗಳೆಲ್ಲ ಇನ್ನೆರಡು ವರ್ಷ ಮಾತ್ರ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಬೆಂಗಳೂರು ದಕ್ಷಿಣದ ಜನರಿಗೆ ಅಲ್ಲಿಂದ ನೀರೊಯ್ದು ಉತ್ತರ ಭಾಗಕ್ಕೆ ಮಾರುವುದರ ಬಗ್ಗೆ ವಿರೋಧವಿತ್ತು. ಅಲ್ಲೊಂದು ‘ದಕ್ಷಿಣ ಬೆಂಗಳೂರು ನೀರು ಸಂರಕ್ಷಣಾ ಸಮಿತಿ’ ರಚಿತವಾಗಿ ಅವರು ಆಗಾಗ ಉತ್ತರದೆಡೆಗೆ ನೀರೊಯ್ಯುತ್ತಿದ್ದ ಟ್ಯಾಂಕರುಗಳನ್ನು ತಡೆದು ಗಲಾಟೆ ಮಾಡುತ್ತಿದ್ದರು. ಹುಲ್ಲುಹಾಸುಗಳು ಹೆಚ್ಚಿನ ಪ್ರಮಾಣದ ನೀರನ್ನು ಬಳಸಿಕೊಳ್ಳುತ್ತವೆ ಎಂಬ ಕಾರಣಕ್ಕೆ ಬಿ.ಬಿ.ಎಂ.ಪಿ ತನ್ನ ಉದ್ಯಾನಗಳಲ್ಲೆಲ್ಲ ಹುಲ್ಲುಹಾಸನ್ನು ತೆಗೆದುಹಾಕಿತ್ತು. ಅಲ್ಲದೆ, ಮನೆಗಳಲ್ಲಿ, ವಾಣಿಜ್ಯ ಪ್ರದೇಶಗಳಲ್ಲಿ ಲಾನ್ ಬೆಳೆಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು.

ಗಿಡಗಳಿಗೆಲ್ಲ ಕೊಳಚೆಯಿಂದ ಸಂಸ್ಕರಣೆಗೊಂಡ ನೀರನ್ನೇ ಬಳಸುತ್ತಿದ್ದರೂ; ಅದೇ ನೀರನ್ನು ಈಗ ಕುಡಿಯುವ ಸಲುವಾಗಿ ಬಳಸುವ ಅತ್ಯಗತ್ಯವಿತ್ತು. ಆ ಕಾರಣ ಕೊಳಚೆ ಸಂಸ್ಕರಣಾ ಘಟಕದಿಂದ ಹೊರಬರುವ ನೀರನ್ನು ಗಿಡಮರಗಳಿಗೆ, ವಾಹನಗಳನ್ನು ತೊಳೆಯಲು, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಪೋಲು ಮಾಡದೆ ಕುಡಿಯುವ ಸಲುವಾಗಿ ಸಂಗ್ರಹಿಸಿಡುವ ಅವಶ್ಯಕತೆ ಅತೀವವಾಗಿತ್ತು. ಹೀಗಾಗಿ ಬೆಂಗಳೂರಿನ ಉದ್ಯಾನಗಳನ್ನೆಲ್ಲ ‘ರಾಕ್ ಗಾರ್ಡನ್' ಆಗಿ ಪರಿವರ್ತಿಸಲಾಗಿತ್ತು. ಮೂರು ಹಂತದಲ್ಲಿ ಶುದ್ಧಗೊಂಡು ಹೊರಬರುವ ನೀರು ಪರಿಶುದ್ಧವಾಗಿರುವುದು ದಿಟವಾಗಿದ್ದರೂ, ಅದು ಕುಡಿಯಲು ಯೋಗ್ಯವಾದದ್ದು ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಸರ್ಕಾರ ಹರಸಾಹಸ ಪಡುತ್ತಿತ್ತು.

‘ಸಂಸ್ಕರಿಸಿದ ನೀರು ಕಾವೇರಿ ನೀರಿಗಿಂತಲೂ ಶುದ್ಧ’ ಎಂಬ ದೊಡ್ಡ ದೊಡ್ಡ ಜಾಹೀರಾತು ಫಲಕಗಳು ಮುಖ್ಯಮಂತ್ರಿಯ ಹಾಗೂ ಜಲಸಂಪನ್ಮೂಲ ಮಂತ್ರಿಯ ಮುಖದೊಂದಿಗೆ ನಗರದ ಹಲವೆಡೆ ರಾರಾಜಿಸುತ್ತಿದ್ದವು. ಹೆಸರಾಂತ ಸಾಫ್ಟ್‌ವೇರ್ ಕಂಪನಿಯೊಂದು ತನ್ನ ಕ್ಯಾಂಪಸ್ಸಿನಲ್ಲಿ ವಿದೇಶೀಯನೊಬ್ಬನನ್ನು ಕರೆಸಿ, ಜೊತೆಗೆ ಎಲ್ಲಾ ಟೀವಿ, ಪತ್ರಿಕಾ ಮಾಧ್ಯಮಗಳನ್ನೆಲ್ಲ ಒಟ್ಟುಗೂಡಿಸಿ; ಆ ವಿದೇಶೀ ವ್ಯಕ್ತಿ ಶುದ್ಧ ಬಿಳಿ ಕರವಸ್ತ್ರದಲ್ಲಿ ಗಾಜಿನ ಲೋಟವೊಂದನ್ನು ಹಿಡಿದೆತ್ತಿ ಅದರಲ್ಲಿಯ ಸಂಸ್ಕರಣಗೊಂಡ ನೀರನ್ನು ಗಟಗಟನೆ ಕುಡಿದು, ಖಾಲಿ ಲೋಟವನ್ನು ಮೇಜಿನ ಮೆಲೆ ಕುಟ್ಟಿ, so...? I am still alive ಎಂದು ಹುಬ್ಬೇರಿಸಿದ ಘಟನೆ ಟೀವಿಗಳಲ್ಲಿ ಪುನಃ ಪುನಃ ಪ್ರಸಾರಗೊಂಡು ಸುದ್ದಿಯಾಗಿತ್ತು. ಸಾಲದೆಂಬಂತೆ ಟೀವಿ ಮಾಧ್ಯಮಗಳು ಒಬ್ಬರಿಗೊಬ್ಬರು ಪೈಪೋಟಿ ಬಿದ್ದವರಂತೆ– ವೈದ್ಯರನ್ನೂ, ಒಬ್ಬ ಜಲವಿಜ್ಞಾನಿಯನ್ನೂ, ಓರ್ವ ಮಾನವ ಹಕ್ಕು ಹೋರಾಟಗಾರ್ತಿಯನ್ನೂ ಕೂರಿಸಿಕೊಂಡು, ಈ STPಗಳಿಂದ ಸಂಸ್ಕರಣಗೊಂಡು ಬರುವ ನೀರು ಕುಡಿಯಲು ಎಷ್ಟು ಯೋಗ್ಯ, ಅದರಿಂದಾಗುವ ಲಾಭ ಹಾನಿಗಳೇನು, ಆ ನೀರಿನಲ್ಲಿರುವ ಯಾವ ಯಾವ ಖನಿಜ ಹಾಗೂ ರಾಸಾಯನಿಕಗಳ ಪ್ರಮಾಣವೆಷ್ಟು, ಎಷ್ಟು ಕೊಳಚೆಯಿಂದ ಎಷ್ಟು ನೀರನ್ನು ಸಂಸ್ಕರಿಸಿ ತೆಗೆಯಬಹುದು ಇತ್ಯಾದಿಗಳ ಬಗ್ಗೆ ಬಗೆಬಗೆಯ ಕಾರ್ಯಕ್ರಮಗಳನ್ನು ಎಡಬಿಡದೆ ನಡೆಸಿಕೊಡುತ್ತಿದ್ದರು.

