ತಲೆಯ ಮೇಲಿನ ಸೆರಗನ್ನು ಕೆಳಕ್ಕೆ ಎಳೆದುಕೊಳ್ಳುತ್ತಾ ನೋವನ್ನು ಹೊರ ಹಾಕಿದಳು ಪೂರಿಬಾಯಿ.`ಮೋಸ ಮಾಡುವುದು ಮಹಾ ಪಾಪ'.ತೊಡೆಯ ಮೇಲಿದ್ದ ಹಸುಗೂಸನ್ನು ಎದೆಗೆ ಒತ್ತಿಕೊಳ್ಳುತ್ತಾ ಸೋನಾಬಾಯಿ ತನ್ನಷ್ಟಕ್ಕೆ ಎನ್ನುವಂತೆ ಹೇಳಿಕೊಂಡಳು.
ಕೃಷ್ಣರಾಜಸಾಗರದಲ್ಲಿ ಕಳೆದ 50 ವರ್ಷಗಳಿಂದ ಬೀಡು ಬಿಟ್ಟಿರುವ `ಬವರಿ' ಜನಾಂಗದ ಹೆಣ್ಣು ಮಕ್ಕಳ ಪಾಪಪ್ರಜ್ಞೆ ಇದು. ಈಗಷ್ಟೇ ಅವರು ನಾಗರಿಕ ಸಮಾಜದತ್ತ ಮುಖ ಮಾಡಿದ್ದಾರೆ. ತಮ್ಮ ಮಕ್ಕಳೂ ಎಲ್ಲರಂತೆಯೇ ಓದಬೇಕು. ದೊಡ್ಡ ಹುದ್ದೆಯಲ್ಲಿ ಇರಬೇಕು. ದುಡಿದು ತಿನ್ನುವ ಮಟ್ಟಕ್ಕೆ ಅವರು ಬೆಳೆಯಬೇಕು.
ಬಾಲ್ಯವಿವಾಹವನ್ನು ಬಿಟ್ಟು ಹೆಣ್ಣು ಮಕ್ಕಳೂ ಶಿಕ್ಷಣ ಕಲಿತು ಸ್ವತಂತ್ರವಾಗಿ ಬದುಕಬೇಕು ಎಂಬ ಕನಸನ್ನು ತುಂಬಿಕೊಂಡಿದ್ದಾರೆ. ಆದರೆ `ಬಯ್ಯಾ'ಗಳು ಮೋಸಗಾರರು ಎನ್ನುವುದು ಸಮಾಜದಲ್ಲಿ ಬಿಂಬಿತ ಆಗಿರುವುದರಿಂದ ಮೋಸದ ಬಲೆಯಿಂದ ಹೊರ ಬರುವುದು ಅವರಿಗೆ ಸಾಧ್ಯವಾಗುತ್ತಿಲ್ಲ.
ಮೋಸದ ನೀತಿಸಂಹಿತೆ
ಮೋಸ ಮಾಡುವುದೇ ಇವರ ಕುಲ ಕಸುಬು. ಮೋಸ ಮಾಡುವುದಕ್ಕೂ ಒಂದು ರೀತಿ ನೀತಿ ಇದೆ ಎಂದು ಅವರು ನಂಬಿಕೊಂಡು ಬಂದಿದ್ದಾರೆ. ತಾವು ನೆಲೆನಿಂತ ಪ್ರದೇಶದಿಂದ 50 ಕಿ.ಮೀ. ಸುತ್ತಮುತ್ತ ಇವರು ಮೋಸ ಮಾಡುವುದಿಲ್ಲ. ಜನರನ್ನು ವಂಚನೆ ಮಾಡಿ ಗಳಿಸಿದ ಹಣದಲ್ಲಿ ದೇವರಿಗೂ ಪಾಲು ನೀಡುತ್ತಾರೆ.
