ADVERTISEMENT

ಮೂಳೆ ಮಾಂಸದ ತಡಿಕೆ... ಮಡಿಕೆ...

ವಿಶಾಖ ಎನ್.
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

 `ಈ ಸಿಕ್ಸ್‌ಪ್ಯಾಕು ಗೀಕು ಮಾಡ್ಕೋತಾರಲ್ಲ, ಅದು ಅಷ್ಟು ಸಲೀಸೇ? ನಮ್ಮ ವಯಸ್ಸಿನೋರು ಅದನ್ನ ಮಾಡ್ಬೋದೇ? ಅದಿಲ್ಲದೇ ಇದ್ದರೆ ಜನ ಸ್ಕ್ರೀನ್ ಮೇಲೆ ನಮ್ಮನ್ನ ನೋಡೋಲ್ವೆ? ಬರೀ ದೇಹ ತೋರಿಸಿದ್ರೆ ಸಾಕೇ; ಆಕ್ಟಿಂಗು ಗೀಕ್ಟಿಂಗು ಮಾಡೋದ್ ಬ್ಯಾಡ್ವೇ? ಏನ್ ಟೈಮ್ ಬಂತಪ್ಪಾ... ಕಾಲಾಯ ತಸ್ಮೈ ನಮಃ~- ಜಗ್ಗೇಶ್ ಹೀಗೆ ತಮ್ಮದೇ ಶೈಲಿಯಲ್ಲಿ ಹೇಳಿ ನಿಟ್ಟುಸಿರಿಟ್ಟಿದ್ದರು.

ಅಭಿನಯವನ್ನಷ್ಟೇ ನೆಚ್ಚಿಕೊಂಡು ಎರಡೂವರೆ ದಶಕ ನಟನಾಗಿ ಏಗಿದ್ದ ಅವರಿಗೆ ಈಚೀಚೆಗೆ ಭಾರತೀಯ ಚಿತ್ರರಂಗದ ಬಹುತೇಕ ನಟರು ಮೈಹುರಿ ಮಾಡಿಕೊಂಡಿದ್ದು ಬೆರಗಾಗಿ ಕಂಡಿತ್ತು. ಎಲ್ಲಾ ನಟರಿಗೂ ಅದು ಜರೂರಾಗಿಬಿಟ್ಟರೆ ಏನು ಗತಿ ಎಂಬ ಆತಂಕವೂ ಆ ಮಾತಿನಲ್ಲಿ ಅಡಗಿತ್ತು. ಅದಕ್ಕೇ ಅವರು ತಮ್ಮ ಮಗನಿಗೆ ಮೈಹುರಿ ಮಾಡಿಕೊಳ್ಳುವ ಸಲಹೆ ಕೊಟ್ಟರು. ಆದರೆ, ಈಗಲೂ ಜಗ್ಗೇಶ್ ನಟನೆಯನ್ನಷ್ಟೇ ನಂಬಿಕೊಂಡಿದ್ದಾರೆ. ದೇಹ ತಿದ್ದುವುದು ಅವರಿಗೆ ಆಗದ ಮಾತು.

ಜಗ್ಗೇಶ್ ಮಾತನ್ನೇ ಪ್ರಸ್ತಾವನೆಯಾಗಿ ಹೇಳಲು ಕಾರಣವಿದೆ. ಅವರು ಮಲಯಾಳಂನ `ಬಾಡಿಗಾರ್ಡ್~ ಚಿತ್ರದ ಅದೇ ಹೆಸರಿನ ಕನ್ನಡ ರೀಮೇಕ್‌ನಲ್ಲಿ ನಟಿಸಿದರು. ಆ ಚಿತ್ರ ತೆರೆಕಾಣುವ ಸಂದರ್ಭದ ಕೊಂಚ ಆಚೀಚೆ ಹಿಂದಿಯಲ್ಲಿ ಅದೇ ಹೆಸರಿನ ಅದೇ ಕತೆಯ ಸಿನಿಮಾ ಬಂತು.

ಅದರ ನಾಯಕ ಸಲ್ಮಾನ್ ಖಾನ್; ಜಗ್ಗೇಶ್‌ಗಿಂತ ತುಸು ಕಡಿಮೆ ವಯಸ್ಸಿನ ನಟ. ಈ ಸಲ್ಮಾನ್ ಖಾನ್ ಬಗ್ಗೆ ಜ್ಞಾನಪೀಠದ ಗೌರವಕ್ಕೆ ಪಾತ್ರರೂ ಆದ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಒಂದು ಅಭಿಪ್ರಾಯ ಹಂಚಿಕೊಂಡಿದ್ದರು- `ಸಲ್ಮಾನ್ ನಟಿಸುತ್ತಾನೆ ಎನ್ನಿಸುವುದೇ ಇಲ್ಲ. ಅವನು ಸುಮ್ಮನೆ ತನ್ನ ಹುರಿಗಟ್ಟಿದ ದೇಹ ತೋರುತ್ತಾ ನಿಲ್ಲುತ್ತಾನೆ.