ಒಂದು ರವಿವಾರ ಮುಂಜಾನೆ ನಿಶಾಂತ ಏಳುವ ಮೊದಲೇ ಮೈತ್ರಿ ಕೆಲಸದ ನಿಮಿತ್ತ ಮುಂಬಯಿಗೆ ಹೊರಟುಹೋಗಿದ್ದಳು. ಈತ ನಿಧಾನವಾಗಿ ಎದ್ದು ಕಾಫಿ ಮಾಡಿಕೊಂಡು, ಬ್ರೆಡ್ಡನ್ನು ಟೋಸ್ಟರಿನಲ್ಲಿ ಸುಟ್ಟು, ಅದಕ್ಕೆ ಶುಗರ್ ಲೆಸ್ ಜಾಮ್ ಹಚ್ಚಿ ತಿನ್ನುತ್ತ ಟೀವಿಯ ಮುಂದೆ ಕುಳಿತಿದ್ದ. ಚಾನಲ್ಲಿನವರು ಕುವೈತ್ ದೇಶದ ಮರುಭೂಮಿಯಲ್ಲಿ ನೌಕರಿ ಮಾಡುವ ಮಲಯಾಳಿಯೊಬ್ಬನ ಸಂದರ್ಶನ ಮಾಡುತ್ತಿದ್ದರು. ಆತ ತಾನು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ನೀರಿನ ಲವಲೇಶವೂ ಇಲ್ಲವೆಂದೂ, ನಾಲ್ಕು ವರ್ಷಗಳಿಂದ ತಾನು ಕೊಳಚೆಯಿಂದ ಸಂಸ್ಕರಿಸಲ್ಪಟ್ಟ ನೀರನ್ನೇ ಕುಡಿಯುತ್ತಿರುವುದಾಗಿ ಹೇಳುತ್ತಿದ್ದ. ಯಾರೋ ಗೇಟನ್ನು ಹೊರಗಿನಿಂದ ಬಡಿಯುತ್ತ ‘ಸಾರ್.. ಸಾರ್’ ಎಂದು ಕೂಗಿದಂತಾಯಿತು.

ಭಿಕ್ಷುಕರಿರಬೇಕು ಎನಿಸಿದರೂ ಗೇಟಿನ ಆಚೆ ಇರುವ ವ್ಯಕ್ತಿ ಕಾಣುತ್ತಿರಲಿಲ್ಲವಾದ್ದರಿಂದ ಹೊರಬಂದು ಗೇಟು ತೆರೆದ ನಿಶಾಂತ. ಹೆಗಲಿಗೊಂದು ಜೋಳಿಗೆ ನೇತುಹಾಕಿಕೊಂಡಿದ್ದ ಸುಮಾರು ಹತ್ತರಿಂದ ಹನ್ನೆರಡು ವರ್ಷದ ಭಿಕ್ಷುಕ ಹುಡುಗ ‘ಸಾರ್, ಮಳೆ ಬೇಕಾ ಸಾರ್?’ ಅಂದ. ಆತನನ್ನು ನೋಡಿದ ತಕ್ಷಣ ‘ಮುಂದೆ ಹೋಗು’ ಎನ್ನಬೇಕೆಂದುಕೊಂಡರೂ ಆತ ‘ಮಳೆ ಬೇಕಾ ಸಾರ್..’ ಎಂದು ಕೇಳಿದ್ದು ವಿಚಿತ್ರವೆಂದೆನಿಸಿ ಹುಡುಗನನ್ನೊಮ್ಮೆ ದಿಟ್ಟಿಸಿ ನೋಡಿದ. ಹುಡುಗನ ಬಟ್ಟೆ ವೇಷಗಳೆಲ್ಲ ಭಿಕ್ಷುಕನಂತಿದ್ದರೂ ಆತನ ಭಂಗಿ ಮಾತ್ರ, ‘ನಿನಗೇನೋ ಉಪಕಾರ ಮಾಡಬೇಕೆಂದು ಬಂದಿದ್ದೇನೆ. ಬೇಕಾದರೆ ತಗೋ, ಇಲ್ಲದಿದ್ದರೆ ನನ್ನ ದಾರಿ ನನಗೆ’ ಅನ್ನುವಂತಿತ್ತು.

ಎಲ್ಲಕ್ಕಿಂತ ಹೆಚ್ಚಾಗಿ ಅವನ ಕಣ್ಣುಗಳು; ಅದರ ಆ ಹೊಳಪು, ಪ್ರಖರತೆ, ಸೂರ್ಯನನ್ನೇ ಸುಟ್ಟು ಬೂದಿಮಾಡಿಬಿಡುತ್ತೇನೆಂಬ ತೀಕ್ಷ್ಣತೆ ಕಂಡು ನಿಶಾಂತ ಸಣ್ಣಗೆ ಹೆದರಿದ. ಆತನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಹಿಂಜರಿಯುತ್ತಾ, ಈತ ಯಾವುದೋ ಬೇರೆ ವಸ್ತುವಿಗೆ ‘ಮಳೆ’ ಅನ್ನುತ್ತಿದ್ದಾನೆ ಅಂದುಕೊಳ್ಳುತ್ತಾ ‘ಮಳೆ ಕೊಡ್ತೀಯಾ, ಹಾಗೆಂದರೇನೋ..?’ ಎಂದ. ‘ಮಳೆ ಗೊತ್ತಿಲ್ವಾ ಸಾರ್... ಮಳೆ..’ ಎನ್ನುತ್ತ, ಬೆರಳುಗಳನ್ನು ಗಾಳಿಯಲ್ಲಿ ಆಡಿಸುತ್ತಾ, ‘ಮೇಲಿಂದ ಬೀಳುತ್ತದಲ್ಲಾ ಅದು’ ಅನ್ನುವ ರೀತಿ ಕೈಗಳನ್ನು ಮೇಲೆ ಕೆಳಗೆ ಮಾಡಿ ತೋರಿಸಿದ ಹುಡುಗ.

‘ಓಹೋ.. ಆ ಮಳೆ, ಅದನ್ನು ಕೊಡಲು ನೀನೇನು ವರುಣದೇವನಾ..?’ ಎಂದ ಹುಡುಗನ್ನು ತಮಾಷೆ ಮಾಡುತ್ತ.
‘ಸುಳ್ಳು ಹೇಳ್ತಾ ಇಲ್ಲ ಸಾರ್, ನಿಜವಾಗ್ಲೂ ಕೊಡ್ತೀನಿ, ಬೇಕಾದ್ರೆ ನೋಡಿ’ ಹುಡುಗನೆಂದ. ‘ನನಗೇನೂ ಕಾಸುಗೀಸು ಬೇಡ, ತಿನ್ನಲು ಏನಾದ್ರೂ ಇದ್ರೆ ಕೊಡಿ ಸಾಕು. ಬೇಡಾ ಅಂದ್ರೆ ಹೇಳಿ.. ಹೋಗ್ತೀನಿ’ ಹುಡುಗ ಮಾತು ಸೇರಿಸಿದ.