ಚಿನ್ನದ ಹೆಸರಿನಲ್ಲಿ ಹಿತ್ತಾಳೆಯನ್ನು ನೀಡಿ ಜನರನ್ನು ವಂಚಿಸುವುದು ಇವರ ಸಂಪ್ರದಾಯ. ಅದೇ ಬದುಕು. ಅದೇ ಬವಣೆ ಕೂಡ. `ಪಾಲಿಶ್ ಮಾಡುವ ನೆಪದಲ್ಲಿ ವಂಚನೆ', `ಚಿನ್ನ ಎಂದು ಹಿತ್ತಾಳೆ ಕೊಟ್ಟು ಪರಾರಿ' ಎಂಬ ಸುದ್ದಿಗಳನ್ನು ನೀವು ಪತ್ರಿಕೆಗಳಲ್ಲಿ ಓದಿರುತ್ತೀರಿ. ಹೀಗೆ ವಂಚನೆ ಮಾಡಿದವರು ಇದೇ ಬವರಿ ಜನಾಂಗಕ್ಕೆ ಸೇರಿದವರಾಗಿರುತ್ತಾರೆ.
ಶತಮಾನಗಳಿಂದಲೂ ಚಿನ್ನದ ಹೆಸರಿನಲ್ಲಿ ವಂಚನೆ ಮಾಡುವುದನ್ನು ವೃತ್ತಿ ಮಾಡಿಕೊಂಡ ಇವರಿಗೆ ವಾಸಿಸಲು ಸರಿಯಾದ ಮನೆಗಳಿಲ್ಲ. ಕೊಳಚೆ ಪ್ರದೇಶಗಳಲ್ಲಿಯೇ ವಾಸ. ಜಮೀನು ಹೊಂದುವುದಂತೂ ದೂರದ ಮಾತು.
ಗುಜರಾತಿನ ಪಾಲಿ ಜಿಲ್ಲೆ ಮತ್ತು ರಾಜಸ್ತಾನದ ಜಾಲೂರು, ಮೆಹೆಸಾಣ ಪ್ರದೇಶದಿಂದ ಗುಳೆ ಬಂದವರು ಇವರು. ರಾಣಾ ಪ್ರತಾಪ್ ಸಿಂಹನ ಕಾಲಕ್ಕೇ ಈ ಜನಾಂಗ ಗುಳೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದೆಯಂತೆ. ಮೊಗಲರ ದಾಳಿಗೆ ಸಿಕ್ಕು ಮತಾಂತರದ ಭಯಕ್ಕೆ ಊರು ಬಿಟ್ಟು ಅಲೆಮಾರಿಗಳಾದೆವು ಎಂದು ಈ ಜನಾಂಗದ ಹಿರಿಯರು ಹೇಳುತ್ತಾರೆ. ಸುಮಾರು 50 ವರ್ಷದ ಹಿಂದೆ ಬವರಿ
ಸತ್ಯ ಪರೀಕ್ಷೆ ಪಂಚಾಯ್ತಿ! ಜನಾಂಗದ ರೀತಿ ನೀತಿಯ ಅನ್ವಯ ಯಾರಾದರೂ ತಪ್ಪು ಮಾಡಿರುವ ದೂರು ಬಂದರೆ ಅದರ ಸತ್ಯಾಸತ್ಯತೆ ಪತ್ತೆ ಮಾಡಲು ತಪ್ಪು ಮಾಡಿದ ವ್ಯಕ್ತಿಯ ಕೈ ಮೇಲೆ ಅರಳಿ ಎಲೆಯನ್ನು ಇಟ್ಟು ಕಬ್ಬಿಣವನ್ನು ಕಾಯಿಸಿ ಇಡುತ್ತಾರೆ. ಆ ಕಬ್ಬಿಣವನ್ನು ತಕ್ಷಣವೇ ಕೆಳಕ್ಕೆ ಹಾಕಿದರೆ ತಪ್ಪು ಮಾಡಿದ್ದಾರೆ ಎಂದು ಅರ್ಥ. ತಪ್ಪು ಮಾಡದೇ ಇರುವವರು ಅದನ್ನು ಕೈಯಲ್ಲಿಯೇ ಇಟ್ಟುಕೊಳ್ಳುತ್ತಾನೆ. ಕೈ ಸುಡುವುದಿಲ್ಲ ಎನ್ನುವುದು ನಂಬಿಕೆ. |
ಜನಾಂಗದ 500 ಕುಟುಂಬಗಳು ಕೆ.ಆರ್.ಎಸ್.