ಕ್ಲೋಸಪ್ ಶಾಟ್ಸ್‌ನಲ್ಲಿ ಅದನ್ನೆಲ್ಲಾ ತೋರುತ್ತಾನೆ. ನಟನೆಯನ್ನೇ ಮಾಡದೆ ಹಿಟ್ ಆದ ಇತ್ತೀಚಿನ ನಾಯಕ ಬಹುಶಃ ಸಲ್ಮಾನ್ ಒಬ್ಬನೇ ಇರಬೇಕು~.

ಜಗ್ಗೇಶ್ ಒಳ್ಳೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಸಲ್ಮಾನ್ ದೇಹವನ್ನೇ ದೇಗುಲ ಎಂದುಕೊಂಡವ ಎಂಬುದರಲ್ಲೂ ಅನುಮಾನವಿಲ್ಲ. ಆದರೆ, `ಬಾಡಿಗಾರ್ಡ್~ ವಿಷಯದಲ್ಲಿ ಸಲ್ಮಾನ್ ದೇಹದೇಗುಲಕ್ಕೆ ಗೆಲುವು ಸಂದಿತು.

ಇಲ್ಲಿ, ಜಗ್ಗೇಶ್ ಅಭಿನಯ ಸಾಮರ್ಥ್ಯವೊಂದಕ್ಕೇ ಸಿನಿಮಾ ಗೆಲ್ಲಿಸಲು ಆಗಲಿಲ್ಲ. ಚಿತ್ರರಂಗದಲ್ಲಿ ದೇಹ ಮುಖ್ಯವಾಗುತ್ತಿರುವ ದಿನಗಳಿವು. ಅದನ್ನು ನೋಡನೋಡುತ್ತಲೇ ತಾವು ಆರಾಧಿಸುವ ನಟರಂತೆಯೇ ಮೈಕಟ್ಟು ರೂಪಿಸಿಕೊಳ್ಳುವ ಹುಕಿ ಇಂದಿನ ಯುವಜನತೆಯಲ್ಲಿ ಅನೇಕರಿಗೆ ಇದೆ. ಅದಕ್ಕೇ ಮಲ್ಟಿ ಜಿಮ್‌ಗಳು, ಜಿಮ್‌ಗಳು ಭರ್ತಿಯಾಗುತ್ತಿರುವುದು.

ಯೂಟ್ಯೂಬ್‌ನಂಥ ವಿಡಿಯೋದರ್ಶನ ಮಾಡಿಸುವ ವೆಬ್‌ಸೈಟ್‌ಗಳಲ್ಲಿ ಖ್ಯಾತ ನಟ-ನಟಿಯರು ಕಸರತ್ತು ಮಾಡುವ ನಿಮಿಷಗಟ್ಟಲೆಯ ವಿಡಿಯೋಗಳು ನೋಡಸಿಗುತ್ತವೆ.

`ಗಜಿನಿ~ ಚಿತ್ರಕ್ಕೆ ಅಮೀರ್ ಖಾನ್ `ಎಯ್ಟ ಪ್ಯಾಕ್~ ಮಾಡಿದ ಪ್ರಕ್ರಿಯೆಯನ್ನು ಹಂತಹಂತವಾಗಿ ತೋರಿಸುವ ವಿಡಿಯೋ ತುಣುಕುಗಳನ್ನು ಈಗಲೂ ನೋಡುತ್ತಾ, ಅದನ್ನೇ ಅನುಕರಿಸಿ ತಮ್ಮ ಮೈ ಹುರಿಗೊಳಿಸಿಕೊಳ್ಳುತ್ತಿರುವ ಪಡ್ಡೆ ಹುಡುಗರಿದ್ದಾರೆ.

ಹೃತಿಕ್ ರೋಷನ್ ತಮ್ಮ ತೋಳುಗಳನ್ನು ಅಷ್ಟು ಉಬ್ಬುಬ್ಬಾಗಿ ಕಾಪಾಡಿಕೊಳ್ಳಲು ಎಷ್ಟು ತೂಕ ಎತ್ತುತ್ತಾರೆ ಎಂಬುದನ್ನು ನೋಡಿ ಚರ್ಚೆ ನಡೆಸುವವರಿದ್ದಾರೆ. `ಸಿಂಗಂ~ ರೀಮೇಕ್ ಚಿತ್ರಕ್ಕಾಗಿ ಅಜಯ್ ದೇವಗನ್ ನಲವತ್ತು ದಾಟಿದ ವಯಸ್ಸಿನಲ್ಲೂ ಮೈ ಕಡೆದುಕೊಂಡ ಪರಿಯನ್ನು ನೋಡಿ ಬೆರಗಾಗುವವರಿದ್ದಾರೆ.