‘ಕೊಡು ಹಾಗಾದ್ರೆ’ ಅಂದ ನಿಶಾಂತ.
‘ಇಲ್ಲೆಲ್ಲಾ ರಸ್ತೆ ಮೇಲೆ ನಿಂತು ಕೊಡಾಕಾಗೊಲ್ಲಾ ಸಾರ್, ಒಳಗೆ ನಡೀರಿ. ನನಗೊಂದು ಸಣ್ಣ ಟೇಬಲ್ಲು ಬೇಕು’.
ಹುಡುಗನ ಬೇಡಿಕೆ ವಿಚಿತ್ರವೆನಿಸಿತು ಇವನಿಗೆ. ಹಾಗೆಲ್ಲಾ ಅಪರಿಚಿತರನ್ನು, ಅದರಲ್ಲೂ ಬೇಡುವವರನ್ನು ಮನೆಯೊಳಗೆ ಬಿಟ್ಟುಕೊಳ್ಳುವಂತಿಲ್ಲವಾದರೂ ‘ಈ ಚಿಕ್ಕ ಹುಡುಗ ಏನು ಮಾಡಿಯಾನು’ ಎಂಬ ಧೈರ್ಯವಿತ್ತು ನಿಶಾಂತನಿಗೆ. ರವಿವಾರ ಮುಂಜಾನೆಯ ಬಿಡುವಿನಲ್ಲಿ ಒಳ್ಳೆಯ ಟೈಂಪಾಸ್ ಆದಂತೆಯೂ ಆಯಿತು ಅಂದುಕೊಂಡು ಹುಡುಗನನ್ನು ಒಳಗೆ ಕರೆದ.

‘ಸರ್, ಯಾವುದಾದರೂ ಒಂದು ಸಣ್ಣ ಪಾತ್ರೆ ತನ್ನಿ’ ಅನ್ನುತ್ತ ತನ್ನ ಜೋಳಿಗೆಯಿಂದ ಬಿಳಿಯ ವಸ್ತ್ರವೊಂದನ್ನು ತೆಗೆದು ಲಿವಿಂಗ್ ರೂಮಿನಲ್ಲಿಯ ಗಾಜಿನ ಟಿಪಾಯಿಯ ಮೇಲೆ ಹಾಸಿದ ಹುಡುಗ. ಹರಿದ ಕೊಳಕು ಬಟ್ಟೆ ಹಾಕಿರುವ ಈತ ಅದು ಹೇಗೆ ಅಷ್ಟು ಬಿಳಿಯ ಶುಭ್ರ ಬಟ್ಟೆ ಜೋಳಿಗೆಯಲ್ಲಿಟ್ಟುಕೊಂಡಿದ್ದಾನೆ ಎಂದು ಅಚ್ಚರಿಪಡುತ್ತ, ನಿಶಾಂತ ಅಡುಗೆ ಕೋಣೆಯಿಂದ ಪಾತ್ರೆಯೊಂದನ್ನು ತರುವಷ್ಟರಲ್ಲಿ, ಹುಡುಗ ಚಿಕ್ಕದೊಂದು ಚರಕದಂತಹ ಆಟಿಕೆಯೊಂದನ್ನು ಟೀಪಾಯಿ ಮೇಲಿಟ್ಟಿದ್ದ.

ಎರಡು ಪುಟ್ಟ ಚರಕಗಳನ್ನು ಅರ್ಧ ಅಡಿ ಅಂತರದಲ್ಲಿ ಪಕ್ಕ ಪಕ್ಕದಲ್ಲಿ ಇಟ್ಟು, ಮಧ್ಯದಲ್ಲೊಂದು ಸಣ್ಣ ಲೋಹದ ಕಡ್ಡಿಯಿಂದ ಎರಡನ್ನೂ ಜೋಡಿಸಿದಂತೆ ಕಾಣುತ್ತಿದ್ದ, ಹೆಚ್ಚು ಕಡಿಮೆ ಇಸ್ತ್ರಿ ಪೆಟ್ಟಿಗೆಯೊಂದರ ಗಾತ್ರದ ಆ ಆಟಿಕೆಗೆ ಬಲಬದಿಯಲ್ಲಿ ಸಣ್ಣದೊಂದು ಸೈಕಲ್ ಪೆಡಲ್ಲಿನಂತಹ ಹ್ಯಾಂಡಲ್ ಇತ್ತು. ಚಕ್ರದ ನಡುವಿನ ಲೋಹದ ಕಡ್ಡಿಯಿಂದ ಲಂಬವಾಗಿ, ಬಾಲ್ ಪೆನ್ನಿನ ರೀಫಿಲ್ ಗಾತ್ರದ ನಾಲ್ಕೈದು ಸಣ್ಣ ಕೊಳವೆಗಳು ಚಾಚಿಕೊಂಡಿದ್ದವು. ಹುಡುಗ ಮತ್ತೇನೂ ಮಾತಾಡಲಿಲ್ಲ. ಈತ ಕೊಟ್ಟ ಸ್ಟೀಲ್ ಪಾತ್ರೆಯನ್ನು ಆಟಿಕೆಯ ಮುಂದಿಟ್ಟು, ಆಟಿಕೆಗೊಮ್ಮೆ ಕೈಮುಗಿದು, ಕಣ್ಮುಚ್ಚಿ, ಎಡಗೈಯಿಂದ ಆಟಿಕೆಯ ಒಂದು ಬದಿ ಹಿಡಿದು, ಇನ್ನೊಂದು ಕೈಯಿಂದ ಅದರ ಪೆಡಲ್ಲನ್ನು ನಿಧಾನವಾಗಿ ತಿರುಗಿಸತೊಡಗಿದ. ಒಂದು...

ಎರಡು... ಮೂರು ಸುತ್ತು... ನಾಲ್ಕು... ಐದು... ನೋಡನೋಡುತ್ತಿರುವಂತೆಯೇ ಆಟಿಕೆಯ ಒಂದು ಕೊಳವೆಯಿಂದ ನೀರು ಸಣ್ಣಗೆ ಚಿಮ್ಮತೊಡಗಿತು. ಆರು, ಏಳು, ಎಂಟು ಸುತ್ತುಗಳಾಗುತ್ತಿರುವಂತೆ ಅಷ್ಟೂ ಕೊಳವೆಗಳ ಮೂತಿಯಿಂದ ನೀರು ಚಿಮ್ಮುತ್ತ ಚಿಮ್ಮುತ್ತಾ ನಿಮಿಷಾರ್ಧದಲ್ಲಿ ಪಾತ್ರೆ ತುಂಬಿಹೋಯಿತು. ನಿಶಾಂತನಿಗೆ ನಂಬಲಾಗಲಿಲ್ಲ. ‘ಇದು ಹೇಗೆ ಸಾಧ್ಯ? just not possible! ಇವನೇನೋ ಬ್ಲಾಕ್ ಮ್ಯಾಜಿಕ್ ಮಾಡುತ್ತಿರಬೇಕು... ಆದರೆ ಎದುರಿಗೇ ನೀರು ತುಂಬಿದ ಪಾತ್ರೆಯಿದೆಯಲ್ಲ..! something is wrong’ ಅಂದುಕೊಂಡ. ಹುಡುಗ ನಿಧಾನವಾಗಿ ಕಣ್ಣು ತೆರೆದು ತನ್ನ ಕೆಲಸವಾಯಿತು ಅನ್ನುವವನಂತೆ ನೋಡುತ್ತ ನಿಂತ. ನಾಲ್ಕೈದು ನಿಮಿಷಗಳಲ್ಲಿ ನಡೆದುಹೋದ ನಂಬಲಾರದ ಈ ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ನಿಶಾಂತನಿಗೆ ತೋಚಲಿಲ್ಲ.