ಬಳಿಗೆ ಬಂದು ನೆಲೆ ನಿಂತಿವೆ. ಇಲ್ಲಿ ಕೂಡ ಬದುಕು ಸುಲಭವಾಗದೇ ಇರುವುದರಿಂದ ಈಗ ಕೇವಲ 250 ಕುಟುಂಬಗಳು ಉಳಿದಿವೆ. ಉಳಿದ ಕುಟುಂಬದವರು ಬದುಕನ್ನು ಅರಸಿಕೊಂಡು ಬೇರೆ ಬೇರೆ ಕಡೆ ಅಲೆಯುತ್ತಿದ್ದಾರೆ.
ಶ್ರೀರಂಗಪಟ್ಟಣ, ಬಿಡದಿ, ಪಾಂಡವಪುರ, ಕಡಕೊಳ, ಹೈದರಾಬಾದ್‌ನ ಮಡಸಲದಲ್ಲಿಯೂ ಕೆಲವು ಕುಟುಂಬಗಳಿವೆ. ಶೇ 20ರಷ್ಟು ಮಂದಿ ಮಾತ್ರ ತಮ್ಮ ಮೂಲ ಊರುಬೇರಿನ ನಂಟು ಉಳಿಸಿಕೊಂಡಿದ್ದಾರೆ. ಮನೆಯಲ್ಲಿ `ವಾಗ್ರಿ' ಭಾಷೆ. ಆದರೂ ಇವರೆಲ್ಲ ಈಗ ಬಹುತೇಕ ಕನ್ನಡಿಗರೇ ಆಗಿದ್ದಾರೆ.
ಥಟ್ಟನೆ ನೋಡಿದರೆ ಬವರಿ ಹೆಣ್ಣು ಮಕ್ಕಳು ಲಂಬಾಣಿಗಳಂತೆ ಕಾಣಿಸುತ್ತಾರೆ. ಆದರೆ ಇವರು ಅವರಿಗಿಂತ ಭಿನ್ನ. ವೇಷಭೂಷಣ ಕೂಡ ಬೇರೆಯೇ. ಹಕ್ಕಿಪಿಕ್ಕಿಯಂತೆಯೂ ಕಾಣುತ್ತಾರೆ. ಸಿಂಧಿ ಜನಾಂಗದ ಹೋಲಿಕೆಯೂ ಇದೆ. ಲಂಬಾಣಿಗಳ ಶಿಕ್ಷಣ, ಹಕ್ಕಿಪಿಕ್ಕಿಗಳ ಚಾಲೂಕುತನ, ಸಿಂಧಿಗಳ ಸಿರಿವಂತಿಕೆ ಯಾವುದೂ ಇವರಿಗೆ ಇಲ್ಲ.
ಮೂಲತಃ ಅತ್ಯಂತ ಭಯದ ಸ್ವಭಾವದರಾದ ಬವರಿಗಳನ್ನು ಯಾವುದೇ ಸಣ್ಣ ಹುಡುಗರೂ ಬೆದರಿಸಬಹುದು. ದುಡಿದು ತಿನ್ನುವ ಸ್ವಭಾವ ಕಡಿಮೆ. ಆದರೆ ಐಷಾರಾಮಿ ಬದುಕಿನ ಹುಚ್ಚು. ಅದಕ್ಕೇ ಸುಲಭದಲ್ಲಿ ಹಣ ಸಂಪಾದಿಸಲು ಚಿನ್ನದ ಹೆಸರಿನಲ್ಲಿ ಮೋಸ ಮಾಡುತ್ತಾರೆ.