ಮಗನ ಬೇಡಿಕೆ ಈಡೇರಿಸಲೆಂದು ಶಾರುಖ್ ಖಾನ್ ತನಗಿಷ್ಟವಿಲ್ಲದಿದ್ದರೂ `ಸಿಕ್ಸ್‌ಪ್ಯಾಕ್~ ಹೊಟ್ಟೆ ಮಾಡಿಕೊಂಡು `ದರ್ದೆ ಡಿಸ್ಕೊ~ ಮಾಡಿದ್ದು ಕೂಡ ಈ ಕಾಲದ ಸತ್ಯ. ಇಷ್ಟೇ ಯಾಕೆ, `ಅಣ್ಣಾ ಬಾಂಡ್~ ಚಿತ್ರಕ್ಕೆಂದು ಪುನೀತ್ ಕೂಡ ಹೊಟ್ಟೆಯನ್ನು ಪದರಗಟ್ಟಿಸಿಕೊಂಡು ಶಸ್ತ್ರ ಹಿಡಿದು ನಿಂತು ಪೋಸ್ ಕೊಟ್ಟಿದ್ದೂ ಆಗಿದೆ.

ಪ್ರಾರಂಭ
ಹಾಗೆ ನೋಡಿದರೆ `ಬಾಡಿಬಿಲ್ಡಿಂಗ್~ ಎಂಬ ಪರಿಕಲ್ಪನೆ 19ನೇ ಶತಮಾನಕ್ಕೆ ಮುಂಚೆ ಇರಲಿಲ್ಲ. ಪ್ರಷಿಯಾದ ಕೋನಿಂಗ್ಸ್‌ಬರ್ಗ್‌ನ (ಈಗಿನ ರಷ್ಯಾದ ಕಲಿನಿನ್‌ಗ್ರಾಡ್) ಯೂಗೆನ್ ಸ್ಯಾಂಡೋ ದೇಹ ಪ್ರದರ್ಶನವನ್ನೇ ಒಂದು ಕಲೆ ಎಂಬಂತೆ ಪ್ರತಿಪಾದಿಸಿದ.


ಅವನನ್ನು `ಆಧುನಿಕ ಬಾಡಿಬಿಲ್ಡಿಂಗ್‌ನ ಪಿತಾಮಹ~ ಎಂದೇ ಕರೆಯುತ್ತಾರೆ. ಎಲ್ಲರೂ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸ್ವಲ್ಪ ಹೊತ್ತು ಪಾತ್ರ ಹುರಿಗಟ್ಟಿಸಿದ ತಮ್ಮ ಸ್ನಾಯುಗಳನ್ನು ತೋರುತ್ತಿದ್ದರು.
 
ಆದರೆ, ಸ್ಯಾಂಡೋ ಕೆಲವು ಹೆಜ್ಜೆಗಳನ್ನು ಮುಂದಿಟ್ಟ. ಅವನು ದೇಹದಾರ್ಢ್ಯ ಸ್ಪರ್ಧೆ ಇಲ್ಲದೇ ಇರುವಾಗಲೂ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿಕೊಂಡ. ಫ್ಲೊರೆನ್ಸ್ ಜೀಗ್‌ಫೀಲ್ಡ್ ಎಂಬ ತನ್ನ ಮೇನೇಜರ್‌ನ ನೆರವಿನಿಂದ ದೊಡ್ಡದೊಂದು ವೇದಿಕೆ ನಿರ್ಮಿಸಿ, ಅದರ ಮೇಲೆ ನಿಂತು ತನ್ನ ಬಲಾಢ್ಯ ದೇಹದ ಸ್ನಾಯುಗಳ ರೂಪುರೇಷೆಯನ್ನು ಇಂಚಿಂಚಾಗಿ ವಿವಿಧ ಭಂಗಿಗಳಲ್ಲಿ ತೋರುತ್ತಾ ನಿಲ್ಲುತ್ತಿದ್ದ.