‘ಇದನ್ಯಾರಾದ್ರೂ ಮಳೆ ಅಂತಾರೇನೋ..?’ ಪ್ರಶ್ನಿಸಿದ.
ಹೌದು ಸಾರ್, ಮಳೆಯೇ ಇದು. ಮಳೆ ಬರುತ್ತಿರುವುದಷ್ಟೇ ಕಾಣುತ್ತೆ. ಅದರ ಒಂದು ತುದಿ ಮಾತ್ರ ನಾವು ನೋಡ್ತೇವೆ. ಅದರ ಇನ್ನೊಂದು ತುದಿ ನಮಗೆ ಕಾಣೊಲ್ಲ. ಅದು ಎಲ್ಲಿದೆ, ಹೇಗೆ–ಯಾಕೆ ಬರುತ್ತೆ ಅದ್ಯಾವುದೂ ನಮಗೆ ಗೊತ್ತಿರೊಲ್ಲ. ಅದು ನಮಗೆ ಬೇಕಾಗೂ ಇಲ್ಲ. ಒಟ್ಟಿನಲ್ಲಿ ಈ ತುದಿಯಲ್ಲಿ ನೀರು ಬರುತ್ತಿರಬೇಕಷ್ಟೇ. ಅದೇ ರೀತಿ ಇದು’– ಹುಡುಗ ಉತ್ತರಿಸಿದ.

ಆತನ ಅರ್ಥಹೀನ ಉತ್ತರಗಳನ್ನು ಮತ್ತೆ ಪ್ರಶ್ನಿಸುತ್ತ ಹುಡುಗನೊಡನೆ ವಾದಕ್ಕಿಳಿಯುವ ಮನಸ್ಸಾಗಲಿಲ್ಲ ನಿಶಾಂತನಿಗೆ. ಜೊತೆಗೆ, ಸಣ್ಣ ಭಯವೊಂದು ತನ್ನನ್ನು ಆವರಿಸುತ್ತಿದೆಯೋ ಎಂಬ ಆತಂಕದೊಂದಿಗೆ ಲಗುಬಗನೆ ಹೋಗಿ ಈತ ತಿನ್ನದೇ ಉಳಿದಿದ್ದ ಮೂರ್ನಾಲ್ಕು ಸುಟ್ಟ ಬ್ರೆಡ್ಡುಗಳನ್ನು ತಂದು ಹುಡುಗನ ಕೈಗಿತ್ತ. ಹುಡುಗ ಮಾತನಾಡದೆ ಅದನ್ನೆತ್ತಿಕೊಂಡು, ಬಿಳಿ ವಸ್ತ್ರ ಹಾಗೂ ಆಟಿಕೆಯನ್ನು ಜೋಳಿಗೆಯಲ್ಲಿ ತುಂಬಿಕೊಂಡು ಹೊರಟುಹೋದ. ಕೇವಲ ಮೂರು ಚೂರು ಬ್ರೆಡ್ಡು ನೀಡಿದರೂ ಯಾವುದೇ ಅಸಮಾಧಾನ ತೋರದ ಹುಡುಗನ ನಿರ್ಲಿಪ್ತತೆ ಇವನನ್ನು ಮತ್ತೂ ಕಸಿವಿಸಿಗೆ ತಳ್ಳಿ; ಗೇಟು ಹಾಕಿ ಬಂದವನೇ ಪಾತ್ರೆಯಲ್ಲಿಯ ನೀರನ್ನು ವಾಷ್ ಬೇಸಿನ್ನಿಗೆ ಚೆಲ್ಲಿ ಬಾಗಿಲು ಹಾಕಿಕೊಂಡ. ಆದಿನ ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಹತ್ತಲಿಲ್ಲ ನಿಶಾಂತನಿಗೆ. ಬೆಳಿಗ್ಗೆ ನಡೆದ ಘಟನೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ನೀರು ಬಂದಿರಬಹುದಾದ ಸಾಧ್ಯತೆಗಳನ್ನೆಲ್ಲ ನಾನಾರೀತಿಯಿಂದ ಲೆಕ್ಕ ಹಾಕತೊಡಗಿದ.

ನಿಶಾಂತನ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಎಲ್ಲವೂ ಆತನ ಯೋಜನೆಯಂತೆಯೇ ನಡೆದಿತ್ತು. ಮನೆ, ಕಾರು, ನೌಕರಿ, ಕೈ ತುಂಬಿ ಚೆಲ್ಲುವಷ್ಟು ಹಣ. ಮೈತ್ರಿಯೊಡನೆ ಆತನಿಗೆ ಯಾವುದೇ ದೊಡ್ಡ ಸಂಘರ್ಷಗಳಿರಲಿಲ್ಲ. ಇಬ್ಬರೂ ಒಂದೇ ಸೂರಿನಡಿಯಲ್ಲಿದ್ದರೂ ಅವರವರ ಜೀವನ ಅವರು ಬದುಕುತ್ತಿದ್ದರು. ಗಂಡ ಹೆಂಡತಿಯ ನಡುವೆ ಈ ಒಂದು ಸಂಬಂಧ ವಿಚಿತ್ರವೆನಿಸಿದರೂ ಅವರಿಬ್ಬರಲ್ಲಿ ಅದು ಸಾಧ್ಯವಾಗಿತ್ತು. ಬಂಧನದ ಹಂಗಿಲ್ಲದವರಿಗೆ ಬಿಡುಗಡೆಯ ಹಂಬಲವಿಲ್ಲದಂತೆ ಅವರು ಒಟ್ಟಿಗಿದ್ದರು. ನಿಶಾಂತನಿಗೆ ಯಾವುದೇ ಕೊರತೆ ಇರಲಿಲ್ಲವಾದ್ದರಿಂದ ಯಾವುದೇ ಸಮಸ್ಯೆಗಳಿರಲಿಲ್ಲ. ಅಥವಾ ಯಾವುದೇ ಕೊರತೆಯಿಲ್ಲದಿರುವುದು, ಕೊರತೆಯೇನೆಂಬುದು ತಿಳಿಯದಿರುವುದೇ ಸಮಸ್ಯೆಯಾಗಿತ್ತೇನೋ. ತಾನು ಅಷ್ಟೇನೂ ಖುಷಿಯಾಗಿಲ್ಲ ಅಂತ ಆತನಿಗೆ ಆಗಾಗ ಅನ್ನಿಸುತ್ತಿತ್ತು. ಅದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿತ್ತು. ಅಮ್ಮನ ಕೊನೆಯ ದಿನಗಳಲ್ಲಿ ಅವಳೊಡನಿರಲಾಗಲಿಲ್ಲ, ಅನೀಷನಿಗೆ ಇನ್ನೂ ಹೆಚ್ಚಿನ ಸಮಯ ಕೊಡಬೇಕಿತ್ತೇನೋ ಅನ್ನಿಸುತ್ತಿತ್ತು.