ಬಡತನದ ನಡುವೆ ಅದ್ದೂರಿ ಮದುವೆ
ಶಿಕ್ಷಣದಿಂದ ಇವರು ದೂರ. ಬಾಲ್ಯ ವಿವಾಹ ಇಲ್ಲಿ ಸರ್ವೇಸಾಮಾನ್ಯ. ಬಾಲ್ಯ ವಿವಾಹವೇ ಆದರೂ ಮದುವೆ ಎನ್ನುವುದು ಅತ್ಯಂತ ಖರ್ಚಿನ ಬಾಬ್ತು. ಮೆಹಂದಿ ಶಾಸ್ತ್ರ, ಕುದುರೆ ಮೇಲೆ ವರನ ಮೆರವಣಿಗೆ ಕಡ್ಡಾಯ. ಕುಡಿತ ಕೂಡ ಮಾಮೂಲು. ಪುರುಷರು, ಮಹಿಳೆಯರು ಎಲ್ಲರೂ ಕುಡಿಯುತ್ತಾರೆ. ಎಷ್ಟೇ ಬಡತನವಿದ್ದರೂ ಬಡ್ಡಿಗೆ ಹಣ ತಂದು ಅದ್ದೂರಿ ಮದುವೆ ಮಾಡುತ್ತಾರೆ.
ನವರಾತ್ರಿ, ದೀಪಾವಳಿ, ರಾಖಿ, ಹೋಳಿ ಹಬ್ಬವನ್ನು ವೈಭವದಿಂದ ಆಚರಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಮೈಸೂರು, ಮಂಡ್ಯ ಸುತ್ತಮುತ್ತ ಇರುವ ಬವರಿಗಳು ಕೆಆರ್‌ಎಸ್‌ನಲ್ಲಿ ಸೇರುತ್ತಾರೆ.
ಗುಜರಾತ್‌ನಲ್ಲಿ ಬವರಿ ಜನಾಂಗವನ್ನು ಇತರ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ರಾಜಸ್ತಾನದಲ್ಲಿ ಇವರು ಪರಿಶಿಷ್ಟ ಜಾತಿ. ಆದರೆ ಕರ್ನಾಟಕದಲ್ಲಿ ಇವರನ್ನು `ಗುಜರಾತಿ ಜಾತಿ' ಎಂದೇ ಗುರುತಿಸಲಾಗುತ್ತದೆ. ಈ ಗುಜರಾತಿ ಜಾತಿ ಅಲೆಮಾರಿ, ಅರೆ ಅಲೆಮಾರಿ, ಇತರ ಹಿಂದುಳಿದ ಅಥವಾ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಲ್ಲ.
ಮೂಲತಃ `ವಿಮುಕ್ತ ಜಾತಿ'ಗೆ ಸೇರಿದ ಇವರಿಗೆ ಕರ್ನಾಟಕದಲ್ಲಿ ನಿರ್ದಿಷ್ಟ ಜಾತಿಯ ಸ್ಥಾನ ಸಿಕ್ಕಿಲ್ಲ. ಅಪರಾಧ ವೃತ್ತಿಯನ್ನು ಮಾಡುವ ಆದಿವಾಸಿಗಳೆಂದು ಬ್ರಿಟಿಷರಿಂದ ಗುರುತಿಸಿಕೊಂಡು ನಂತರ ವಿಮುಕ್ತರಾದವರು ಇವರು. ಅದಕ್ಕೇ ಇವರನ್ನು ವಿಮುಕ್ತ ಜಾತಿಯವರು ಎಂದೂ ಕರೆಯಲಾಗುತ್ತದೆ.
ಮೋಸದ ಹಣೆಪಟ್ಟಿ ಹೊತ್ತುಕೊಂಡ ಈ ಜನಾಂಗದವರು ಈಗ ಬಿಡುಗಡೆ ಬಯಸಿದ್ದಾರೆ. ನಾವು ನಮ್ಮ ಮೂಲ ಕಸುಬನ್ನು ಬಿಟ್ಟು ಬಿಡುತ್ತೇವೆ. ನಮಗೆ ಒಂದಿಷ್ಟು ಸೌಲಭ್ಯಗಳನ್ನು ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಕೆಆರ್‌ಎಸ್‌ನ ಮತದಾರರ ಪಟ್ಟಿಯಲ್ಲಿ ಇವರ ಹೆಸರುಗಳು ಇವೆ. ಆದರೆ ಬಹುತೇಕ ಮಂದಿಗೆ ಬಿಪಿಎಲ್ ಕಾರ್ಡ್‌ಗಳಿಲ್ಲ. ವಿಧವಾ ವೇತನ, ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಭಾಗ್ಯಲಕ್ಷ್ಮಿ ಯೋಜನೆಯ ಲಾಭ ಕೂಡ ಸಿಗುತ್ತಿಲ್ಲ.
