ADVERTISEMENT

ಮೊಹೆಂಜೊದಾರೊ ನಿಮಗೆಷ್ಟು ಗೊತ್ತು?

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2016, 19:30 IST
Last Updated 1 ಅಕ್ಟೋಬರ್ 2016, 19:30 IST
ಮೊಹೆಂಜೊದಾರೊ ನಿಮಗೆಷ್ಟು ಗೊತ್ತು?
ಮೊಹೆಂಜೊದಾರೊ ನಿಮಗೆಷ್ಟು ಗೊತ್ತು?   

ಇತ್ತೀಚಿನ ಬಾಲಿವುಡ್ ಚಿತ್ರ ‘ಮೊಹೆಂಜೊದಾರೊ’, ಹಿಂದೂ ಕಣಿವೆ ನಾಗರಿಕತೆಯ 4,000 ವರ್ಷಗಳಷ್ಟು ಹಳೆಯ ನಗರವನ್ನು ಕುರಿತ ಆಸಕ್ತಿಯ ಕಿಡಿ ಮತ್ತೆ ಹೊತ್ತುವಂತೆ ಮಾಡಿದೆ. ಸಿಂಧೂ ನದಿಯ ದಂಡೆಯಲ್ಲಿ ಬೆಳೆದ ನಾಗರಿಕತೆ ಹಲವು ಕಥೆಗಳನ್ನು ಅಡಗಿಸಿಟ್ಟುಕೊಂಡಿದೆ. ಮೊಹೆಂಜೊದಾರೊ, ಹರಪ್ಪ ಹಾಗೂ ಗನೇರಿವಾಲಾ ಆಧುನಿಕ ಪಾಕಿಸ್ತಾನದಲ್ಲಿವೆ. ಧೋಲಾವಿರಾ, ಲೋಥಾಲ್‌, ಕಾಲಿಬಂಗಾನ್‌, ರೂಪಾರ್‌ ಹಾಗೂ ರಾಖಿಗಢ ಈಗಿನ ಭಾರತದಲ್ಲಿವೆ.

ಕ್ರಿ.ಪೂ. 2600ರಿಂದ 1900ರ ಅವಧಿಯಲ್ಲಿ ನಾಗರಿಕತೆಯು ಉತ್ತುಂಗ ಸ್ಥಿತಿ ತಲುಪಿತ್ತು. 1919ರಿಂದ 1999ರ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಪಳೆಯುಳಿಕೆಗಳನ್ನು ಪತ್ತೆಮಾಡಲಾಯಿತು. 96 ಸ್ಥಳಗಳನ್ನು ಉತ್ಖನನದ ಮೂಲಕ ಗುರುತಿಸಲಾಯಿತು.

50 ಲಕ್ಷಕ್ಕೂ ಹೆಚ್ಚು ಜನ ಈ ಸ್ಥಳಗಳಲ್ಲಿ ನೆಲೆಸಿದ್ದಿರಬಹುದು ಎನ್ನಲಾಗಿದೆ. ಸಿಂಧೂ ಕಣಿವೆ ನಾಗರಿಕತೆಯು ತನ್ನ ಉತ್ತಮ ಪರಿಕಲ್ಪನೆಯ ನಗರಗಳ ನಿರ್ಮಾಣದಿಂದ ಹೆಸರಾಗಿದೆ. ಉತ್ತಮ ಚರಂಡಿ ವ್ಯವಸ್ಥೆ, ಸಾರ್ವಜನಿಕ ಸ್ನಾನಗೃಹಗಳು, ನೀರು ಪೂರೈಕೆ ವ್ಯವಸ್ಥೆ ಹಾಗೂ ಸುಟ್ಟ ಇಟ್ಟಿಗೆಗಳ ಬಳಕೆ ಗಮನ ಸೆಳೆದಿದ್ದವು.

ಮೊಹೆಂಜೊದಾರೊ ಎಂದರೆ ‘ಮೃತಪಟ್ಟವರ ದಿನ್ನೆ’ ಎಂದು ಅರ್ಥ. ಈ ನಗರವನ್ನು ಪತ್ತೆಹಚ್ಚಿದ ನಂತರ ಈ ಹೆಸರು ನೀಡಲಾಯಿತು. ನಗರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಕೋಟೆ ಹಾಗೂ ಕೆಳಗಿನ ನಗರಿ. ಆಯತಾಕಾರದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಒಂದೇ ಅಳತೆಯ ಮಣ್ಣಿನ ಇಟ್ಟಿಗೆಗಳಿಂದ ಮನೆಗಳನ್ನು ಕಟ್ಟಲಾಗಿದೆ. ಬೃಹತ್‌ ಸ್ನಾನಗೃಹ, ಹಗೇವು ಹಾಗೂ ಸ್ತಂಭಗಳಿಂದಾದ ಸಭಾಂಗಣ ವಿನಾಶದ ನಂತರವೂ ಉತ್ತಮ ಸ್ಥಿತಿಯಲ್ಲಿ ಉಳಿದಿದ್ದು, ಅನೇಕರಿಗೆ ಬೆರಗು ಮೂಡಿಸಿವೆ.

ನರ್ತಕಿಯ ಕಂಚಿನ ಪ್ರತಿಮೆ, ಬಳಪದ ಕಲ್ಲಿನಿಂದ ಮಾಡಿದ ಪುರೋಹಿತ ದೊರೆಯ ಪ್ರತಿಮೆ ಹಾಗೂ ಮಣಿಗಳಿಂದ ತಯಾರಿಸಿದ ಏಳು ಎಳೆಯ ಕಂಠೀಹಾರ, ಮುದ್ರೆಗಳು, ಬೊಂಬೆಗಳು, ಸಣ್ಣ ಸಣ್ಣ ಗೊಂಬೆಗಳು, ಉಪಕರಣಗಳು ಮೊಹೆಂಜೊದಾರೊದಲ್ಲಿ ಸಿಕ್ಕವು. ಮುದ್ರೆಗಳ ಮೇಲೆ ಇರುವ ಲಿಪಿಯ ಗೂಢಾರ್ಥವನ್ನು ತಿಳಿಯಲು ಇದುವರೆಗೆ ಸಾಧ್ಯವಾಗಿಲ್ಲ. 1980ರಲ್ಲಿ ಮೆಹೆಂಜೊದಾರೊ ‘ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿ’ ಸೇರಿದ ದಕ್ಷಿಣ ಏಷ್ಯಾದ ಮೊದಲ ತಾಣ ಎನಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.