ಬರಬರುತ್ತಾ ಅವನ ದೇಹ ಪ್ರದರ್ಶನದ ಮೋಹ ಹೆಚ್ಚಿತು. ಕೆಲವು ಪ್ರತಿಷ್ಠಿತ ದೇಹದಾರ್ಢ್ಯ ಸ್ಪರ್ಧೆಗಳು ನಡೆದಾಗ, ಪಕ್ಕದಲ್ಲೇ ಇನ್ನೊಂದು ವೇದಿಕೆ ನಿರ್ಮಿಸಿಕೊಂಡು ಅಲ್ಲಿ ಸ್ಯಾಂಡೋ ವಿಶೇಷ ಪ್ರದರ್ಶನ ನೀಡುತ್ತಿದ್ದ. ದೇಹದಾರ್ಢ್ಯ ಸ್ಪರ್ಧೆ ನೋಡಲು ಬರುತ್ತಿದ್ದವರಿಗಿಂತ ಹೆಚ್ಚು ಜನ ಇವನ ಪ್ರದರ್ಶನಕ್ಕೆಂದು ಸೇರುತ್ತಿದ್ದರು.

ಸ್ಯಾಂಡೋ ಎಷ್ಟು ಜನಪ್ರಿಯನಾದನೆಂದರೆ, ಅವನ ದೇಹಸಿರಿಯ ಕಥಾನಕವನ್ನೊಳಗೊಂಡ `ದಿ ಗ್ರೇಟ್ ಜೀಗ್‌ಫೀಲ್ಡ್~ ಎಂಬ ಸಿನಿಮಾ 1936ರಲ್ಲಿ ತೆರೆಕಂಡಿತು. ಆಸ್ಕರ್ ಪ್ರಶಸ್ತಿಯ ಗೌರವ ಸಂದ ಈ ಸಂಗೀತಮಯ ಚಿತ್ರದಲ್ಲಿ ನ್ಯಾಟ್ ಪೆಂಡಲ್‌ಟನ್ ಎಂಬುವನು ಸ್ಯಾಂಡೋ ಪಾತ್ರ ನಿಭಾಯಿಸಿದ್ದ.

ಆ ಪಾತ್ರ ನಿರ್ವಹಣೆಗಾಗಿ ಅವನು ಎರಡು ವರ್ಷ ಸತತವಾಗಿ ಮೊದಲೇ ಹುರಿಗಟ್ಟಿದ್ದ ತನ್ನ ಮೈಯನ್ನು ಇನ್ನೂ ದಂಡಿಸಿ ಸ್ಯಾಂಡೋ ದೇಹಾಕಾರಕ್ಕೆ ಹೋಲುವಂತೆ ಮಾರ್ಪಡಿಸಿ ಕೊಂಡಿದ್ದ.

ಯೂಗೆನ್ ಸ್ಯಾಂಡೋ ದೇಹದ ಬಗ್ಗೆ ಜನ ಅಷ್ಟೆಲ್ಲಾ ಮಾತನಾಡಿದ್ದು ಯಾಕೆಂದರೆ, ಗ್ರೀಕ್ ಹಾಗೂ ರೋಮನ್ ವೀರರ ಪ್ರತಿಮೆಗಳ ದೇಹಾಕಾರ ಅವನಿಗಿತ್ತು. ಇಂಥ ದೇಹವನ್ನು ದೇಹದಾರ್ಢ್ಯ ಪರಿಣತರು `ಗ್ರೇಸಿಲಿಯನ್~ ಎಂದು ಕರೆಯುತ್ತಿದ್ದರು.

ಸೆಪ್ಟೆಂಬರ್ 14, 1901ರಲ್ಲಿ ಸ್ಯಾಂಡೋ ಮೊದಲ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಿದ. ಅದನ್ನು `ಗ್ರೇಟ್ ಕಾಂಪಿಟಿಷನ್~ ಎಂದು ಕರೆದ. ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ನಡೆದ ಆ ಸ್ಪರ್ಧೆಯಲ್ಲಿ ಖುದ್ದು ಸ್ಯಾಂಡೋ, ಚಾರ್ಲ್ಸ್ ಲಾಸ್ ಹಾಗೂ ಸರ್ ಆರ್ಥರ್ ಕೋನನ್ ಡಾಯ್ಲ ತೀರ್ಪುಗಾರರಾಗಿದ್ದರು. ಇಂಗ್ಲೆಂಡ್‌ನ ವಿಲಿಯಮ್ ಎಲ್. ಮುರ‌್ರೆ ಎಂಬಾತ ಆ ಸ್ಪರ್ಧೆಯ ವಿಜೇತ.

ಅವನಿಗೆ ಸ್ಯಾಂಡೋ ತನ್ನದೇ ಕಂಚಿನ ಪ್ರತಿಮೆ ಮಾಡಿಸಿ ಪ್ರಶಸ್ತಿಯ ರೂಪದಲ್ಲಿ ವಿತರಿಸಿದ. ಈಗ ಅದೇ ಸ್ಪರ್ಧೆ `ಮಿಸ್ಟರ್ ಒಲಿಂಪಿಯಾ~ ಆಗಿದೆ. 1977ರಲ್ಲಿ ಪ್ರಾರಂಭವಾದ `ಮಿಸ್ಟರ್ ಒಲಿಂಪಿಯಾ~ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಯ ರೂಪದಲ್ಲಿ ಕೊಡುವುದು ಕೂಡ ಸ್ಯಾಂಡೋನ ಕಂಚಿನ ಪ್ರತಿಮೆಗಳನ್ನೇ.