ಮುಖ್ಯವಾಗಿ ಶಿಕ್ಷಣದ ಕೊರತೆ ಇವರನ್ನು ಕಾಡುತ್ತಿದೆ. ಶಾಲೆಯಲ್ಲಿಯೂ ಈ ಜನಾಂಗದ ಮಕ್ಕಳನ್ನು ಸೇರಿಸಿಕೊಳ್ಳುವಾಗ `ಗುಜರಾತಿ ಜಾತಿ' ಎಂದೇ ನಮೂದಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಬವರಿ ಮಕ್ಕಳಿಗೆ ಜಾಗ ಸಿಗುತ್ತಿಲ್ಲ. ಶಿಕ್ಷಣಕ್ಕೆ ಸೂಕ್ತ ಅವಕಾಶ ಇಲ್ಲದೇ ಇರುವುದರಿಂದ ನಮ್ಮ ಮಕ್ಕಳು ಅನಿವಾರ್ಯವಾಗಿ `ವ್ಯಾಪಾರ'ಕ್ಕೆ ಹೋಗಬೇಕಾಗಿದೆ ಎಂದು ರಾಮಿಬಾಯಿ ಗೋಳು ಹೇಳಿಕೊಳ್ಳುತ್ತಾಳೆ.
ಪ್ರಭುಲಾಲ್ ಮತ್ತು ಲಾಲು ಮಾನ್‌ಸಿಂಗ್ ಎಂಬ ಇಬ್ಬರು ಎಂಬಿಎ ಮಾಡಿಕೊಂಡಿದ್ದಾರೆ. ಅವರಿಗೆ ಸೂಕ್ತ ಉದ್ಯೋಗ ಸಿಗಲಿಲ್ಲ. ಪಿಯುಸಿ, ಡಿಪ್ಲೊಮಾ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಕೆಲಸ ಸಿಗದೇ ಇರುವುದರಿಂದ ಇತರ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಮುಂದೆ ಬರುತ್ತಿಲ್ಲ ಎಂದು ಸಾವಿತ್ರಿಬಾಯಿ ಹೇಳುತ್ತಾರೆ.
ದುಡಿದು ತಿನ್ನುವ ಹಂಬಲ
`ನಮ್ಮ ಹೆಣ್ಣುಮಕ್ಕಳು ಮೋಸ ಮಾಡಲು ಎಲ್ಲಿಗಾದರೂ ಹೋಗಬಹುದು. ಆದರೆ ಹೊಲಿಗೆ ತರಬೇತಿ, ಪ್ಲಾಸ್ಟಿಕ್ ಹೂವು ತಯಾರಿಕೆ, ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿದರೆ ಅವರನ್ನು ಹಂಗಿಸುವವರೇ ಹೆಚ್ಚು.
ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಅವರಂತೂ ಹಾಳಾಗಿದ್ದಾರೆ. ನಾವೂ ಹಾಳಾಗಬೇಕಾ ಎಂದು ಹೇಳಿ ಮಕ್ಕಳನ್ನು ಕುಲ ಕಸುಬಿಗೇ ಕಳುಹಿಸುತ್ತಾರೆ. ಇದೆಲ್ಲಾ ಬದಲಾಗೋದು ಯಾವಾಗ' ಎಂದು ಸೋನಾಬಾಯಿ ಹಳಹಳಿಸುತ್ತಾಳೆ. ಯಾವುದೇ ತರಬೇತಿ ಕೊಟ್ಟರೆ ನಾವು ಕಲಿಯಲು ಸಿದ್ಧ. ದುಡಿದು ಬದುಕಬೇಕು ಎನ್ನುವುದು ನಮ್ಮ ಬಯಕೆ ಎಂದು ಅವಳು ಹೇಳುತ್ತಾಳೆ.