ಆದರೆ ಅವುಗಳಿಗೆಲ್ಲ ಅವನಲ್ಲಿ ಸಮರ್ಥ ಕಾರಣಗಳಿದ್ದವು. ಆದರೂ there is something missing in life. ಅದೇನೆಂದು ಗೊತ್ತಾಗುತ್ತಿಲ್ಲ. ಬೆಳಿಗ್ಗೆ ಬಂದ ಹುಡುಗ ಮತ್ತೆ ನೆನಪಾದ. ‘ಛೆ, ಅವನನ್ನು ಅಷ್ಟು ಸುಲಭದಲ್ಲಿ ಬಿಡಬಾರದಿತ್ತು’ ಅಂದುಕೊಂಡ. ಅದು ಹೇಗೆ ಆತ ಆ ಆಟಿಕೆಯಿಂದ ನೀರು ತರಿಸಲು ಸಾಧ್ಯ? ಏನೋ ಕಣ್ಕಟ್ಟು ವಿದ್ಯೆ ಇರಬಹುದು ಅಂದುಕೊಂಡರೂ ನೀರನ್ನು ತಾನೇ ಸ್ವತಃ ನೋಡಿದ್ದೇನಲ್ಲ; ಅದನ್ನು ತೆಗೆದುಕೊಂಡು ಹೋಗಿ ಚೆಲ್ಲಿದ್ದು ನಿಜವೇ ಅಲ್ಲವೇ. ಆತನೇನಾದರೂ ಜೋಳಿಗೆಯಲ್ಲಿ ನೀರಿನ ಬಾಟಲಿಯನ್ನೇನಾದರೂ ಇಟ್ಟುಕೊಂಡು ಅದರಿಂದ ಆ ಆಟಿಕೆಗೆ ಸಣ್ಣ ನಳಿಕೆಯನ್ನೇನಾದರೂ ಜೋಡಿಸಿದ್ದಿರಬಹುದೇ. ಅದನ್ನು ಕಂಡುಹಿಡಿಯುವುದು ಬಿಟ್ಟು ಹುಡುಗನನ್ನು ಲಗುಬಗೆಯಿಂದ ಹೊರದಬ್ಬಿದ್ದಕ್ಕೆ ಆತ ಅಸಮಾಧಾನ ಪಟ್ಟುಕೊಂಡ. ಆತ ಮತ್ತೆ ಬರುತ್ತಾನೋ ಇಲ್ಲವೋ. ಬರದಿದ್ದರೂ ನಾನೇ ಈ ಪ್ರದೇಶದಲ್ಲೆಲ್ಲಾ ಹುಡುಕಿ ಆತನನ್ನು ಮತ್ತೆ ಕರೆತರಬೇಕು. ನೀರಿನ ಗುಟ್ಟು ಕಂಡುಹಿಡಿಯಲೇ ಬೇಕು ಎಂದು ನಿರ್ಧರಿಸಿದ.

ಮರುದಿನದಿಂದ ಬಿಡುವು ಸಿಕ್ಕಾಗಲೆಲ್ಲ ಆತ ಅತ್ತಿತ್ತ ತಿರುಗಿ ಆ ಹುಡುಗನಿಗಾಗಿ ಹುಡುಕಿದ. ಆತ ಎಲ್ಲೂ ಸಿಗದೆ ಹೋದಾಗ ಈತನ ನೀರಿನ ಮೂಲ ಕಂಡು ಹಿಡಿಯುವ ಛಲ ಹೆಚ್ಚಾಗತೊಡಗಿತು. ಕೆಲವೊಮ್ಮೆ ಜೀವನದಲ್ಲಿ ಹಿಂದೆ ಎಂದೋ ನಡೆದ ಘಟನೆಗಳೇ ಕರಾರುವಕ್ಕಾಗಿ ಅದೇ ತೆರನಾಗಿ ಮತ್ತೆ ಸಂಭವಿಸಿಬಿಡುತ್ತವಂತೆ. ಅದೇರೀತಿ, ಮೈತ್ರಿಯಿಲ್ಲದ ಒಂದು ಭಾನುವಾರದ ಮುಂಜಾನೆ ನಿಶಾಂತ ಸುಟ್ಟ ಬ್ರೆಡ್ಡಿಗೆ ಶುಗರ್‌ಲೆಸ್ ಜಾಮ್ ಹಚ್ಚಿ ತಿನ್ನುತ್ತ ಕುಳಿತಿರುವಾಗ ಅದೇ ಹುಡುಗ ಗೇಟಿನ ಹೊರಗೆ ನಿಂತು ಚಿಲಕ ಬಡಿದ. ‘ಮಳೆ ಬೇಕಾ ಸಾರ್...’ ನಿಶಾಂತ ರೋಮಾಂಚನಗೊಂಡು ಪುಟಿದೆದ್ದ. ಈ ಬಾರಿಯೂ ಎಲ್ಲವೂ ಅದೇ ರೀತಿ. ಅದೇ ಜೋಳಿಗೆ, ಅದೇ ಚರಕ, ಅದೇ ಶ್ವೇತ ವಸ್ತ್ರ... ಜಿಲ್ಲನೆ ಚಿಮ್ಮುವ ನೀರು. ನಿಶಾಂತ ಎಲ್ಲರೀತಿಯೂ ಪರೀಕ್ಷಿಸಿ ನೋಡಿದ.

ನೀರಿನ ಮೂಲ ಮಾತ್ರ ಕಂಡುಹಿಡಿಯಲಾಗದೇ ಸೋತ; ನಿರಾಶೆಗೊಂಡ. ಸಾಕಷ್ಟು ಬ್ರೆಡ್ಡು, ಬಿಸ್ಕಿಟ್ಟು, ಹಣ್ಣುಗಳನ್ನೆಲ್ಲ ಹುಡುಗನಿಗೆ ನೀಡಿ ‘ನಾಳೆಯೂ ಬರಬೇಕು... ನನಗೆ ನಾಳೆಯೂ ಮಳೆ ಬೇಕು’ ಅಂದ. ಹುಡುಗ ನಿಶಾಂತ ತಂದಿಟ್ಟ ತಿಂಡಿಗಳಲ್ಲಿ ಕೇವಲ ಎರಡು ಬಾಳೆ ಹಣ್ಣುಗಳನ್ನು ಎತ್ತಿಕೊಂಡ. ‘ಎರಡು ಹಣ್ಣುಗಳಿಂದ ಹೊಟ್ಟೆ ತುಂಬುತ್ತದೆಯೇ’ ಎಂದು ನಿಶಾಂತ ಪ್ರಶ್ನಿಸಿದ್ದಕ್ಕೆ– ‘ಸಾರ್... ಜಗತ್ತಿನಲ್ಲಿ ದೇವರು ಪ್ರತಿ ಜೀವಿಗೂ ಬದುಕಲು ಎಷ್ಟು ಬೇಕೋ ಅಷ್ಟು ಮಾತ್ರ ಆಹಾರ ಸೃಷ್ಟಿಸಿರುತ್ತಾನೆ. ನಾವು ನಮಗೆ ಬದುಕಲು ಬೇಕಾದಕ್ಕಿಂತ ಹೆಚ್ಚು ತಿಂದರೆ ಅದು ಮತ್ತೊಬ್ಬರ ಆಹಾರ ಕಸಿದು ತಿಂದಂತೆ. ಇಲ್ಲಿ ನಾನು ಹೊಟ್ಟೆಬಿರಿಯೆ ತಿಂದು ಮಿಕ್ಕಿದ್ದು ಚೆಲ್ಲಿದರೆ; ಅಲ್ಲಿ ಮತ್ಯಾವುದೋ ಮೂಲೆಯಲ್ಲಿ ಯಾರೋ ಒಬ್ಬ ಹಸಿವಿನಿಂದ ಸಾಯುತ್ತಿರುತ್ತಾನೆ... ಅವನ ಪಾಲಿನ ಅನ್ನ ನಾನ್ಯಾಕೆ ತಿಂದು ಚೆಲ್ಲಲಿ. ನನಗೆ ಇವತ್ತಿಗೆ ಇಷ್ಟು ಸಾಕು’ ಅನ್ನುತ್ತಾ ಹೊರಟುಹೋದ.