ADVERTISEMENT

ಸಿನಿಮಾ
ಸ್ಯಾಂಡೋನ ಜನಪ್ರಿಯತೆ ಅಮೆರಿಕಕ್ಕೂ ಹಬ್ಬಿತು. ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ 1904, ಜನವರಿ 16ರಂದು ದೇಶದ ಮೊದಲ ದೇಹದಾರ್ಢ್ಯ ಸ್ಪರ್ಧೆ ನಡೆದದ್ದು.

ಅಲ್ ಟ್ರೆಲೋರ್ ಎಂಬುವನು ಆ ಸ್ಪರ್ಧೆಯಲ್ಲಿ ಗೆದ್ದು, ಒಂದು ಸಾವಿರ ಡಾಲರ್ ಮೊತ್ತವನ್ನು ಬಹುಮಾನವಾಗಿ ಪಡೆದ. ಅಮೆರಿಕದಲ್ಲಿ ಅಲ್ ಟ್ರೆಲೋರ್ ಜನಪ್ರಿಯನಾದ. ಸ್ಪರ್ಧೆ ನಡೆದ ಮೂರೇ ವಾರಗಳ ನಂತರ ಅವನ ಕುರಿತು ಥಾಮಸ್ ಎಡಿಸನ್ ಎಂಬುವನು ಸಿನಿಮಾ ಮಾಡಿದ. ಅದಕ್ಕೂ ಕೆಲವು ವರ್ಷಗಳ ಮುಂಚೆಯಷ್ಟೇ ಇದೇ ಥಾಮಸ್, ಸ್ಯಾಂಡೋ ಬಗ್ಗೆ ಕೂಡ ಎರಡು ಚಲನಚಿತ್ರಗಳನ್ನು ಮಾಡಿದ್ದ. ನಾಯಕರ `ಬಾಡಿಬಿಲ್ಡಿಂಗ್~ ವಸ್ತುಗಳನ್ನಿಟ್ಟು ಕೊಂಡು ಸತತ ಮೂರು ಚಿತ್ರಗಳನ್ನು ಮಾಡಿದ ಸಾಧಕ ಎಂಬ ಅಗ್ಗಳಿಕೆ ಅವನದ್ದಾಯಿತು.

ಪಶ್ಚಿಮದ ದೇಶಗಳಲ್ಲಿ ದೇಹದೇಗುಲದ ಈ ಪರಿಕಲ್ಪನೆ ವ್ಯಾಪಕವಾದ ಬಗೆ ಇದು. ದೇಹವನ್ನು ಹುರಿಗಟ್ಟಿಸಿಕೊಂಡೂ ಆರೋಗ್ಯವಾಗಿರುವುದು ಹೇಗೆ ಎಂದು ಸಲಹೆ ಕೊಡುವಂಥ ಹಲವು ಪುಸ್ತಕಗಳನ್ನು ಬರೆದ ಅರ್ಲ್ ಲೀಡರ್‌ಮನ್, `ಪೋಸಿಂಗ್ ಕಲೆಯ ಪ್ರತಿಪಾದಕ~ ಎಂದೇ ಹೆಸರಾದ ಫಿನ್ ಹೆಟರ್‌ನಲ್, ದೇಹದ ಆದ್ಯತೆಯ ಕಾರಣಕ್ಕೆ ಪ್ರೇಮಿಯನ್ನು ದೂರ ಮಾಡಿಕೊಂಡ ಜಾರ್ಜ್ ಎಫ್ ಯೊವೆಟ್ ಮೊದಲಾದವರು ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಹೆಸರುವಾಸಿಯಾದ ದೇಹದಾರ್ಢ್ಯ ಪಟುಗಳು.

ಅಲನ್ ಸಿ. ಮೀಡ್ ಎಂಬುವನಂತೂ ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಒಂದು ಕಾಲು ಕಳೆದುಕೊಂಡರೂ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕರನ್ನು ಚಕಿತರನ್ನಾಗಿಸಿದ್ದ.