ಬವರಿ ಜನಾಂಗ ಈಗ ಬದಲಾಗಲು ಬಯಸಿದೆ. ಅದಕ್ಕೆ ಸಮಾಜ ಕೊಂಚ ಸಹಕರಿಸಬೇಕು. ಎಲ್ಲಿಯೇ ವಂಚನೆಯಾದರೂ ಅದಕ್ಕೆ ಬವರಿ ಜನಾಂಗದವರೇ ಕಾರಣ ಎನ್ನುವುದನ್ನು ಬಿಟ್ಟು ಪೊಲೀಸರು ಸಹಾನುಭೂತಿಯಿಂದ ನಡೆದುಕೊಳ್ಳಬೇಕು. ಪ್ರತ್ಯೇಕ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಅವರ ಶಿಕ್ಷಣಕ್ಕೆ ನೆರವಾಗಬೇಕು. ನೈತಿಕವಾಗಿ ಕುಸಿದು ಹೋಗಿರುವ ಜನಾಂಗವನ್ನು ಮೇಲೆತ್ತಲು ಸರ್ಕಾರ ಯತ್ನಿಸಬೇಕು.
ಚಿನ್ನ ಕದ್ದು ಬದುಕುವ ವ್ಯಕ್ತಿಗಳಿಗೆ ಇನ್ನೂ ಚಿನ್ನದಂತಹ ಬದುಕು ಯಾಕೆ ಸಿಕ್ಕಿಲ್ಲ ಎಂದು ಪ್ರಶ್ನೆ ಮಾಡಿದರೆ `ನಾವು ಚಿನ್ನ ಕದ್ದ ಸುದ್ದಿ ಪತ್ರಿಕೆಗಳಿಂದಲೋ ಬೇರೆ ಮೂಲಗಳಿಂದಲೋ ಬಹಿರಂಗವಾದಾಗ ನಮ್ಮನ್ನು ಬೆದರಿಸಿ ಚಿನ್ನ ಕಿತ್ತುಕೊಂಡು ಹೋಗುವ ಮಂದಿ ಸಾಕಷ್ಟು ಇದ್ದಾರೆ. ನಮಗೆ ಹೆಚ್ಚಿನ ಬಡ್ಡಿಗೆ ಸಾಲ ಕೊಟ್ಟು ಚಿನ್ನ ವಂಚನೆಗೆ ಪ್ರೇರೇಪಣೆ ನೀಡುವವರೂ ಇದ್ದಾರೆ.
ನಾವು ಕದ್ದ ಚಿನ್ನ ನಮಗೇ ದಕ್ಕುವುದು ಕಡಿಮೆ. ಅಂದಮೇಲೆ ನಮಗೆ ಚಿನ್ನದಂತಹ ಬದುಕು ಸಿಗುವುದು ಹೇಗೆ?' ಎಂದು ಹಿರಿಯರಾದ ಸುನ್ನಿಲಾಲ್ ಪ್ರಶ್ನೆ ಮಾಡುತ್ತಾರೆ.ಯಾರೋ ಕಷ್ಟಪಟ್ಟು ದುಡಿದು ಸಂಪಾದಿಸಿದ ಚಿನ್ನವನ್ನು ಕದಿಯುವ ಬವರಿ ಜನಾಂಗವನ್ನು ಅನಾಗರಿಕ ಎನ್ನುತ್ತೇವೆ. ಆದರೆ ಬವರಿಗಳು ಕದ್ದು ತಂದ ಚಿನ್ನವನ್ನು ಬೆದರಿಸಿ ಎಗರಿಸುವ ಜನರನ್ನು ಏನನ್ನುವುದು? ಕೈಹಿಡಿದು ಮೇಲೆತ್ತುವ ಮಹಾತ್ಮನಿಗಾಗಿ ಕಾದಿದೆ ಬವರಿ ಜನಾಂಗ.
12 ರೂಪಾಯಿಗೆ ವಿಚ್ಛೇದನ!