ನಿಶಾಂತನಿಗೆ ಕುಂತಲ್ಲಿ ನಿಂತಲ್ಲಿ ಆ ವಿಸ್ಮಯವೇ ಕಾಡುತ್ತಿತ್ತು. ಆ ಹುಡುಗನ ಮುಖ ಪದೇ ಪದೇ ನೆನಪಾಗುತ್ತಿತ್ತು. ಆತ ಚಕ್ರ ತಿರುಗಿಸುತ್ತಾ ಕಣ್ಣು ಮುಚ್ಚಿದಾಗ, ಪಕ್ಕಾ ಮರಿ ಗೌತಮ ಬುದ್ಧನಂತೆ ಗೋಚರಿಸುತ್ತಾನಲ್ಲ ಎಂದೆನಿಸಿತು ಆತನಿಗೆ. ಊಹೆಗೂ ನಿಲುಕದ, ವಯಸ್ಸಿಗೂ ಮೀರಿದ ಆತನ ಮಾತುಗಳು, ಧರಿಸಿದ ಬಟ್ಟೆ, ಜೋಳಿಗೆಯೆಲ್ಲಾ ಕೊಳೆಯಾಗಿದ್ದರೂ ಶುಭ್ರವಾಗಿರುವ ಅದೊಂದೇ ಬಟ್ಟೆಯ ಔಚಿತ್ಯ... ಈತ ಸಾಮಾನ್ಯ ಹುಡುಗನಲ್ಲ. ‘ಚಕ್ರ ತಿರುಗಿಸುವಾಗ ಕಣ್ಣೇಕೆ ಮುಚ್ಚಬೇಕು?’ ಎಂದು ಪರೀಕ್ಷಾರ್ಥವಾಗಿ ಈತ ಕೇಳಿದ ಪ್ರಶ್ನೆಗೆ ಹುಡುಗ ಕೊಟ್ಟ ಉತ್ತರ ನೆನೆಪಿಸಿಕೊಂಡ ನಿಶಾಂತ.

‘ಸಾರ್.. ಕಣ್ಣು ತೆರೆದರೆ ಕೋರೈಸುವ ಬೆಳಕು, ಕಣ್ಣು ಕುಕ್ಕುತ್ತೆ. ಇದು ದೇವರು ಕೊಟ್ಟ ಸೂರ್ಯನ ಬೆಳಕಲ್ಲ... ಇದು ಮನುಷ್ಯರು ಸೃಷ್ಟಿಸಿದ ಕೃತಕ ಬೆಳಕು... ಇದು ಸೂರ್ಯ ಇಲ್ಲದಿದ್ದರೂ ಇರುತ್ತೆ. ನೋಡ್ತಾ ಇರಿ ಇವತ್ತು ಬೆಳಕಿನ ಹಿಂದೆ ಓಡುತ್ತಿರುವ ಈ ಜನ ಮುಂದೊಂದು ದಿನ ಕತ್ತಲೆಗಾಗಿ ಹಪಹಪಿಸುವ ದಿನ ಬಂದೇ ಬರುತ್ತೆ. ಬೆಳಕಲ್ಲ ಸತ್ಯ; ಕತ್ತಲೇ ನಿಜವಾದ ಸತ್ಯ...’. ‘ಹೌದು, ಈತ ಯಾವುದೋ ಅವಧೂತನೇ ಇರಬೇಕು. ಮೇಘ ಮಲ್ಹಾರ ರಾಗ ಹಾಡಿ ಮಳೆ ತರಿಸಿದವರಿದ್ದಾರಂತೆ, ಸಾಧುವೊಬ್ಬರು ಎಣ್ಣೆಯಿಲ್ಲದೇ ದೀಪವುರಿಸಿದ್ದು ಪುರಾಣದ ಕಥೆಯೇನಲ್ಲ, ಸಂಗೀತಕ್ಕೆ ಹೂವುಗಳು ಅರಳಿದ್ದಿದೆ; ಹಸು ಕೆಚ್ಚಲಿಂದ ಕ್ಷೀರಧಾರೆ ಹರಿಸಿದ್ದಿದೆ. ವಿಜ್ಞಾನ ಉತ್ತರಿಸದ ಎಷ್ಟೋ ಘಟನೆಗಳು ಆಗಾಗ ನಡೆಯುತ್ತಲೇ ಇರುವಾಗ ಈ ಹುಡುಗ ಯಂತ್ರದಿಂದ ಮಳೆ ತರಿಸುವ ಪವಾಡ ನಿಜವಾಗಿರಬಾರದೇಕೆ....’ ನಿಶಾಂತ ವಿಚಾರಿಸುತ್ತಲೇ ಹೋದ. ತುಸು ಹೊತ್ತಿನ ಹಿಂದೆ ನೀರಿನ ಮೂಲ ಕಂಡು ಹಿಡಿಯಲಾರದ್ದು ತನ್ನ ಸೋಲು ಎನ್ನಿಸಿದ್ದು, ಈಗ ಇದೇ ಮೂಲವಿಲ್ಲದ ನೀರು ತನ್ನ ಗೆಲುವಿನ ಮೂಲವಾಗಬಲ್ಲದು ಎಂದು ನಿಧಾನವಾಗಿ ಅನ್ನಿಸತೊಡಗಿತು ಆತನಿಗೆ.

ಆ ಹುಡುಗನೊಂದಿಗೆ ಗೆಳೆತನ ಬೆಳೆಸಿ ಆತನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿಶಾಂತ ಸಾಕಷ್ಟು ಪರಿಶ್ರಮ, ವೇಳೆ ವ್ಯಯಿಸಿದ್ದ. ಹುಡುಗನ ಕೊಳಕು ಬಟ್ಟೆ ಹರಕು ಚಪ್ಪಲಿ ಬದಲಾಯಿಸಲು ಸಾಧ್ಯವಾಗಲಿಲ್ಲವಾಗಿದ್ದರೂ; ‘ಇದೇ ಯಂತ್ರವನ್ನು ದೊಡ್ಡದಾಗಿ ತಯಾರಿಸಿ, ಇದೇರೀತಿ ಪ್ರಯತ್ನಿಸಿದರೆ ಹೆಚ್ಚು ಹೆಚ್ಚು ನೀರು ತರಬಹುದೇ?’ ಎಂಬ ಪ್ರಶ್ನೆಗೆ ಹುಡುಗ ಕೊಟ್ಟ ಗುಣಾತ್ಮಕ ಉತ್ತರ ನಿಶಾಂತನನ್ನು ಹುರಿದುಂಬಿಸಿತ್ತು. ಈ ಪವಾಡಸದೃಶ ಯಂತ್ರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಇದೇ ಹುಡುಗನಿಂದ ನೀರು ತರಿಸಬಹುದಾದ ಸಾಧ್ಯತೆಯನ್ನು ತಾನು ತೋರಿಸಿಕೊಟ್ಟರೆ ದೇಶಾದ್ಯಂತ ಉಂಟಾಗಬಹುದಾದ ತಲ್ಲಣವನ್ನು ನೆನೆದು ಪುಳಕಿತನಾದ. ಆದರೆ ಸಾಕಷ್ಟು ಪೂರ್ವ ತಯಾರಿಯಿಲ್ಲದೆ, ಇನ್ನೂ ಹೆಚ್ಚಿನ ಸಂಶೋಧನೆಯಿಲ್ಲದೆ ಇದನ್ನು ಬಹಿರಂಗ ಪಡಿಸಲು ಆತ ಸಿದ್ಧನಿರಲಿಲ್ಲ.