1950ರ ದಶಕದಲ್ಲಿ ಕ್ರೀಡೆಗಳಿಗೆ ಸೇರುವವರು ಮೊದಲು ದೇಹವನ್ನು ದಂಡಿಸಿಕೊಂಡು ಹೋಗುವ ಪರಿಪಾಠ ಶುರುವಾಯಿತು. ಚಾರ್ಲ್ಸ್ ಅಟ್ಲಾಸ್ ನೀಡುತ್ತಿದ್ದ ಸ್ನಾಯು ಹುರಿಗಟ್ಟಿಸುವ ತರಬೇತಿಯು ಜನಪರಿಯವಾದದ್ದೇ ಅಲ್ಲದೆ ಅದನ್ನೇ ವಸ್ತುವಾಗಿ ಉಳ್ಳ ಕೆಲವು ಕಾಮಿಕ್‌ಗಳು ಕೂಡ ಪ್ರಕಟಗೊಂಡವು.

1970ರ ದಶಕದಲ್ಲಿ ದೇಹದೇಗುಲದ ಪೂಜಾರಿಯಾಗಿ ಮೆರೆದದ್ದು ನಟ ಅರ್ನಾಲ್ಡ್ ಶ್ವಾಜೆನೆಗರ್. 1977ರಲ್ಲಿ ತೆರೆಕಂಡ `ಪಂಪಿಂಗ್ ಐರನ್~ ಚಿತ್ರ ಜನಪ್ರಿಯವಾದ ನಂತರ ಅಂತರರಾಷ್ಟ್ರೀಯ ದೇಹದಾರ್ಢ್ಯ ಹಾಗೂ ಫಿಟ್‌ನೆಸ್ ಫೆಡರೇಷನ್ (ಐಎಫ್‌ಬಿಬಿ) ಹೆಚ್ಚು ಜನರನ್ನು ಆಕರ್ಷಿಸತೊಡಗಿತು. ಅಮೆಚೂರ್ ಅಥ್ಲೆಟಿಕ್ ಯೂನಿಯನ್ (ಎಎಯು) ಚಟುವಟಿಕೆಗಳಿಗೆ ಹಿನ್ನಡೆ ಉಂಟಾಯಿತು.

ಸಾಂಸ್ಥಿಕ ಚೌಕಟ್ಟು
`ದಿ ನ್ಯಾಷನಲ್ ಫಿಸಿಕ್ ಕಮಿಟಿ~ (ಎನ್‌ಪಿಸಿ) ರಚನೆಯಾದದ್ದು 1981ರಲ್ಲಿ. ಅಮೆಚೂರ್ ಅಥ್ಲೆಟಿಕ್ ಫೆಡರೇಷನ್‌ನ ಅಧ್ಯಕ್ಷ ಗಾದಿಯಿಂದ ಇಳಿದ ನಂತರ ಜಿಮ್ ಮ್ಯಾನಿಯನ್ ಇದನ್ನು ಹುಟ್ಟುಹಾಕಿದ. 1990ರಲ್ಲಿ ವಿನ್ಸ್ ಮಕ್‌ಮೋಹನ್ ವಿಶ್ವ ಬಾಡಿಬಿಲ್ಡಿಂಗ್ ಫೆಡರೇಷನ್ (ಡಬ್ಲ್ಯುಬಿಎಫ್) ಸ್ಥಾಪಿಸುತ್ತಿರುವುದಾಗಿ ಪ್ರಕಟಿಸಿದ.

`ಡಬ್ಲ್ಯುಡಬ್ಲ್ಯುಎಫ್~ ಶೈಲಿಯ ಪ್ರದರ್ಶನ ಕಲೆಯಾಗಿ ದಾಹದಾರ್ಢ್ಯ ಪಟುಗಳನ್ನು ಬಿಂಬಿಸುವುದು ಅವನ ಉದ್ದೇಶವಾಗಿತ್ತು. ಗ್ಯಾರಿ ಸ್ಟ್ರೈಡಮ್ ಎಂಬುವನು ಡಬ್ಲ್ಯುಬಿಎಫ್ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಜನಪ್ರಿಯನಾದ.
 

ಆದರೆ, ಕೆಲವೇ ಸ್ಪರ್ಧಿಗಳು ಪದೇಪದೇ ಗೆಲ್ಲುತ್ತಿದ್ದುದರಿಂದ ಸ್ಪರ್ಧೆ ಏಕತಾನ ಎನ್ನಿಸತೊಡಗಿತು. ವಿಶ್ವ ಬಾಡಿಬಿಲ್ಡಿಂಗ್ ಫೆಡರೇಷನ್ (ಐಎಫ್‌ಬಿಬಿ) ಸ್ಟಾರ್‌ಗಳ ಸಂಖ್ಯೆ ನಿಧನಿಧಾನವಾಗಿ ಏರತೊಡಗಿದ್ದೇ 2000ದಲ್ಲಿ ಒಲಿಂಪಿಕ್ ಸ್ಪರ್ಧೆಯಲ್ಲೂ ದೇಹದಾರ್ಢ್ಯಕ್ಕೆ ಅವಕಾಶ ಕೊಡುವ ತೀರ್ಮಾನವಾಯಿತು.

ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ) ಮನ್ನಣೆಯೂ ಸಿಕ್ಕಿತು.
1970ರ ದಶಕದ ನಂತರ ಸಿನಿಮಾ ನಾಯಕರಲ್ಲೂ ದೇಹದಾರ್ಢ್ಯದ ಮೋಹ ಹೆಚ್ಚಾಗತೊಡಗಿತು.

ಇಲ್ಲೂ ಇತ್ತು
ಅಷ್ಟು ಹೊತ್ತಿಗೆ ಕನ್ನಡ ಸಿನಿಮಾರಂಗದಲ್ಲಿ ರಾಜ್‌ಕುಮಾರ್ ತಮ್ಮ ಹುರಿಗಟ್ಟಿದ ದೇಹದಿಂದಲೂ ಗುರುತಾಗಿದ್ದರು. `ಜಗ ಮೆಚ್ಚಿದ ಮಗ~ ಚಿತ್ರದಲ್ಲಿ ಕೈಗಳನ್ನು ಕಟ್ಟಿಸಿಕೊಂಡ ದೃಶ್ಯದಲ್ಲಿ ಕಾಣುವ ಅವರ ದೇಹಸಿರಿ `ಸಿಕ್ಸ್ ಪ್ಯಾಕ್~ಗಿಂತ ಕಡಿಮೆ ಏನೂ ಇರಲಿಲ್ಲ.

`ಕಾಡಿನರಾಜ~ದಲ್ಲಿ ಜೀಪ್‌ಹಿಡಿದೆತ್ತುವ ಟೈಗರ್ ಪ್ರಭಾಕರ್ ಅವರದ್ದೂ ಕಸರತ್ತಿನ ದೇಹ. ಶಂಕರ್‌ನಾಗ್ ಕೂಡ ದೇಹವನ್ನು ದೇಗುಲ ಎಂದು ನಂಬಿದ್ದವರೇ. 16ನೇ ವಯಸ್ಸಿನ ತಮ್ಮ ಫೋಟೋಗಳನ್ನು ನೋಡಿದರೆ ಆಗಲೇ ತಮಗೆ `ಸಿಕ್ಸ್ ಪ್ಯಾಕ್~ ಇತ್ತು ಎಂದು ಅರ್ಜುನ್ ಸರ್ಜಾ ಈಚೆಗೆ ಹೇಳಿಕೊಂಡಿದ್ದರು.

`ಸಿಕ್ಸ್‌ಪ್ಯಾಕ್~ ಮಾಡುವುದು ಎಷ್ಟು ಕಷ್ಟವೋ ಅದನ್ನು ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಅಮೀರ್ ಖಾನ್ `ಗಜನಿ~ ಚಿತ್ರಕ್ಕೆ `ಎಯ್ಟಪ್ಯಾಕ್~ ಮಾಡಲು ಬರೋಬ್ಬರಿ ಹತ್ತು ತಿಂಗಳು ತೆಗೆದುಕೊಂಡರು. ನಿರ್ದೇಶಕ ಮುರುಗದಾಸ್, ಡಯಟಿಷನ್, ತರಬೇತುದಾರ ಎಲ್ಲರ ಸಮ್ಮುಖದಲ್ಲಿ ನೋವು ಅನುಭವಿಸುತ್ತಲೇ ಅಮೀರ್ ದೇಹಾಕಾರ ಕಡೆದುಕೊಂಡಿರುವ ಕಥಾನಕ ಒಂದು ಸಿನಿಮಾದಷ್ಟೇ ರೋಚಕ.

ಅಮೀರ್ ದೇಹ ಹುರಿ ಮಾಡುವುದನ್ನು ಒಂದೊಮ್ಮೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ನೋಡಿಕೊಂಡು ಹೋಗಿದ್ದರಂತೆ. ಸದಾ ವ್ಯಾಯಾಮ ಮಾಡುವ ಪುನೀತ್ ರಾಜ್‌ಕುಮಾರ್ ತಮ್ಮ ಕಾಲುಗಳ ಬಲಕ್ಕೆ ಹೆಚ್ಚು ಒತ್ತು ಕೊಟ್ಟವರು.