ಬವರಿ ಜನಾಂಗದಲ್ಲಿ ವಿವಾಹ ವಿಚ್ಛೇದನ ಸುಲಭ. ಯಾವುದೇ ಗಂಡಿಗೆ ತನ್ನ ಪತ್ನಿಯೊಂದಿಗೆ ಬಾಳಲು ಇಷ್ಟ ಇಲ್ಲದಿದ್ದರೆ ಪಂಚಾಯ್ತಿ ಮುಂದೆ ಹಾಜರಾಗಿ 12 ರೂಪಾಯಿ ದಂಡ ಕಟ್ಟಿ ಹೆಂಡತಿಯನ್ನು ಬಿಟ್ಟು ಬಿಡಬಹುದು. ಅದೇ ಮಹಿಳೆಯೊಬ್ಬಳು ಗಂಡನನ್ನು ಬಿಡಬೇಕಾದರೆ 400 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
ಬಹಳಷ್ಟು ಬಾರಿ ಮಕ್ಕಳನ್ನು ಸಾಕುವ ಜವಾಬ್ದಾರಿಯೂ ಆಕೆಯೇ ತೆಗೆದುಕೊಳ್ಳಬೇಕಾಗುತ್ತದೆ. ಕೊಲೆ ಮಾಡಿದ್ದರೂ ಪಂಚಾಯ್ತಿಯಲ್ಲಿ 125 ರೂಪಾಯಿ ಕೊಟ್ಟು `ಶುದ್ಧ' ಆಗಿಬಿಡಬಹುದು! ಇದು ಮಹಿಳೆಯೊಬ್ಬಳ ಆಕ್ರೋಶದ ಮಾತು.
ವಂಚನೆಯಲ್ಲಿ ದೇವರೂ ಭಾಗಿ!
ಬವರಿ ಜನಾಂಗದವರು ಮೋಸದ ಜಾಲದಲ್ಲಿ ದೇವರನ್ನೂ ಸೇರಿಸಿಕೊಂಡಿದ್ದಾರೆ. ಮೋಸಕ್ಕೆ ಅವರು ಹೇಳುವುದು ವ್ಯಾಪಾರ ಎಂದು. ದಿನಾ ಬೆಳಿಗ್ಗೆ ವ್ಯಾಪಾರಕ್ಕೆ ಹೊರಡುವ ಮುನ್ನ ದೇವರಿಗೆ ಕೈ ಮುಗಿದು, `ಇಂದು ಹೆಚ್ಚು ಜನರಿಗೆ ಮೋಸ ಮಾಡುವಂತೆ ಅನುಗ್ರಹಿಸು ತಾಯಿ' ಎಂದು ಬೇಡಿಕೊಳ್ಳುತ್ತಾರೆ. ಮೊಸಳೆಯ ಮೇಲೆ ಕುಳಿತ ಕೋಡಿಯಾಲಮ್ಮ ಇವರ ಆರಾಧ್ಯ ದೈವ. ಯಾರಿಗೂ ಸಿಕ್ಕಿ ಬೀಳದೆ ವಂಚನೆ ಯಶಸ್ವಿಯಾದರೆ ಮರಿ ಕಡಿಯುತ್ತೇನೆ ಎಂದು ಹರಕೆ ಹೊರುತ್ತಾರೆ.
`ನಾವು ಮಾಡುವುದು ಕೆಟ್ಟ ಕೆಲಸ ಎನ್ನುವುದು ನಮಗೆ ಗೊತ್ತು. ಅದಕ್ಕೇ ನಾವು ವಂಚನೆಯಿಂದ ಗಳಿಸಿದ ಹಣದಲ್ಲಿ ಸ್ವಲ್ಪ ಪಾಲನ್ನು ಹಿರಿಯರಿಗೆ, ಮಕ್ಕಳಿಗೆ, ಅಶಕ್ತರಿಗೆ ನೀಡುತ್ತೇವೆ. ನಾವು ವಂಚನೆ ಮಾಡಿ ಹಿತ್ತಾಳೆಗೆ ಬದಲಾಗಿ ಚಿನ್ನವನ್ನು ತರುವಾಗ `ಮೋಸಕ್ಕೆ ಒಳಗಾಗುತ್ತಿರುವ ಜನರಿಗೆ ಒಳ್ಳೆಯದಾಗಲಿ ಎಂದು ಮನದಲ್ಲಿಯೇ ಬೇಡಿಕೊಂಡು ಅವರ ಕಾಲುಮುಟ್ಟಿ ನಮಸ್ಕರಿಸಿಯೂ ಬರುತ್ತೇವೆ' ಎನ್ನುತ್ತಾಳೆ ಶಾಂತಿಬಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.