ಹಾಗೇ ಹುಡುಗನ ಮೇಲೆ ಆತನಿಗೆ ಸಂಶಯವಿತ್ತು. ಈತ ಇದೇರೀತಿ ‘ಮಳೆ ಬೇಕಾ..?’ ಅನ್ನುತ್ತ ಮತ್ಯಾರದಾದರೂ ಮನೆಯ ಬಾಗಿಲು ತಟ್ಟದೇ ಇರಲಾರ. ಬೇರೆ ಯರಾದರೂ ಈ ಹುಡುಗನಲ್ಲಿಯ ಪ್ರಚ್ಛನ್ನ ಶಕ್ತಿಯನ್ನು ಊಹಿಸಿ ತನಗಿಂತ ಮೊದಲು ಅದರ ಲಾಭ ಪಡೆದುಕೊಂಡುಬಿಟ್ಟರೆ ತನ್ನ ಈವರೆಗಿನ ಶ್ರಮವೆಲ್ಲ ವ್ಯರ್ಥ ಎಂಬುದು ಅವನ ಮನದಲ್ಲಿತ್ತು. ಅದಕ್ಕಾಗಿಯೇ, ತನ್ನ ಹತ್ತಿರದ ಗೆಳೆಯರು, ಆಫೀಸಿನಲ್ಲಿಯ ಕೆಲವು ಮಂದಿ, ತಾನಿರುವ ರಾಯಲ್ ಎಸ್ಟೇಟಿನ ಕೆಲ ಗಣ್ಯರ ಜೊತೆಗೆ, ಒಂದೆರಡು ಮಾಧ್ಯಮದವರನ್ನೂ ಕರೆಸಿ, ಸಣ್ಣ ಕಾರ್ಯಕ್ರಮ ಏರ್ಪಡಿಸಿ, ತನ್ನ ಯೋಜನೆಗಳನ್ನೂ ಅದರಿಂದಾಗಬಹುದಾದ ಲಾಭಗಳನ್ನೂ ತಿಳಿಸುತ್ತ, ಯಾವುದೇ ಮೂಲವಿಲ್ಲದೇ ನೀರು ತರಿಸುವ ಪವಾಡದ ಪ್ರಾಯೋಗಿಕ ಪ್ರದರ್ಶನವನ್ನು ನೀಡಲು ನಿಶ್ಚಯಿಸಿದ. ಪುಟ್ಟ ಕಾರ್ಯಕ್ರಮವಾದರೂ ಅದು ಪ್ರೊಫೆಷನಲ್ ಆಗಿ ಪಕ್ಕಾ ಕಾರ್ಪೊರೇಟ್ ಶೈಲಿಯಲ್ಲಿಯೇ ಆಗಬೇಕು ಎಂದು ನಿರ್ಧರಿಸಿ, ಪಂಚತಾರಾ ಹೋಟೆಲ್ಲಿನ ಮೀಟಿಂಗ್ ಕೋಣೆಯೊಂದನ್ನು ಬಾಡಿಗೆ ಪಡೆದು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದ. ಪ್ರದರ್ಶನಕ್ಕೂ ಮೊದಲು ದಿನಕ್ಕೆರಡು ಬಾರಿ ಹುಡುಗನಿಂದ ನೀರು ತರಿಸುವ ಅಭ್ಯಾಸ ಮಾಡಿಸಿ, ಆತನಿಗೆ ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಎಂಬೆಲ್ಲದುರ ತರಬೇತಿ ನೀಡಿದ.

ಕಾರ್ಯಕ್ರಮದ ದಿನ ಈತನ ಎಣಿಕೆಯಂತೆ ಹದಿನೈದರಿಂದ ಇಪ್ಪತ್ತು ಜನ ನೆರೆದಿದ್ದರು. ನಿಶಾಂತ ಪುಟ್ಟದೊಂದು ಭಾಷಣ ಮಾಡಿ, ‘ನೀವು ಕಣ್ಣಲ್ಲಿ ನಂಬಲಸಾಧ್ಯವಾದ ಪವಾಡವೊಂದನ್ನು ಈಗ ತೋರಿಸಲಾಗುತ್ತದೆ’ ಎನ್ನುತ್ತಿರುವಂತೆ, ಆಕರ್ಷಕ ಉಡುಪು ಧರಿಸಿದ್ದ ಸುಂದರ ತರುಣಿಯೊಬ್ಬಳು ವೇದಿಕೆಗೆ ಆ ಹುಡುಗನನ್ನು ಕರೆತಂದಳು. ಆ ಹುಡುಗ ಮಾಮೂಲಿನಂತೆ ಜೋಳಿಗೆಯಿಂದ ಬಿಳಿಯ ವಸ್ತ್ರವನ್ನು ತೆಗೆದು ಮೇಜಿನಮೇಲೆ ಹಾಸಿ, ಅದರಮೇಲೆ ಯಂತ್ರವನ್ನಿಟ್ಟು ಕಣ್ಮುಚ್ಚಿ ಪೆಡಲ್ಲನ್ನು ತಿರುಗಿಸತೊಡಗಿದ. ಒಂದು... ಎರಡು... ಮೂರು... ಇಷ್ಟರಲ್ಲೇ ಚಿಮ್ಮಬೇಕಿದ್ದ ನೀರು ಹೊರಬರುತ್ತಲೇ ಇಲ್ಲ. ನಾಲ್ಕು.. ಐದು... ಆರು ಸುತ್ತುಗಳು.... ಕಣ್ಮುಚ್ಚಿದಾಗ ಪುಟ್ಟ ಬುದ್ಧನಂತೆ ಕಾಣುತ್ತಿದ್ದ ಹುಡುಗನ ಮುಖದಲ್ಲಿ ಏನೋ ವೇದನೆ ಸ್ಪಷ್ಟವಾಗಿ ಕಾಣುತ್ತಿತ್ತು. ಹುಡುಗ ಚಕ್ರವನ್ನು ತಿರುಗಿಸುತ್ತಲೇ ಹೋದ, ನಿಶಾಂತನ ರಕ್ತದೊತ್ತಡ ಏರತೊಡಗಿತು. ಇಷ್ಟು ಹೊತ್ತಿನವರೆಗೂ ಕುತೂಹಲದಿಂದ ನೋಡುತ್ತಿದ್ದ ಸಭಿಕರು ಗುಸುಗುಡತೊಡಗಿದರು. ‘ಕಮಾನ್... ಕಮಾನ್...’– ಕೈಗಳೆರಡನ್ನೂ ಮುಷ್ಠಿ ಕಟ್ಟಿ ಕದಲಿಸುತ್ತ ಹುಡುಗನನ್ನು ಹುರಿದುಂಬಿಸುತ್ತಿರುವಂತೆ, ಆ ಹುಡುಗನ ಹೆಸರನ್ನೇ ನಾನು ಕೇಳಿ ತಿಳಿದಿಲ್ಲ ಎಂಬ ಅರಿವಾಯಿತು ನಿಶಾಂತನಿಗೆ. ‘ಕಮಾನ್... you can do it... ಮಾಡಪ್ಪಾ ದೇವರೂssss...’ ಎಂದು ಆತ ಹತಾಶೆಯಿಂದ ಉಸುರತೊಡಗಿದ. ಹುಡುಗ ನಿಸ್ತೇಜನಾಗಿ ಕಣ್ಮುಚ್ಚಿ ಚಕ್ರ ತಿರುಗಿಸುತ್ತಲೇ ಇದ್ದ.