ಲೀಲಾಜಾಲವಾಗಿ ನೃತ್ಯ ಕೂಡ ಮಾಡಬೇಕಾದದ್ದರಿಂದ ಅವರಿಗಿದು ಆದ್ಯತೆ. ಈಗ `ಅಣ್ಣಾ ಬಾಂಡ್~ ಚಿತ್ರದಲ್ಲಿ ಅವರ ಇನ್ನೂ ಬಿಗಿಯಾದ ದೇಹ ನೋಡುವ ಅವಕಾಶ ಅಭಿಮಾನಿಗಳಿಗೆ. ತೆಲುಗಿನ ಅಲ್ಲು ಅರ್ಜುನ್, ಚಿರಂಜೀವಿ ಪುತ್ರ `ಮಗಧೀರ~ದ ರಾಮ್‌ ಚರಣ್ ತೇಜ, ತಮಿಳಿನ ಸೂರ್ಯ, ವಿಕ್ರಮ್ ಎಲ್ಲರೂ ಒಂದಿಲ್ಲೊಂದು ಕಾಲಘಟ್ಟದಲ್ಲಿ ದೇಹಾಕಾರ ತಿದ್ದಿಕೊಂಡವರೇ.

ಅಷ್ಟೇ ಏಕೆ, ನಾನಾ ಪಾಟೇಕರ್ ಕೂಡ `ಕ್ರಾಂತಿವೀರ್~ ಚಿತ್ರಕ್ಕೆಂದು ಕಸರತ್ತು ಮಾಡಿದ್ದರು. ಈಗ ಸಿನಿಮಾ ನಾಯಕನಿಗೆ ದೈಹಿಕ ಸೌಂದರ್ಯ ಅರ್ಹತೆ ಎಂಬಂತಾಗಿಬಿಟ್ಟಿದೆ. ದೇಹಾಕಾರ ಮಾಡುವುದು ತಮಾಷೆಯಲ್ಲ.

ಕಾರ್ಬೋಹೈಡ್ರೇಟ್‌ಯುಕ್ತ ಆಹಾರವನ್ನು ಹೆಚ್ಚು ತಿನ್ನುವ ಅಗತ್ಯವಿದೆ. ದಿನಕ್ಕೆ ನಿಯಮಿತ ವಾಗಿ ಐದಾರು ಸಲ ಊಟ ಮಾಡಬೇಕು. ಅದು ತುಟ್ಟಿ. ನಟ ದುನಿಯಾ ವಿಜಯ್ `ಐಪಿಎಸ್ ಶಂಕರ್~ ಚಿತ್ರೀಕರಣದ ಸಂದರ್ಭದಲ್ಲಿ `ಸಿಕ್ಸ್‌ಪ್ಯಾಕ್~ ಕಾಯ್ದುಕೊಳ್ಳಲು ದಿನಕ್ಕೆ ಹನ್ನೆರಡು ಮೊಟ್ಟೆ ತಿನ್ನುತ್ತಿದ್ದರು, ವಿಟಮಿನ್ ಮಾತ್ರೆಗಳನ್ನು ನುಂಗುತ್ತಿದ್ದರು.

ನೋಡಲು ಅಷ್ಟೆಲ್ಲಾ ಕಟ್ಟುಮಸ್ತಾಗಿ ಕಾಣುವ ಅವರಿಗೆ ಕೆಲವು ಸಾಹಸ ದೃಶ್ಯಗಳನ್ನು ಮಾಡುವಾಗ ಮೂಳೆಯಲ್ಲಿ ಬಿರುಕಾಗಿದ್ದುಂಟು. ವರ್ಷಗಟ್ಟಲೆ ಜಿಮ್‌ನಲ್ಲಿ ಬೆವರು ಬಸಿದಿರುವ ಹೃತಿಕ್ ರೋಷನ್ ಇತ್ತೀಚೆಗೆ ಬೆನ್ನುಹುರಿಯ ಸಮಸ್ಯೆಯಿಂದ ಬಳಲಿದ್ದರು.
 
ಸಾಮು ಮಾಡತೊಡಗಿದ್ದೇ ಶಾರುಖ್ ಖಾನ್ ಚಹರೆಯಲ್ಲಿ ವ್ಯತ್ಯಾಸವಾಗಿಬಿಟ್ಟಿತು. ಹಾಗಾಗಿ ದೇಹಾಕಾರ ರೂಪಿಸಿಕೊಳ್ಳಲು ಹೊರಡುವವರಿಗೆ ತಮ್ಮ ಸಾಮರ್ಥ್ಯ, ಮಿತಿ ಎರಡರ ಅರಿವೂ ಇರಬೇಕು. ತರಬೇತುದಾರರಂತೂ ತುಂಬಾ ಮುಖ್ಯ.

ಒಟ್ಟಿನಲ್ಲಿ `ಮಾನವ ಮೂಳೆ ಮಾಂಸದ ತಡಿಕೆ~ ಎಂಬುದು ನಿಜ. ಆ ತಡಿಕೆಯಲ್ಲಿ ಮಡಿಕೆಗಳನ್ನು ಮೂಡಿಸುತ್ತಿರುವ ಹೊತ್ತಿದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.