ನಿಶಾಂತನಿಗೆ ಹುಡುಗನ ಮೇಲೆ ಕೋಪ ಒತ್ತಿಕೊಂಡು ಬಂದಿತ್ತು. ಇಂಥ ಅವಮಾನ ಆತ ಜೀವನದಲ್ಲಿ ಮೊದಲಬಾರಿಗೆ ಅನುಭವಿಸಿದ್ದ. ಅದರಲ್ಲೂ ಯಾವುದೋ ಬೀದಿಯಲ್ಲಿ ಹೋಗುವ ಭಿಕಾರಿಯನ್ನು ನಂಬಿ ಆತ ಮಾಡುವ ಅಗ್ಗದ ಬ್ಲಾಕ್ ಮ್ಯಾಜಿಕ್ಕಿಗೆ ಮರುಳಾಗಿ ಅದನ್ನು ಎಲ್ಲರೆದುರು ತೋರಿಸ ಹೋದ ತನ್ನ ಮೂರ್ಖತನಕ್ಕೆ ಪರಿತಪಿಸಿದ.

‘ಏನಾಗಿತ್ತು ಧಾಡಿ ನಿನಗೆ..? ನೀರು ಯಾಕೆ ತರಿಸಲಿಲ್ಲ?’ ಹುಡುಗನನ್ನು ಕುಟ್ಟಿ ಪುಡಿಮಾಡುವ ಕೋಪದಲ್ಲಿ ಚೀರಿದ ನಿಶಾಂತ.
‘ಸರ್, ಯಾಕೋ ಗೊತ್ತಿಲ್ಲ, ಮಳೆ ಬರಲೇ ಇಲ್ಲ...’

‘ಅದೇ..ಯಾಕೆ ಅಂತ ಕೇಳಿದ್ದು...’
‘ಯಾಕೋ ಸಾರ್, ತುಂಬಾ ಪ್ರಯತ್ನಿಸಿದೆ... ಮನಸಾಗಲೇ ಇಲ್ಲ’.

‘ಸ್ಟೇಜಿಗೆ ಬರುವ ಮುನ್ನ ಒಮ್ಮೆ ಟ್ರೈ ಮಾಡಿ ನೋಡಿ ಮೆಷಿನ್ನು ಸರಿಯಾಗಿದೆಯೋ ಇಲ್ಲವೋ ನೋಡು ಅಂತ ಹೇಳಿದ್ದೆನಲ್ಲ...?’
‘ಸರ್, ಯಂತ್ರ ಸರಿಯಾಗಿಯೇ ಇತ್ತು’.
‘ಮತ್ತೆ..?’

‘ಸರ್, ಮಳೆ ಬರುತ್ತಿದ್ದುದು ಯಂತ್ರದಿಂದಲ್ಲ... ಮಳೆ ಬರುತ್ತಿದ್ದುದು ಮನಸ್ಸಿನಿಂದ... ಯಾಕೋ ನನಗೆ ಮಳೆ ತರಿಸಲು ಮನಸ್ಸೇ ಆಗಲಿಲ್ಲ’.
ಹುಡುಗ ‘ಯಾಕೋ ಬರಲಿಲ್ಲ, ತಪ್ಪಾಯ್ತು’ ಅಂದಿದ್ದರೆ ನಿಶಾಂತ ಸುಮ್ಮನಾಗಿಬಿಡುತ್ತಿದ್ದನೋ ಏನೋ. ಆದರೆ ಮನಸ್ಸಿನಿಂದ ಮಳೆ ತರಿಸುತ್ತಿದ್ದೆ ಎನ್ನುವ ಆತನ ಅಸಂಬದ್ಧ ಅಧಿಕಪ್ರಸಂಗದ ಉತ್ತರಕ್ಕೆ ನಖಶಿಖಾಂತ ಉರಿದು ಹೋದ.

‘ಮನಸ್ಸಿನಿಂದ ಮಳೆ.... what nonsense...’ ಎಂದವನೇ ಕೈಯೆತ್ತಿ ಛಟೀರನೆ ಹುಡುಗನ ಕೆನ್ನೆಗೆ ಬಾರಿಸಿದ. ಹೊಡೆತದ ನೋವಿಗೆ ಹುಡುಗನ ಕಣ್ಣುಗಳು ಒದ್ದೆಯಾದವು.

‘ಹೊಡೀರೀ ಸಾರ್... ಇನ್ನೂ ಜೋರಾಗಿ ಹೊಡೀರಿ. ನನ್ನ ಕಣ್ಣಲ್ಲೇ ಮಳೆ ಬರುತ್ತೆ. ಆಗ ಅದನ್ನೇ ಮಾರಬಹುದು ನೀವು’ ಎನ್ನುತ್ತ ಹುಡುಗ ಗಹಗಹಿಸಿ ನಗತೊಡಗಿದ.

ಆ ನಗು ದೊಡ್ಡದಾಗುತ್ತ ದೊಡ್ದದಾಗುತ್ತಾ, ಮನೆಯ ನುಣುಪು ಗೋಡೆಗಳಿಗೆಲ್ಲ ತಾಗಿ ಪ್ರತಿಫಲಿಸಿ, ಹೊರಹೊಮ್ಮಿ, ಮನೆಯ ಅಂಗಳದ ರಾಕ್ ಗಾರ್ಡನ್ನಿನ ವಿವಿಧ ಆಕಾರದ ಕಲ್ಲುಗಳಿಗೆಲ್ಲ ಬಡಿದು, ನಗುವಿನ ಶಬ್ದ ದುಪ್ಪಟ್ಟಾಗಿ ಆಕಾಶಕ್ಕೂ ರಾಚಿ, ಸಹಸ್ರ ದಿಕ್ಕುಗಳಿಂದಲೂ ಪ್ರತಿಧ್ವನಿಸುತ್ತಿರುವ ಭಾವಕ್ಕೆ ತತ್ತರಿಸಿ ಹೋದ ನಿಶಾಂತ. ಹೊಡೆಯಲು ಎತ್ತಿದ ಕೈ ಶಕ್ತಿ ಕಳೆದುಕೊಳ್ಳುತ್ತಿರುವಂತೆನಿಸಿ, ಜೊತೆಗೇ ತಲೆ ಸುತ್ತಿದಂತಾಗಿ ನಿಂತಲ್ಲೇ ಕುಸಿದು ಬಿದ್ದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.